ಟೆರರಿಸ್ಟ್ ಚಿತ್ರಕ್ಕೆ ಪ್ರೇರಣೆ ಈ ಘಟನೆಯಾ?

By Web DeskFirst Published Oct 17, 2018, 3:59 PM IST
Highlights

ನಾಳೆ ತೆರೆ ಕಾಣಲಿದೆ ಟೆರರಿಸ್ಟ್ ಚಿತ್ರ | ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಾಗಿಣಿ ದ್ವಿವೇದಿ | ದಿ ವಿಲನ್, ಟೆರರಿಸ್ಟ್ ಎರಡೂ ಒಂದೇ ದಿನ ತೆರೆಗೆ | ಟೆರರಿಸ್ಟ್ ನಿರ್ದೇಶಕ ಪಿ ಸಿ ಶೇಖರ್ ಹೇಳೋದೇನು? 

ಬೆಂಗಳೂರು (ಅ. 17): ರಾಗಿಣಿ ಪ್ರಮುಖ ಭೂಮಿಕೆಯಲ್ಲಿರುವ ‘ದಿ ಟೆರರಿಸ್ಟ್’ ಅಕ್ಟೋಬರ್ ೧೮ರಂದು ತೆರೆಕಾಣುತ್ತಿದೆ. ಪಿಸಿ ಶೇಖರ್ ನಿರ್ದೇಶನದ ಈ ಸಿನಿಮಾ ‘ದಿ ವಿಲನ್’ ಮುಂದೆ ಬರುತ್ತಿದೆ ಎನ್ನುವುದೇ ದೊಡ್ಡ ಕುತೂಹಲ. ಆ ಕುರಿತು ಚಿತ್ರದ ನಿರ್ದೇಶಕ ಪಿಸಿ ಶೇಖರ್ ಇಲ್ಲಿ ಮಾತನಾಡಿದ್ದಾರೆ.

ಇಂಥಾ ಕತೆ ಸಿನಿಮಾ ಮಾಡಬೇಕು ಅನಿಸಿದ್ದು ಏಕೆ?

ನಾವು ನಿತ್ಯ ನೋಡುವ ಅಥವಾ ಕೇಳುವ ಬಹು ದೊಡ್ಡ ಜಗತ್ತಿನ ಸಮಸ್ಯೆ ಟೆರರಿಸಂ. ಅದು ನಮ್ಮ ಸಮಾಜದಲ್ಲಿ ಗಟ್ಟಿಯಾಗಿ ಬೇರೂರುತ್ತಿದೆ. ಅದರ ಪರಿಣಾಮಗಳೇನು, ಮಾನವ ಕುಲಕ್ಕೆ ಅದು ಕಂಠಕ ಹೇಗೆ ಎಂಬುದನ್ನು ಹೇಳಬೇಕು ಅನಿಸಿತು. ಅದರ ಫಲಿತಾಂಶವೇ ‘ದಿ ಟೆರರಿಸ್ಟ್’.

ನಿಮಗಿಂತ ಮೊದಲೇ ಟೆರರಿಸ್ಟ್‌ಗಳ ಕತೆಯನ್ನು ತುಂಬಾ ಸಿನಿಮಾಗಳು ಹೇಳಿವೆಯಲ್ಲ?

ಅದು ಅವರ ದೃಷ್ಟಿಕೋನದಲ್ಲಿ ಹೇಳಿದ್ದಾರೆ. ನಾನೂ ಒಬ್ಬ ನಿರ್ದೇಶಕನಾಗಿ ಈ ಸಮಸ್ಯೆ ಬಗ್ಗೆ ನನ್ನದೇ ಅದ ರೀತಿಯಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ಅದು ಕೂಡ ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡಿದ್ದೇನೆ. ಹೀಗಾಗಿ ನನ್ನ ಈ  ದೃಷ್ಟಿಕೋನವಾಗಿದೆ. ಅದನ್ನು ಪ್ರೇಕ್ಷಕರಿಗೂ ಹೇಳುವ ಅಗತ್ಯವಿದೆ.

ಯಾವ ರೀತಿ ಭಿನ್ನ?

ಟೆರರಿಸಂ ಕತೆ ಅಂದರೆ ಎರಡು ದೇಶಗಳನ್ನು ಶತ್ರುಗಳನ್ನಾಗಿ ಬಿಂಬಿಸಿದ ಚಿತ್ರಗಳೇ ಹೆಚ್ಚು. ನಾನು ಇಲ್ಲಿ ಎರಡು ದೇಶಗಳಿಗಿಂತ ಮನೆಯಲ್ಲಿ ಸಂಬಂಧಗಳನ್ನು ಕಟ್ಟುವ ಮಹಿಳೆಯ ಮೂಲಕ ಕತೆ ಹೇಳುತ್ತಿದ್ದೇನೆ. ಟೆರರಿಸಂ ಚಿತ್ರದಲ್ಲಿ ಮಹಿಳೆ ಮುಖ್ಯ ಪಾತ್ರಧಾರಿ ಎನ್ನುವುದೇ ವಿಭಿನ್ನ. ನಾನು ಯಾವ ಸಮುದಾಯನ್ನು ಗುರಿ ಮಾಡಿಕೊಂಡು ಕತೆ ಮಾಡಿಲ್ಲ.

ಈ ಚಿತ್ರದ ಮೂಲಕ ಭಯೋತ್ಪಾದಕರೆಂದು ಹಣೆಪಟ್ಟಿ ಹೊತ್ತವರನ್ನು ಮುಕ್ತಿ ಮಾಡುವುದೇ?

ಇಲ್ಲಿ ನಾನು ಯಾರನ್ನೂ ಮುಕ್ತಿಗೊಳಿಸುವ ದೇವಮಾನವನ ಕೆಲಸ ಮಾಡುತ್ತಿಲ್ಲ. ಟೆರರಿಸಂ ಅನ್ನೋದು ಜಗತ್ತಿನ ಸಮಸ್ಯೆ. ಹೆಚ್ಚಾಗಿ ಯಾವುದೇ ಬಾಂಬ್ ಬ್ಲಾಸ್ಟ್, ಅಟ್ಯಾಕ್ ನಡೆದರೂ ಅಲ್ಲಿ ಮುಸ್ಲಿಮರೇ ಕಾಣಸಿಗುತ್ತಾರೆ. ಹಾಗಂತ ಇಲ್ಲಿ ಮುಸ್ಲಿಂಗಳೇ ಟೆರರಿಸ್ಟ್ ಅಂತ ಹೇಳುತ್ತಿಲ್ಲ. ನೂರು ಜನರಲ್ಲಿ ಇಬ್ಬರು ಅಂಥ ಕೆಲಸ ಮಾಡಿದರೂ ಮುಸ್ಲಿಂ ಅಂತಲೇ ಮಾತನಾಡುತ್ತಾರೆ.  ಆದರೆ ಉಳಿದವರ ಪಾಡೇನು? ‘ಟೆರರಿಸ್ಟ್’ ಹಾಗೆ ಉಳಿದವರ ಬಗ್ಗೆ ಮಾತನಾಡುವ ಸಿನಿಮಾ. ಹೀಗಾಗಿ ಇದು ಪರ ಮತ್ತು ವಿರೋಧದ ಸಿನಿಮಾ ಅಲ್ಲ.

ಇಂಥ ಕತೆಯನ್ನು ನಾಯಕಿ ಪ್ರಧಾನವಾಗಿಯೇ ಹೇಳಬೇಕು ಅನಿಸಿದ್ದು ಯಾಕೆ?

ಟೆರರಿಸ್ಟ್ ಅಂದಾಕ್ಷಣ ಪುರುಷರನ್ನೇ ಯಾಕೆ ತರಬೇಕು ಎನ್ನುವ ಪ್ರಶ್ನೆ ನನ್ನಲ್ಲಿ ಮೂಡಿದಾಗಲೇ ನಾನು ಕತೆಯನ್ನು ಹೇಳುವ ರೀತಿ ಬದಲಾಯಿಸಿಕೊಂಡೆ. ಜತೆಗೆ ಈ ರೀತಿಯ ಕತೆಯನ್ನು ಹೇಳುವ ಕ್ಲೀಷೆಗಳನ್ನು ಬದಲಾಯಿಸಿಕೊಳ್ಳಬೇಕಿತ್ತು. ಅಲ್ಲದೆ ಕಮರ್ಷಿಯಲ್ ನಿಟ್ಟಿನಲ್ಲಿ ಇಡೀ ಕಥೆಯನ್ನು ಹೇಳಬೇಕಿತ್ತು. ಹೀಗಾಗಿ ನಾಯಕಿ ಪ್ರಧಾನ ಕತೆ ಮಾಡಿಕೊಂಡು ಅವರ ಮನಸ್ಥಿತಿಯಲ್ಲೇ ಸಿನಿಮಾ ಸಾಗುವಂತೆ ನೋಡಿಕೊಂಡಿದ್ದೇನೆ.

 ಈ ಕತೆ ಮೂಲಕ ಏನು ಹೇಳಕ್ಕೆ ಹೊರಟಿದ್ದೀರಿ?

ಎಲ್ಲರು ಬದುಕುವುದು ಮೂರು ದಿನಗಳ ಸಂತೋಷಕ್ಕಾಗಿ. ಭೂಮಿ ಮೇಲೆ ಅಂಥ ಸಂತೋಷವನ್ನೇ ಕಳೆದುಕೊಂಡಿದ್ದೇವೆ. ಹಾಗೆ ಬದುಕು ಕಳೆಯುವಂತಹ ಧರ್ಮಯುದ್ಧ, ಹೋರಾಟ ಯಾಕೆ ಎಂದು ಪ್ರಶ್ನಿಸುತ್ತಾ ಬದುಕಿನ ಸಂಭ್ರಮ ಹೇಳುತ್ತದೆ ಈ ಸಿನಿಮಾ. 

-ಆರ್. ಕೇಶವಮೂರ್ತಿ 

click me!