ಕೊರೊನಾ ಕಾರಣದಿಂದ ಕೋರ್ಟ್‌ಗಳು ಕೆಲಸ ಮಾಡುತ್ತಿಲ್ಲ. ಮಾಡಿದರೂ ಹೈ ಪ್ರೊಫೈಲ್ ಕೇಸುಗಳ ಇತ್ಯರ್ಥ ಮಾತ್ರ. ಆದರೆ ನಿವಾರಣೆಯಾಗದ ಸಣ್ಣಪುಟ್ಟ ವ್ಯಾಜ್ಯಗಳು ಲಕ್ಷಾಂತರ. ಇಂಥವರು ಏನು ಮಾಡಬೇಕು? ಕರಾವಳಿಯವರು ಧರ್ಮಸ್ಥಳದ ಮೊರೆ ಹೋಗುತ್ತಿದ್ದಾರೆ. ಇಲ್ಲಿನ ಹೊಯಿಲು ಪದ್ಧತಿ ವಿಖ್ಯಾತ.
ಇತ್ತೀಚೆಗೆ ಜಮೀನಿನ ವಿಷಯದಲ್ಲಿ ತಕರಾರು ಇಟ್ಟುಕೊಂಡಿದ್ದ, ಕೋರ್ಟ್ ಕಟ್ಟೆಗೂ ಹತ್ತಿ ಐದಾರು ವರ್ಷಗಳಿಂದ ಬಡಿದಾಟ ನಡೆಸುತ್ತಿದ್ದ ಅಕ್ಕಪಕ್ಕದ ಮನೆಯವರಾಗಿದ್ದ ಅಣ್ಣ- ತಮ್ಮ, ಬಂಧುಗಳ ಮದುವೆಗೆ ಜೊತೆಯಾಗಿ ಬಂದಾಗ ಎಲ್ಲರಿಗೂ ಆಶ್ಚರ್ಯ. ಇದು ಹೇಗೆ ಸಾಧ್ಯವಾಯಿತು ಎಂದು ಕುತೂಹಲ ಎಲ್ಲರಲ್ಲೂ. ಈ ಪ್ರಶ್ನೆ ಅವರಲ್ಲೇ ಕೇಳಿದಾಗ ಇಬ್ಬರೂ ಹೇಳಿದ್ದು- ಧರ್ಮಸ್ಥಳದಲ್ಲಿ ಹೊಯಿಲು ಕೇಳಿದೆವು. ಖಾವಂದರು ರಾಜಿ ಮಾಡಿಸಿ, ನ್ಯಾಯ ಪರಿಹಾರ ಮಾಡಿಕೊಟ್ಟರು. ಕೋರ್ಟ್‌ನಿಂದ ಕೇಸು ವಾಪಸ್ ತಗೊಂಡೆವು. ವ್ಯಾಜ್ಯ ಪರಿಹಾರ ಆಯ್ತಲ್ಲ- ಇನ್ನೇನು ಬೇಕು?
undefined
ಹೌದು, ಸಾಮಾನ್ಯ ಜನರಿಗೆ ಬೇಕಾಗಿರುವುದು ಇದೇ. ಯಾರೂ ಕೂಡ ಒಂದು ತುಂಡು ಭೂಮಿಗಾಗಿ, ಯಾವುದೋ ಚಿಲ್ಲರೆ ತಗಾದೆಗಾಗಿ ಹತ್ತಾರು, ನೂರಾರು ವರ್ಷ ಕೋರ್ಟ್‌ಗೆ ಅಲೆದಾಡಲು ಇಷ್ಟಪಡುವುದಿಲ್ಲ. ಒಮ್ಮೆ ವಕೀಲರ ಮನೆ ಬಾಗಿಲು ತಟ್ಟಿದರೆ, ಕೋರ್ಟ್‌ನ ಮೆಟ್ಟಿಲು ಏರಿದರೆ ಮುಗಿಯಿತು. ಆತ ದುಡಿದದ್ದೆಲ್ಲವೂ ವಕೀಲರಿಗೂ ಕೋರ್ಟ್‌ಗೂ ಕಟ್ಟಬೇಕು. ನ್ಯಾಯ ಸಿಕ್ಕೀತು ಎಂಬ ಭರವಸೆ ಇಲ್ಲವೇ ಇಲ್ಲ. ಸಿಕ್ಕಿದರೂ ಎಷ್ಟೋ ವರ್ಷ ವಿಳಂಬವಾಗಿ ಸಿಗುವುದರಿಂದ ಅದು ನ್ಯಾಯವೇ ಆಗಿರುವುದಿಲ್ಲ. ಇಂಥ ಹೊತ್ತಿನಲ್ಲಿ ಕರಾವಳಿಯ ಕಾಸರಗೋಡಿನಿಂದ ಉತ್ತರ ಕನ್ನಡದವರೆಗೆ, ಸಮುದ್ರತಡಿಯ ಮಂಗಳೂರಿನಿಂದ ಘಟ್ಟದ ಮೇಲಿನ ಬೆಂಗಳೂರಿನವರೆಗೆ- ಆಸ್ತಿಕ ಜನರು ನ್ಯಾಯದಾನಕ್ಕಾಗಿ ನಂಬುತ್ತಾ ಬಂದಿದ್ದು ಧರ್ಮಸ್ಥಳದ ಶ್ರೀ ಮಂಜುನಾಥ ದೇವರನ್ನು. ಅದರಲ್ಲೂ ಈಗ ಕೊರೊನಾ ಕಾರಣದಿಂದಾಗಿ ಯಾವ ಕೋರ್ಟ್‌ಗಳೂ ಕೆಲಸ ಮಾಡುತ್ತಿಲ್ಲ. ಮಾಡಿದರೂ ಹೈ ಪ್ರೊಫೈಲ್ ಕೇಸುಗಳು ಮಾತ್ರ ಇತ್ಯರ್ಥವಾಗುತ್ತಿವೆ. ಇಂಥ ಹೊತ್ತಿನಲ್ಲಿ ಜನ ಧರ್ಮಸ್ಥಳದ ಶ್ರೀ ಮಂಜುನಾಥನೇ ಗತಿ ಎಂದು ಕೈ ಮುಗಿಯುತ್ತಿದ್ದಾರೆ.
ಇಲ್ಲಿ ಒಂದು ನ್ಯಾಯದಾನ ಪರಂಪರೆಯಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮಾತು ತಪ್ಪುವುದಿಲ್ಲ ಎಂಬ ನಂಬಿಕೆ, ಆದ್ದರಿಂದ "ಮಾತು ಬಿಡ ಮಂಜುನಾಥ" ಎಂಬ ಮಾತು ಚಾಲ್ತಿಯಲ್ಲಿದೆ. ಕ್ಷೇತ್ರದ ಚತುರ್ವಿಧ ದಾನ ಪರಂಪರೆಯಲ್ಲಿ ಅಭಯ ದಾನಕ್ಕೆ ವಿಶೇಷ ಪ್ರಾಶಸ್ತ್ಯವಿದೆ. ಅದರಲ್ಲೂ ಯಾರಿಗಾದರೂ ಕಷ್ಟವಾದಾಗ ನ್ಯಾಯಕ್ಕಾಗಿ ದೇವರಿಗೆ ಮೊರೆ ಇಡುವ ಪದ್ಧತಿಯಿದ್ದು, ಇದನ್ನು ಹೊಯ್ಲು, ಹೊಯಿಲು, ಉಯಿಲು ಎಂದೆಲ್ಲ ಹೇಳಲಾಗುತ್ತದೆ. ಅಂದರೆ ನ್ಯಾಯಕ್ಕಾಗಿ ಮೊರೆ ಇಡುವುದು, ದೇವರಿಗೆ ದೂರು ನೀಡುವುದು ಎಂಬ ಅರ್ಥವೂ ಇದೆ. ಜಾಗದ ವಿಚಾರದಲ್ಲಿ ಹಾಗೂ ಹಣಕಾಸು ವಿಚಾರದಲ್ಲಿ ಮೋಸ ಮಾಡಿರುವ ಶಂಕೆ ಎದುರಾದಾಗ ದೂರು ನೀಡಲಾಗುತ್ತಿತ್ತು. ದೂರು ನೀಡಿದವರನ್ನು ವಾದಿಗಳೆಂದೂ, ಯಾರ ವಿರುದ್ಧ ದೂರು ನೀಡಿದ್ದಾರೋ ಅವರನ್ನು ಪ್ರತಿವಾದಿಗಳೆಂದೂ ಪರಿಗಣಿಸಲಾಗುತ್ತದೆ. ಕ್ಷೇತ್ರದ ಹೊಯ್ಲು ವಿಭಾಗದಲ್ಲಿ, ಹಣಕಾಸಿನ ವಿಚಾರ ಕುರಿತ ಪ್ರಕರಣಗಳ ಲಿಖಿತ ದಾಖಲೀಕರಣ ಮಾಡಲಾಗುತ್ತದೆ. ನಂತರ ವಾದಿಗಳಿಗೆ ಹಾಗೂ ಪ್ರತಿವಾದಿಗಳಿಗೆ ಪತ್ರ ಬರೆದು, ಪತ್ರದೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಹೆಗ್ಗಡೆಯವರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಲಾಗುತ್ತದೆ. ಹೆಗ್ಗಡೆಯವರು ತಮ್ಮ ಪೀಠದಲ್ಲಿ ಅಥವಾ ಹೆಗ್ಗಡೆಯವರ ಅನುಪಸ್ಥಿತಿಯಲ್ಲಿ ಹೆಗ್ಗಡೆಯವರ ಪ್ರತಿನಿಧಿಗಳಾದ ನಾಲ್ವಿಕೆಯವರು ವಾದ ಹಾಗೂ ಪ್ರತಿವಾದಗಳನ್ನು ಆಲಿಸಿ ನ್ಯಾಯ ತೀರ್ಮಾನ ಮಾಡಿ ತೀರ್ಪು ನೀಡುತ್ತಾರೆ.
ಧರ್ಮಸ್ಥಳದಲ್ಲಿ ಶ್ರೀ ಅಣ್ಣಪ್ಪ ದೈವದ ಗುಡಿಗೆ ಹೋಗೋದ ಮರೀಬೇಡಿ!
ಈ ತೀರ್ಪಿಗೆ ವಾದಿಗಳು ಹಾಗೂ ಪ್ರತಿ ವಾದಿಗಳು ಬದ್ಧರಾಗಿರಬೇಕು. ಹೊಯಿಲು ದಾಖಲಾಗಿ, ನ್ಯಾಯ ತೀರ್ಮಾನ ನಡೆಯುವವರೆಗೆ ವಾದಿಗಳು ಮತ್ತು ಪ್ರತಿವಾದಿಗಳು ಕ್ಷೇತ್ರದ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನ್ಯಾಯಸಮ್ಮತವಲ್ಲದ ಪ್ರಾರ್ಥನೆಯನ್ನು ದ್ವೇಷ ಸಾಧನೆ ಅಥವಾ ಪ್ರತ್ಯಾರೋಪಕ್ಕೆ ಹೊಯಿಲು ನೀಡಿದಲ್ಲಿ ತಪ್ಪು ಮಾಡಿದವರಿಗೆ ಸಂಕಷ್ಟ ಎದುರಾದ ಸಂದರ್ಭಗಳೂ ಇವೆ. 2 ವರ್ಷದ ಹಿಂದೆ ಸುಮಾರು 98 ವರ್ಷಗಳ ಹಿಂದಿನ ಹೊಯ್ಲು ನ್ಯಾಯ ತೀರ್ಮಾನ ನಡೆದಿದೆ. ಸೂಕ್ತ ರೀತಿಯಲ್ಲಿ ನ್ಯಾಯ ತೀರ್ಮಾನ ಮಾಡಿ, ಶ್ರೀ ಸ್ವಾಮಿಯ ಭಕ್ತರು ಸಹಬಾಳ್ವೆಯಿಂದ ಬದುಕಲು ತಿಳಿಸುವ ಇಲ್ಲಿನ ನ್ಯಾಯ ವ್ಯವಸ್ಥೆಯನ್ನು, ನ್ಯಾಯಮೂರ್ತಿಗಳೇ ಕೊಂಡಾಡಿದ್ದಾರೆ.
ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!
ಶ್ರೀ ಕ್ಷೇತ್ರದ ನ್ಯಾಯ ತೀರ್ಮಾನ ವ್ಯವಸ್ಥೆ ಸಮಾಜದಲ್ಲಿ ಜನ ಸತ್ಯ, ಪ್ರಾಮಾಣಿಕತೆ, ನ್ಯಾಯದ ದಾರಿಯಲ್ಲಿ ಜೀವನ ಸಾಗಿಸಲೂ ದಾರಿದೀಪವಾಗಿದೆ. ಇಲ್ಲಿನ ನ್ಯಾಯದಾನ ಖಚಿತವಾಗಿ ಪಾಲನೆಯಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಉಭಯ ಕಡೆಗಳವರೂ ದೇವರ ಮೇಲಿನ ಭಕ್ತಿ ನಂಬಿಕೆ ಭಯಗಳಿಂದಾಗಿ ಖಾವಂದರು ನೀಡಿದ ನ್ಯಾಯವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ.
ಧರ್ಮಸ್ಥಳ ಕ್ಷೇತ್ರ ಬಿಟ್ಟು ಹೊರಗೆ ಕಾಲಿಟ್ಟಿಲ್ಲ: ಕ್ಷೇತ್ರದಲ್ಲಿ ಶೇ.100ರಷ್ಟು ಲಾಕ್‌ಡೌನ್ ಪಾಲನೆ!