ಚೀನಾದಲ್ಲಿ ಇಲಾನ್ ಮಸ್ಕ್: ಭಾರತದಿಂದ ದೂರಾಗುತ್ತಿದೆಯೇ ಟೆಸ್ಲಾ ಗಮನ?

By Suvarna NewsFirst Published Apr 29, 2024, 3:38 PM IST
Highlights

2019ರಲ್ಲಿ ಆರಂಭಗೊಂಡ ಟೆಸ್ಲಾದ ಶಾಂಘಾಯ್ ಘಟಕ, ಇಂದು ಜಗತ್ತಿನಲ್ಲಿ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿರುವ ಟೆಸ್ಲಾ ಕಾರ್ಖಾನೆಯಾಗಿದೆ. ಲೀ ಅವರೊಡನೆ ಭಾನುವಾರ ನಡೆಸಿದ ಮಾತುಕತೆಯ ವೇಳೆ, ಎಲಾನ್ ಮಸ್ಕ್ ಅವರು ಈ ಸಾಧನೆಯನ್ನು ವಿವರಿಸಿ, ಇದಕ್ಕೆ ಚೀನಾದ ತಂಡದ ಕಠಿಣ ಪರಿಶ್ರಮ ಮತ್ತು ಬುದ್ಧಿಮತ್ತೆ ಕಾರಣವಾಗಿದೆ ಎಂದಿದ್ದಾರೆ ಎಂದು ಸಿಸಿಟಿವಿ ವರದಿ ಮಾಡಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಟೆಸ್ಲಾ ಸಂಸ್ಥೆಯ ಸಿಇಒ ಆಗಿರುವ ಇಲಾನ್ ಮಸ್ಕ್ ಅವರು ಭಾನುವಾರ ಅನಿರೀಕ್ಷಿತವಾಗಿ ಚೀನಾಗೆ ಭೇಟಿ ನೀಡಿದ್ದಾರೆ. ಬೀಜಿಂಗ್‌ನಲ್ಲಿ ವಿಮಾನದಿಂದಿಳಿದ ಮಸ್ಕ್, ಕೆಲ ಸಮಯದಲ್ಲೇ ಚೀನಾದ ಪ್ರೀಮಿಯರ್ ಲಿ ಕಿಯಾಂಗ್‌ ಅವರನ್ನು ಭೇಟಿಯಾದರು. ಇಲಾನ್ ಮಸ್ಕ್ ಅವರು ಕಳೆದ ವಾರ ತನ್ನ ಬಹು ನಿರೀಕ್ಷಿತ ಭಾರತ ಭೇಟಿಯನ್ನು ಟೆಸ್ಲಾದ ಒಂದಷ್ಟು ಅನಿವಾರ್ಯ ಕಾರ್ಯಗಳ ಕಾರಣದಿಂದ ಮುಂದೂಡಿದ್ದರು. ಇದು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಟೆಸ್ಲಾದ ಆದ್ಯತೆಗಳು ಬದಲಾಗುತ್ತಿವೆಯೇ ಎಂಬ ಅನುಮಾನಗಳು ಮೂಡಲು ಕಾರಣವಾಗಿದೆ.

ಈ ಸಭೆಯ ಸಂದರ್ಭದಲ್ಲಿ, ಚೀನಾದ ಪ್ರೀಮಿಯರ್ ವಿದೇಶೀ ಸಂಸ್ಥೆಗಳನ್ನು ಚೀನಾಗೆ ಆಗಮಿಸುವಂತೆ ಆಹ್ವಾನಿಸಿದರು. ಚೀನಾ ಮತ್ತು ಅಮೆರಿಕಾ ನಡುವೆ ಯಶಸ್ವಿ ವ್ಯಾಪಾರ ಸಂಬಂಧ ಏರ್ಪಡುವಲ್ಲಿ ಟೆಸ್ಲಾ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಅಭಿಪ್ರಾಯ ಪಟ್ಟರು. ತನ್ನ ಭೇಟಿಯ ಸಂದರ್ಭದಲ್ಲಿ, ಮಸ್ಕ್ ಅವರು ಚೀನಾದ ಜೊತೆಗಿನ ವ್ಯಾಪಾರ ಸಂಬಂಧವನ್ನು ಇನ್ನಷ್ಟು ಗಾಢವಾಗಿಸಲು ಟೆಸ್ಲಾ ಆಸಕ್ತಿ ಹೊಂದಿದೆ ಎಂದಿದ್ದಾರೆ ಎಂಬುದಾಗಿ ಚೈನಾ ಸೆಂಟ್ರಲ್ ಟೆಲಿವಿಷನ್ (ಸಿಸಿಟಿವಿ) ವರದಿ ಮಾಡಿದೆ. ಮಸ್ಕ್ ಅವರು ಚೈನಾ ಕೌನ್ಸಿಲ್ ಫಾರ್ ಪ್ರೊಮೋಷನ್ ಆಫ್ ಇಂಟರ್ನ್ಯಾಷನಲ್ ಟ್ರೇಡ್‌ನ ರೆನ್ ಹಾಂಗ್‌ಬಿನ್ ಅವರೊಡನೆ ನಡೆಸಿದ ಪ್ರತ್ಯೇಕ ಮಾತುಕತೆಯಲ್ಲೂ ಈ ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ

ಪ್ರಸ್ತುತ ತನ್ನ ವಿದ್ಯುತ್ ಚಾಲಿತ ವಾಹನಗಳ ಬೇಡಿಕೆ ಕಡಿಮೆಯಾಗಿರುವುದರಿಂದ, ಟೆಸ್ಲಾ ವೆಚ್ಚ ಕಡಿತಗೊಳಿಸುವ ಕ್ರಮಗಳಿಗೆ ಮುಂದಾಗಿದ್ದು, ತನ್ನ ಜಾಗತಿಕ ಉದ್ಯೋಗಿಗಳ ಪ್ರಮಾಣದಲ್ಲಿ 10% ಕಡಿತಗೊಳಿಸಲು ಉದ್ದೇಶಿಸಿದೆ. ಈ ಕಾರಣಗಳಿಂದಾಗಿ ಟೆಸ್ಲಾ ಒಂದು ನಿರ್ಣಾಯಕ ಸನ್ನಿವೇಶದಲ್ಲಿದೆ. ಮಸ್ಕ್ ಅವರು ಚೀನಾದಲ್ಲಿ ತಮ್ಮ ವ್ಯವಹಾರಗಳನ್ನು ಮುಂದುವರಿಸಿದ್ದು, ಅದರಲ್ಲಿ ಟೆಸ್ಲಾದ ಸಂಪೂರ್ಣ ಸ್ವಯಂಚಾಲಿತ ಚಾಲನೆ (ಫುಲ್ ಸೆಲ್ಫ್ ಡ್ರೈವಿಂಗ್ - ಎಫ್ಎಸ್‌ಡಿ) ಸಾಫ್ಟ್‌ವೇರ್ ಮತ್ತು ಚೀನಾದಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಕುರಿತ ಮಾತುಕತೆಗಳು ಸೇರಿವೆ. ಇದು ಚೀನಾದ ಮಾರುಕಟ್ಟೆಯ ಮಹತ್ವವನ್ನು ವಿವರಿಸುತ್ತಿದ್ದು, ಟೆಸ್ಲಾ ಚೀನೀ ಮಾರುಕಟ್ಟೆಯಲ್ಲಿ ತನ್ನ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ.

ಚೀನಾ ವಿದ್ಯುತ್ ಚಾಲಿತ ವಾಹನಗಳನ್ನು ಅಪಾರವಾಗಿ ಬೆಂಬಲಿಸುತ್ತಿರುವುದು ಮತ್ತು ಚೀನಾದ ಬೃಹತ್ ಮಾರುಕಟ್ಟೆ ಚೀನಾವನ್ನು ಟೆಸ್ಲಾಗೆ ಪ್ರಮುಖ ತಾಣವನ್ನಾಗಿಸಿದೆ. ಚೀನೀ ಸರ್ಕಾರ ವಿವಿಧ ಪ್ರೋತ್ಸಾಹಕಗಳ ಮೂಲಕ ಇವಿ ಉತ್ಪಾದಕರಿಗೆ ಪೂರಕ ವಾತಾವರಣವನ್ನು ಕಲ್ಪಿಸಿದ್ದು, ತೀವ್ರ ಸ್ಪರ್ಧೆಯ ನಡುವೆಯೂ ಚೀನಾ ಪ್ರಮುಖ ಮಾರುಕಟ್ಟೆಯಾಗಿ ಉಳಿದಿದೆ.

ಚೀನಾದ ಸ್ಥಳೀಯ ಕಂಪನಿಗಳಾದ ಎಕ್ಸ್‌ಪೆಂಗ್ ಇಂಕ್, ಮತ್ತಿತರ ಸಂಸ್ಥೆಗಳು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ಎನ್ನಲಾಗುವ ತಮ್ಮದೇ ಆದ ಸ್ವಾಯತ್ತ ಚಾಲನಾ ಪರಿಹಾರಗಳನ್ನು ರೂಪಿಸುತ್ತಿದ್ದು, ಇವು ಚೀನಾದಲ್ಲಿ ಹೆಚ್ಚು ಹೆಚ್ಚು ಮೌಲ್ಯ ಪಡೆದುಕೊಳ್ಳುತ್ತಿವೆ. ಎಕ್ಸ್‌ಪೆಂಗ್, ಶವೋಮಿ ಕಾರ್ಪ್, ಹುವಾವೇ ಟೆಕ್ನಾಲಜೀಸ್ ಕೋ ನಂತಹ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಆಧುನಿಕ ತಂತ್ರಜ್ಞಾನಗಳಿಗೆ ಒತ್ತು ನೀಡುತ್ತಿರುವುದರಿಂದ, ಟೆಸ್ಲಾದ ಮಾರುಕಟ್ಟೆ ಪಾಲು ಕಡಿಮೆಯಾಗುತ್ತಿದೆ. ಅದರೊಡನೆ, ಇತರ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ದರ ಕಡಿತ ಮಾಡುವುದರಿಂದ, ಅಮೆರಿಕನ್ ಸಂಸ್ಥೆಯಾದ ಟೆಸ್ಲಾಗೂ ದರ ಕಡಿತಗೊಳಿಸುವತ್ತ ಆಲೋಚಿಸುವುದು ಅನಿವಾರ್ಯವಾಗುತ್ತಿದೆ.

2019ರಲ್ಲಿ ಆರಂಭಗೊಂಡ ಟೆಸ್ಲಾದ ಶಾಂಘಾಯ್ ಘಟಕ, ಇಂದು ಜಗತ್ತಿನಲ್ಲಿ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿರುವ ಟೆಸ್ಲಾ ಕಾರ್ಖಾನೆಯಾಗಿದೆ. ಲೀ ಅವರೊಡನೆ ಭಾನುವಾರ ನಡೆಸಿದ ಮಾತುಕತೆಯ ವೇಳೆ, ಎಲಾನ್ ಮಸ್ಕ್ ಅವರು ಈ ಸಾಧನೆಯನ್ನು ವಿವರಿಸಿ, ಇದಕ್ಕೆ ಚೀನಾದ ತಂಡದ ಕಠಿಣ ಪರಿಶ್ರಮ ಮತ್ತು ಬುದ್ಧಿಮತ್ತೆ ಕಾರಣವಾಗಿದೆ ಎಂದಿದ್ದಾರೆ ಎಂದು ಸಿಸಿಟಿವಿ ವರದಿ ಮಾಡಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಮಸ್ಕ್ ಅವರ ಭಾರತ ಭೇಟಿ ಮುಂದೂಡಲ್ಪಟ್ಟಿದ್ದು, ವಿಭಿನ್ನವಾದ ಸವಾಲುಗಳು ಮತ್ತು ಕಾರ್ಯತಂತ್ರದ ಲೆಕ್ಕಾಚಾರಗಳ ಸಾಧ್ಯತೆಗಳನ್ನು ತೋರುತ್ತಿವೆ. ಭಾರತದ ಮಾರುಕಟ್ಟೆ ಆಶಾದಾಯಕವಾಗಿದ್ದರೂ, ಟೆಸ್ಲಾದ ಆಗಮನಕ್ಕೆ ಪೂರಕವಾಗುವಂತಹ ನೂತನ ಇವಿ ನೀತಿಯನ್ನು ಜಾರಿಗೆ ತರುವ ಸಾಧ್ಯತೆಗಳಿದ್ದರೂ, ಹೆಚ್ಚಿನ ಆಮದು ಸುಂಕ, ಅಸಮರ್ಪಕ ಚಾರ್ಜಿಂಗ್ ವ್ಯವಸ್ಥೆಗಳು, ಮತ್ತು ಕಡಿಮೆ ಬೆಲೆಯ ಕಾರುಗಳನ್ನು ಆಯ್ಕೆ ಮಾಡುವ ಜನರ ಮನಸ್ಥಿತಿಗಳು ಟೆಸ್ಲಾಗೆ ಸಂಭಾವ್ಯ ಅಡೆತಡೆಗಳಾಗಿವೆ.

ಅದರೊಡನೆ, ಭಾರತ ಈಗ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದು, ಇದರ ಫಲಿತಾಂಶ ಏನಾಗಬಹುದು ಮತ್ತು ಅದರ ಪರಿಣಾಮ ಇವಿ ನೀತಿಯ ಮೇಲೆ ಹೇಗೆ ಬೀರಬಹುದು ಎಂಬ ಸಂದೇಹಗಳು ಟೆಸ್ಲಾದ ಕಾರ್ಯತಂತ್ರವನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಒಂದು ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಮರಳಿ ಅಧಿಕಾರಕ್ಕೆ ಬಂದರೆ, ಆಗ ಸರ್ಕಾರದ ನೀತಿಗಳಲ್ಲಿ ಮಹತ್ವದ ಬದಲಾವಣೆಗಳು ತಲೆದೋರಿ, ಹೆಚ್ಚು ತೀವ್ರ ಸಬ್ಸಿಡಿಗಳು ಮತ್ತು ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹಕಗಳಂತಹ ಕ್ರಮಗಳಿಂದ ಇವಿ ಉದ್ಯಮ ಇನ್ನಷ್ಟು ಬದಲಾಗಬಹುದು. ಭಾರತ ಈಗ ಲೋಕಸಭಾ ಚುನಾವಣೆಯಲ್ಲಿ ವ್ಯಸ್ತವಾಗಿದ್ದು, ನವದೆಹಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಆದ್ದರಿಂದ ಯಾವುದೇ ನೂತನ ಆರ್ಥಿಕ ನೀತಿಗಳನ್ನು ಸರ್ಕಾರ ಘೋಷಿಸಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಎಲಾನ್ ಮಸ್ಕ್ ತನ್ನ ಭಾರತ ಭೇಟಿಯನ್ನು ಮುಂದೂಡಿರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿಯ ಪ್ರಕಾರ, ಟೆಸ್ಲಾ ಸಿಇಒ ಮಸ್ಕ್ ಅವರು ಎಪ್ರಿಲ್ 22ರ ಬಳಿಕ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದರು. ಅವರ ಭೇಟಿಯ ವೇಳೆಗೆ, ಸಂಸ್ಥೆಯ ಇತರ ಅಧಿಕಾರಿಗಳೂ ಜೊತೆಯಾಗುವ ಸಾಧ್ಯತೆಗಳಿದ್ದವು. ಇಲಾನ್ ಮಸ್ಕ್ ಅವರು ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅತ್ಯಂತ ಉತ್ಸುಕನಾಗಿದ್ದೇನೆ ಎಂದೂ ಹೇಳಿಕೆ ನೀಡಿದ್ದರು. ಟೆಸ್ಲಾ ತನ್ನ ನೂತನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭಿಸಲು ಹೊಸ ತಾಣಕ್ಕಾಗಿ ಹುಡುಕಾಟ ನಡೆಸಿದೆ ಎಂಬ ಮಾತುಗಳ ನಡುವೆ ಈ ಸುದ್ದಿ ಹೊರಬಂದಿತ್ತು.

ಮಸ್ಕ್ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತನ್ನ ಭಾರತ ಭೇಟಿಯ ಕುರಿತು ಉತ್ಸಾಹ ವ್ಯಕ್ತಪಡಿಸಿದ್ದರು. ನರೇಂದ್ರ ಮೋದಿ ಮತ್ತು ಇಲಾನ್ ಮಸ್ಕ್ ಅವರು ಕೊನೆಯ ಬಾರಿಗೆ ಜೂನ್ 2023ರಲ್ಲಿ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ, ಮಸ್ಕ್ ಅವರು ಟೆಸ್ಲಾ ಸಾಧ್ಯವಾದಷ್ಟು ಬೇಗ ಭಾರತಕ್ಕೆ ಆಗಮಿಸಲಿದೆ ಎಂದಿದ್ದರು. ಅಂದಿನಿಂದ ಮಸ್ಕ್ ಅವರು ಇವಿಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆಗೊಳಿಸುವಂತೆ ಭಾರತ ಸರ್ಕಾರಕ್ಕೆ ಆಗ್ರಹಿಸುತ್ತಾ ಬಂದಿದ್ದಾರೆ.

ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧದ ವಿಶಾಲ ವಿಚಾರವೂ ಮಸ್ಕ್ ಅವರ ಚೀನಾ ಭೇಟಿಗೆ ಇನ್ನೊಂದು ಪದರವನ್ನು ಒದಗಿಸಿದೆ. ಚೀನಾದ ನಾಯಕರೊಡನೆ ಮಸ್ಕ್ ಈಗ ನೇರವಾಗಿ ವ್ಯವಹರಿಸುವುದರ ಮೂಲಕ, ಭೌಗೋಳಿಕ ರಾಜಕಾರಣದ ಉದ್ವಿಗ್ನತೆಗಳ ನಡುವೆಯೂ ಚೀನಾದೊಡನೆ ಉತ್ತಮ ವ್ಯವಹಾರ ಬಾಂಧವ್ಯ ಹೊಂದುವ ಬದ್ಧತೆ ವ್ಯಕ್ತಪಡಿಸಿದ್ದಾರೆ. ಆದರೆ ಟೆಸ್ಲಾದ ಔದ್ಯಮಿಕ ಹಿತಾಸಕ್ತಿಗಳನ್ನು ಇನ್ನಷ್ಟು ಉತ್ತಮಗೊಳಿಸುವ ಮತ್ತು ಅಮೆರಿಕಾ ಮತ್ತು ಚೀನಾ ಎರಡೂ ದೇಶಗಳ ಕಾನೂನು ಕ್ರಮಗಳನ್ನು ನಿರ್ವಹಿಸುವುದು ಒಂದು ಸೂಕ್ಷ್ಮ ವಿಚಾರವಾಗಿದೆ.

ಭಾರತೀಯ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಿದೆ ರಷ್ಯನ್ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್?

ಒಟ್ಟಾರೆಯಾಗಿ, ಇಲಾನ್ ಮಸ್ಕ್ ಅವರು ಭಾರತಕ್ಕಿಂತಲೂ ಚೀನಾವನ್ನು ತನ್ನ ಆದ್ಯತೆಯಾಗಿಸಿರುವುದು ಮಾರುಕಟ್ಟೆಯ ಆದ್ಯತೆಗಳು, ಉದ್ಯಮದ ಕಟ್ಟುಪಾಡುಗಳು ಮತ್ತು ಪ್ರಸ್ತುತ ಭೌಗೋಳಿಕ ರಾಜಕಾರಣದ ವಾತಾವರಣಕ್ಕೆ ಅನುಗುಣವಾಗಿಯೇ ಇವೆ. ಭಾರತ ಇಂದು ಒಂದು ಮಹತ್ವದ ಮಾರುಕಟ್ಟೆಯಾಗಿದ್ದರೂ, ಮಸ್ಕ್ ಅವರ ಸದ್ಯದ ಗಮನ ಚೀನಾದಲ್ಲಿ ಟೆಸ್ಲಾದ ಸ್ಥಾನವನ್ನು ಭದ್ರಗೊಳಿಸುವುದಾಗಿದೆ. ಟೆಸ್ಲಾ ಜಾಗತಿಕ ಇವಿ ಮಾರುಕಟ್ಟೆಯಲ್ಲಿ ಇನ್ನಷ್ಟು ಮುಂದುವರಿಯಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಇಲಾನ್ ಮಸ್ಕ್ ಅವರ ಕ್ರಮಗಳು ಟೆಸ್ಲಾದ ಜಾಗತಿಕ ಕಾರ್ಯತಂತ್ರಗಳಿಗೆ ಅವಶ್ಯಕವಾದ ಕುಶಲತೆ, ದೂರದೃಷ್ಟಿಗಳನ್ನು ತೋರಿಸುತ್ತಿವೆ. ಇಲಾನ್ ಮಸ್ಕ್ ಅವರ ಚೀನಾ ಭೇಟಿ ಕೇವಲ ಔದ್ಯಮಿಕ ಭೇಟಿಯಾಗಿರದೆ, ಟೆಸ್ಲಾದ ಜಾಗತಿಕ ಮಹತ್ವಾಕಾಂಕ್ಷೆಗಳಿಗೆ ದೀರ್ಘಕಾಲದಲ್ಲಿ ನೆರವಾಗುವ ಲೆಕ್ಕಾಚಾರದ ನಡೆಯಾಗಿದೆ.

click me!