Bengaluru: ವಿವಾಹಿತನಿಂದ 2ನೇ ಮದುವೆಗೆ ಒತ್ತಡ: ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿ ಕುತ್ತಿಗೆಗೆ ಇರಿತ

By Govindaraj SFirst Published Jan 18, 2023, 7:04 AM IST
Highlights

ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವಿವಾಹಿತ ವ್ಯಕ್ತಿಯೊಬ್ಬ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಯಲಹಂಕ ಸಮೀಪ ಮಂಗಳವಾರ ನಡೆದಿದೆ.

ಬೆಂಗಳೂರು (ಜ.18): ತನ್ನೊಂದಿಗೆ ಎರಡನೇ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ವಿವಾಹಿತ ವ್ಯಕ್ತಿಯೊಬ್ಬ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿರುವ ಘಟನೆ ಯಲಹಂಕ ಸಮೀಪ ಮಂಗಳವಾರ ನಡೆದಿದೆ. ದಿಬ್ಬೂರು ಬಳಿಯ ಶಾನುಬೋಗನಹಳ್ಳಿ ನಿವಾಸಿ ರಾಶಿ (19) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾದ ಮೃತಳ ಸ್ನೇಹಿತ ಮಧುಚಂದ್ರನ ಪತ್ತೆಗೆ ತನಿಖೆ ನಡೆದಿದೆ. ತಮ್ಮ ಹೊಲದಲ್ಲಿ ಮೇಯುತ್ತಿದ್ದ ಹಸುಗಳನ್ನು ಹೊಡೆದುಕೊಂಡು ಬರಲು ರಾಶಿ ಸಂಜೆ 4ರ ವೇಳೆಗೆ ಹೋದಾಗ ಈ ಕೃತ್ಯ ನಡೆದಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ: ಯಲಹಂಕದ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ ರಾಶಿ, ಶಾನುಬೋಗನಹಳ್ಳಿಯಲ್ಲಿ ತನ್ನ ತಾಯಿ ಸುಶೀಲಮ್ಮ ಹಾಗೂ ಸೋದರಿ ಜತೆ ನೆಲೆಸಿದ್ದಳು. ನಾಲ್ಕು ತಿಂಗಳ ಹಿಂದಷ್ಟೇ ಆಕೆಯ ತಂದೆ ಮೃತಪಟ್ಟಿದ್ದರು. ಖಾಸಗಿ ಕಾಲೇಜಿನಲ್ಲಿ ಆಕೆಯ ತಾಯಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Namma Metro ಪಿಲ್ಲರ್‌ ದುರಂತಕ್ಕೆ ಕೊನೆಗೂ ಕಾರಣ ಪತ್ತೆ!

ಪ್ರತಿ ದಿನ ಕಾಲೇಜು ಮುಗಿಸಿ ಮನೆಗೆ ಮರಳಿದ ಬಳಿಕ ರಾಶಿ, ಹೊಲದಲ್ಲಿ ಮೇಯಲು ಬಿಟ್ಟಿದ್ದ ದನಗಳನ್ನು ಹೊಡೆದುಕೊಂಡು ಬರುತ್ತಿದ್ದಳು. ಅಂತೆಯೇ ಮಂಗಳವಾರ ಸಂಜೆ ಮನೆ ಹತ್ತಿರದ ಹೊಲಕ್ಕೆ ತೆರಳಿದ್ದಾಳೆ. ಆ ವೇಳೆ ಆಕೆಯನ್ನು ಭೇಟಿಯಾದ ಸ್ನೇಹಿತ ಮಧುಚಂದ್ರ, ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ರಾಶಿ ಬಿದ್ದಿರುವುದನ್ನು ಕಂಡ ಸ್ಥಳೀಯರು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ರಾಶಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಬಂದು ಗಲಾಟೆ ಮಾಡಿದ್ದ ಮಧು: ಯಲಹಂಕದಲ್ಲಿ ನೆಲೆಸಿರುವ ಮಧುಚಂದ್ರ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲ ದಿನಗಳಿಂದ ರಾಶಿಗೆ ಆತನ ಪರಿಚಯವಾಗಿತ್ತು. ಕಾಲಕ್ರಮೇಣ ಆ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಮದುವೆಯಾಗಿರುವುದನ್ನು ಮುಚ್ಚಿಟ್ಟು ರಾಶಿಯನ್ನು ಆತ ಪ್ರೀತಿಸುತ್ತಿದ್ದ. ಈ ಪ್ರೇಮದ ವಿಚಾರ ತಿಳಿದ ರಾಶಿ ಕುಟುಂಬದವರು ಮಧುಚಂದ್ರನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಆತನಿಗೆ ಈಗಾಗಲೇ ಮದುವೆಯಾಗಿ ಮಗುವಿರುವ ಸಂಗತಿ ಬಯಲಾಗಿದೆ.

ವಿವಾಹಿತನ ಜತೆ ಸ್ನೇಹ ಕಡಿದುಕೊಳ್ಳುವಂತೆ ರಾಶಿಗೆ ಆಕೆಯ ತಾಯಿ ಹಾಗೂ ಸಂಬಂಧಿಕರು ಬುದ್ಧಿ ಮಾತು ಹೇಳಿದ್ದರು. ಅಂತೆಯೇ ಮಧುಗೆ ಮದುವೆಯಾಗಿರುವ ವಿಷಯ ತಿಳಿದ ಬಳಿಕ ಆತನಿಂದ ಆಕೆ ದೂರವಾಗಿದ್ದಳು. ಇದರಿಂದ ಕೆರಳಿದ ಮಧು, ರಾಶಿ ಮನೆಗೆ ಬಂದು ತನ್ನನ್ನು ಮದುವೆಯಾಗುವಂತೆ ಹೇಳಿ ಧಮಕಿ ಹಾಕಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ದಲಿತ ಯುವತಿ ಹತ್ಯೆ; ಪಾಗಲ್ ಪ್ರೇಮಿ ಅರೆಸ್ಟ್!

ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ಪದವಿ ವಿದ್ಯಾರ್ಥಿನಿ ರಾಶಿ ಎಂಬಾಕೆಯ ಹತ್ಯೆ ನಡೆದಿದೆ. ಈ ಕೃತ್ಯದಲ್ಲಿ ಮೃತಳ ಪರಿಚಿತ ಮಧುಚಂದ್ರನ ಕೈವಾಡವಿರುವ ಬಗ್ಗೆ ಆಕೆಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಆರೋಪಿ ಪತ್ತೆಗೆ ತನಿಖೆ ನಡೆದಿದೆ.
-ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ, ಗ್ರಾಮಾಂತರ ಜಿಲ್ಲೆ

click me!