ಭಾರತದಲ್ಲಿ ಹಲವು ನದಿಗಳು (river) ಹರಿಯುತ್ತವೆ, ಲೆಕ್ಕ ಮಾಡಿದ್ರೆ ಸುಮಾರು 200ಕ್ಕೂ ಅಧಿಕ ನದಿಗಳಿವೆ. ಇವುಗಳಲ್ಲಿ ಗಂಗಾ, ಯಮುನಾ, ನರ್ಮದಾ, ಕಾವೇರಿ, ಕೃಷ್ಣಾ, ಗೋದಾವರಿ ಪ್ರಮುಖ ನದಿಗಳಾಗಿವೆ. ಇವುಗಳ ರಾಜ್ಯಗಳ ಜನರ ಜೀವನಾಧಾರವೂ ಆಗಿದೆ.
ನೀವು ಭಾರತದ ಪ್ರಮುಖ ನದಿಗಳ ಹೆಸರುಗಳನ್ನು ಹೇಳುವಾಗ ಸರಸ್ವತಿ ನದಿಯ (Saraswati River) ಹೆಸರು ಸಹ ಕೇಳಿರುತ್ತೀರಿ ಅಲ್ವಾ? ಆದರೆ ಇದು ಎಲ್ಲಿ ಹರಿಯುತ್ತೆ ಅನ್ನೋದು ಗೊತ್ತಾ? ಅಥವಾ ಯಾರದರೂ ಈ ನದಿ ಹರಿಯೋದನ್ನು ನೋಡಿದ್ದೀರಾ? ಖಂಡಿತಾ ಸಾಧ್ಯವಿಲ್ಲ. ಯಾಕಂದ್ರೆ ಈ ನದಿ ಭೂಮಿ ಮೇಲೆ ಇಲ್ವೇ ಇಲ್ಲ.
ಈ ನದಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ, ಇದು ಬಹುಶಃ ಈ ನದಿಯ ರಹಸ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಬಿಚ್ಚಿಡಲು ಸಹಾಯ ಮಾಡುತ್ತದೆ. ಈ ನದಿಯ ಅಸ್ತಿತ್ವ ಎಲ್ಲಿದೆ ಮತ್ತು ಈ ನದಿ ಭೂಮಿ ಮೇಲೆ ಯಾಕಿಲ್ಲ, ಭೂಮಿಯಲ್ಲಿ ಇಲ್ಲದ ನದಿಯ ಉಲ್ಲೇಖವಾದರೂ ಇತಿಹಾಸದಲ್ಲಿ ಯಾಕಿದೆ? ಅದರ ಆಸಕ್ತಿದಾಯಕ ಕಥೆ ಏನು ಎಂದು ತಿಳಿಯೋಣ.
ಸರಸ್ವತಿ ನದಿಯ ಉಗಮದ ಬಗ್ಗೆ ಹೇಳೊದಾದ್ರೆ ರಾಜಸ್ಥಾನದ ಅರಾವಳಿ ಪರ್ವತ ಶ್ರೇಣಿಯ ಮಧ್ಯದಿಂದ ಹುಟ್ಟುತ್ತೆ. ಇದನ್ನು ಅಲಕನಂದಾ ನದಿಯ ಉಪನದಿ ಎಂದು ಕರೆಯಲಾಗುತ್ತದೆ, ಇದರ ಮೂಲ ಉತ್ತರಾಖಂಡದ ಬದರೀನಾಥ್ ಬಳಿ ಇದೆ. ರನ್ ಆಫ್ ಕಚ್ (Rann of Kutch) ಅನ್ನು ಸೇರುವ ಮೊದಲು ಈ ನದಿಯು ಪಟಾನ್ ಮತ್ತು ಸಿದ್ಧಪುರದ ಮೂಲಕ ಹಾದುಹೋಗುತ್ತದೆ.
ಸರಸ್ವತಿ ನದಿಯ ಮೊದಲ ಉಲ್ಲೇಖವು ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿ ಕಂಡುಬರುತ್ತದೆ. ಇದನ್ನು ಉತ್ತರ ವೈದಿಕ ಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ. ಒಂದು ಕಾಲದಲ್ಲಿ ಹಿಂದೂ ಧರ್ಮದ ಅನುಯಾಯಿಗಳು ಪೂಜಿಸುತ್ತಿದ್ದ ಕೆಲವೇ ನದಿಗಳಲ್ಲಿ ಸರಸ್ವತಿ ನದಿಯೂ ಒಂದಾಗಿದೆ.
ಪ್ರಯಾಗದಲ್ಲಿ ತ್ರಿವೇಣಿಯ ಸಂಗಮ (Triveni Sangama) ಸ್ಥಳವಿದೆ, ಅಲ್ಲಿ ಭಕ್ತರ ಪಾಪಗಳು ಸ್ನಾನ ಮಾಡುವ ಮೂಲಕ ತೊಳೆಯಲ್ಪಡುತ್ತವೆ ಎಂದು ನಂಬಲಾಗಿದೆ. ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗುತ್ತದೆ ಎನ್ನಲಾಗುತ್ತದೆ. ಗಂಗಾ ಮತ್ತು ಯಮುನಾ ಎರಡು ದಿಕ್ಕಿನಲ್ಲಿ ಬಂದರೆ, ಸರಸ್ವತಿ ನದಿಯು ಭೂಗರ್ಭದಲ್ಲಿ ಹರಿದು ಇಲ್ಲಿ ಸಂಗಮವಾಗುತ್ತಾಳೆ.
ಸರಸ್ವತಿ ನದಿಯ ಶಾಪ
ಒಮ್ಮೆ ವೇದವ್ಯಾಸರು ಸರಸ್ವತಿ ನದಿ ದಡದಲ್ಲಿ ಗಣೇಶನಿಗೆ ಮಹಾಭಾರತದ ಕಥೆಯನ್ನು (Mahabharat) ಹೇಳುತ್ತಿದ್ದರು ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ಋಷಿ ಪಾಠವನ್ನು ಪೂರ್ಣಗೊಳಿಸಲು ನದಿಯನ್ನು ನಿಧಾನವಾಗಿ ಹರಿಯುವಂತೆ ವಿನಂತಿಸಿದರು. ಶಕ್ತಿಶಾಲಿ ಸರಸ್ವತಿ ನದಿಯು ಅವರ ಮಾತನ್ನು ಕೇಳದೆ, ವೇಗದಲ್ಲಿ ಹರಿದಳು. ನದಿಯ ಈ ವರ್ತನೆಯಿಂದ ಕೋಪಗೊಂಡ ಗಣೇಶನು ನದಿ ಒಂದು ದಿನ ಅಳಿದುಹೋಗುತ್ತದೆ ಎಂದು ಶಪಿಸಿದನು. ಹಾಗಾಗಿ ನದಿ ಅಳಿದು ಹೋಗಿದೆ ಎನ್ನಲಾಗಿದೆ.
ಮತ್ತೊಂದು ದಂತಕಥೆ ಪ್ರಕಾರ, ಸರಸ್ವತಿ ದೇವಿಯು ಬ್ರಹ್ಮನ ತಲೆಯಿಂದ ಜನಿಸಿದಳು, ಅವಳು ಬ್ರಹ್ಮಾಂಡವನ್ನು ಸೃಷ್ಟಿಸಿದಳು. ಬ್ರಹ್ಮ ದೇವರು ನೋಡಿದ ಅತ್ಯಂತ ಸುಂದರ ಮಹಿಳೆಯರಲ್ಲಿ ಅವಳು ಒಬ್ಬಳು. ಅವಳ ಸೌಂದರ್ಯವನ್ನು ನೋಡಿ, ಅವರು ಸರಸ್ವತಿಯನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದರಂತೆ. ಆ ಸಮಯದಲ್ಲಿ ಮಾತಾ ಸರಸ್ವತಿ ಅವರ ಇಚ್ಛೆಯನ್ನು ಒಪ್ಪಲಿಲ್ಲ ಮತ್ತು ನದಿಯ ರೂಪದಲ್ಲಿ ನೆಲದ ಕೆಳಗೆ ಹರಿಯಲು ಪ್ರಾರಂಭಿಸಿದಳು ಎನ್ನಲಾಗಿದೆ.
ಇನ್ನೂ ಕೆಲವು ಗ್ರಂಥಗಳು ತಿಳಿಸುವಂತೆ, ದುರ್ವಾಸ ಮುನಿಗಳು ಸರಸ್ವತಿ ನದಿಗೆ ಶಾಪ ನೀಡಿದರಂತೆ. ಕಲಿಯುಗ ಬರುವವರೆಗೆ ನೀನು ಕಣ್ಮರೆಯಾಗು ಎನ್ನುವಂತೆ ಶಪಿಸಿದರಂತೆ. ಹಾಗಾಗಿ ಸರಸ್ವತಿ ಅಂತರ್ಗತಳಾದಳು. ಕಲ್ಕಿಯು ಭೂಮಿಯ ಮೇಲೆ ಜನ್ಮ ಎತ್ತಿ ಬಂದ ನಂತರವಷ್ಟೇ ಸರಸ್ವತಿ ನದಿ ಭೂಮಿ ಮೇಲೆ ಕಾಣಿಸೋದಂತೆ.