ಕೇಂದ್ರ ಬಜೆಟ್ 2024: ಕೃಷಿಗೂ ಸಾರ್ವತ್ರಿಕ ಡಿಜಿಟಲ್‌ ಮೂಲಸೌಕರ್ಯ ಯೋಜನೆ ಜಾರಿ: 1.52 ಲಕ್ಷ ಕೋಟಿ ಅನುದಾನ

By Kannadaprabha News  |  First Published Jul 24, 2024, 6:13 AM IST

ಕೃಷಿ ಮತ್ತು ತೋಟಕಾರಿಕೆ ವಲಯದ 32 ಬೆಳೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಉತ್ಪಾದಕತೆ ಹೊಂದಿರುವ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ 109 ತಳಿಗಳನ್ನು ಕೃಷಿಕರ ಬಳಕೆಗೆ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.


ಈ ವರ್ಷ ಆದ್ಯತಾ ವಲಯದ ಎಂದು ಗುರುತಿಸಲಾದ 9 ವಲಯಗಳ ಪೈಕಿ ಕೃಷಿ ವಲಯ ಕೂಡಾ ಸೇರಿದೆ. ಈ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಬಳಕೆ, ಖಾಸಗಿ ವಲಯದ ಸೇರ್ಪಡೆ ಮತ್ತು ಸರ್ಕಾರದ ನೆರವಿನ ಮೂಲಕ ಕೃಷಿ ವಲಯಕ್ಕೆ ಹೊಸ ದಿಕ್ಕು ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿತ ವಲಯಕ್ಕೆ ಭರ್ಜರಿ 1.52 ಲಕ್ಷ ಕೋಟಿ ರು. ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ.

ಕೃಷಿ ಸಂಶೋಧನೆಯಲ್ಲಿ ಹೊಸ ಬದಲಾವಣೆ
ಕೃಷಿ ಉತ್ಪಾದಕತೆ ಹೆಚ್ಚಳ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ ತಳಿಗಳ ಅಭಿವೃದ್ಧಿ ನಿಟ್ಟಿನಲ್ಲಿ, ಹಾಲಿ ಜಾರಿಯಲ್ಲಿರುವ ಕೃಷಿ ಸಂಶೋಧನಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಇಂಥ ಸಂಶೋಧನೆಗೆ ಅಗತ್ಯವಾದ ಹಣಕಾಸಿನ ನೆರವನ್ನು ಸರ್ಕಾರ ನೀಡಲಿದೆ. ಇದಕ್ಕೆ ಚಾಲೆಂಜ್‌ ಮಾದರಿಯನ್ನು ಬಳಸಿಕೊಳ್ಳಲಾಗುವುದು. ಈ ಯೋಜನೆಯಲ್ಲಿ ಖಾಸಗಿ ವಲಯವನ್ನೂ ಬಳಸಿಕೊಳ್ಳಲಾಗುವುದು. ಇಂಥ ಸಂಶೋಧನೆಗಳ ಮೇಲೆ ಸರ್ಕಾರ ಮತ್ತು ಖಾಸಗಿ ವಲಯದ ವಿಷಯ ತಜ್ಞರು ಕಣ್ಗಾವಲು ಇಡಲಿದ್ದಾರೆ.

Latest Videos

undefined

ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್, ದೇಶದ ಜನತೆಗೆ ಮೋದಿ ಅಭಿನಂದನೆ!

ಹೊಸ ತಳಿಗಳ ಬಿಡುಗಡೆ
ಕೃಷಿ ಮತ್ತು ತೋಟಕಾರಿಕೆ ವಲಯದ 32 ಬೆಳೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಉತ್ಪಾದಕತೆ ಹೊಂದಿರುವ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವ 109 ತಳಿಗಳನ್ನು ಕೃಷಿಕರ ಬಳಕೆಗೆ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ.

ನೈಸರ್ಗಿಕ ಕೃಷಿ
ನೈಸಗಿಕ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ 2 ವರ್ಷಗಳ ಅವಧಿಯಲ್ಲಿ ದೇಶವ್ಯಾಪಿ 1 ಕೋಟಿ ರೈತರನ್ನು ನೈಸಗಿಕ ಕೃಷಿಗೆ ಒಳಪಡಿಸಲಾಗುವುದು. ಇಂಥ ರೈತರಿಗೆ ತರಬೇತಿ ಮತ್ತು ಬ್ರ್ಯಾಂಡಿಂಗ್‌ ಮೂಲಕ ಸರ್ಕಾರ ನೆರವು ನೀಡಲಿದೆ. ಆಸಕ್ತ ಗ್ರಾಮ ಪಂಚಾಯತ್‌ಗಳಲ್ಲಿ ತಾಂತ್ರಿಕ ಸಂಸ್ಥೆಗಳ ಮೂಲಕ ಯೋಜನೆ ಜಾರಿಗೊಳಿಸಲಾಗುವುದು. ಜೊತೆಗೆ ಇಂಥ ನೈಸರ್ಗಿಕ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ನೈಸರ್ಗಿಕ ರಸಗೊಬ್ಬರ ಮತ್ತು ಔಷಧಗಳನ್ನು ತಯಾರಿಸಲು ದೇಶವ್ಯಾಪಿ 10000 ಕೇಂದ್ರಗಳನ್ನು ಅಗತ್ಯ ಮತ್ತು ಬೇಡಿಕೆಗೆ ಅನುಸಾರವಾಗಿ ತೆರೆಯಲೂ ಸರ್ಕಾರ ನಿರ್ಧರಿಸಿದೆ.

ಧವಸ, ಎಣ್ಣೆಕಾಳು ಸ್ವಾವಲಂಬನೆಗೆ ಯೋಜನೆ
ಧವಸ ಮತ್ತು ಎಣ್ಣೆಕಾಳು ವಿಷಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅವುಗಳ ಉತ್ಪಾದನೆ, ಸಂಗ್ರಹ ಮತ್ತು ಮಾರುಕಟ್ಟೆಯನ್ನು ಬಲಪಡಿಸಲಾಗುವುದು. ಕಳೆದ ಮಧ್ಯಂತರ ಬಜೆಟ್‌ನಲ್ಲಿ ಈ ಕುರಿತು ಮಾಡಲಾದ ಘೋಷಣೆಗಳ ಜಾರಿಗೆ ಅಗತ್ಯ ಕಾರ್ಯತಂತ್ರವನ್ನು ಜಾರಿಗೊಳಿಸಲಾಗುತ್ತಿದೆ. ಸಾಸುವೆ, ಶೇಂಗಾ, ಎಳ್ಳು, ಸೋಯಾಬಿನ್‌ ಮತ್ತು ಸೂರ್ಯಕಾಂತಿ ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬನೆ ಮೂಲಕ ಆತ್ಮನಿರ್ಭರತೆಯತ್ತ ಹೆಜ್ಜೆ ಇಡಲು ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ಹೇಳಿದೆ.

ತರಕಾರಿ ಉತ್ಪಾದನೆ ಮತ್ತು ಸಾಗಣೆ ವ್ಯವಸ್ಥೆ
ಹೆಚ್ಚು ತರಕಾರಿ ಬಳಕೆ ಮಾಡುವ ಪ್ರದೇಶಗಳ ಸಮೀಪದಲ್ಲೇ ಬೃಹತ್‌ ತರಕಾರಿ ಬೆಳೆಯುವ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಹೀಗೆ ಬೆಳೆದ ತರಕಾರಿ ಸಂಗ್ರಹ, ಸಾಗಾಟ ಮತ್ತು ಮಾರುಕಟ್ಟೆ ವ್ಯವಸ್ಥೆಗಾಗಿ ರೈತರು, ಉತ್ಪಾದಕರ ಸಂಸ್ಥೆಗಳು, ಸಹಕಾರ ಸಂಘಗಳು ಮತ್ತು ಸ್ಟಾರ್ಟಪ್‌ಗಳ ಪಾಲುದಾರಿಕೆಯನ್ನು ಸರ್ಕಾರ ಪ್ರೋತ್ಸಾಹಿಸಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ರೈತರು, ಭೂಮಿ ಮಾಹಿತಿ ಡಿಜಿಟಲೀಕರಣ
ಕೃಷಿ ವಲಯದಲ್ಲೂ ಸಾರ್ವತ್ರಿಕ ಡಿಜಿಟಲ್‌ ಮೂಲಸೌಕರ್ಯ (ಡಿಪಿಐ) ಕಲ್ಪಿಸುವ ಪ್ರಾಯೋಗಿಕ ಯೋಜನೆಗಳು ಯಶಸ್ವಿಯಾಗಿವೆ. ಹೀಗಾಗಿ ರಾಜ್ಯಗಳ ಸಹಭಾಗಿತ್ವದಲ್ಲಿ ದೇಶವ್ಯಾಪಿ ಈ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ರೈತರು ಮತ್ತು ಅವರ ಭೂಮಿಯ ದಾಖಲೆಗಳನ್ನು ಡಿಜಿಟಲೀಕರಗೊಳಿಸಲಾಗುವುದು. ಪ್ರಸಕ್ತ ವರ್ಷ ಡಿಪಿಐ ಯೋಜನೆಯಡಿ ಡಿಜಿಟಲ್‌ ಸ್ವರೂಪದಲ್ಲಿ ಮುಂಗಾರು ಬೆಳೆಗಳ ಸಮೀಕ್ಷೆಯನ್ನು 400 ಜಿಲ್ಲೆಗಳಲ್ಲಿ ನಡೆಸಲಾಗುವುದು. 6 ಕೋಟಿ ರೈತರು ಮತ್ತು ಅವರ ಭೂಮಿಯ ಕುರಿತ ಮಾಹಿತಿಯನ್ನು ಈ ವರ್ಷ ಡಿಜಿಟಲೀಕರಣಗೊಳಿಸಲಾಗುವುದು. ಜೊತೆಗೆ ಜನ ಸಮರ್ಥ್‌ ಆಧರಿತ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ವಿತರಣೆಯನ್ನು ಇನ್ನೂ 5 ರಾಜ್ಯಗಳಿಗೆ ವಿಸ್ತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸೀಗಡಿ ಉತ್ಪಾದನೆ ಮತ್ತು ರಫ್ತು
ಸೀಗಡಿ ಉತ್ಪಾದಕತೆ ಹೆಚ್ಚಿಸಲು ಅಗತ್ಯವಾದ ಸೀಗಡಿ ಮೀನು ಮರಿಗಳ ಉತ್ಪಾದನಾ ಕೇಂದ್ರ ಆರಂಭಿಸಲು ಸರ್ಕಾರ ಹಣಕಾಸಿನ ನೆರವು ನೀಡಲಿದೆ. ಇದಲ್ಲದೇ ಸೀಗಡಿ ಮೀನು ಉತ್ಪಾದನೆ ಸಂಸ್ಕರಣೆ ಮತ್ತು ರಫ್ತು ಮಾಡುವ ಕಂಪನಿಗಳಿಗೆ ನಬಾರ್ಡ್‌ ಮೂಲಕ ನೆರವು ನೀಡಲಾಗುವುದು.

Union Budget 2024 ಬಜೆಟ್ ಮಂಡನೆ ಬೆನ್ನಲ್ಲೇ ಕುಸಿದ ಷೇರು ಮಾರುಕಟ್ಟೆ, ಹೂಡಿಕೆದಾರರಿಗೆ ನಿರಾಸೆ!

ರಾಷ್ಟ್ರೀಯ ಸಹಕಾರಿ ನೀತಿ
ಸಹಕಾರ ವಲಯದಲ್ಲಿ ವ್ಯವಸ್ಥಿತ, ಕ್ರಮಬದ್ಧ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ, ರಾಷ್ಟ್ರೀಯ ಸಹಕಾರಿ ನೀತಿ ಜಾರಿಗೊಳಿಸಲಾಗುವುದು ಎಂದು ಸರ್ಕಾರ ಹೇಳಿದೆ. ಈ ನೀತಿಯ ಮೂಲಕ ಗ್ರಾಮೀಣ ಆರ್ಥಿಕತೆಗೆ ಚೇತರಿಕೆ ನೀಡುವ ಮತ್ತು ಉದ್ಯೋಗ ಸೃಷ್ಟಿಯ, ದೊಡ್ಡ ಮಟ್ಟದಲ್ಲಿ ಅವಕಾಶ ಸೃಷ್ಟಿಯ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.

click me!