ಜವಾರಿ ಹುಡುಗಿಯ ದಿಲ್‌ದಾರ್ ದುನಿಯಾ: ಅದಿತಿ ಪ್ರಭುದೇವ ಸಂದರ್ಶನ

By Kannadaprabha NewsFirst Published Apr 21, 2021, 4:56 PM IST
Highlights

ಅದಿತಿ ಪ್ರಭುದೇವ ಅಚ್ಚ ಕನ್ನಡದ ಹುಡುಗಿ. ಚಿತ್ರರಂಗಕ್ಕೆ ಕಾಲಿಟ್ಟು ಇನ್ನೂ 4 ವರ್ಷ. ಈಗ ಈಕೆಯ ಕೈಯಲ್ಲಿ 12 ಸಿನಿಮಾಗಳಿವೆ. ನಟಿಯ ಮನಸಿನ ಮಾತುಗಳು ಇಲ್ಲಿವೆ

1.ನಿಮ್ಮನ್ನು ನೀವು ಹೇಗೆ ಪರಿಚಯ ಮಾಡಿಕೊಳ್ಳಲು ಬಯಸುತ್ತೀರಿ?
-ನಾನೊಬ್ಬಳು ಅಸಾಮಾನ್ಯ ಕನಸುಗಳನ್ನು ಇಟ್ಟುಕೊಂಡಿರುವ ಸಾಮಾನ್ಯ ಹುಡುಗಿ. ತೀರಾ ಸಾಮಾನ್ಯ ಕುಟುಂಬದಿಂದ ಬಂದವಳು. ನನ್ನದೇ ಆದ ಒಂದು ಗುರುತು ಬಿಟ್ಟು  ಈ ಜಗತ್ತಿನಿಂದ ಮರಳಬೇಕು ಅನ್ನುವ ಅದಮ್ಯವಾದ ಆಸೆ ಇಟ್ಟುಕೊಂಡವಳು.

2.ಸಿನಿಮಾ ಅಲ್ಲದೇ ಹೋಗಿದ್ದರೆ ನಿಮ್ಮ ಆಯ್ಕೆ ಏನಾಗಿರುತ್ತಿತ್ತು?
- ಸಿನಿಮಾ ಇಲ್ಲದೇ ಹೋಗಿದ್ದರೆ ನಾನು ಲೆಕ್ಚರರ್ ಆಗಿರುತ್ತಿದ್ದೆ. ಇಂಜಿನಿಯರಿಂಗ್ ಓದಿದ್ದೀನಿ, ಎಂಬಿಎ ಮಾಡಿದ್ದೀನಿ. ನನಗೆ ಉಪನ್ಯಾಸಕಿ ಹುದ್ದೆಯೂ ಇಷ್ಟ. ಹೀಗಾಗಿ ಕಾಲೇಜಲ್ಲಿ ಪಾಠ ಮಾಡಿಕೊಂಡು ಇದ್ದುಬಿಡುತ್ತಿದ್ದೆ.

3.ನಿಮ್ಮ ಜೀವನದ ತಿರುವು- ಸಿನಿಮಾಕ್ಕೆ ಹೊರಳಿಕೊಂಡದ್ದು, ಹೇಗಾಯಿತು.
-ನಾನು ಯಾವತ್ತೂ ಸುಮ್ಮನೆ ಕೂತ ಹುಡುಗಿ ಅಲ್ಲವೇ ಅಲ್ಲ. ಟ್ಯೂಷನ್ ಹೇಳೋದು, ಯಾವುದಾದರೂ ವಸ್ತು ತಯಾರಿಸಿ ಮಾರೋದು, ವಾಯ್ಸ್‌ಓವರ್ ಕೊಡೋದು, ಜಾಹೀರಾತಲ್ಲಿ ಕಾಣಿಸಿಕೊಳ್ಳೋದು, ಆ್ಯಂಕರಿಂಗ್ ಮಾಡೋದು-ಹೀಗೆ ಒಂದಲ್ಲ ಒಂದು ಕೆಲಸ ಮಾಡ್ತಾನೇ ಇದ್ದವಳು. ಯಾವತ್ತೂ  ಮನೆಯವರನ್ನು ನಾನಾಗಲೀ ನನ್ನ ತಮ್ಮನಾಗಲಿ ಅವಲಂಬಿಸಿರಲಿಲ್ಲ. ಸ್ವಂತ ಕಾಲ ಮೇಲೆ ನಿಲ್ಲಬೇಕು ಅನ್ನುವುದು ನನ್ನ ಕನಸು. ಓದುವಾಗಲೂ ಅಷ್ಟೇ, ಎಲ್ಲರೂ ಪಿಕ್ನಿಕ್, ಸಿನಿಮಾ, ಔಟಿಂಗ್ ಅಂತ ರೆಡಿಯಾಗುತ್ತಿದ್ದರೆ ನಾನು ಕಾರ್ಯಕ್ರಮದ ಆ್ಯಂಕರಿಂಗ್ ಮಾಡಲು ರೆಡಿಯಾಗುತ್ತಿದ್ದೆ.

ನಮ್ಮದು ದೊಡ್ಡ ಕುಟುಂಬ. ಆದರೂ ಕಷ್ಟಗಳಲ್ಲಿ ಹಾದು ಹೋಗುತ್ತಿದ್ದ ವರ್ಷಗಳವು. ಹೀಗಾಗಿ ನಮ್ಮದೇ ದುಡಿಮೆ ನೆಚ್ಚಿಕೊಳ್ಳುವುದು ಕೂಡ ಅನಿವಾರ್ಯವಾಗಿತ್ತು. ಹೀಗೇ ಒಂದು ಸಲ ನಿರೂಪಣೆ ಮಾಡಲು ಬೆಂಗಳೂರಿಗೆ ಬಂದೆ. ಅದೇ ಹೊತ್ತಿಗೆ ನನ್ನ ಎಂಬಿಎ ಇಂಟರ್ನ್‌ಶಿಪ್ ಕೂಡ ಇತ್ತು. ನಿರೂಪಣೆ ಮಾಡುವಾಗ ಸಿಕ್ಕ ನಟ ನವೀನ್‌ಕೃಷ್ಣ, ನೀವೇಕೆ ನಟನೆ ಮಾಡಬಾರದು ಅಂತ ಕೇಳಿದರು. ಅದಕ್ಕೂ ಮುಂಚೆಯೂ ಅನೇಕರು ಅದೇ ಪ್ರಶ್ನೆ ಕೇಳುತ್ತಿದ್ದರು.

ಅದೇ ಆಸುಪಾಸಲ್ಲಿ ಒಂದು ಆಡಿಷನ್‌ನಲ್ಲಿ ನಾವೊಂದಷ್ಟು ಮಂದಿ ಎಂಬಿಎ ಗೆಳತಿಯರು ಭಾಗವಹಿಸಿದೆವು. ನನಗೆ ಉತ್ತರ ಕರ್ನಾಟಕದ ಒಂದು ಡೈಲಾಗ್ ಕೊಟ್ಟಿದ್ದರು. ನಮ್ಮಮ್ಮ ಆ ಕಡೆಯವರೇ ಆಗಿದ್ದರಿಂದ ನಾನು ಅದನ್ನು ಸರಾಗವಾಗಿ ಮಾತಾಡಿದೆ. ಅದಾಗಿ ಒಂದು ವಾರಕ್ಕೇ ನನಗೆ ಕರೆಬಂತು, ನಟಿಸುತ್ತೀಯಾ ಅಂತ ಕೇಳಿದರು. ಪುಣ್ಯಕ್ಕೆ, ನಮ್ಮ ಮನೆಯವರೂ ಒಪ್ಪಿಗೆ ಕೊಟ್ಟರು.
ನಟಿಯಾದ ನಂತರ ನನಗೆ, ಇದೇ ನನಗೆ ಸರಿಯಾದ ವೃತ್ತಿ ಅಂತ ಯಾಕೋ ಅನ್ನಿಸಿಬಿಟ್ಟಿತು. ನನ್ನ ಚಿಕ್ಕಪುಟ್ಟ ಆಸೆಗಳನ್ನೂ ಈಡೇರಿಸಿದ್ದು ಕ್ಯಾಮರಾ. ನನ್ನ ತಂದೆ ತಾಯಿಗೆ ನಾನು ಯಾವ ಸ್ಥಾನ ಕೊಟ್ಟಿದ್ದೇನೋ ಅದೇ ಸ್ಥಾನವನ್ನು ನಾನು ಕ್ಯಾಮರಕ್ಕೂ ಕೊಟ್ಟಿದ್ದೇನೆ. ತಂದೆ ತಾಯಿ ಜನ್ಮ ಕೊಟ್ಟವರು. ಕ್ಯಾಮರಾ ನನಗೆ ಮರುಹುಟ್ಟು ಕೊಟ್ಟಿತು.

4.ನೀವು ಸ್ವಭಾವತಃ ಹೇಗೆ? ಬಹಳ ಮಹತ್ವಾಕಾಂಕ್ಷೆ, ಒಂದು ಗುರಿ, ಏನನ್ನೋ ಸಾಧಿಸುವ ಆಸೆ, ದೊಡ್ಡ ಕನಸು ಇಟ್ಟುಕೊಂಡಿದ್ದವರಾ ಅಥವಾ ಜೀವನ ಬಂದ ಹಾಗೆ ಸ್ವೀಕಾರ ಮಾಡೋ ಪೈಕಿಯೋ?
-ನಾನು ಸ್ವಭಾವತಃ ಜವಾರಿ ಹುಡುಗಿ. ಪಕ್ಕಾ ಲೋಕಲ್ ಅಂತಾರಲ್ಲ ಹಂಗೆ. ಕಷ್ಟ ಸುಖ ನೋಡಿ ಬೆಳೆದವಳು. ನನಗೆ ಸಗಣಿ ಬಳಿಯೋದಕ್ಕೂ ಗೊತ್ತು, ಕಸ ಹೊಡಿಯೋದೂ ಗೊತ್ತು, ಆಟೋ ಓಡಿಸೋದೂ ಗೊತ್ತು, ಕಾರು ಓಡಿಸೋದೂ ಗೊತ್ತು. ಒಂದು ರುಪಾಯಿಯಲ್ಲಿ ಹೇಗೆ ಸಂಸಾರ ಮಾಡಬೇಕು, ಒಂದು ಲಕ್ಷ ಬಂದ್ರೆ ಹೇಗೆ ನಿಭಾಯಿಸಬೇಕು ಅನ್ನೋದು ಕೂಡ ಗೊತ್ತಿದೆ. ಮಧ್ಯಮಮವರ್ಗದ ವಾತಾವರಣದಲ್ಲಿ ಬೆಳೆದು ಬಂದೋಳು ನಾನು.

ಆದರೆ, ನನ್ನ ಆಸೆ ಒಂದೇ. ಹೋಗೋವಾಗ ನೆನಪು ಉಳಿಸಿ ಹೋಗಬೇಕು. ನನ್ನಿಂದ ಹತ್ತಾರು ಮಂದಿಗೆ ಉಪಕಾರ ಆಗಬೇಕು. ನನ್ನನ್ನು ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಬೇಕು. ಕೆಲವು ನಾವು ಸಾಧಿಸಬಹುದಾದ ಆಸೆಗಳು, ಕೆಲವು ನಮ್ಮ ಕೈಮೀರಿದ ಆಶೆಗಳು. ನನ್ನದೇ ಗೂಡು ಕಟ್ಟಬೇಕು, ಒಂದು ಅನಿಮಲ್ ರೆಸ್ಕ್ಯೂ ಕೇಂದ್ರ ಮಾಡಬೇಕು ಮುಂತಾದ ಆಸೆಗಳನ್ನು ಬಿಟ್ಟರೆ ಬಹಳ ದೊಡ್ಡ ಆಸೆಯೇನೂ ಇಲ್ಲ. ದೇವರು ಈಗಾಗಲೇ ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಕೊಟ್ಟಿದ್ದಾನೆ. ಅವನನ್ನು ನಂಬಿ ಮುಂದೆ ಹೆಜ್ಜೆ ಇಡೋದಷ್ಟೇ ನನ್ನ ಕೆಲಸ.

5. ಥಟ್ಟನೆ ನೆನಪಿಸಿಕೊಂಡರೆ,  ನಿಮ್ಮ ಜೀವನ ಬದಲಾಯಿಸಿದ ಕ್ಷಣ ಯಾವುದು?
-ಬಹುಶಃ ಚಿತ್ರೋದ್ಯಮಕ್ಕೆ ಬಂದದ್ದು. ನಾನು ಸಾಂಪ್ರದಾಯಿಕ ಕುಟುಂಬದ ಹುಡುಗಿ, ಒಂದು ಚೌಕಟ್ಟಿನ ಒಳಗಿದ್ದವಳು. ಚಿತ್ರರಂಗಕ್ಕೆ ಬಂದದ್ದೇ ತಡ ಬೇರೆ ಜಗತ್ತನ್ನು ನೋಡೋ ಅವಕಾಶ ಸಿಕ್ಕಿತು. ಅದರ ಜೊತೆಗೇ, ನನ್ನ ಶಕ್ತಿ ಏನೆಂದು ತಿಳಿದುಕೊಳ್ಳುವ, ದೇವರು ನನಗೆ ಕೊಟ್ಟ ಕಲೆಯ ವರಗಳನ್ನು ಪ್ರದರ್ಶಿಸುವ ಅವಕಾಶವೂ ಸಿಕ್ಕಿತು.  ನನಗಷ್ಟೇ ಅಲ್ಲ, ನನ್ನ ಇಡೀ ಕುಟುಂಬಕ್ಕೂ ಇದು ಅಚ್ಚರಿ ಮತ್ತು ಸಂಭ್ರಮದ ಘಟನೆ.
ನಾನು ಮನೆಯಲ್ಲಿರುವಷ್ಟೇ ಸಂತೋಷವಾಗಿ ಶೂಟಿಂಗಿನಲ್ಲೂ ಇರುತ್ತೇನೆ. ಎಲ್ಲೂ ಅಹಿತಕರ ಘಟನೆ, ನೋವು ಅಂತ ಏನೂ ಆಗಲಿಲ್ಲ. ನನಗನ್ನಿಸಿದ್ದೇನೆಂದರೆ ನಾನು ಕಲಿಯೋದು ಬೇಕಾದಷ್ಟಿದೆ. ತಂತ್ರಜ್ಞರು, ಕಲಾವಿದರು, ನಿರ್ದೇಶಕರು, ಸಹನಟರು- ಅವರು ಎದುರಿಸುವ ಸವಾಲು, ಅವರ ಹೋರಾಟಗಳಿಂದ ನಾನು ದಿನವೂ ಪಾಠ ಕಲೀತಾ ಇದ್ದೇನೆ.  ಪ್ರತಿದಿನವೂ, ಪ್ರತಿಕ್ಷಣವೂ ನನಗೆ ಕ್ಲಾಸ್‌ರೂಮ್ ಇದ್ದಹಾಗೆ.

6. ನಿಮ್ಮ ಬದುಕಿನಲ್ಲಿ ಮುಖ್ಯ ಎನಿಸುವ ಐದು ಮಂದಿಯ ಹೆಸರು ಹೇಳಿ, ಯಾಕೆ ಅಂತಲೂ ಹೇಳಿ.
-ಕೆಲವು ಮಂದಿಗಿಂತ, ಕೆಲವು ಸಂಗತಿಗಳ ಬಗ್ಗೆ ಮಾತಾಡೋಕೆ ನಂಗಿಷ್ಟ.  ನನಗೆ ಎಲ್ಲಕ್ಕಿಂತ ಮುಖ್ಯ ನನ್ನ ಕುಟುಂಬ. ಯಾರಿದ್ರೂ ಯಾರು ಬಿಟ್ಟು ಹೋದ್ರೂ ಕೊನೆ ತನಕ ಕೈ ಹಿಡಿಯೋದು, ಬೆನ್ನು ತಟ್ಟೋದು ನಮ್ಮ ಮನೆಯವರು. ಅವರಿಗೆ ಆದ್ಯತೆ. ಎರಡನೆಯದು ನನಗೆ ನಿರ್ವ್ಯಾಜ ಪ್ರೀತಿ ಕೊಡುವಂಥ ನಾನು ಸಾಕಿದ ಪ್ರಾಣಿಗಳು. ಮೂರನೆಯದು ನನ್ನ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿದ ಕ್ಯಾಮರಾ. ಎಷ್ಟೋ ಸಲ ನನಗೆ ಯಾರಿಗಾದ್ರೂ ಸಹಾಯ ಮಾಡಬೇಕು ಅನ್ನಿಸೋದು, ಚೆಂದದ ಬಟ್ಟೆ ಹಾಕ್ಕೋಬೇಕು, ಒಡವೆ ಹಾಕ್ಕೋಬೇಕು ಅನ್ನಿಸೋದು. ಆದರೆ ಅದಕ್ಕೆಲ್ಲ ಯೋಚನೆ ಮಾಡಬೇಕಾಗಿತ್ತು. ಆದರೆ ಮತ್ತೊಬ್ಬರಿಗೆ ಸಹಾಯ ಮಾಡೋದಕ್ಕೆ, ನನಗೆ ನಾನೇ ಸಹಾಯ ಮಾಡ್ಕೊಳ್ಳೋದಕ್ಕೆ ಅವಕಾಶ ಮಾಡಿಕೊಟ್ಟ ಕ್ಯಾಮರಾ ನನಗೆ ಹೆತ್ತವರಷ್ಟೇ ಪ್ರೀತಿಪಾತ್ರ. ನಾನು ಸಿನಿಮಾ ಉದ್ಯಮ ಬಿಟ್ಟರೂ ಕ್ಯಾಮರಾ ಕೊಟ್ಟದ್ದನ್ನು ಮಾತ್ರ ಮರೆಯಲಾರೆ.

7. ನಿಮಗೆ ಕೈ ತುಂಬ ಹಣ, ಒಂದು ತಿಂಗಳು ಬಿಡುವು ಕೊಟ್ಟರೆ ಎಲ್ಲಿಗೆ ಹೋಗ್ತೀರಿ, ಏನು ಮಾಡ್ತೀರಿ?
-ನಾನು ಎಲ್ಲಿಗೂ ಹೋಗೋಲ್ಲ ಅನ್ನಿಸುತ್ತೆ. ಬಹುಶಃ ಆ ದುಡ್ಡನ್ನು ಉಳಿಸೋದು ಹೇಗೇಂತ ಯೋಚನೆ ಮಾಡ್ತೀನಿ ಅಂತ ಕಾಣತ್ತೆ. ನನಗೆ ಎಲ್ಲಕ್ಕಿಂತಲೂ ನನ್ನ ಮನೆಯೇ ತುಂಬಾ ಇಷ್ಟ. ನನ್ನ ಮನೆ, ನನ್ನ ಕೋಣೆ ಅದೇ ನನ್ನ ಪ್ರಿಯವಾದ ಜಗತ್ತು. ಅಡುಗೆ ಮಾಡಿಕೊಂಡು, ಕ್ಯಾಂಡಲ್ ಹಚ್ಚಿಟ್ಟುಕೊಂಡು, ನನ್ನಿಷ್ಟದ ಭಾವಪೂರ್ಣ ಸಾಲುಗಳ ಹಾಡು ಕೇಳುತ್ತಾ, ಇಷ್ಟವಾದದ್ದು ಬರಕೊಂಡು, ರುಚಿಯಾದ ಊಟ ಮಾಡುತ್ತಾ ನನ್ನ ಪೆಟ್‌ಗಳ ಜೊತೆ ಆಡುತ್ತಾ ಇರೋದೇ ಸ್ವರ್ಗಸಮಾನ. ಬಿಟ್ಟರೆ ನಮ್ಮಜ್ಜಿ ಮನೆ. ಅಲ್ಲಿ ಸುತ್ತಾಟ. ಅಲ್ಲಿಯ ಹಸು, ತೋಟ ಇವೆಲ್ಲ ಖುಷಿ ಕೊಡುತ್ತೆ.

8. ಪ್ರೀತಿ, ಮದುವೆ, ಸಂಗಾತಿಯ ಬಗ್ಗೆ ನಿಮ್ಮ ಕಲ್ಪನೆಗಳೇನು?
-ಈ ಕಲ್ಪನೆ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತೆ. ಹದಿನೆಂಟನೇ ವಯಸ್ಸಿಗಿದ್ದ ಭಾವನೆ 20ನೇ ವರ್ಷಕ್ಕೆ ಇರಲಿಲ್ಲ. ಇಪ್ಪತ್ತನೇ ವಯಸ್ಸಲ್ಲಿ ಅನ್ನಿಸಿದ್ದು ಈಗ ಅನ್ನಿಸೋದಿಲ್ಲ. ನಾವು ಪ್ರಬುದ್ಧರಾಗುತ್ತಾ ಹೋದ ಹಾಗೆ ತುಂಬ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ತೀವಿ ಅನ್ಸುತ್ತೆ.
ನನ್ನ ಪ್ರಕಾರ ಪ್ರೀತಿ ಅಂದರೆ ಜವಾಬ್ದಾರಿ. ಯಾವುದರ ಬಗ್ಗೆ ಪ್ರೀತಿ ಇರುತ್ತೋ ಅದರ ಬಗ್ಗೆ ನಾವು ಜವಾಬ್ದಾರಿಯಿಂದ ನಡ್ಕೋತೀವಿ. ಪ್ರೀತಿ ಇಲ್ಲದೇ ಹೋದರೆ ಜವಾಬ್ದಾರಿಯೂ ಇರಲ್ಲ, ಜವಾಬ್ದಾರಿ ಹೊತ್ತುಕೊಳ್ಳದೇ ಹೋದರೆ ಪ್ರೀತಿಯೂ ಇರೋದಿಲ್ಲ.

ನನಗೆ ಶ್ರೀಮಂತನ ಹೆಂಡತಿ ಅನ್ನಿಸಿಕೊಳ್ಳೋದಕ್ಕಿಂತ ‘ಶ್ರೀಮಂತ ಹೆಂಡತಿ’ ಆಗಿರೋಕೆ ಇಷ್ಟ. ನಾನು ಮೂಲತಃ ಸ್ವತಂತ್ರವಾಗಿ ಇರೋಕೆ ಬಯಸೋಳು. ಯಾರಿಗೂ, ಹೆತ್ತವರಿಗೆ ಕೂಡ, ಹೊರೆಯಾಗಿರೋದಕ್ಕೆ ನಂಗಿಷ್ಟ ಇಲ್ಲ. ಹಾಗೆ ನೋಡಿದಾಗ, ನನಗೆ ಪ್ರಾಮಾಣಿಕತೆ ಇರುವ, ಜವಾಬ್ದಾರಿ ಇರುವ ಹುಡುಗ ಬೇಕು. ಹೀಗೆ ಹುಡುಗರಿಗೆ ತನ್ನನ್ನು ಮದುವೆಯಾಗೋಳು ತನ್ನ ಅಪ್ಪಾಮ್ಮನ್ನ ಚೆನ್ನಾಗಿ ನೋಡ್ಕೋಬೇಕು ಅಂತ ಆಶೆಯಿರುತ್ತೆ, ಅಂಥದ್ದೇ ಆಸೆ ಹೆಣ್ಮಕ್ಕಳಿಗೂ ಇರುತ್ತೆ. ಇದರ ಜೊತೆಗೇ ನನಗೆ ಇನ್ನೊಬ್ಬರು ಒಳ್ಳೇ ಅಪ್ಪ ಅಮ್ಮ ಸಿಗೋ ಮನೆ ಬೇಕು ಅನ್ನೋ ಆಸೇನೂ ಇದೆ. ಸದ್ಯಕ್ಕಂತೂ ಆ ಯೋಚನೆ ಇಲ್ಲ. ಕೆಲಸವೇ ಪ್ರೀತಿ, ಸಂಗಾತಿ ಎಲ್ಲವೂ.

9. ಬೇರೆ ‘ಭಾಷೆ, ಮುಖ್ಯವಾಗಿ ಹಿಂದಿ, ಮಲಯಾಳಂ, ಮರಾಠಿ, ಬಂಗಾಲಿ ಸಿನಿಮಾಗಳಲ್ಲಿ ಹೆಣ್ಣಿಗೆ ತುಂಬ ಸ್ಟ್ರಾಂಗ್ ಆದ ಪ್ರೆಸೆನ್ಸ್ ಇರುತ್ತೆ.  ಕನ್ನಡದಲ್ಲಿ ಬರೀ ಬೊಂಬೆಯಂತೆ ತೋರಿಸುತ್ತಾರೆ. ಈ ತಾರತಮ್ಯದ ಬಗ್ಗೆ ಯಾವತ್ತಾದರೂ ಬೇಸರ ಆಗಿದೆಯೇ?
-ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಅಂತ ಗೊತ್ತಾಗ್ತಿಲ್ಲ. ದೇವರ ದಯೆಯಿಂದ, ನನಗೆ ಸಿಕ್ಕಿರುವ ಪಾತ್ರಗಳೆಲ್ಲ ಒಳ್ಳೆಯ ಪಾತ್ರಗಳೇ. ಅದಕ್ಕೆ ನಾನು ನಿರ್ದೇಶಕರಿಗೂ ಆಭಾರಿಯಾಗಿದ್ದೀನಿ. ಯಾವತ್ತೂ ನನ್ನನ್ನು ಕೇವಲ ಬೊಂಬೆಯಂತೆ ತೋರಿಸಿಲ್ಲ. ಸ್ತ್ರೀಪ್ರಧಾನ ಪಾತ್ರ ಮಾಡಿದ್ದೀನಿ, ಗ್ಲಾಮರಸ್ ಪಾತ್ರಗಳನ್ನೂ ಮಾಡಿದ್ದೀನಿ. ಆದರೆ ಸತ್ವಯುತ ಪಾತ್ರಗಳೇ ನನಗೆ ಸಿಕ್ಕಿವೆ.
ಮೇಲ್ ಡಾಮಿನೆನ್ಸ್ ಮಾತು ಬಂದಾಗ ಅದು ಎಲ್ಲೆಲ್ಲೂ ಇರುವಂಥದ್ದೇ. ತೀರಾ ಫಿಲಾಸಫಿಕಲ್ ಅನ್ನಿಸಿದರೂ ಹೇಳ್ತೀನಿ, ಪ್ರಕೃತಿಯಲ್ಲೂ ಅಂಥದ್ದೊಂದು ಪುರುಷಪ್ರಧಾನ್ಯ ಇದೆ ಅನ್ನಿಸುತ್ತೆ ನಂಗೆ. ಅದು ಅಮೆರಿಕಾದ ರಾಜಕಾರಣದಲ್ಲೂ ಇದೆ. ಅದನ್ನು ಫೆಮಿನಿಸಮ್ ಅನ್ನೋ ಪದ ಬಳಸಿ ಮಾತಾಡೋದಕ್ಕೆಲ್ಲ ನಂಗಿಷ್ಟ ಇಲ್ಲ.
ಎಲ್ಲಕ್ಕಿಂತ ಮುಖ್ಯ ಒಂದು ಪ್ರಸಂಗವನ್ನು ನಾವು ಹೇಗೆ ಎದುರಿಸ್ತೀವಿ, ಎಷ್ಟು ಶ್ರದ್ಧೆಯಿಂದ ಅದರಲ್ಲಿ ತೊಡಗಿಸಿಕೊಳ್ತೀವಿ, ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡ್ತೀವಿ ಅನ್ನೋದು. ಅಲ್ಲದೇ, ಈಗ ಎಲ್ಲವೂ ಬದಲಾಗ್ತಿದೆ. ಮಹಿಳೆಯರೂ ನಿರ್ದೇಶಕಿಯರಾಗಿ ಬರ್ತಿದ್ದಾರೆ. ಮುಂದೆ ಬದಲಾಗಬಹುದು, ಕಾದು ನೋಡೋಣ.

10.ಸಿನಿಮಾ- ಗ್ಲಾಮರ್- ಪ್ರಚಾರ- ಕಲರ್ ುಲ್ ಜೀವನ- ಇದರಾಚೆಗೆ ನಿಮ್ಮ ಆತ್ಮಕ್ಕೆ ಹತ್ತಿರವಾದ ಸಂಗತಿ ಯಾವುದು?
-ನಾನು ನನ್ನ ಪುಟ್ಟ ಲೋಕದಲ್ಲಿ ಹೇಗಿದ್ನೋ ಹಾಗೇ ಇದ್ದೀನಿ. ನನಗೆ ಸಿನಿಮಾ ಒಂದು ವೃತ್ತಿ ಅಷ್ಟೇ. ಅನ್ನ ಕೊಡೋ ಕೆಲಸ ಇದು. ನಾನಿಲ್ಲಿಗೆ ಪ್ಯಾಶನ್ನಿಗೋಸ್ಕರ ಅಂತಾನೇ ಬಂದಿಲ್ಲ. ಮೊದಲು ಊಟ, ನಂತರ ಪ್ಯಾಶನ್ ಇತ್ಯಾದಿ. ಹೀಗಾಗಿ ನನ್ನ ವೈಯಕ್ತಿಕ ಜೀವನದಲ್ಲಿ ಅಂಥ ವ್ಯತ್ಯಾಸ ಏನೂ ಆಗಿಲ್ಲ.
ನನ್ನೊಳಗಿರೋ ಅದಿತಿಗೆ ಅವಳ ಕುಟುಂಬ, ಯಾವುದೇ ಅಡಚಣೆಯಾಗದ ಖಾಸಗಿ ಜೀವನ, ಅವಳ ತೋಟ, ಪ್ರಾಣಿಗಳು, ಅರ್ಥಮಾಡಿಕೊಳ್ಳೋ ಸಂಗಾತಿ, ನಾಲ್ಕು ಮಂದಿಗೆ ಸಹಾಯ ಮಾಡೋ ಶಕ್ತಿ- ಇಷ್ಟಿದ್ದರೆ ಸಾಕು. ಸಹಾಯ ಮಾಡೋದಕ್ಕೆ ದುಡ್ಡೂ ಬೇಕು. ಬರೀ ಮನಸ್ಸಿದ್ದರೆ ಸಾಲೋದಿಲ್ಲ.

ನನ್ನ ವ್ಯಕ್ತಿತ್ವ ಎಂಥದ್ದು ಅಂತ ಕೇಳಿದರೆ ನಾನೊಬ್ಬಳು ಪಾರದರ್ಶಕವಾದ ಹುಡುಗಿ. ನಾನು ಯಾವುದನ್ನೂ ಅದುಮಿಟ್ಟುಕೊಳ್ಳೋದಿಲ್ಲ. ಅಳು, ನಗು, ಸಿಟ್ಟು, ಅಸಹ್ಯ ಎಲ್ಲವನ್ನೂ ಥಟ್ಟನೆ ತೋರಿಸ್ಕೊಂಡು ಬಿಡ್ತೀನಿ. ಅದಕ್ಕೇ ಖುಷಿಯಾಗಿದ್ದೀನಿ. ಸುರಕ್ಷಿತವಾಗಿದ್ದೀನಿ. ಇಲ್ಲಿ ನಾವು ಗಟ್ಟಿಯಾಗಿರೋದು ಮುಖ್ಯ, ಆತ್ಮವಿಶ್ವಾಸ ಮುಖ್ಯ, ನಮ್ಮ ಮೇಲಿನ ಹತೋಟಿ ಕೂಡ ಮುಖ್ಯ. ಆ ನಿಟ್ಟಿನಲ್ಲಿ ನೋಡಿದಾಗ ನಾನೊಬ್ಬಳು ಮಧ್ಯಮ ವರ್ಗದ ಸಹಜ ಭಾವನೆಗಳ ಸಾಮಾನ್ಯ ಹುಡುಗಿ.

11. ಮಾಡರ್ನ್ ಸಿನಿಮಾ ಜಗತ್ತು- ಒತ್ತಡಗಳ ಜಗತ್ತು. ಅದನ್ನು ನೀವು ಹೇಗೆ ನಿಭಾಯಿಸುತ್ತೀರಿ?
-ಎಲ್ಲಾ ಕ್ಷೇತ್ರಗಳಲ್ಲೂ ಒತ್ತಡ ಇರುತ್ತೆ. ಇಲ್ಲಿ ಒಂಚೂರು ಜಾಸ್ತೀನೇ ಇರುತ್ತೆ. ನಮ್ಮನ್ನು ಸದಾ ಕಾಡುವ ಪ್ರಶ್ನೆ: ಮುಂದೇನು? ಹೇಳಿಕೇಳಿ ಈ ವೃತ್ತಿಯೇ ನೀರ ಮೇಲಿನ ಗುಳ್ಳೆ. ಇವತ್ತು ಹತ್ತು ಪ್ರಾಜೆಕ್ಟ್ ಇರುತ್ತೆ. ನಾಳೆ ಒಂದೂ ಇರೋದಿಲ್ಲ. ಇಂಥ ಅನ್‌ಪ್ರಿಡಿಕ್ಟಬಲ್ ಆದ ಕ್ಷೇತ್ರದಲ್ಲಿ ನಾಳೆ ಏನೆಂದೇ ಗೊತ್ತಿರೋದಿಲ್ಲ.
ನಾನು ಹೈಪರ್ ಆಕ್ಟಿವ್ ಹುಡುಗಿ.  ಪಟಪಟಾಂತ ಕೆಲಸ ಮಾಡ್ತೀನಿ. ಎಲ್ಲರಿಗೂ ನನ್ನ ವರ್ಕ್ ಇಷ್ಟ ಆಗುತ್ತೆ. ಹಾಗೇ ನನಗೆ ನನ್ನದೇ ಆದ ಗುರಿ, ಪ್ರಮೇಯ ಇದೆ. ಶ್ರದ್ಧೆಯಿಂದ ಕೆಲಸ ಮಾಡ್ತೀನಿ. ನನಗೆ ಒಳ್ಳೆಯ ಶಿಕ್ಷಣ ಸಿಕ್ಕಿರೋದರಿಂದ, ಲೆಕ್ಚರರ್ ಆಗಿ ಕೆಲಸ ಮಾಡಬೇಕು ಅಂತ ಆಸೇನೂ ಇರೋದರಿಂದ ನಾಳೆಯ ಭಯ ಇಲ್ಲ. ಮುಂದೇನು ಅನ್ನೋ ಯೋಚನೆ ಇಲ್ಲ. ಈ ಸ್ಪರ್ಧೆಯಲ್ಲಿ ಗೆಲ್ಲೋದು ಹೇಗೆ ಅನ್ನೋ ಚಿಂತೆಯಿಲ್ಲ. ಮಾಡೋ ಕೆಲಸಾನ ಅಚ್ಚುಕಟ್ಟಾಗಿ ಮಾಡಬೇಕು ಅನ್ನೋ ಒತ್ತಡವಂತೂ ಇದ್ದೇ ಇದೆ.
ಇದರ ಜೊತೆಗೇ ನನಗೋಸ್ಕರ ಒಂಚೂರು ಟೈಮ್ ಬೇಕಿತ್ತು ಅನ್ನಿಸುತ್ತೆ. ದೇವಸ್ಥಾನ, ಕರಾವಳಿ, ನನ್ನ ಪ್ರೈವೇಟ್ ಟೈಮ್ ಎಲ್ಲ ಮಿಸ್ ಮಾಡ್ಕೋತಿದ್ದೀನಿ. ಒಂದೊಂದು ಸಲ ಲೋ ಫೀಲ್ ಆಗತ್ತೆ, ಬದಲಾವಣೆ ಬೇಕು ಅನ್ನಿಸುತ್ತೆ. ಆದರೆ ನನ್ನ ವ್ಯಾಯಾಮ, ಯೋಗ, ದೇವರ ಧ್ಯಾನ ಇವೆಲ್ಲ ಮನಸ್ಸು ಹಗುರ ಮಾಡ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಪ್ಪ ತುಂಬ ಸಹಾಯ ಮಾಡ್ತಾರೆ. ಮಾತುಕತೆಗಳನ್ನೆಲ್ಲ ಅವರೇ ನೋಡ್ಕೋತಾರೆ.
12.ರಾಶಿ, ‘ವಿಷ್ಯ ಎಲ್ಲ ನಂಬುತ್ತೀರಾ? ನಂಬುತ್ತೀರಾದರೆ ನಿಮ್ಮ ರಾಶಿ ಯಾವುದು?
- ನಾನು ದೈವಶಕ್ತೀನ ನಂಬ್ತೀನಿ. ಯಾರೂ ಸಹಾಯಕ್ಕೆ ಬರದೇ ಇದ್ದಾಗ ಯಾವುದೋ ಒಂದು ಚೈತನ್ಯ ನೆರವಿಗೆ ಬರುತ್ತೆ. ಆತ್ಮವಿಶ್ವಾಸ ತುಂಬುತ್ತೆ, ಬದುಕು ಅಂತ ಹೇಳುತ್ತೆ. ನನಗಂತೂ ದೇವರು ಸದಾ ಜೊತೆಗೇ ಇರ್ತಾನೆ. ನಿಂಗೆ ತಲೆಸರಿಯಿಲ್ಲ ಅಂತ ಬೈಯೋದರಿಂದ ಹಿಡಿದು ಥ್ಯಾಂಕ್ಯೂ ವೆರಿಮಚ್ ಅಂತ ಹೇಳೋ ತನಕ ನಾನು ದೇವರ ಹತ್ತಿರ ಮಾತಾಡ್ತಾನೇ ಇರ್ತೀನಿ.  ನನ್ನ ಪ್ರಕಾರ ಬದುಕು ಅಂತ ಹೇಳೋ ಧನಾತ್ಮಕ ಶಕ್ತಿಯೇ ದೇವರು.
ಇನ್ನು ಮೂಢನಂಬಿಕೆಗಳು ಬೇಕಾಗಿಲ್ಲ. ನಮಗೆ ಯಾವುದು ಮೂಢನಂಬಿಕೆ, ಯಾವುದು ಸತ್ವವುಳ್ಳದ್ದು ಅಂತ ಗೊತ್ತಾಗುತ್ತೆ. ಕೆಲವು ಆಹಾರ ಪದ್ಧತಿ, ಆಚರಣೆಗಳು ಹಿಂದಿನ ಕಾಲದಿಂದ ಬಂದಿರೋದು, ಬೇಕು ಅನ್ನಿಸುತ್ತೆ.  ಪಾಲಿಸ್ತೀನಿ.

13. ನೀವು ಕಂಡುಕೊಂಡ, ನಿಮ್ಮನ್ನು ಬೆಳೆಸಿದ ಹತ್ತು ಸಂಗತಿಗಳ ಬಗ್ಗೆ ಹೇಳಿ.

-1. ನನಗೆ ಸೋತುಬಿಟ್ಟೆ ಅಂತ ಒಪ್ಪಿಕೊಳ್ಳೋ ಮನಸ್ಥಿತಿ ಇಲ್ಲ. ಮತ್ತೆ ಮತ್ತೆ ಪ್ರಯತ್ನ ಪಡ್ತಾನೇ ಇರ್ತೀನಿ. ನಾನೊಬ್ಬಳು ಪರ್ಸ್ಯೂವರ್.
2. ನಾನು ಯಾರ ಮಾತಿಗೂ ಸೋಲೋದಿಲ್ಲ, ಯಾರೂ ನನ್ನ ಇನ್‌ಲ್ುಯೆನ್ಸ್ ಮಾಡಕ್ಕಾಗಲ್ಲ. ನನಗೇನು ಬೇಕು ಅನ್ನೋದು ನನ್ನನ್ನು ಬಿಟ್ರೆ ಮತ್ಯಾರಿಗೂ ಗೊತ್ತಿರೋಕೆ ಸಾಧ್ಯವಿಲ್ಲ. ನನ್ನ ಮಿತಿ, ಶಕ್ತಿ ಎರಡೂ ನನಗೇ ಗೊತ್ತಿರಬೇಕು.
3. ನಾನು ಯೌವನದಲ್ಲಿದ್ದಾಗ ನಾಲ್ಕು ಮಂದಿ ಬಂದು ಸೆಲ್ಫೀ ತಗೊಂಡರೆ ಅದು ಸಾ‘ನೆ ಅಲ್ಲ. ಈ ವೃತ್ತಿ ಬಿಟ್ಟು ಎಷ್ಟೋ ವರ್ಷ ಆದ ಮೇಲೂ ನನ್ನ ಜೀವನ ಹೇಗಿರುತ್ತೆ ಅನ್ನೋದು ನಾನು ನನಗೆ ಕೊಟ್ಟುಕೊಳ್ಳುವ ಗೌರವ, ಅದೇ ನನ್ನ ಸಾ‘ನೆ.
4. ನಾನು ತುಂಬಾ ಇಮೋಷನಲ್. ಅದೇ ನನ್ನ ಶಕ್ತಿ ಕೂಡ.
5. ಚೆನ್ನಾಗಿ ಪ್ರಾಕ್ಟೀಸ್ ಮಾಡಬೇಕು. ಕೆಲಸದ ಮೇಲೆ ‘ಕ್ತಿ ಬೇಕು. ಷೋಕಿ ಇದ್ದರೆ ಸಾಲದು.
6. ಸಣ್ಣಪುಟ್ಟ ಕೊರತೆಗಳನ್ನು ಮೀರಿ ನಿಲ್ಲಬೇಕು. ಕುರ್ಚಿ ಹಾಕಲ್ಲ, ಕೇರ್ ಮಾಡಲ್ಲ ಅನ್ನೋದನ್ನೆಲ್ಲ ಯೋಚಿಸದೇ ಗುರಿಯತ್ತ ಸಾಗಬೇಕು. ಅಂತಿಮವಾಗಿ ಏನು ಸಾಧಿಸುತ್ತೀರೋ ಅದೇ ಮುಖ್ಯ.
7. ನನಗೆ ತುಂಬಾ ಸಿಟ್ಟಿತ್ತು. ಅದನ್ನು ಇವತ್ತು ಮೀರಿ ನಿಂತಿದ್ದೀನಿ. ತಾಳ್ಮೆ ಬೆಳೆಸಿಕೊಂಡಿದ್ದೀನಿ. ಅದು ಮುಖ್ಯ.
8. ನಮ್ಮನ್ನು ನಾವೇ ರಕ್ಷಿಸ್ಕೋಬೇಕು, ಬೆಳೆಸ್ಕೋಬೇಕು, ಪ್ರೀತಿ ಮಾಡಬೇಕು, ಬೇರೆ ಯಾರೂ ಇಲ್ಲಿ ಸಹಾಯಕ್ಕೆ ಬರೋದಿಲ್ಲ.
9. ನೋ ಅನ್ನೋದನ್ನು ಕಲೀಬೇಕು.
10. ನಮಗೇನು ಬೇಕು, ಏನು ಬೇಡ ಅನ್ನೋ ಬಗ್ಗೆ ಸ್ಪಷ್ಟತೆ ಇರಬೇಕು.

14. ನಿಮ್ಮ ಬಾಲ್ಯ ತುಂಬ ದೂರದಲ್ಲೇನೂ ಇಲ್ಲ. ಹಾಗಿದ್ದರೂ ಬಾಲ್ಯದ ಒಂದು ಚಿತ್ರ ನಿಮ್ಮ ಮನಸ್ಸಲ್ಲಿ ಸದಾ ಇದ್ದಿರಲೇಬೇಕು. ನೆನಪಿಸಿಕೊಳ್ಳಿ.
-ನನ್ನದು ಅತ್ಯಂತ ಸಮೃದ್ಧವಾದ ಬಾಲ್ಯ. ನಮ್ಮಪ್ಪ ಸರ್ಕಾರಿ ವೈದ್ಯರಾಗಿದ್ದವರು. ಹಳ್ಳಿಗಳಲ್ಲೇ ನಾನು ಬಾಲ್ಯ ಕಳೆದೆ. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದೆ. ಬೆಳಗ್ಗೆ ಅರ್ಧಗಂಟೆ ಮುಂಚಿತವಾಗಿ ಶಾಲೆಗೆ ಹೋಗಿ, ಕಸ ಹೊಡೆದು, ಒಂದೂವರೆ ಮೈಲಿ ದೂರದಿಂದ ಸಿಹಿನೀರು ತಂದು, ಶಾಲೆ ಬಿಡುತ್ತಿದ್ದಂತೆ ಮಾವಿನ ಮರ ಹತ್ತಿ, ಮರಕೋತಿ ಆಡಿ, ಆಲದ ಮರದ ಬಿಳಲುಗಳಿಗೆ ಜೋತುಬಿದ್ದು, ಚಿಗಳಿ-ಕುಟ್ಟಂಡಿ ಮಾಡಿ ತಿಂದು, ಕುಂಟಾಬಿಲ್ಲೆ, ಒಂಟಿಗಾಲು ಆಡುತ್ತಾ ಅದ್ಭುತವಾಗಿ ಬಾಲ್ಯವನ್ನು ಕಳೆದಿದ್ದೀನಿ. ಬರಿಗಾಲು ಹುಡುಗಿ ನಾನು.  ಎಮ್ಮೆ ಸಗಣಿ ಆಗದು, ಹಸು ಸಗಣಿಯೇ ಬೇಕು ಅಂತ ಸುತ್ತಾಡಿದ್ದು, ರಂಗೋಲಿ ಹಾಕಿದ್ದು, ಸಂಕ್ರಾತಿಗೆ ಹೊಸಬಟ್ಟೆ ತಂದಾಗಿನ ಸಂಭ್ರಮ, ಎಳ್ಳು ಬೆಲ್ಲ ಹಂಚೋವಾಗ ತಿನ್ನೋದಕ್ಕೆ ಅಂತ ಒಂದು ಪ್ಯಾಕೆಟ್ ಎತ್ತಿಟ್ಟುಕೊಂಡ ಖುಷಿ- ಒಂದಲ್ಲ ಎರಡಲ್ಲ, ನೆನಪುಗಳ ಮಹಾಪೂರ. ಮಳೆ ಬಂದರಂತೂ ಮತ್ತೂ ಖುಷಿ. ಮಳೆಯಲ್ಲೇ ದೋಣಿಯಾಟ, ಕುಂಟೋಬಿಲ್ಲೆ, ಹಗ್ಗಜಗ್ಗಾಟ. ಅಜ್ಜೀ ಮನೇಲಿದ್ದಾಗ ಹಾಲು ಕರೆಯೋದು, ನೊರೆ ಹಾಲು ಕುಡಿಯೋದು ಹೀಗೆ ಸಂಭ್ರಮವೋ ಸಂಭ್ರಮ.
ಇವೆಲ್ಲದರ ಪರಿಣಾಮ ಅಂದರೆ ನನಗೆ ಸುಸ್ತಾಗೋಲ್ಲ, ಕಾಯಿಲೆ ಬೀಳಲೇ ಇಲ್ಲ ನಾನು. ಇವತ್ತಿಗೂ ನನ್ನ ಆಹಾರಪದ್ಧತಿ ಬದಲಾಗಿಲ್ಲ. ಚಪಾತಿ, ರೊಟ್ಟಿ, ಮುದ್ದೆಯೇ ನಂಗಿಷ್ಟ. ನಾನು ಡೇರಿಂಗ್ ಹುಡುಗಿ. ಕಷ್ಟಗಳನ್ನು ಸಹಿಸಿ ಬೆಳೆದು ಬಂದಿರೋ ಮನೆ ಮಗಳು.

15. ಮದುವೆಯ ನಂತರ ಮುಂದೇನು?
-ಮದುವೆ ಆಗ್ತಿದ್ದ ಹಾಗೆ ಈ ವೃತ್ತಿ ಮುಗೀತು ಅಂತ ಎಲ್ಲರೂ ಹೇಳ್ತಾರೆ. ಆದರೆ ನನ್ನ ಪ್ರಕಾರ ಮದುವೆಗೂ ವೃತ್ತಿಗೂ ಸಂಬಂಧವಿಲ್ಲ. ಮದುವೆಗೆ ಮುಂಚೆ ತಂದೆತಾಯಿ ಹೇಗೆ ಬೆಂಬಲ ನೀಡಿದ್ದರೋ ಅಷ್ಟೇ ಬೆಂಬಲ ಕೊಡೋ ಸಂಗಾತಿ ಸಿಕ್ಕರೆ ಯಾವ ತೊಂದರೆಯೂ ಆಗೋದಿಲ್ಲ. ಈಗಂತೂ ಕಾಲ ಬದಲಾಗಿದೆ. ಹೆಣ್ಮಕ್ಕಳು ಎಲ್ಲಾ ಕ್ಷೇತ್ರಗಳಂತೆ ಟೀವಿ, ಸಿನಿಮಾದಲ್ಲೂ ಮದುವೆಯ ನಂತರವೂ ಅದ್ಭುತವಾಗಿ ಕೆಲಸ ಮಾಡ್ಕೊಂಡು ಹೋಗ್ತಾ ಇದ್ದಾರೆ.
ಹೀಗಾಗಿ ಎರಡೋ ಮೂರೋ ವರ್ಷ ಕಾಯಬೇಕು. ನಂತರ ಮದುವೆ ಮಾಡ್ಕೋಬೇಕು. ಅದರಿಂದ ವೃತ್ತಿಗೆ ಸಮಸ್ಯೆ ಅನ್ನೋದರಲ್ಲಿ ನನಗೆ ನಂಬಿಕೆ ಇಲ್ಲ. ನನಗೆ ಹೊಂದಿಕೆಯಾಗೋ, ನನ್ನ ಕುಟುಂಬ ಒಪ್ಪೋ ಹುಡುಗ ಸಿಕ್ಕರೆ ತಕ್ಷಣವೇ ಮದುವೆ ಮಾಡ್ಕೋಬಹುದು. ಅದು ಅವರವರ ಇಷ್ಟ.
ನನಗೆ ವೈಯಕ್ತಿಕವಾಗಿ ಮದುವೆಯ ನಂತರ ಈ ವೃತ್ತಿ ಮುಂದುವರಿಸೋ ಆಸೆಯಿಲ್ಲ. ನಾನು ಅಂದ್ಕೊಂಡಿರೋ ಕಾರ್ಪೊರೆಟ್ ಜಗತ್ತಿನಲ್ಲಿ ಕೆಲಸ ಮಾಡಬೇಕೂಂತಿದೆ. ಹೀಗಾಗಿ ನಾನು ಬ್ರೇಕ್ ತಗೊಳ್ತೀನಿ ಅಂತ ಅಂದ್ಕೊಂಡಿದ್ದೀನಿ.

click me!