ಈ ಬಾರಿ ಪೂರ್ಣ ಬಜೆಟ್‌ ಅಲ್ಲ, ಲೇಖಾನುದಾನ ಮಾತ್ರ!: ಏಕೆ ಗೊತ್ತಾ?

By Web DeskFirst Published Feb 1, 2019, 8:40 AM IST
Highlights

ಫೆ.1ರ ಶುಕ್ರವಾರ ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದು ಹಣಕಾಸು ಬಜೆಟ್‌ ಅಲ್ಲ. ಲೇಖಾನುದಾನ ಅಥವಾ ಮಧ್ಯಂತರ ಬಜೆಟ್‌. ಹಾಗಾದ್ರೆ ಪೂರ್ಣ ಬಜೆಟ್ ಹಾಗೂ ಮಧ್ಯಂತರ ಬಜೆಟ್‌ಗಿರುವ ವ್ಯತ್ಯಾಸ ಏನು? ಇಲ್ಲಿದೆ ವಿವರ

ನವದೆಹಲಿ[ಫೆ.01]: ಕೇಂದ್ರ ಸರ್ಕಾರ ಫೆ.1ರ ಶುಕ್ರವಾರ ಮಂಡನೆ ಮಾಡುತ್ತಿರುವುದು ಹಣಕಾಸು ಬಜೆಟ್‌ ಅಲ್ಲ. ಲೇಖಾನುದಾನ ಅಥವಾ ಮಧ್ಯಂತರ ಬಜೆಟ್‌. ಲೋಕಸಭೆ ಚುನಾವಣೆ ಮುಗಿದ ಬಳಿಕ ಅಸ್ತಿತ್ವಕ್ಕೆ ಬರುವ ಸರ್ಕಾರ ಸಂಪೂರ್ಣ ಆಯವ್ಯಯವನ್ನು ಮಂಡಿಸಬೇಕಾಗುತ್ತದೆ. ಬಹುಶಃ ಜುಲೈನಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ.

ಸಾಮಾನ್ಯವಾಗಿ ನಿರ್ಗಮಿತ ಸರ್ಕಾರಗಳು ಲೇಖಾನುದಾನದ ಮೊರೆ ಹೋಗುತ್ತವೆ. ಏಪ್ರಿಲ್‌ 1ರಿಂದ ಹಣಕಾಸು ವರ್ಷ ಆರಂಭವಾಗುತ್ತದೆಯಾದರೂ, ಹಾಲಿ ನರೇಂದ್ರ ಮೋದಿ ಸರ್ಕಾರದ 5 ವರ್ಷಗಳ ಅವಧಿ ಮೇ ತಿಂಗಳಲ್ಲಿ ಅಂತ್ಯಗೊಳ್ಳುತ್ತದೆ. ಹಣಕಾಸು ವರ್ಷ ಆರಂಭದ ಬಳಿಕ ಸುಮಾರು 2 ತಿಂಗಳು ಅಧಿಕಾರದಲ್ಲಿರುವ ಸರ್ಕಾರ, ಒಂದಿಡೀ ವರ್ಷದ ಬಜೆಟ್‌ ಮಂಡನೆ ಮಾಡಿದರೆ, ಮುಂದೆ ಬರುವ ಸರ್ಕಾರದ ನೀತಿ- ನಿರೂಪಣೆಗೆ ಅಡ್ಡಿಪಡಿಸಿದಂತಾಗುತ್ತದೆ. ಅದರ ಬದಲಾಗಿ ತಾನು ಇರುವಷ್ಟುಅವಧಿಗೆ ಹಾಗೂ ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಭಾರತ ಸರ್ಕಾರದ ಕ್ರೋಢೀಕೃತ ನಿಧಿಯಿಂದ ಹಣ ಪಡೆದು, ಖರ್ಚು ಮಾಡಲು ಲೇಖಾನುದಾನದ ಮೊರೆ ಹೋಗುತ್ತದೆ. ಇಂತಿಷ್ಟುಅವಧಿಗೆ ಹಣ ಖರ್ಚು ಮಾಡಲು ಸಂಸತ್ತಿನ ಒಪ್ಪಿಗೆ ಪಡೆಯುವ ಪ್ರಕ್ರಿಯೆಯನ್ನು ಲೇಖಾನುದಾನ ಅಥವಾ ಮಧ್ಯಂತರ ಬಜೆಟ್‌ ಎನ್ನಲಾಗುತ್ತದೆ.

ಸಾಮಾನ್ಯವಾಗಿ, ಸರ್ಕಾರಗಳು ಬಜೆಟ್‌ ಮಂಡನೆ ಮಾಡಿದರೆ ಅದರ ಬಗ್ಗೆ ಸದನದಲ್ಲಿ ಚರ್ಚೆ ನಡೆದು, ಹಣಕಾಸು ಮಸೂದೆ ಅಂಗೀಕಾರವಾಗುತ್ತದೆ. ಹಣ ಖರ್ಚು ಮಾಡಲು ಒಪ್ಪಿಗೆ ಸಿಗುತ್ತದೆ. ಆದರೆ ಲೇಖಾನುದಾನದಲ್ಲಿ ಈ ರೀತಿ ಚರ್ಚೆ ಇರುವುದಿಲ್ಲ.

ಕೇವಲ 2 ತಿಂಗಳ ಅವಧಿಗಾಗಿ ಸರ್ಕಾರ ಈ ಕಸರತ್ತು ನಡೆಸದೇ ಹಾಗೇ ಬಿಟ್ಟುಬಿಟ್ಟರೆ ಏನಾದೀತು? ಎಂಬ ಪ್ರಶ್ನೆ ಏಳಬಹುದು. ಆದರೆ ಹಾಗೆ ಮಾಡುವುದರಿಂದ ಏ.1ರ ನಂತರ ಖರ್ಚು- ವೆಚ್ಚಗಳಿಗೆ ಹಣ ಪಡೆಯುವ ಅಧಿಕಾರ ಸರ್ಕಾರಕ್ಕೆ ಇರುವುದಿಲ್ಲ. ಹೀಗಾದಲ್ಲಿ ಸರ್ಕಾರಿ ನೌಕರರ ಸಂಬಳ, ವಿವಿಧ ಯೋಜನೆಗಳಿಗೆ ಹಣ, ಇತ್ಯಾದಿ ಖರ್ಚುಗಳಿಗೆ ಬ್ರೇಕ್‌ ಬೀಳುತ್ತದೆ. ಅದನ್ನು ತಪ್ಪಿಸುವ ಸಲುವಾಗಿ ಲೇಖಾನುದಾನ ಪಡೆದುಕೊಳ್ಳಲಾಗುತ್ತದೆ. ಚುನಾವಣೆ ಬಳಿಕ ಅಧಿಕಾರಕ್ಕೇರುವ ಸರ್ಕಾರ ಹೊಸದಾಗಿ ಬಜೆಟ್‌ ಮಂಡನೆ ಮಾಡುತ್ತದೆ. ಹಾಲಿ ಇರುವ ಸರ್ಕಾರವೇ ಪುನರಾಯ್ಕೆಯಾದರೂ ಬಜೆಟ್‌ ಮಂಡನೆ ಮಾಡುವ ಸಂಪ್ರದಾಯವಿದೆ.

click me!