
ಶ್ವೇತಾ ಕೆ.ಪಿ
1. ಫೇಸ್ ಮಾಸ್ಕ್ ಮಕ್ಕಳಿಗೆಷ್ಟುಸುರಕ್ಷಿತ?
ಕೋವಿಡ್- 19 ತಡೆಗೆ ಫೇಸ್ ಮಾಸ್ಕ್ ಧರಿಸಿ ಎಂದು ಸಾರ್ವತ್ರಿಕವಾಗಿ ಶಿಫಾರಸು ಮಾಡಿದಾದ್ದರೂ ಮಕ್ಕಳಿಗೆಷ್ಟುಸುರಕ್ಷಿತ ಎಂಬ ಪ್ರಶ್ನೆ ಇಂದಿಗೂ ಪೋಷಕರನ್ನು ಕಾಡುತ್ತಲೇ ಇದೆ. ಮಕ್ಕಳಿಗೆ ದಪ್ಪಗಿರುವ ಮಾಸ್ಕ್ ಧರಿಸುವುದರಿಂದ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಟದ ತೊಂದರೆ ಆಗಬಹುದು. ಮೂಗು ಬಾಯಿಯ ಬಳಿ ವಿಪರೀತವಾಗಿ ಕಾರ್ಬನ್ ಡೈ ಆಕ್ಸೈಡ್ ಶೇಖರಣೆಗೊಂಡರೆ ಅಪಾಯ ಕಟ್ಟಿಟ್ಟಬುತ್ತಿ. ಫೇಸ್ ಮಾಸ್ಕ್ ಒಳಗೆ ಬೆರಳು ತೂರಿಸಿ ಅದೇ ಬೆರಳಿಂದ ಕಣ್ಣು, ಬಾಯಿ ಮುಟ್ಟಿಕೊಳ್ಳುವುದರಿಂದ ಸೋಂಕು ಸುಲಭವಾಗಿ ಹರಡುತ್ತದೆ. ಜತೆಗೆ ಹತ್ತು ವರ್ಷದವರೆಗೆ ಮಕ್ಕಳ ಮೂಗು ಸೂಕ್ಷ್ಮವಾಗಿದ್ದು, ಸದಾ ಮಾಸ್ಕ್ ಅನ್ನು ಬಿಗಿಯಾಗಿ ಕಟ್ಟುವುದರಿಂದ ಮೂಗಿನ ಆಕಾರ, ಬೆಳವಣಿಗೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
2. ಫೇಸ್ ಶೀಲ್ಡ್ ಮಾರಕವಲ್ಲವೇ?
ಫೇಸ್ ಮಾಸ್ಕ್‌ಗೆ ಹೋಲಿಸಿದರೆ ಮಕ್ಕಳಿಗೆ ಫೇಸ್ ಶೀಲ್ಡ್ ಹೆಚ್ಚು ಸುರಕ್ಷಿತ ಎಂದು ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೇಸ್ ಶೀಲ್ಡ್ ಸಂಪೂರ್ಣವಾಗಿ ಮುಖಕ್ಕೆ ರಕ್ಷಣಾತ್ಮಕ ಹೊದಿಕೆಯಂತಿರುವುದರಿಂದ ವೈರಸ್ ಹರಡುವಿಕೆಯ ಪ್ರಮಾಣ ಕಡಿಮೆ. ಫೇಸ್ ಶೀಲ್ಡ್‌ಗಳನ್ನು ಸುಲಭವಾಗಿ ಶುಚಿಗೊಳಿಸಿ, ಮರು ಧರಿಸಬಹುದು ಮತ್ತು ಇತರೆ ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಿಗೆ ಸಹ ಉಪಯುಕ್ತ. ಕಣ್ಣುಗಳನ್ನು ಸ್ಪರ್ಶಿಸುವುದಕ್ಕೆ ತಡೆಗೋಡೆಯಾಗಬಹುದು. ಆದರೆ ಫೇಸ್ ಶೀಲ್ಡ್ ಮಕ್ಕಳ ಹುಬ್ಬಿನಿಂದ ಗಲ್ಲದವರೆಗೆ ಆವರಿಸದಿದ್ದರೆ ಸಾಂಕ್ರಾಮಿಕ ಕಣಗಳು ಕೆಳಭಾಗ ಮತ್ತು ಕಿವಿಯ ಬದಿಗಳಿಂದ ದೇಹವನ್ನು ಸೇರುವುದಂತೂ ಖಚಿತ.
3. ಸುರಕ್ಷತೆಯೊಂದಿಗೆ ವಿನ್ಯಾಸದಲ್ಲೂ ವಿಭಿನ್ನತೆ
ಮಾರುಕಟ್ಟೆಯಲ್ಲಿ ಮಕ್ಕಳ ಅಭಿರುಚಿಗೆ ತಕ್ಕಂತೆ ಬಣ್ಣಬಣ್ಣದ ವಿವಿಧ ವಿನ್ಯಾಸದ ಫೇಸ್ ಮಾಸ್ಕ್‌ಗಳು ಲಗ್ಗೆ ಇಟ್ಟಿದ್ದರೂ ಖರೀದಿಸುವಾಗ ಎಚ್ಚರವಿರಲಿ. ಮಾಸ್ಕ್‌ಗಳು ಚರ್ಮದೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವುದರಿಂದ ರಾಸಾಯನಿಕ ಬಣ್ಣ ಆರೋಗ್ಯಕ್ಕೆ ಹಾನಿಕಾರಕ. ಅದರಂತೆ ಫೇಸ್ ಶೀಲ್ಡ್ ಅನ್ನು ಪಾಲಿಥೀನ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಹಣೆಯ ಸುತ್ತಲೂ ಪ್ಯಾಡ್ ಬ್ಯಾಂಡ್ ಹೊಂದಿದ್ದು ಅದರ ನಡುವೆ ಮಕ್ಕಳನ್ನು ಆಕರ್ಷಿಸಲು ನೆಚ್ಚಿನ ಕಾರ್ಟೂನ್ ಪಾತ್ರಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಬಕೆಟ್ ಟೋಪಿ ಇರುವ ಫೇಸ್ ಶೀಲ್ಡ್ ಬಿಸಿಲಿನಿಂದಲೂ ರಕ್ಷಿಸುತ್ತದೆ. ಫೇಸ್ ಮಾಸ್ಕ್ ಧರಿಸಲು ಸಾಧ್ಯವಾಗದ ಎರಡು ವರ್ಷದೊಳಗಿನ ಮಕ್ಕಳಿಗೆ ಇದು ಉತ್ತಮ ಆಯ್ಕೆಯಾಗಿದೆ.
ಮಾಸ್ಕ್ ಇಲ್ಲದೇ ಪ್ರವೇಶವಿಲ್ಲ, ಧರಿಸಿದ್ದ ಚಡ್ಡಿ ತೆಗೆದು ಮುಖಕ್ಕೆ ಹಾಕಿದ ಮಹಿಳೆ!
4. ಬಳಕೆಯಲ್ಲೂ ಎಚ್ಚರಿಕೆ ಅಗತ್ಯ
ಮಕ್ಕಳಿಗೆ ಎನ್-95 ಫೇಸ್ ಮಾಸ್ಕ್‌ಗಳು ಹೆಚ್ಚು ಸುರಕ್ಷಿತವಲ್ಲ ಎಂಬುದು ಸಾಬೀತಾಗಿದ್ದು, ಮೃದುವಾದ ಕಾಟನ್ ಸ್ಕಾಪ್‌ರ್‍ಗಳನ್ನು ಬಳಸುವುದು ಒಳಿತು. ಅದನ್ನೂ ಹೆಚ್ಚು ಕಾಲ ಬಳಸಿದರೆ ಮಕ್ಕಳ ಉಸಿರಾಟಕ್ಕೆ ತೊಂದರೆಯಾಗಬಹುದು. ಅದರಂತೆ ಹತ್ತು ವರ್ಷದೊಳಗಿನ ಮಕ್ಕಳಿಗೆ 7.5 ಇಂಚು ಎತ್ತರ ಮತ್ತು 7 ಇಂಚು ಅಗಲದಲ್ಲಿರುವ ಸಂಪೂರ್ಣವಾಗಿ ಮುಖವನ್ನು ಆವರಿಸುವ ಫೇಸ್ ಶೀಲ್ಡ್ ಬಳಸುವುದು ಉತ್ತಮ. ಇದು ಹೆಚ್ಚು ಆರಾಮದಾಯಕ ಮತ್ತು ಬಳಸಲು ಅನುಕೂಲಕರ. ಪ್ರತಿ ಬಳಕೆಯ ನಂತರ ತೊಳೆದು ಮತ್ತೆ ಧರಿಸಬಹುದು. ಫೇಸ್ ಶೀಲ್ಡ್ ಧರಿಸುವ ಮುನ್ನ ನೀವು ಹಾಗೂ ನಿಮ್ಮ ಮಗುವಿನ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಹುಬ್ಬಿನಿಂದ ಗಲ್ಲದವರೆಗೆ ಆವರಿಸುವ ಫೇಸ್ ಶೀಲ್ಡ್‌ಗಳನ್ನೇ ಬಳಸಬೇಕು. ಆದರೆ ಫೇಸ್ ಶೀಲ್ಡ್ ಮುರಿದರೆ ಅದರ ಚೂರಿನಿಂದ ಮಕ್ಕಳ ಮುಖದ ಮೇಲೆ ಹಾನಿಗಳಾಗುವ ಸಾಧ್ಯತೆ ಇದೆ ಎಚ್ಚರವಿರಲಿ.
ಖರ್ಚಿಲ್ಲದೆ ಔಷಧಿಗುಣವುಳ್ಳ ಮಾಸ್ಕ್, ಮನಗೆದ್ದ ಬುಡಕಟ್ಟು ಐಡಿಯಾ!
5. ನಿಮ್ಮ ಆಯ್ಕೆಯಲ್ಲೇ ಇದೆ ನಿಮ್ಮ ಮಕ್ಕಳ ಆರೋಗ್ಯ
ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್‌ಗಳೆರಡೂ ಸಾಧಕ-ಬಾಧಕಗಳನ್ನು ಹೊಂದಿದೆ. ಅದನ್ನೆಲ್ಲಾ ತುಲನೆ ಮಾಡಿ ನಿಮ್ಮ ಮಕ್ಕಳ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಉತ್ತಮ ಗುಣಮಟ್ಟದ ಮಾಸ್ಕ್ ಅಥವಾ ಫೇಸ್ ಶೀಲ್ಡ್ ಅನ್ನು ಆಯ್ಕೆ ಮಾಡಿ. ‘ಫೇಸ್ ಮಾಸ್ಕ್‌ಗಿಂತ ಫೇಸ್ ಶೀಲ್ಡ್ ಹೆಚ್ಚು ಉಪಯೋಗಕಾರಿಯಾಗಿದ್ದರೂ ಇನ್ನೂ ಸಾರ್ವತ್ರಿಕವಾಗಿ ಶಿಫಾರಸು ಮಾಡಿಲ್ಲ. ಆದರೆ, ಮ್ಯೂಕೋಸಲ್ ಮೇಲ್ಮೈನ ಪರಿಪೂರ್ಣ ರಕ್ಷಣೆಗೆ ಫೇಸ್ ಶೀಲ್ಡ್ ಒಳಿತು’ ಎಂದು ನ್ಯಾಷನಲ್ ಇನ್ಸಿ$್ಟಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷನ್ ಡಿಸೀಸ್‌ನ ನಿರ್ದೇಶಕ ಡಾ.ಆಂಥೋನಿ ಕೂಡಾ ಸಲಹೆ ನೀಡಿದ್ದಾರೆ. ಈ ಅಂಶವೂ ನಿಮ್ಮ ಗಮನದಲ್ಲಿರಲಿ. ಇನ್ನೇನು ಶಾಲೆಗಳು ಆರಂಭಗೊಳ್ಳಲಿದ್ದು, ಫೇಸ್ ಮಾಸ್ಕ್ ಅಥವಾ ಶೀಲ್ಡ್ ಧರಿಸುವ ಸರಿಯಾದ ಕ್ರಮದ ಬಗ್ಗೆ ಈಗಿನಿಂದಲೇ ಮನೆಯಲ್ಲಿ ತರಬೇತಿ ಕೊಡುವುದು ಉತ್ತಮ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ. ಆದಷ್ಟುಉತ್ತಮ ಗುಣಮಟ್ಟದ ಹಾಗೂ ಸಂಪೂರ್ಣ ಮುಖವನ್ನು ಆವರಿಸುವ ಫೇಸ್ ಶೀಲ್ಡ್ ಖರೀದಿಸಿ. ನಿಮ್ಮಮಕ್ಕಳು ಸದಾ ಕ್ಷೇಮವಾಗಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.