ಸಿಇಟಿ ಪರೀಕ್ಷೆ: 50 ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ

By Kannadaprabha News  |  First Published Apr 29, 2024, 5:23 AM IST

ವಿವಿಧ ವೃತ್ತಿಪರ ಕೋರ್ಸ್‌ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ  (ಸಿಇಟಿ) ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. 


ಬೆಂಗಳೂರು (ಏ.29): ವಿವಿಧ ವೃತ್ತಿಪರ ಕೋರ್ಸ್‌ ಪ್ರವೇಶಾತಿ ಸಂಬಂಧ ಮೂರೂವರೆ ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ  (ಸಿಇಟಿ) ಬರೋಬ್ಬರಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದು ತಜ್ಞರ ಸಮಿತಿ ವರದಿಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯಮಾಪನಕ್ಕೆ ಪರಿಗಣಿಸಿ ಅದರ ಫಲಿತಾಂಶ ಆಧರಿಸಿ ರ್‍ಯಾಂಕಿಂಗ್‌ ನೀಡಬೇಕು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಒಟ್ಟು ಐವತ್ತು ಪ್ರಶ್ನೆಗಳನ್ನು ಕೈಬಿಡುತ್ತಿರುವ ಹಿನ್ನೆಲೆಯಲ್ಲಿ 190 ಅಂಕಗಳಿಗೆ ಸೀಮಿತವಾಗಿ ಮೌಲ್ಯಮಾಪನ ನಡೆಯಲಿದ್ದು, ವೇಳಾಪಟ್ಟಿಯಂತೆ ಮೇ ಕೊನೆಯ ವಾರ ಪರೀಕ್ಷಾ ಫಲಿತಾಂಶ ಪ್ರಕಟಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ಕೇಳಲಾಗಿದ್ದ ಎರಡು ಪ್ರಶ್ನೆಗಳಿಗೆ ಎರಡು ಗ್ರೇಸ್‌ ಅಂಕ ನೀಡಲು ಕೂಡ ಸೂಚಿಸಿರುವ ಉನ್ನತ ಶಿಕ್ಷಣ ಇಲಾಖೆ, ಮೇ-ಜೂನ್‌ನಲ್ಲಿ ನೀಟ್‌, ಕಾಮೆಡ್‌-ಕೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ಸೋಮವಾರದಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಆರಂಭಗಾಗುತ್ತಿದೆ. ಈ  ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಮರು ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಪಪಡಿಸಿದೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್‌ ಈ ಸಂಬಂಧ ಭಾನುವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಪಠ್ಯೇತರ ಪ್ರಶ್ನೆಗಳ ಖಚಿತತೆಗೆ ವಿಷಯವಾರು ರಚಿಸಿದ್ದ ತಜ್ಞರ ಸಮಿತಿಯು ಭೌತಶಾಸ್ತ್ರ-9, ರಸಾಯನ ಶಾಸ್ತ್ರ- 15, ಗಣಿತ- 15 ಮತ್ತು ಜೀವಶಾಸ್ತ್ರ ವಿಷಯದಲ್ಲಿ 11 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ತಿಳಿಸಿದೆ. 

Tap to resize

Latest Videos

undefined

ಬರ ಪರಿಹಾರ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಈ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಕೈ ಬಿಡಲಾಗುತ್ತದೆ. ಇದರ ಜೊತೆಗೆ ಎರಡು ತಪ್ಪು ಪ್ರಶ್ನೆಗಳಿದ್ದು ಅವುಗಳಿಗೆ ಕೃಪಾಂಕ ನೀಡಲಾಗುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕೀ ಉತ್ತರಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಪಠ್ಯೇತರ ಪ್ರಶ್ನೆಗಳ ಪಟ್ಟಿಯನ್ನು ನೀಡಲಿದೆ. ಈ ಪಟ್ಟಿಯಲ್ಲಿರುವ ಪ್ರಶ್ನೆಗಳನ್ನು ಹೊರತುಪಡಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಇದು ವಿದ್ಯಾರ್ಥಿಗಳ ಹಿತ ರಕ್ಷಣೆಯ ಜೊತೆಗೆ ಸಮಾನ ಅವಕಾಶವನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ. ಜೊತೆಗೆ ಭವಿಷ್ಯದಲ್ಲಿ ಇಂತಹ ಎಡವಟ್ಟು ಘಟಿಸಬಾರದು ಎಂಬ ಕಾರಣಕ್ಕೆ ಸಿಇಟಿ ಪ್ರಶ್ನೆ ಪತ್ರಿಕೆಗಳ ರಚನೆಗೆ ಪ್ರಮಾಣೀಕೃತ ಕಾರ್ಯಾಚರಣಾ ವಿಧಾನವೊಂದನ್ನು ರೂಪಿಸುವಂತೆ ಕೆಇಎಗೆ ನಿರ್ದೇಶನ ನೀಡಲಾಗಿದೆ.

ಮಕ್ಕಳ ತಪ್ಪಿಲ್ಲ, ಮರು ಪರೀಕ್ಷೆ ಮಾಡಲ್ಲ: ಮೇ ಮತ್ತು ಜೂನ್‌ನಲ್ಲಿ ನೀಟ್‌, ಜೆಇಇ ಮೈನ್ಸ್‌, ಕಾಮೆಡ್‌-ಕೆ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳಿರುವ ಜೊತೆಗೆ ದ್ವಿತೀಯ ಪಿಯುಸಿ ‘ಪರೀಕ್ಷೆ 2’ ಇರುವುದರಿಂದ ಮರು ಪರೀಕ್ಷೆ ನಡೆಸುವುದಿಲ್ಲ. ಈ ಹಂತದಲ್ಲಿ ಮರು ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಲ್ಲಿ ಅನಗತ್ಯ ಆತಂಕ ಮತ್ತು ಕಿರುಕುಳಕ್ಕೂ ಕಾರಣವಾಗಲಿದೆ. ವಿದ್ಯಾರ್ಥಿಗಳಿಗೆ ಅವರ ತಪ್ಪೇ ಇಲ್ಲದೆ ಸಂಕಷ್ಟ ನೀಡುವುದು ಸರಿಯಲ್ಲ. ಇದರ ಜೊತೆಗೆ ಮರು ಪರೀಕ್ಷೆ ನಡೆಸಿದರೆ ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿಯು ವಿಳಂಬವಾಗಲಿದೆ ಎಂದು ಶ್ರೀಕರ್ ತಿಳಿಸಿದ್ದಾರೆ.

ಉಪ್ಪು ತಿಂದವ್ರು ನೀರು ಕುಡೀಬೇಕು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಎಚ್‌ಡಿಕೆ ಪ್ರತಿಕ್ರಿಯೆ

ಲೋಪಕ್ಕೆ ಯಾರೂ ಹೊಣೆಯಲ್ಲ: ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಂಡರೂ ಪಠ್ಯೇತರ ಪ್ರಶ್ನೆಗಳನ್ನು ಕೇಳಿ ಗೊಂದಲ ಉದ್ಭವಿಸಲು ಕಾರಣರಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಯಾವುದೇ ಅಧಿಕಾರಿಗಳ ವಿರುದ್ಧ ಮಾತ್ರ ಕ್ರಮ ಕೈಗೊಂಡಿರುವ ಮಾಹಿತಿ ನೀಡಿಲ್ಲ. ನಾಲ್ಕು ವಿಷಯಗಳ 240 ಅಂಕದ ಸಿಇಟಿ ಪರೀಕ್ಷೆಯಲ್ಲಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳಿ ಎಡವಟ್ಟು ಮಾಡಿಕೊಂಡ ಕೆಇಎಯ ಅಧಿಕಾರಿಗಳನ್ನು ಹೊಣೆಗಾರನ್ನಾಗಿ ಮಾಡಿ ಕರ್ತವ್ಯದಿಂದ ವಜಾ ಮಾಡಬೇಕೆಂದು ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರ ಸಂಘಟನೆಗಳಿಂದ ಆಗ್ರಹ ವ್ಯಕ್ತವಾಗಿತ್ತು. ಆದರೆ, ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೆ ಇರುವುದು ಯಾವ ಕಾಣದ ಕೈಗಳು ತಪ್ಪಿತಸ್ಥರ ರಕ್ಷಣೆಗೆ ನಿಂತಿವೆ ಎಂಬ ಅನುಮಾನಗಳನ್ನು ಸೃಷ್ಟಿಸಿದೆ.

click me!