ಕೊರೋನಾ ಕಾರಣ ತೀವ್ರ ವಿರೋಧದ ನಡುವೆಯೂ ಈ ಆಗ್ರಹ| ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಆರಂಭಿಸಲು ಸಲಹೆ| ಕಲಿಕೆಗೆ ಮಾತ್ರ ಆದ್ಯತೆ ನೀಡಿ, ಪರೀಕ್ಷೆ ಬೇಡ| ಶಾಲೆ ಬಂದ್ ಆದ ಕಾರಣ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹೆಚ್ಚಳ| ಇದರ ತಡೆಗೆ ಶಾಲೆ ಆರಂಭ ಮಾಡಲೇಬೇಕು|
ಬೆಂಗಳೂರು(ಅ.09): ‘‘ಕೊರೋನಾದಿಂದಾಗಿ ಶಾಲೆಗಳು ಬಂದ್ ಆಗಿರುವುದರ ಪರಿಣಾಮವಾಗಿ ರಾಜ್ಯದಲ್ಲಿ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆಗಳನ್ನು ಪುನರಾರಂಭಿಸಬೇಕು’’
ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇಂತಹದೊಂದು ಶಿಫಾರಸು ಮಾಡಿದೆ. ಶಾಲೆ ಆರಂಭಿಸುವ ಕುರಿತಂತೆ ಪೋಷಕರು, ತಜ್ಞರು ಸೇರಿದಂತೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಮಧ್ಯೆಯೇ ಆಯೋಗವು, ಸರ್ಕಾರ ಸೂಕ್ತ ಮಾರ್ಗದರ್ಶನಗಳನ್ನು ಪಾಲಿಸುವುದರೊಂದಿಗೆ ಶಾಲೆಗಳನ್ನು ಪುನರಾರಂಭ ಮಾಡಬೇಕು ಎಂದಿದೆ.
undefined
‘ಸರ್ಕಾರ ಶಾಲೆಗಳನ್ನು ಆರಂಭಿಸುವ ಮುನ್ನ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು, ಮಕ್ಕಳಿಗೆ ಒದಗಿಸಬೇಕಾದ ಸೌಲಭ್ಯಗಳು, ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಗಳು, ಮಧ್ಯಾಹ್ನದ ಬಿಸಿಯೂಟ ನಿರ್ವಹಣೆ, ಶಾಲೆಗಳ ಪ್ರಾರಂಭ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆಯೂ ಆಯೋಗವು ಶಿಫಾರಸು ಮಾಡಿದ್ದು, ಈ ಶೈಕ್ಷಣಿಕ ವರ್ಷ ಪರೀಕ್ಷೆಗಳನ್ನು ನಡೆಸದೇ ಕೇವಲ ಕಲಿಕೆಗೆ ಆದ್ಯತೆ ನೀಡಬೇಕು. ಹೀಗಾಗಿ ಈ ವರ್ಷವನ್ನು ಪರೀಕ್ಷೆ ರಹಿತ ಕಲಿಕಾ ವರ್ಷವಾಗಿ ಘೋಷಿಸಬೇಕು’ ಎಂದು ಶಿಫಾರಸು ಮಾಡಿದೆ.
ವಠಾರ ಶಾಲೆ ಮಕ್ಕಳಿಗೂ ಅಂಟಿದ ಕೊರೋನಾ ಸೋಂಕು..!
‘ಶಾಲಾರಂಭ ಸರ್ಕಾರಕ್ಕೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸವಾಲಾಗಿದೆ. ಆದರೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಾಲೆಗಳನ್ನು ತೆರೆಯುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳು ಕಳ್ಳ ಸಾಗಾಣಿಕೆಗೆ ಒಳಪಡುವ ಸಾಧ್ಯತೆಯಿದೆ. ಸಂಶೋಧನೆ ಪ್ರಕಾರ, ಶಾಲೆಗಳನ್ನು ತೆರೆಯುವುದು ಸಮಸ್ಯೆಯಲ್ಲ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಈ ಅಂಶಗಳ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಆಯೋಗದ ಅಧ್ಯಕ್ಷ ಡಾ.ಅಂಥೋನಿ ಸೆಬಾಸ್ಟಿಯನ್ ಹೇಳಿದ್ದಾರೆ.
‘ಶಾಲೆಗಳನ್ನು ಆರಂಭಿಸುವ ಮುನ್ನ ಪೋಷಕರು, ಎಸ್‌ಡಿಎಂಸಿ ಸದಸ್ಯರೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕು. ಎಸ್‌ಡಿಎಂಸಿ ಮತ್ತು ಗ್ರಾಮ ಪಂಚಾಯಿತಿಗಳ ಸಹಕಾರದೊಂದಿಗೆ ಸ್ವಚ್ಛತೆ ಸೇರಿದಂತೆ ಕೋವಿಡ್ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಮಕ್ಕಳಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕು. ಎಲ್ಲಾ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕೈ ತೊಳೆಯಲು ಅಗತ್ಯ ಸಾಬೂನು, ನೀರಿನ ಸೌಲಭ್ಯ, ಎಲ್ಲಾ ಮಕ್ಕಳಿಗೂ ಅದರಲ್ಲೂ ವಿಶೇಷವಾಗಿ 11 ವರ್ಷ ಮೇಲ್ಪಟ್ಟಮಕ್ಕಳಿಗೆ ಕಡ್ಡಾಯವಾಗಿ ಗುಣಮಟ್ಟದ ಮಾಸ್ಕ್ ಒದಗಿಸಬೇಕು’ ಎನ್ನಲಾಗಿದೆ.
‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಪ್ರತ್ಯೇಕ ಪ್ರಮಾಣಿತ ಕಾರ್ಯಚರಣೆ ವಿಧಾನ (ಎಸ್‌ಒಪಿ) ರಚಿಸುವುದು, ಪರೀಕ್ಷಾ ರಹಿತ ಕಲಿಕಾ ವರ್ಷದಲ್ಲಿ ಶಾಲಾ ಹಂತದ ದಿನಚರಿ ಮತ್ತು ತರಗತಿವಾರು ಕಲಿಕಾ ದಿನಚರಿಯನ್ನು ಶೈಕ್ಷಣಿಕ ಪ್ರಾಧಿಕಾರವಾದ ಡಿಎಸ್‌ಇಆರ್‌ಟಿ ಗೊತ್ತುಪಡಿಸಬೇಕು. ಮೊದಲು 30ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ/ಹಿರಿಯ ಶಾಲೆಗಳನ್ನು ಆರಂಭಿಸಬೇಕು. ಈ ಶಾಲೆಗಳು ಮೊದಲ ಹದಿನೈದು ದಿನ ಅರ್ಧ ದಿವಸ ಕಾರ್ಯ ನಿರ್ವಹಿಸಬೇಕು. ನಂತರ ಕಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಬೇಕು. ಉಳಿದಂತೆ ಹೆಚ್ಚಿನ ಸಂಖ್ಯೆಯಿರುವ ಶಾಲೆಗಳನ್ನು ಪಾಳಿ ಪದ್ಧತಿಯಲ್ಲಿ ಪ್ರಾರಂಭಿಸಬೇಕು’ ಎಂದಿದೆ.
‘ಶಾಲೆಗೆ ಆಗಮಿಸುವ ವ್ಯಕ್ತಿಗಳ ಮಾಹಿತಿ ಪುಸ್ತಕ ನಿರ್ವಹಣೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚನಾ ಫಲಕ ಮಾಹಿತಿ ನೀಡುವುದು. ಶಿಕ್ಷಕರು ಬೋಧನೆ ಮಾಡುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಗುಂಪು ಚಟುವಟಿಕೆ ಹಾಗೂ ವೈಯಕ್ತಿಕ ಚಟುವಟಿಕೆಗಳಲ್ಲಿ ಸಾಮಾಜಿಕ ಅಂತರಕ್ಕೆ ಹೆಚ್ಚಿನ ಮಹತ್ವ ನೀಡಬೇಕು’ ಎಂಬುದು ಶಿಫಾರಸಿನಲ್ಲಿದೆ.
‘ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಅಡುಗೆ ಕೋಣೆ, ಅಡುಗೆ ಮಾಡುವ ಸಾಮಾಗ್ರಿಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಅಡುಗೆ ತಯಾರಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಿರಬೇಕು. ಆಗಾಗ ಸ್ಯಾನಿಟೈಸರ್‌ನಿಂದ ಬಳಕೆ, ವೈಯಕ್ತಿಕ ಸ್ವಚ್ಛತೆಯ ಕುರಿತು ಮಾರ್ಗದರ್ಶನ ನೀಡುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಕೋರಿದೆ.
ಶಿಫಾರಸಿನಲ್ಲಿರುವ ಮುಖ್ಯ ಅಂಶಗಳು:
- ಕಲಿಕೆಗೆ ಮಾತ್ರ ಆದ್ಯತೆ, ಪರೀಕ್ಷೆ ಬೇಡ
- 2020-21 ಅನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು
- ಮಕ್ಕಳಿಗೆ ಬಿಸಿ ಹಾಲು, ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ, ಬಿಸಿ ನೀರಿನ ವ್ಯವಸ್ಥೆ ಕಲ್ಪಿಸುವುದು.
- ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು
- ಆಪ್ತ ಸಮಾಲೋಚಕರ ನೇಮಕ
- ಎಲ್ಲಾ ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ಪರೀಕ್ಷೆ
- ಉಚಿತ ಕೋವಿಡ್ ಸುರಕ್ಷತಾ ಸಾಧನಗಳನ್ನು ಪೂರೈಸುವುದು
- ಶಿಕ್ಷಕರಿಗೆ ಕಡ್ಡಾಯವಾಗಿ ಕೊರೋನಾ ಪರೀಕ್ಷೆ
- ರಾಜ್ಯಾದ್ಯಂತ ಶಿಕ್ಷಕರು ಹಾಗೂ ಮಕ್ಕಳಿಗೆ ಮಾದರಿ ಪರೀಕ್ಷೆ ನಡೆಸುವುದು, ಸೋಂಕು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ಸೇವೆ ಒದಗಿಸಬೇಕು.
- ಮಕ್ಕಳ ಶೂ, ಶಾಲಾ ಬ್ಯಾಗ್‌ಗಳನ್ನು ಇಡಲು ರಾರಯಕ್ ವ್ಯವಸ್ಥೆ