
ಬೆಂಗಳೂರು (ಜು.25): ಐದು ಗಂಟೆಗಳ ಅವಧಿಯ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ, ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರು 42 ವರ್ಷದ ಮಹಿಳೆಯ ಗರ್ಭಾಶಯದಿಂದ 4.005 ಕೆಜಿ ಫೈಬ್ರಾಯ್ಡ್ ಅನ್ನು ತೆಗೆದುಹಾಕಿದ್ದಾರೆ. ಆದರೆ, ಮಹಿಳೆಗೆ ರೋಗದ ಯಾವಯದೇ ಲಕ್ಷಣಗಳೂ ಇದ್ದಿರಲಿಲ್ಲ ಅಥವಾ ಈ ಹಿಂದೆ ಯಾವುದೇ ಚಿಕಿತ್ಸೆಯಾಗಲಿ ಶಸ್ತ್ರಿಚಿಕಿತ್ಸೆಗಾಗಲಿ ಒಳಗಾಗಿರಲಿಲ್ಲ. ಮಹಿಳೆಯ ರೆಗ್ಯುಲರ್ ಸ್ಕ್ಯಾನ್ ನಡೆಸಿದಾಗ, ಆಕೆಯು 32 ರಿಂದ 34 ವಾರಗಳ ಗರ್ಭಕ್ಕೆ ಸಮಾನವಾದ ಫೈಬ್ರಾಯ್ಡ್‌ಗಳನ್ನು ಹೊಂದಿದ್ದಾಳೆ ಎನ್ನುವುದು ವೈದ್ಯರಿಗೆ ಗೊತ್ತಾಗಿತ್ತು. ಇಷ್ಟು ದೊಡ್ಡ ಗಾತ್ರದ ಫೈ ಬ್ರಾಯ್ಡ್‌ಗಳನ್ನು ಹೊಂದಿರುವ ಕಾರಣ ಮುಂದೆ ಎದುರಾಗಬಹುದಾದ ಸವಾಲುಗಳು, ಅನಾನುಕೂಲಗಳು ಹಾಗೂ ಆರೋಗ್ಯ ಸಂಬಂಧಿತ ತೊಡಕುಗಳ ಬಗ್ಗೆ ಆಕೆಗೆ ವಿವರವಾಗಿ ಸಲಹೆಯನ್ನು ವೈದ್ಯರು ನೀಡಿದ್ದರು. "ಕಿಬ್ಬೊಟ್ಟೆ ತುಂಬಾ ಆಕ್ರಮಿಸಿಕೊಂಡಿರುವ ಫೈಬ್ರಾಯ್ಡ್ ಮತ್ತು ಗರ್ಭಾಶಯದ ಗಾತ್ರವನ್ನು ಗಮನಿಸಿದರೆ, ಗರ್ಭಾಶಯದ ಪ್ರದೇಶದಲ್ಲಿ ಲ್ಯಾಪರೊಸ್ಕೋಪಿ ಮಾಡುವುದೇ ನಮಗೆ ಸವಾಲಾಗಿತ್ತು. ಏಕೆಂದರೆ ಲ್ಯಾಪ್ರೋಸ್ಕೋಪಿ ಉಪಕರಣಗಳ ಚಲನೆಗೆ ಸೀಮಿತ ಸ್ಥಳವಾಕಾಶ ಇದರಲ್ಲಿ ಇರುತ್ತದೆ" ಎಂದು ಆಸ್ಟರ್ ಆರ್‌ವಿ ಆಸ್ಪತ್ರೆಯ ರೋಗಿಯ ಪ್ರಮುಖ ಸಲಹೆಗಾರ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ ಸುನೀಲ್ ಈಶ್ವರ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ತಿಳಿಸಿದ್ದಾರೆ.
ಸಾಮಾನ್ಯ ರಕ್ತನಾಳಗಳನ್ನು ಪತ್ತೆ ಮಾಡುವುದು, ಗರ್ಭಾಶಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಯಶಸ್ವಿಯಾಗಿ ನಿಯಂತ್ರಿಸುವುದು ಸ್ವತಃ ಒಂದು ಸವಾಲಿನ ಕಾರ್ಯವಾಗಿತ್ತು. 20 ರಿಂದ 30 ರಷ್ಟು ಮಹಿಳೆಯರಲ್ಲಿ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಫೈಬ್ರಾಯ್ಡ್‌ಗಳು ಕಂಡುಬರುತ್ತವೆ. ಆದರೆ, ಗರ್ಭಾಶಯದಲ್ಲಿ ಇಷ್ಟೊಂದು ದೊಡ್ಡ ಫೈಬ್ರಾಯ್ಡ್ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪ ಎಂದು ವೈದ್ಯ ಸುನೀಲ್ ಈಶ್ವರ್ ಹೇಳುತ್ತಾರೆ. ಇಂಥ ಶಸ್ತ್ರಚಿಕಿತ್ಸೆಯ ವೇಳೆ ಪ್ರೊಸಿಜರ್‌ಗಳಿಗೆ 1.5 ಗಂಟೆ ತೆಗೆದುಕೊಳ್ಳುತ್ತದೆ. ಸರಿಸುಮಾರು 150 ಫೈಬ್ರಾಯ್ಡ್‌ಗಳನ್ನು ತೆಗೆದುಹಾಕಲು ಎರಡು ಗಂಟೆಗಳ ಕಾಲ ಅಗತ್ಯವಿತ್ತು. ಇದರಲ್ಲಿ ಅತೀ ದೊಡ್ಡ ಫೈಬ್ರಾಯ್ಡ್‌ನ ಅಳತೆ 12 ಸೆಂ.ಮೀ ಆಗಿತ್ತು ಎಂದು ಹೇಳಿದ್ದಾರೆ.
'ಮಹಿಳೆಗೆ 42 ವರ್ಷ. ಸ್ಕ್ಯಾನ್ ಮಾಡಿದಾಗ ಬಹಳ ದೊಡ್ಡ ಗಡ್ಡೆ ಪತ್ತೆಯಾಗಿತ್ತು. ಎಂಟು ತಿಂಗಳ ಪ್ರೆಗ್ನೆಂಟ್ ಆದವರ ರೀತಿ ಆಕೆ ಕಾಣ್ತಾ ಇದ್ದಳು. ಅವರಿಗೆ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಅಂದರೆ, ಕೀ ಹೋಲ್ ಸರ್ಜರಿಯೇ ಬೇಕಾಗಿತ್ತು. ಯಾಕಂದ್ರೆ ಓಪನ್ ಸರ್ಜರಿಯಲ್ಲಿ ತುಂಬಾ ದಿನ ರೆಸ್ಟ್ ಬೇಕಾಗುತ್ತದೆ. 3-4 ತಿಂಗಳು ವಿಶ್ರಾಂತಿಯೇ ಬೇಕಾಗುತ್ತದೆ. ಓಪನ್ ಸರ್ಜರಿ ಅಂದ್ರೆ ದೊಡ್ಡ ಗಾಯಕ್ಕೆ ಕಾರಣವಾಗುತ್ತದೆ. ಇದು ಇನ್‌ಫೆಕ್ಷನ್, ಬ್ಲೀಡಿಂಗ್ ಆಗೋ ಚಾನ್ಸ್ ಜಾಸ್ತಿ ಇರುತ್ತೆ. ಹರ್ನಿಯಾ ಆಗೋ ಅಪಾಯ ಕೂಡ ಜಾಸ್ತಿ ಇರುತ್ತದೆ. ಇದೆಲ್ಲಾ ರೋಗಿಗೆ ಗೊತ್ತಿದ್ದ ಕಾರಣಕ್ಕೆ ಆಕೆ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಆಯ್ಕೆ ಮಾಡಿಕೊಂಡಿದ್ದರು' ಎಂದು ವೈದ್ಯರು ತಿಳಿಸಿದ್ದಾರೆ.
ನಮಗಿದ್ದ ಚಾಲೆಂಜ್ ಏನೆಂದರೆ, ಫೈಬ್ರಾಯ್ಡ್ ತುಂಬಾ ದೊಡ್ಡದಿತ್ತು. ಲ್ಯಾಪ್ರೋಸ್ಕೋಪಿಕ್ ಅಂದ್ರೆ ಬ್ಲೈಂಡ್ ಆಗಿ ಕ್ಯಾಮೆರಾ ಮೂಲಕ ನಿರ್ವಹಿಸಬೇಕಾಗುತ್ತದೆ. ನಮಗೆ ಆಪರೇಷನ್ ಮಾಡುವ ಸ್ಥಳಾವಕಾಶ ಕೂಡ ಕಡಿಮೆ ಇರುತ್ತದೆ. ಆದರಲೂ ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಪ್ರಧಾನ ಉಪಕರಣ ಒಳಗೆ ಹೋದ ಬಳಿಕ ಚಿಕ್ಕ ಚಿನ್ನ ಉಪಕರಣಗಳನ್ನು ಬಳಸಿಕೊಂಡು ಗರ್ಭಕೋಶವನ್ನು ಬಿಡಿಸಿದೆವು. ಸಾಮಾನ್ಯವಾಗಿ ಗರ್ಭಕೋಶಕ್ಕೆ ರಕ್ತ ಪೂರೈಸುವ ನಾಳಗಳು 1 ಎಂಎಂ ಅಥವಾ 2 ಎಂಎಂ ಇರುತ್ತದೆ. ಆದರೆ, ದೊಡ್ಡ ಯೂಟ್ರಸ್ ಆಗಿದ್ದ ಕಾರಣ 4-5 ಎಂಎಂ ರಕ್ತನಾಳ ಇತ್ತು. ಒಂದು ಸಣ್ಣ ವಯರ್ ರೀತಿ ರಕ್ತ ನಾಳ ಇದ್ದವು. ಹೀಗಿದ್ದಾಗ ರಕ್ತನಾಳದ ಒಳಗೇ ಬ್ಲೀಡಿಂಗ್ ಆಗೋ ಸಾಧ್ಯತೆ ಜಾಸ್ತಿ ಇರುತ್ತದೆ. ಇಂಥ ಆಪರೇಷನ್ ವೇಳೆ ಬ್ಲೀಡಿಂಗ್ ಆದ್ರೆ ಶಸ್ತ್ರಚಿಕಿತ್ಸೆ ಮುಂದುವರಿಸೋದಕ್ಕೆ ಆಗೋದಿಲ್ಲ. ತುಂಬಾ ಸೂಕ್ಷ್ಮವಾಗಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ 1-2 ಗಂಟೆ ಆಗುವ ಆಪರೇಷನ್ ಇದು. ಆದರೆ, ದೊಡ್ಡ ಗಡ್ಡೆ ಆಗಿದ್ದ ಕಾರಣ 5 ಗಂಟೆಯ ಕಾಲ ಆಪರೇಷನ್ ನಡೆಯಿತು' ಎಂದು ವೈದ್ಯರು ಹೇಳಿದ್ದಾರೆ.
ಪೀರಿಯಡ್ಸ್‌ನಿಂದ ಲವ್ ಬ್ರೇಕ್ ಅಪ್, ಪ್ರತಿ ತಿಂಗಳ ಎಕ್ಸ್‌ಟ್ರೀಮ್ ಅನುಭವ ಬಿಚ್ಚಿಟ್ಟ ಜಾಹ್ನವಿ ಕಪೂರ್!
ಎರಡು ತಿಂಗಳ ಹಿಂದೆ ಈ ಆಪರೇಷನ್ ನಡೆದಿದೆ. ಎರಡೇ ದಿನಕ್ಕೆ ಅವರು ಡಿಸ್ಚಾರ್ಜ್ ಆದರು. ಅದಾದ ಬಳಿಕ ಒಮ್ಮೆ ವಾರದ ಹಾಗೂ ಒಮ್ಮೆ ತಿಂಗಳ ಚೆಕಪ್‌ಗೆ ಬಂದಿದ್ದರಷ್ಟೇ. ಅವರಿಗೂ ಕೂಡ ಆಪರೇಷನ್‌ನ ಬಗ್ಗೆ ಖುಷಿ ಇದೆ. ಸದ್ಯ ಅವರು ಟ್ರಾವೆಲಿಂಗ್ ಮಾಡಿಕೊಂಡೆ ಕೆಲಸ ಮಾಡುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಸಮಸ್ಯೆ ಆಕೆಗೆ ಆಗಲಿಲ್ಲ ಎಂದಿದ್ದಾರೆ.
ಜುಂಬಾ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!
ಲ್ಯಾಪ್ರೋಸ್ಕೋಪಿ ಮೂಲಕ ಇಷ್ಟು ದೊಡ್ಡ ಪ್ರಮಾಣದ ಗಡ್ಡೆ ತೆಗೆದಿರುವುದು ದಕ್ಷಿಣ ಭಾರತದಲ್ಲಿ ಇದೇ ಮೊದಲು ಎನ್ನಬಹುದು. ದೇಶದಲ್ಲಿ ಇದು 2-3 ಕೇಸ್ ಆಗಿರಬಹುದಷ್ಟೇ. ಓಪನ್ ಸರ್ಜರಿ ವೇಳೆ ಇದಕ್ಕಿಂತ ಹೆಚ್ಚಿನ ತೂಕದ ಗಡ್ಡೆಗಳನ್ನು ತೆಗೆದಿದ್ದಾರೆ. ಆದರೆ, ಕಂಪ್ಲೀಟ್ ಲ್ಯಾಪ್ರೋಸ್ಕೋಪಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಫೈಬ್ರಾಯ್ಡ್ ತೆಗೆದಿರುವುದು ಇದೇ ಮೊದಲು ಎನ್ನಬಹುದು ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.