1000 ಸರ್ಕಾರಿ ಇಂಗ್ಲಿಷ್ ಶಾಲೆಗೆ ಪ್ರಕ್ರಿಯೆ ಶುರು

By Web DeskFirst Published May 7, 2019, 8:40 AM IST
Highlights

ವಾರದೊಳಗೆ 1000 ಸರ್ಕಾರಿ ಇಂಗ್ಲಿಷ್‌ ಶಾಲೆ ಪಟ್ಟಿ | ಮೇ 13 ರೊಳಗೆ ಆಂಗ್ಲ ಮಾಧ್ಯಮ ಶಾಲೆಗಳ ಪಟ್ಟಿ ಪ್ರಕಟ | ಬಳಿಕ ಶಾಲೆಗೊಬ್ಬ ಶಿಕ್ಷಕರಿಗೆ ಇಂಗ್ಲಿಷ್‌ ಭಾಷೆ ತರಬೇತಿ | 1 ತಾಲೂಕಿಗೆ 4 ಶಾಲೆಯಂತೆ ಒಟ್ಟು 1 ಸಾವಿರ ಶಾಲೆಗಳ ಆಯ್ಕೆ

ಬೆಂಗಳೂರು (ಮೇ. 070:  ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪಾಠ ಆರಂಭಿಸುವ ಪ್ರಸ್ತಾವನೆ ಅನುಸಾರ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ ಒಂದು ಸಾವಿರ ಶಾಲೆಗಳನ್ನು ಆರಂಭಿಸಲು ಚಟುವಟಿಕೆಗಳು ಚುರುಕುಗೊಂಡಿವೆ.

ಸರ್ಕಾರದ ಮಟ್ಟದಲ್ಲಿ ಶಾಲೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೇ 13 ರೊಳಗೆ ಒಂದು ಸಾವಿರ ಶಾಲೆಗಳ ಪಟ್ಟಿಅಂತಿಮಗೊಳ್ಳಲಿದೆ. ಒಂದು ತಾಲೂಕಿಗೆ ನಾಲ್ಕು ಶಾಲೆಗಳಂತೆ ಒಟ್ಟಾರೆ ಒಂದು ಸಾವಿರ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇಲಾಖೆ ವತಿಯಿಂದ ಈಗಾಗಲೇ ಶಾಲೆಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಮತ್ತೊಮ್ಮೆ ಪರಿಶೀಲಿಸಿ ಸರ್ಕಾರ ಆದೇಶ ಹೊರಡಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಕರಿಗೆ ಇಂಗ್ಲಿಷ್‌ ತರಬೇತಿ:

ಸಂಭವನೀಯ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ವತಿಯಿಂದ ಕೆಂಗೇರಿಯಲ್ಲಿರುವ ರೀಜನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ನಲ್ಲಿ ಏ.29ರಿಂದ ಮೇ 8ರ ವರೆಗೆ 10 ದಿನಗಳ ತರಬೇತಿ ನೀಡಲಾಗುತ್ತಿದೆ.

ಪ್ರತಿ ಜಿಲ್ಲೆಗೆ ನಾಲ್ಕು ಶಿಕ್ಷಕರಂತೆ 34 ಶೈಕ್ಷಣಿಕ ಜಿಲ್ಲೆಯ 136 ಶಿಕ್ಷಕರಿಗೆ ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಿಸಲು ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ 136 ಶಿಕ್ಷಕರು ಆಯಾ ಜಿಲ್ಲೆಗಳಲ್ಲಿ ಮೇ 13ರಿಂದ 27ರ ವರೆಗೆ ಆಯ್ಕೆಯಾಗುವ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ. ಪ್ರತಿ ಶಾಲೆಗೆ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ.

ಕನ್ನಡ, ಇಂಗ್ಲಿಷ್‌ ಎರಡರಲ್ಲೂ ಪಠ್ಯ:

ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲಿ ಪುಸ್ತಕಗಳನ್ನು ಮುದ್ರಣ ಮಾಡಲಾಗಿದ್ದು, ಅದರಂತೆಯೇ ಶಿಕ್ಷಕರಿಗೆ ಹೊಸ ಪಠ್ಯಕ್ರಮ ಕುರಿತು ತರಬೇತಿ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುತ್ತಿರುವುದರಿಂದ ಎನ್‌ಸಿಇಆರ್‌ಟಿ ಪುಸ್ತಕಗಳನ್ನೇ ರಾಜ್ಯದಲ್ಲಿಯೂ ಬಳಸಿಕೊಳ್ಳುತ್ತಿದೆ.

ಒಟ್ಟಾರೆ ನಾಲ್ಕು ವಿಷಯಗಳನ್ನು ಬೋಧನೆ ಮಾಡಲಾಗುತ್ತದೆ. ಕನ್ನಡ, ಇಂಗ್ಲಿಷ್‌, ಗಣಿತ ಮತ್ತು ಪರಿಸರ ವಿಜ್ಞಾನ ವಿಷಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ. ಈ ಪೈಕಿ ಇಂಗ್ಲಿಷ್‌ ಮತ್ತು ಗಣಿತ ಎನ್‌ಸಿಇಆರ್‌ಟಿ ಪುಸ್ತಕ, ಕನ್ನಡ ಮತ್ತು ಪರಿಸರ ವಿಜ್ಞಾನ ರಾಜ್ಯ ಪಠ್ಯಕ್ರಮದ ಪುಸ್ತಕಗಳಾಗಿರುತ್ತವೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದನೇ ತರಗತಿ ಪಠ್ಯದಲ್ಲಿ ಪ್ರಾಣಿಗಳನ್ನು ಗುರುತಿಸುವುದು, ಲೆಕ್ಕಗಳು, ವರ್ಣ ಮಾಲೆ, ಚಿತ್ರ ಬರೆಯುವುದು, ಗುಣಾಕಾರ- ಭಾಗಾಕಾರ, ಕಾಗುಣಿತ ಹೀಗೆ ಸುಲಭವಾಗಿ ಮಕ್ಕಳು ಕಲಿಯುವಂತಹ ಪಠ್ಯಗಳಿಗೆ ಆದ್ಯತೆ ನೀಡಲಾಗಿದೆ. ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಮನೆಪಾಠ (ಹೋಮ್‌ ವರ್ಕ್) ನೀಡದಂತೆ ಶಾಲೆಗಳಲ್ಲಿಯೇ ಮಕ್ಕಳು ಓದಿ ಮುಗಿಸುವಂತಹ ವರ್ಕ್ಬುಕ್‌ಗಳನ್ನು ಸಹ ನೀಡಲಾಗಿದೆ. ಮಕ್ಕಳು ಆಟವಾಡುತ್ತಾ ಕಲಿಯುವಂತಹ ವಾತಾವರಣ ನಿರ್ಮಿಸುವುದು ಮತ್ತು ಒತ್ತಡ ಹೇರಿ ಕಲಿಸದಂತೆ ತರಬೇತಿ ವೇಳೆ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಒಂದು ಶಾಲೆಗೆ 30 ಮಕ್ಕಳು:

ಸದ್ಯ ಒಂದು ಶಾಲೆಗೆ 30 ಮಕ್ಕಳಂತೆ ಅಂದಾಜಿಸಿ ಒಂದು ಸಾವಿರ ಶಾಲೆಗೆ 30 ಪುಸ್ತಕಗಳಂತೆ ಲೆಕ್ಕ ಹಾಕಿ ಪುಸ್ತಕ ಮುದ್ರಣ ಮಾಡಲಾಗುತ್ತಿದೆ. ನಾಲ್ಕು ವಿಷಯದ 1.20 ಲಕ್ಷ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ನಡೆಯುತ್ತಿದೆ.

ಇದಕ್ಕಾಗಿ ಅಲ್ಪಾವಧಿ ಟೆಂಡರ್‌ ಕರೆಯಲಾಗಿದ್ದು, ಮೇ 15ಕ್ಕೆ ಪೂರ್ಣಗೊಳ್ಳಲಿದೆ. ಮೇ 25ರೊಳಗೆ ಪುಸ್ತಕಗಳನ್ನು ಮುದ್ರಣ ಮಾಡಿಕೊಡುವಂತೆ ಈಗಾಗಲೇ ಟೆಂಡರ್‌ ಪಡೆಯುತ್ತಿರುವ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕರಾದ ಎಚ್‌.ಎನ್‌. ಗೋಪಾಲಕೃಷ್ಣ ತಿಳಿಸಿದ್ದಾರೆ.

- ಎನ್‌.ಎಲ್‌. ಶಿವಮಾದು

 

click me!