ಗಣೇಶನ ಮಹಿಮೆಗೆ ಹೆಸರಾದ ರಾಜ್ಯದ ಪ್ರಮುಖ ಗಣಪತಿ ದೇವಾಲಯಗಳು

First Published | Sep 12, 2023, 5:26 PM IST

ಕರ್ನಾಟಕದಲ್ಲಿ ಗಣೇಶನಿಗೆ ಸಂಬಂಧಿಸಿದ ಅನೇಕ ದೇವಾಲಯಗಳಿವೆ. ಇನ್ನೇನು ಗಣೇಶ ಚತತುರ್ಥಿ ಹತ್ತಿರ ಬರುತ್ತಿದೆ. ನೀವು ಗಣೇಶನ ವಿಶೇಷ ಸ್ಥಳಗಳಿಗೆ ಭೇಟಿ ನೀಡಲು ಬಯಸಿದ್ರೆ ಈ ದೇಗುಲಗಳಿಗೆ ಖಂಡಿತವಾಗಿಯೂ ಭೇಟಿ ನೀಡಿ. 
 

ಇಡಗುಂಜಿ ಶ್ರೀ ವಿನಾಯಕ ದೇವಾಲಯ (Idagunji Ganapathi)
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಇಡಗುಂಜಿ ಶ್ರೀ ವಿನಾಯಕ ದೇವಾಲಯ 1500 ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ. ಇಡಗುಂಜಿ ಎನ್ನುವ ಪದ ಎಡಕುಂಜ ಎನ್ನುವ ಪದದಿಂದ ಬಂದಿದ್ದು, ಎಡ ಎಂದರೆ ಎಡಕ್ಕೆ ಮತ್ತು ಕುಂಜ ಎಂದರೆ ಉದ್ಯಾನ ಎಂದು ಅರ್ಥವಂತೆ.. ಶರಾವತಿ ನದಿಯ ಎಡ ದಡದಲ್ಲಿ ಈ ಸ್ಥಳ ಇರುವುದರಿಂದ ಇದನ್ನು ಇಡಗುಂಜಿ ಎಂದು ಕರೆಯಲಾಯಿತು. ಇಲ್ಲಿ ಕಪ್ಪು ಶಿಲೆಯ ಗಣೇಶನ ನಿಂತ ವಿಗ್ರಹವಿದೆ. ಇಲ್ಲಿದೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. 

ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯ (Sauthadka Mahaganapati)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಕೊಕ್ಕಡದಿಂದ ಮೂರು ಕಿಲೋ ಮೀಟರ್‌ ದೂರದಲ್ಲಿರುವ ಸೌತಡ್ಕದಲ್ಲಿರುವ ಈ ದೇವಾಲಯದಲ್ಲಿ ದೇವರಿಗೆ ಗುಡಿಯೇ ಇಲ್ಲ. ಬಯಲಲ್ಲೇ ನೆಲೆಸಿರುವ ಗಣಪತಿಗೆ ಇಲ್ಲಿ ಪೂಜಿಸಲಾಗುತ್ತೆ. ದನ ಕಾಯುವ ಗೊಲ್ಲರಿಗೆ ಈ ವಿಗ್ರಹ ಸಿಕ್ಕಿತಂತೆ, ಅವರು ಇದನ್ನು ಮರದ ಬುಡದಲ್ಲಿ ಇಟ್ಟು, ಸೌತೆಕಾಯಿ ಮಿಡಿಗಳನ್ನು ಪ್ರತಿದಿನ ನೈವೇದ್ಯವಾಗಿಟ್ಟು ಪೂಜೆ ಮಾಡುತ್ತಾ ಬಂದರಂತೆ, ಅಂದಿನಿಂದ ಇಲ್ಲಿಗೆ ಸೌತಡ್ಕ ಎಂದು ಹೆಸರು ಬಂತು. ಈ ದೇಗುಲಕ್ಕೆ ಗುಡಿ ಕಟ್ಟುವ ಬಗ್ಗೆ ನಿರ್ಧರಿಸಲಾಗಿತ್ತು, ಆದರೆ ಕನಸಿನಲ್ಲಿ ಬಂದ ಬಾಲ ಗಣಪತಿ ಗೋಪುರ ಕಟ್ಟೊದಾದರೆ ದಿನಬೆಳಗಾಗೋದರ ಒಳಗೆ ಕಾಶಿ ವಿಶ್ವನಾಥನಿಗೆ ಕಾಣುವಷ್ಟು ಎತ್ತರದಲ್ಲಿ ಗೋಪು ನಿರ್ಮಿಸಬೇಕು ಎಂದರಂತೆ, ಇದು ಅಸಾಧ್ಯವಾದ ಕಾರಣ ಅದನ್ನು ಮಾಡದೇ ಹಾಗೇ ಉಳಿಸಲಾಯಿತು.

Tap to resize

ಗೋಕರ್ಣ ಶ್ರೀ ಮಹಾಗಣಪತಿ ದೇವಾಲಯ(Gokarna Ganapati)
ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿದೆ.  ಗೋಕರ್ಣದಲ್ಲಿ ಶಿವನ ಆತ್ಮಲಿಂಗ ಇದೆ. ಇಲ್ಲಿ ಸುಮಾರು 4ನೇ ಶತಮಾನಕ್ಕೆ ಸೇರುವ ಗಣಪತಿಯ ಮೂರ್ತಿ ಇದೆ. ಇದು ಕದಂಬರ ಆರಂಭಿಕ ಶಿಲ್ಪಗಳಲ್ಲಿ ಪ್ರಮುಖವಾದುದು. ಗೋಕರ್ಣದಲ್ಲಿಯೇ ಗಣಪತಿಯು ಶಿವನ ಆತ್ಮಲಿಂಗವನ್ನು ರಾವಣನ ಕೈಯಲ್ಲಿ ತೆಗೆದು ಪ್ರತಿಷ್ಠಾಪಿಸಿದ್ದು, ಗೋಕರ್ಣನಾಥನ ಸನ್ನಿಧಿ ಸಮೀಪದಲ್ಲಿಯೇ ಗೋಕರ್ಣ ಶ್ರೀ ಮಹಾಗಣಪತಿಯನ್ನು ಸಹ ಪ್ರತಿಷ್ಟಾಪಿಸಲಾಯಿತು. 

ಆನೆಗುಡ್ಡೆ, ಕುಂಭಾಷಿ ಗಣಪತಿ (Kumbashi Ganapati)
ಇದು ಸಹ ದೇಶದ ಪ್ರಮುಖ ಗಣಪತಿ ದೇಗುಲಗಳಲ್ಲಿ ಒಂದು. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಹೆದ್ದಾರಿಯಿಂದ 1 ಕಿಲೋಮೀಟರ್ ದೂರದಲ್ಲಿರುವುದೇ ಆನೆಗುಡ್ಡೆ. ಕುಂಭಾಸುರ ಎಂಬ ರಾಕ್ಷಸನ ವಧೆ ಇಲ್ಲಿ ಆಗಿರೋದರಿಂದ ಇದಕ್ಕೆ ಕುಂಭಾಷಿ ಎನ್ನಲಾಗುತ್ತೆ. ಈ ದೇವಸ್ಥಾನದ ಗರ್ಭಗುಡಿಯಲ್ಲಿ ಗಣಪತಿಯು ನಿಂತಿರುವ ಭಂಗಿಯಲ್ಲಿದ್ದು, ನಾಲ್ಕು ಕೈಗಳನ್ನು ಹೊಂದಿದ್ದಾನೆ. ಗಣೇಶನು ತನ್ನ 4 ಕೈಗಳಲ್ಲಿ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾನೆ. ಎರಡು ಕೈಗಳು ಕೆಳಕ್ಕಿವೆ. ಇಲ್ಲಿಗೂ ಲಕ್ಷಾಂತರ ಭಕ್ತರು ಪುಣ್ಯ ಪ್ರಾಪ್ತಿಗಾಗಿ ಬರುತ್ತಾರೆ. 

ದೊಡ್ಡ ಗಣಪತಿ ಬೆಂಗಳೂರು (Dodda Ganapati)
ಬೆಂಗಳೂರಿನಲ್ಲಿ ಅತಿ ಎತ್ತರವಾದ ಹಾಗು ಪುರಾತನವಾದ ಗಣಪತಿಯ ಮೂರ್ತಿ ಬಸವನಗುಡಿಯಲ್ಲಿದೆ. ಈ ದೇವಾಲಯದ ಗರ್ಭಗುಡಿಯಲ್ಲಿಸುಮಾರು 18 ಅಡಿ ಎತ್ತರ ಹಾಗು 15 ಅಡಿ ಅಗಲದ ಗಣೇಶನ ಮೂರ್ತಿ ಇದೆ. ಈ ದೇಗುಲ ಸುಮಾರು 16 ನೇಯ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗುತ್ತೆ. 

ಕುರುಡುಮಲೆ ಗಣೇಶ ದೇವಸ್ಥಾನ (Kurudumale Ganesha)
ಕುರುಡುಮಲೆ ಗಣೇಶ ದೇವಸ್ಥಾನ 5 ಸಾವಿರ ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಇದು  ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿರುವ ಪವಿತ್ರ ಕ್ಷೇತ್ರವಾಗಿದೆ. ಸತ್ಯಯುಗದಲ್ಲಿ ಇದು ನಿರ್ಮಾಣವಾಗಿದೆ ಎಂಬ ಉಲ್ಲೇಖವಿದೆ. ಶಿವ ವಿಷ್ಣು ಮತ್ತು ಬ್ರಹ್ಮರಿಂದ ಈ ಮೂರ್ತಿ ಸ್ಥಾಪನೆಯಾಗಿದೆ ಎಂದು ನಂಬಲಾಗಿದೆ. ಇದು ವಿಶ್ವದ ಅತಿ ದೊಡ್ಡ ಸಾಲಿಗ್ರಾಮ ಗಣೇಶ ಮೂರ್ತಿಯಾಗಿದೆ. ಇಲ್ಲಿನ ಗಣೇಶ ಮೂರ್ತಿ 13 ಅಡಿ ಉದ್ದವಿದೆ.

ಶ್ರೀಶರವು ಗಣಪತಿ ಮಂಗಳೂರು (Shree Sharavu Mahaganapati)
ಮಂಗಳೂರಿನಲ್ಲಿರುವ ಅತ್ಯಂತ ಪುರಾತನ ಮತ್ತು ಪ್ರಸಿದ್ಧ ದೇಗುಲ ಶ್ರೀಶರವು ಮಹಾಗಣಪತಿ ದೇವಾಲಯ. ಸ್ಥಳ ಪುರಾಣದ ಬಳಿಕ ಇದು ಶಿವನಿಗಾಗಿ ನಿರ್ಮಿಸಿದ ದೇವಾಲಯವಾಗಿದೆ, ಅಂದರೆ ಶರಭೇಶ್ವರಸ್ವಾಮಿ ದೇವಾಲಯ. ಆದರೆ ನಂತರ ಇಲ್ಲಿ ಗಣಪತಿಯು ಸಿದ್ಧಿ ಲಕ್ಷ್ಮೀಯೊಂದಿಗೆ ಗೋಡೆಯಲ್ಲಿ ಉಧ್ಬವಿಸಿದನು ಎನ್ನಲಾಗಿದೆ. ನಂತರ ಗಣಪತಿಗೆ ಇಲ್ಲಿ ಗುಡಿ ಕಟ್ಟಿ ಪೂಜಿಸಲಾಯಿತು. ಅಂದಿನಿಂದ ಶ್ರೀಶರವು ಮಹಾಗಣಪತಿ ಕ್ಷೇತ್ರ ಎಂದು ಪ್ರಸಿದ್ಧವಾಯಿತು.

ಗುಡ್ಡಟ್ಟು ಶ್ರೀ ವಿನಾಯಕ ದೇವಾಲಯ (Guddattu Vinayaka)
ಇದು ಕುಂದಾಪುರದಲ್ಲಿರುವ ಜಲಸಮಾಧಿಯಾಗಿರುವ ಗಣಪತಿ ದೇವಾಲಯವಾಗಿದೆ. ಇದನ್ನು ಜಲಧಿವಾಸ ಗಣಪತಿ ದೇವಾಲಯ ಎಂದು ಸಹ ಕರೆಯಲಾಗುತ್ತೆ. ಇದು ಭಾರತದ ಏಕೈಕ ಜಲಧಿವಾಸ ಗಣಪತಿ ದೇವಾಲಯವಾಗಿದೆ. ಗಣೇಶನ ಮೂರು ಅಡಿಯ ವಿಗ್ರಹವು ಬಂಡೆಯಿಂದ ಹೊರಹೊಮ್ಮಿದೆ. ಇದು ವರ್ಷಪೂರ್ತಿ ಗಣೇಶನ ಕಂಠದವರೆಗೆ ನೀರು ತುಂಬಿರುತ್ತೆ, ಹಾಗಾಗಿ ಜಲಧಿವಾಸ ಗಣಪತಿ ಎನ್ನಲಾಗುವುದು. 

Latest Videos

click me!