ಸದಾ ಚೂಟಿಯಾಗಿದ್ದ ಮಗು ಏಕಾಏಕಿ ಮೌನಿಯಾತ್ತೆ. ಸಣ್ಣ ಸಣ್ಣ ವಿಚಾರಕ್ಕೆ ಕಿರುಚಿಕೊಳ್ಳುತ್ತೆ. ನಗು ಮಾಯವಾಗಿ ಭಯ ಮುಖದಲ್ಲಿ ಮೂಡುತ್ತೆ. ಮಗು ವರ್ತನೆ ಬದಲಾಗಿದೆ ಎಂಬುದು ಗೊತ್ತಿದ್ದರೂ ಅದಕ್ಕೆ ಹೆಚ್ಚು ಮಹತ್ವ ನೀಡಲು ಹೋಗುವುದಿಲ್ಲ. ಪಾಲಕರ ನಿರ್ಲಕ್ಷ್ಯ ಮಗುವಿನ ಭವಿಷ್ಯಕ್ಕೆ ಕೊಳ್ಳಿಯಾಗ್ಬಹುದು.
ಒತ್ತಡ (Stres) ಪ್ರತಿಯೊಬ್ಬರನ್ನು ಕಾಡುತ್ತದೆ. ಮಕ್ಕಳಿಂದ (Child) ಹಿಡಿದು ವೃದ್ಧರವರೆಗೆ ಎಲ್ಲರೂ ಒತ್ತಡಕ್ಕೆ ಒಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೊರೊನಾ ನಂತ್ರ ಒತ್ತಡ ಸಮಸ್ಯೆ ಅತಿ ಹೆಚ್ಚಾಗಿದೆ. ವಯಸ್ಕರು (Adults) ಒತ್ತಡವನ್ನು ಸುಲಭವಾಗಿ ಪತ್ತೆ ಮಾಡುತ್ತಾರೆ. ಬಹುತೇಕರು ಅದನ್ನು ನಿಯಂತ್ರಿಸುವ ಶಕ್ತಿ ಹೊಂದಿರುತ್ತಾರೆ. ಮಕ್ಕಳಿಗೆ ಒತ್ತಡವುಂಟಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ. ಹಾಗೆ ಅದನ್ನು ಪರಿಹರಿಸುವುದು ಕಷ್ಟವಾಗುತ್ತದೆ. ಸಣ್ಣ ಬದಲಾವಣೆ ಕೂಡ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಇದು ಒತ್ತಡಕ್ಕೆ ಕಾರಣವಾಗಬಹುದು. ಇಂದು ಮಗುವಿಗೆ ಕಾಡುವ ಒತ್ತಡ ಪತ್ತೆ ಹಚ್ಚೋದು ಹೇಗೆ ಹಾಗೂ ಯಾಕೆ ಒತ್ತಡ ಉಂಟಾಗುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.
ಮೊದಲನೇಯದಾಗಿ ಒತ್ತಡಕ್ಕೆ ಕಾರಣ (Reason)ವೇನು ಎಂಬುದನ್ನು ನೋಡೋಣ :
ಒಡಹುಟ್ಟಿದವರ ಆಗಮನ : ಮನೆಗೆ ಒಂದೇ ಮಗುವಾಗಿದ್ದಾಗ ಅದರ ಮೇಲೆ ಪಾಲಕರ ಗಮನ ಹೆಚ್ಚಿರುತ್ತದೆ. ಹೊಸ ಮಗು ಮನೆಗೆ ಬಂದಾಗ ಇಬ್ಬರ ಮೇಲೂ ಗಮನ ನೀಡಬೇಕಾಗುತ್ತದೆ. ನವಜಾತ ಶಿಶುವಿನ ಆರೈಕೆಯಲ್ಲಿ ಕುಟುಂಬ್ಥರು ನಿರತರಾದಾಗ ದೊಡ್ಡ ಮಕ್ಕಳಿಗೆ ಒಂಟಿತನ ಕಾಡಲು ಶುರುವಾಗುತ್ತದೆ. ಪ್ರೀತಿ ಹಂಚಿಕೆಯಾಗ್ತಿದೆ ಎಂಬ ಭಾವನೆ ಮೂಡುತ್ತದೆ.
ದಿನಚರಿಯಲ್ಲಿ ಬದಲಾವಣೆ : ದಿನಚರಿ ಬದಲಾದಾಗಲೂ ಮಕ್ಕಳು ಗೊಂದಲಕ್ಕೀಡಾಗುತ್ತಾರೆ.
ಅಪರಿಚಿತ ಜಾಗ : ಅಪರಿಚಿತ ಜಾಗ ಅಥವಾ ಅಪರಿಚಿತ ಪರಿಸರದಲ್ಲಿ ಮಕ್ಕಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.
ಸಾಂಕ್ರಾಮಿಕ ರೋಗ : ಸದ್ಯ ಎಲ್ಲರನ್ನು ಕಾಡ್ತಿರುವ ದೊಡ್ಡ ಸಮಸ್ಯೆ. ರೋಗದ ಭಯ ಕೂಡ ಮಕ್ಕಳನ್ನು ಒತ್ತಡಕ್ಕೀಡು ಮಾಡುತ್ತದೆ.
ಶಾಲೆಯ ಆರಂಭ : ಕೊರೊನಾದಿಂದಾಗಿ ಮಕ್ಕಳು ಎರಡು ವರ್ಷಗಳಿಂದ ಮನೆಯಲ್ಲಿದ್ದಾರೆ. ಅನೇಕ ಮಕ್ಕಳು ಮನೆಯಿಂದ ಹೊರಗೆ ಬಿದ್ದಿಲ್ಲ. ಒಂದೇ ಬಾರಿ ಶಾಲೆಗೆ ಹೋಗುವುದು,ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವುದು ಕಷ್ಟವಾಗ್ತಿದೆ.
ಶಾಲೆ ಬದಲಾವಣೆ : ಅನೇಕ ಕಾರಣಗಳಿಂದ ಪಾಲಕರು ಮಕ್ಕಳ ಶಾಲೆಯನ್ನು ಆಗಾಗ ಬದಲಿಸುತ್ತಿರುತ್ತಾರೆ. ಪದೇ ಪದೇ ಶಾಲೆ ಬದಲಾದರೆ ಮಕ್ಕಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.
ಕಲಿಕೆಯ ತೊಂದರೆ : ಐದು ಬೆರಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಎಲ್ಲ ವಿಷಯವನ್ನು ಕರಗತ ಮಾಡಿಕೊಳ್ಳುವುದು ಎಲ್ಲ ಮಕ್ಕಳಿಗೆ ಸಾಧ್ಯವಿಲ್ಲ. ಕಲಿಕೆಯಲ್ಲಿ ಹಿಂದೆ ಬಿದ್ದಾಗ ಮಕ್ಕಳಿಗೆ ಆತಂಕ,ಒತ್ತಡ ಕಾಡುತ್ತದೆ.
ಸ್ನೇಹಿತರೊಂದಿಗೆ ಘರ್ಷಣೆ : ಸ್ನೇಹಿತರ ಮಧ್ಯೆ ಆಗುವ ಗಲಾಟೆ,ಜಗಳ ಕೂಡ ಇದಕ್ಕೆ ಕಾರಣವಾಗುತ್ತದೆ.
ಹೆದರಿಸುವುದು : ಮಕ್ಕಳನ್ನು ನಿಯಂತ್ರಿಸಲು ಅಥವ ಬೇರೆ ಕಾರಣಗಳಿಗೆ ಮಕ್ಕಳನ್ನು ಗದರಿಸುತ್ತೇವೆ. ಇದು ಕೂಡ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಆಡಲು ಸಮಯದ ಅಭಾವ : ಒಂದಾದ ಮೇಲೆ ಒಂದು ಕ್ಲಾಸಿಗೆ ಹೋಗುವ ಮಕ್ಕಳಿಗೆ ಆಡಲು ಸಮಯವಿರುವುದಿಲ್ಲ. ಆಟ ಮಕ್ಕಳನ್ನು ರಿಫ್ರೆಶ್ ಮಾಡುತ್ತದೆ.
ಕುಟುಂಬ (Family )ಸದಸ್ಯರ ಅನಾರೋಗ್ಯ ಅಥವಾ ಸಾವು ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ.ಪೋಷಕರ ಮಧ್ಯೆ ಸದಾ ನಡೆಯುವ ಗಲಾಟೆ,ಜಗಳ,ವಿಚ್ಛೇದನ ಇವು ಮಗು ಬದಲಾಗಲು ಒಂದು ಕಾರಣ.ಕುಟುಂಬದಲ್ಲಿ ಕಾಡುವ ಆರ್ಥಿಕ (Economic )ಸಮಸ್ಯೆ ಮಗುವಿನ ಒತ್ತಡ ಹೆಚ್ಚಿಸುತ್ತದೆ.ಮಕ್ಕಳಿಗೆ ಅನಾರೋಗ್ಯ (Illness) ಕಾಡಿದಾಗ ಅಥವಾ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಂದಾಗ ಮಕ್ಕಳು ಬದಲಾಗುತ್ತಾರೆ.
ಮಕ್ಕಳ ಒತ್ತಡ ಪತ್ತೆ ಹಚ್ಚುವುದು ಹೇಗೆ ? :
ಮಕ್ಕಳ ಒತ್ತಡವನ್ನು ದೈಹಿಕ ಮತ್ತು ಮಾನಸಿಕ ಬದಲಾವಣೆ ಮೂಲಕ ಪತ್ತೆ ಮಾಡಬೇಕಾಗುತ್ತದೆ.ಮಕ್ಕಳ ಹಸಿವಿನಲ್ಲಿ ಬದಲಾವಣೆಯಾಗುತ್ತದೆ. ಪದೇ ಪದೇ ತಲೆನೋವು ಕಾಡುತ್ತದೆ. ಒತ್ತಡಕ್ಕೆ ಒಳಗಾದ ಮಕ್ಕಳು ಸರಿಯಾಗಿ ನಿದ್ರೆ ಮಾಡುವುದಿಲ್ಲ. ದುಃಸ್ವಪ್ನಗಳು ಕಂಡು ಬೆಚ್ಚಿ ಬೀಳುತ್ತಾರೆ. ಆಗಾಗ ಹೊಟ್ಟೆ ನೋವು ಕಾಣಿಸುತ್ತದೆ. ಚಳಿಯ ಅನುಭವವಾಗುತ್ತಿರುತ್ತದೆ. ಹಲ್ಲು ಕಡಿಯುವುದು, ಉಗುರು ಕಚ್ಚುವ ಅಭ್ಯಾಸ ಮಕ್ಕಳಲ್ಲಿ ಕಂಡು ಬಂದಾಗ ಒತ್ತಡಕ್ಕೊಳಗಾಗಿದ್ದಾರೆಂದು ಭಾವಿಸಬಹುದು. ಇದಲ್ಲದೆ ಅವರ ಭಾವನೆಗಳಲ್ಲಿ ಆಗುವ ಬದಲಾವಣೆಗಳನ್ನೂ ಗಮನಿಸಬೇಕಾಗುತ್ತದೆ. ಅವರ ವರ್ತನೆಯಲ್ಲಿ ಹಠಾತ್ ಬದಲಾವಣೆಯಾಗುತ್ತದೆ. ಕುಟುಂಬ ಮತ್ತು ಸ್ನೇಹಿತರಿಂದ ಮಕ್ಕಳು ದೂರವಿರಲು ಬಯಸುತ್ತಾರೆ. ಯಾವುದೇ ಕಾರಣವಿಲ್ಲದೆ ಅತಿಯಾದ ಅಳುತ್ತಾರೆ. ಏಕಾಗ್ರತೆಯಲ್ಲಿ ತೊಂದರೆ ಅನುಭವಿಸುತ್ತಾರೆ. ಸದಾ ಪೋಷಕರ ಜೊತೆಗಿರಲು ಬಯಸುತ್ತಾರೆ. ಆತಂಕ,ಅತಿಯಾದ ಕೋಪ ಕೂಡ ಒತ್ತಡದ ಲಕ್ಷಣವಾಗಿದೆ.
ಕೋವಿಡ್ ಸಮಯದಲ್ಲಿ ಮಕ್ಕಳನ್ನು ಕಾಪಾಡಿಕೊಳ್ಳೋದು ಹೇಗೆ?
ಯಾವಾಗ ವೈದ್ಯರ ಬಳಿ ಹೋಗ್ಬೇಕು? :
ಮಕ್ಕಳಲ್ಲಿ ಒಂದು ವಾರದವರೆಗೆ ಒತ್ತಡ ಕಾಡಬಹುದು. ನಂತ್ರ ಮಕ್ಕಳು ಸಹಜ ಸ್ಥಿತಿಗೆ ಬರುತ್ತಾರೆ. ಮಕ್ಕಳು ತಮ್ಮನ್ನು ತಾವು ನಿಭಾಯಿಸಿಕೊಳ್ಳುವ ಶಕ್ತಿ ಹೊಂದಿರುತ್ತಾರೆ. ಒಂದು ವೇಳೆ ವಾರಕ್ಕಿಂತ ಹೆಚ್ಚು ಕಾಲ ಮಕ್ಕಳಲ್ಲಿ ಒತ್ತಡ ಕಾಣಿಸಿಕೊಂಡರೆ. ಅದರಿಂದ ಹೊರಬರಲು ಮಕ್ಕಳಿಗೆ ಸಾಧ್ಯವಾಗ್ತಿಲ್ಲ ಎನ್ನಿಸಿದ್ರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.