ನಿರ್ದೇಶಕ ಹಳ್ಳಿ ಬಿಟ್ಟು ಬರಲ್ಲ. ನಾಯಕ ಕೂಡ ಹಳ್ಳಿಯಲ್ಲೇ ಉಳಿದುಕೊಳ್ಳುವುದಕ್ಕೆ ನೋಡುತ್ತಾನೆ. ಇತ್ತ ಪ್ರೇಕ್ಷಕ ಕೂಡ ಈ ಹಳ್ಳಿಯಿಂದ ಏನಾದರೂ ಹೊಸದನ್ನು ಹೇಳುತ್ತಾರೆಂಬ ನಿರೀಕ್ಷೆಯಲ್ಲೇ ಕೂರುತ್ತಾರೆ.
ಪ್ರೇಕ್ಷಕನ ಈ ನಿರೀಕ್ಷೆಗಳನ್ನು ನಿರ್ದೇಶಕರು ಹಾಡು, ಸಂಭಾಷಣೆ, ಹಾಸ್ಯದ ಮೂಲಕ ಸರಿದೂಗಿಸುತ್ತಾರೆ. ಒಂದು ಖಡಕ್ ಕ್ಯಾರೆಕ್ಟರ್, ಮತ್ತೊಂದು ಕಿಲಾಡಿ ಪಾತ್ರ. ಇವರ ಜತೆ ನಗಿಸುವುದಕ್ಕೆ ಇಬ್ಬರು, ಮುದ್ದಾಗಿ ಕಾಣುವುದಕ್ಕೆ ಒಬ್ಬ ಹುಡುಗಿ, ಇವರಿಗೆಲ್ಲ ಹಿನ್ನೆಲೆಯಾಗಿ ಬರುವ ಶುದ್ಧ ಹಳ್ಳಿ ವಾತಾವಾರಣ, ಕುಣಿಸುವಂತಹ ಹಾಡು, ಗುಣುಗುವಂತಹ ಸಾಹಿತ್ಯ ಸೇರಿಕೊಂಡು ‘ಅಯೋಗ್ಯ’ನನ್ನು ಅಪ್ಪಿಕೊಳ್ಳಿ ಎನ್ನುತ್ತವೆ. ಹಳ್ಳಿ ಕತೆಯಲ್ಲಿ ಏನೆಲ್ಲ ಇರುತ್ತವೆ? ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಜನ. ಇವರನ್ನು ಕಾಡುವ ಊರಿನ ಗೌಡನ ಕೈಯಲ್ಲಿರುವ ಗ್ರಾಮ ಪಂಚಾಯಿತಿ, ಜಾತಿ ಮೀರಿದ ಪ್ರೇಮ ಪ್ರಕರಣಗಳು, ಊರ ಗೌಡನನ್ನು ಎದುರಿಸಿ ನಿಲ್ಲುವ ಯುವಕರು, ಅವರನ್ನು ಅಯೋಗ್ಯರೆಂದು ನೋಡುವ ಅದೇ ಊರಿನ ಜನ, ಅಯೋಗ್ಯರೆನಿಸಿಕೊಂಡವರಿಂದಲೇ ಯೋಗ್ಯ ಅನಿಸಿಕೊಳ್ಳುವುದಕ್ಕೆ ಹೊರಡುವ ಅವರ ಉತ್ಸಾಹ, ಇದರ ನಡುವೆ ಆಗಾಗ ಕಾಣಿಸಿಕೊಳ್ಳುವ ಪ್ರೀತಿ- ಪ್ರೇಮ, ಸಂಬಂಧಗಳು, ಹಬ್ಬದ ಜಾತ್ರೆಗಳು...ಇವಿಷ್ಟು.
ಈ ಎಲ್ಲವನ್ನೂ ಒಮ್ಮೊಮ್ಮೆ ಜಾಸ್ತಿ, ಮಗದೊಮ್ಮೆ ಕಡಿಮೆ ಎನ್ನುವಂತೆ ಕಟ್ಟಿಕೊಟ್ಟು ಹಳ್ಳಿ ರಾಜಕೀಯದ ಜತೆಗೆ ಪ್ರೇಮ ಕತೆಯನ್ನು ಹೇಳುತ್ತಾರೆ ನಿರ್ದೇಶಕ ಮಹೇಶ್. ರಾಜಕೀಯದ ಹೀರೋ ಖಳನಾಯಕ ಬಚ್ಚೇಗೌಡ. ಪ್ರೇಮ ಕತೆಯ ನಾಯಕ ಸಿದ್ದೇಗೌಡ. ತನ್ನ ತಾಯಿಯನ್ನು ಕಾಲಿನಿಂದ ಒದ್ದವನಿಗೆ ಬುದ್ದಿ ಕಲಿಸಬೇಕೆಂದರೆ ತಾನೂ ಗ್ರಾಪಂ ಸದಸ್ಯನಾಗಬೇಕು ಎಂದು ಬಾಲ್ಯದಲ್ಲೇ ಶಪಥ ಮಾಡುವ ನಾಯಕ. ಚಿತ್ರ ಕ್ಲೈಮ್ಯಾಕ್ಸ್ ಹಂತ ತಲುಪುವ ಹೊತ್ತಿಗೆ ‘ಟಾಯ್ಲೆಟ್ ಏಕ್ ಪ್ರೇಮ ಕಥಾ’ ಎನ್ನುವ ಮಾತನ್ನು ನೆನಪಿಸುತ್ತದೆ. ಇದರ ನಡುವೆಯೂ ಅಪ್ಪಟವಾದ ಒಂದು ಹಳ್ಳಿ ಕತೆಯನ್ನು ಹೇಳಬೇಕು, ಮನರಂಜನೆಯ ನೆರಳಿನಲ್ಲೇ ಹಳ್ಳಿ ಸೊಗಡು ತೋರಿಸಬೇಕೆಂಬ ನಿರ್ದೇಶಕರ ಗಟ್ಟಿ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ.
ಚೇತನ್ ಕುಮಾರ್ ಹಾಡುಗಳು, ಮಾಸ್ತಿ ಮಂಜು ಮತ್ತು ಶರತ್ ಚಕ್ರವರ್ತಿ ಸಂಭಾಷಣೆ ಭರಪೂರ ಮನರಂಜನೆ ನೀಡುತ್ತವೆ. ಅರ್ಜುನ್ ಜನ್ಯ ಸಂಗೀತ ಎರಡು ಹಾಡುಗಳಲ್ಲಿ ಸ್ಕೋರ್ ಮಾಡುತ್ತದೆ. ಸತೀಶ್ ನೀನಾಸಂ ಡ್ಯಾನ್ಸ್, ಫೈಟ್ಗಳಲ್ಲಿ ಸಿಕ್ಕಾಪಟ್ಟೆ ಎನರ್ಜಿ ತೋರಿದ್ದಾರೆ. ರಚಿತಾ ರಾಮ್ ಮುದ್ದು ಮುಖ ಎಂದಿನಂತೆ ಇಷ್ಟವಾಗುತ್ತದೆ. ದಡಿಯ ಗಿರಿ ಹಾಗೂ ಶಿವರಾಜ್ ಕೆಆರ್, ರವಿಶಂಕರ್ ಅವರ ನಟನೆ ಬಗ್ಗೆ ಬೆರಳು ತೋರಿಸುವಂತಿಲ್ಲ.