ವೈರಲ್ ಜ್ವರ, ಯಾವುದೇ ರೀತಿಯ ಕಾಯಿಲೆಯಾದರೂ ಸರಿ ಒಮ್ಮೆ ನಿಮ್ಮನ್ನು ಆವರಿಸಿ, ಗುಣಮುಖರಾದ ಬಳಿಕವೂ ನಿಮ್ಮ ದೇಹವನ್ನು ನಿಶ್ಯಕ್ತಿಗೊಳಿಸುವುದೇ ಪೋಸ್ಟ್ ವೈರಲ್ ಸಿಂಡ್ರೋಮ್.
ಡಾ.ಜಿ.ನಾಸಿರುದ್ದೀನ್, ಕನ್ಸಲ್ಟೆಂಟ್, ಇಂಟರ್ನಲ್ ಮೆಡಿಸಿನ್, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ
ಸಾಕಷ್ಟು ಜನರಿಗೆ ಜ್ವರ, ವೈರಲ್ ಫೀವರ್ ಇತರೆ ಅನಾರೋಗ್ಯ ಸಮಸ್ಯೆಯಿಂದ ಗುಣಮುಖರಾದ ಬಳಿಕವೂ ಸುಸ್ತು, ಆಯಾಸ, ನಿಶ್ಯಕ್ತಿ ಹಾಗೇ ಉಳಿದಿರುವುದನ್ನು ನೋಡಿರುತ್ತೇವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಪೋಸ್ಟ್ ವೈರಲ್ ಸಿಂಡ್ರೋಮ್' ಎನ್ನಲಾಗುತ್ತದೆ. ಇದಕ್ಕೆ ಕಾರಣವೇನು? ಯಾರಿಗೆಲ್ಲಾ ಈ ಸಿಂಡ್ರೋಮ್ ಕಾಡಲಿದೆ? ಇದಕ್ಕೆ ಪರಿಹಾರವೇನು ಎಂಬುದರ ಕುರಿತು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಫೋಸ್ಟ್ ವೈರಲ್ ಸಿಂಡ್ರೋಮ್: ವೈರಲ್ ಜ್ವರ, ಯಾವುದೇ ರೀತಿಯ ಕಾಯಿಲೆಯಾದರೂ ಸರಿ ಒಮ್ಮೆ ನಿಮ್ಮನ್ನು ಆವರಿಸಿ, ಗುಣಮುಖರಾದ ಬಳಿಕವೂ ನಿಮ್ಮ ದೇಹವನ್ನು ನಿಶ್ಯಕ್ತಿಗೊಳಿಸುವುದೇ ಪೋಸ್ಟ್ ವೈರಲ್ ಸಿಂಡ್ರೋಮ್. ಇದು ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿರಬಹುದು. ಈಗಂತೂ ಡೆಂಗ್ಯೂ, ಝೀಕಾ ವೈರಸ್ ಸೇರಿದಂತೆ ಇತರೆ ವೈರಲ್ ಫೀವರ್ ಬರುತ್ತಿರುವುದು ಸಾಮಾನ್ಯವಾಗಿದೆ. ಈ ಫೀವರ್ ಹೋದ ಬಳಿಕವೂ ದೇಹದ ತುಂಬಾ ಆಯಾಸ, ನೋವು, ಚಟುವಟಿಕೆಯಿಂದ ಇರಲು ಸಾಧ್ಯವಾಗದೇ ಇರುವುದು, ಊಟ ರುಚಿಸದೇ ಇರುವುದು ಸೇರಿದಂತೆ ಆಲಾಸ್ಯ ನಮ್ಮನ್ನು ಆವರಿಸಿಕೊಳ್ಳುತ್ತದೆ. ಇದು ಬಹುತೇಕರನ್ನು ಕಾಡುತ್ತದೆ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನರಲ್ಲಿ ಈ ಪೋಸ್ಟ್ ವೈರಲ್ ಸಿಂಡ್ರೋಮ್ ಕಾಣಿಸಿತ್ತು.
ಜ್ವರ ಜತೆ ಕಣ್ಣು ಕೆಂಪಾಯ್ತಾ? ಝೀಕಾ ವೈರಸ್ ಟೆಸ್ಟ್ ಮಾಡಿಸಿ!
ಪೋಸ್ಟ್-ವೈರಲ್ ಸಿಂಡ್ರೋಮ್‌ಗೆ ಕಾರಣವೇನು?
*ವೈರಸ್ ಹೆಚ್ಚು ಪ್ರಭಾವಿಶಾಲಿಯಾಗಿದ್ದಲ್ಲಿ, ಗುಣಮುಖರಾದ ಬಳಿಕವೂ ಆ ಸೋಂಕಿನ ಗುಣಲಕ್ಷಣಗಳು ಕೆಲವು ವಾರಗಳವರೆಗೂ ಉಳಿದುಕೊಳ್ಳಬಹುದು.
*ಸೋಂಕು ಹೋದ ಬಳಿಕ ದೇಹವು ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸುವ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಕಾರಣದಿಂದಲೂ ದೇಹವು ಆ ಸೋಂಕಿನ ಹೊಡೆತದಿಂದ ಸುಧಾರಿಸಿಕೊಳ್ಳಲು ಸಮಯ ತೆಗೆದುಕೊಳ್ಳಲಿದೆ
* ಮಕ್ಕಳು- ಇಳಿವಯಸ್ಕರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಡಯಾಬಿಟಿಸ್, ಬಿಪಿ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಹೊಂದಿರುವವರಲ್ಲಿ ಈ ಪೋಸ್ಟ್ ವೈರಲ್ ಸಿಂಡ್ರೋಮ್ ಸಾಮಾನ್ಯ
*ವೈರಸ್ ಒಂದು ವೇಳೆ ನರಮಂಡಲದ ಮೇಲೆ ಪರಿಣಾಮ ಬೀರಿದ್ದರೆ, ಪೋಸ್ಟ್ ವೈರಲ್ ಸಿಂಡ್ರೋಮ್ ಕಾಡಬಹುದು.
* ನೀವು ಸೇವಿಸುವ ಆಹಾರ ಪದ್ಧತಿಯಿಂದಲೂ ಈ ಸಮಸ್ಯೆ ಕಾಡಬಹುದು.
ಪೋಸ್ಟ್-ವೈರಲ್ ಸಿಂಡ್ರೋಮ್‌ನ ಲಕ್ಷಣ ಏನು?
- ಆಯಾಸ: ಆರೋಗ್ಯ ಸಮಸ್ಯೆಯಿಂದ ಗುಣಮುಖರಾದ ಬಳಿಕವೂ ದೇಹ ಆಯಾಸಗೊಳ್ಳುವುದು, ಎಷ್ಟೇ ನಿದ್ರಿಸಿದರೂ ದಣಿದ ಭಾವನೆ ಇರುತ್ತದೆ.
- ಸ್ನಾಯು ಮತ್ತು ಕೀಲುಗಳ ನೋವು: ಸ್ನಾಯು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಂಡು, ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಇರುವುದು
- ತಲೆನೋವು ಅಥವಾ ತಲೆಭಾರ
- ಏಕಾಗ್ರತೆ ಸಾಧ್ಯವಾಗದೇ ಇರುವುದು, ಮರೆವು ಅಥವಾ ಸ್ಪಷ್ಟವಾಗಿ ಯೋಚಿಸುವುದು ಕಷ್ಟ.
- ಹೆಚ್ಚು ನಿದ್ರಿಸುವುದು ಅಥವಾ ನಿದ್ರೆ ಬಾರದೇ ಇರುವುದು
- ಮೂಡ್ ಸ್ವಿಂಗ್
ಗ್ರಾಮ ಪಂಚಾಯತಿಗಳಿಗೆ ರಾಜ್ಯ ಸರ್ಕಾರ ಡೆಂಘೀ ಅಲರ್ಟ್: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಇದನ್ನು ತಡೆಗಟ್ಟುವುದು ಹೇಗೆ?
*ನಿಮಗೆ ವೈರಲ್ ಫೀವರ್ ಅಥವಾ ಆರೋಗ್ಯ ಸಮಸ್ಯೆ ಗುಣಮುಖರಾದ ಬಳಿಕ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ.
*ಹೆಚ್ಚು ನೀರು ಕುಡಿಯಿರಿ
*ಪೌಷ್ಠಿಕ ಆಹಾರ ಹಾಗೂ ಸಾತ್ವಿಕ ಆಹಾರ ಸೇವಿಸಿ, ಜಂಕ್ ಫುಡ್ ಸಾಧ್ಯವಾದಷ್ಟು ಕಡಿಮೆ ಮಾಡಿ
* ಮೃಧುವಾದ ವ್ಯಾಯಾಮ, ಯೋಗ, ಧ್ಯಾನವನ್ನು ಮಾಡಿ
*ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ
*ನಿಮ್ಮ ಸೋಂಕು ಸಂಪೂರ್ಣ ಗುಣವಾಗಿದ ಎಂಬುದನ್ನು ಬಲವಾಗಿ ನಂಬಿ, ನಿಮ್ಮ ದೈನಂದಿನ ಚಟುವಟಿಕೆಯ ಕಡೆ ಹೆಚ್ಚು ಗಮನ ನೀಡಿ. ಆಯಾಸದಾಯ ಜೀವನಶೈಲಿಯ ಕಡೆ ವಾಲದಿರಿ.
*ನಿಮ್ಮ ನಿಯಂತ್ರಣಕ್ಕೂ ಮೀರಿ ಆಯಾಸ, ನಿಶ್ಯಕ್ತಿ ಹಾಗೇ ಇದ್ದರೆ ವೈದ್ಯರನ್ನು ಭೇಟಿ ಮಾಡಿ, ಸಲಹೆ ಪಡೆಯಿರಿ.