ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕತೆ ಬಗ್ಗೆ ಭವಿಷ್ಯ ಒಂದನ್ನು ನುಡಿದಿದೆ. ಆರ್ಥಿಕತೆ ಭಾರೀ ಚೇತರಿಕೆ ಕಾಣಲಿದೆ ಎಂದು ಭವಿಷ್ಯ ನುಡಿದಿದೆ.
ಮುಂಬೈ (ಫೆ.06): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ತನ್ನ ದ್ವೈಮಾಸಿಕ ಸಾಲನೀತಿ ಪ್ರಕಟಿಸಿದ್ದು, ಸತತ 4ನೇ ಬಾರಿ ಬಡ್ಡಿ ದರಗಳನ್ನು ಬದಲಾಯಿಸದೆ ಯಥಾಸ್ಥಿತಿಯಲ್ಲಿ ಮುಂದುವರೆಸಿದೆ. ಇದೇ ವೇಳೆ, ಕೊರೋನಾ ನಂತರ ಆರ್ಥಿಕತೆ ಭಾರೀ ಚೇತರಿಕೆ ಕಾಣಲಿದೆ ಎಂದು ಭವಿಷ್ಯ ನುಡಿದಿದೆ.
ಹಣದುಬ್ಬರ ಏರಿಕೆಯಾಗುವ ಭೀತಿಯಿಂದ ಬಡ್ಡಿ ದರ ಬದಲಾವಣೆ ಮಾಡದಿರಲು ಹಣಕಾಸು ನೀತಿ ಸಮಿತಿಯ ಎಲ್ಲಾ 6 ಸದಸ್ಯರು ಏಕಮತದ ನಿರ್ಧಾರ ಕೈಗೊಂಡಿದ್ದಾರೆ. ಅದರೊಂದಿಗೆ ರೆಪೋ ದರ (ಆರ್‌ಬಿಐನಿಂದ ಬ್ಯಾಂಕುಗಳಿಗೆ ದೊರಕುವ ಹಣಕ್ಕೆ ವಿಧಿಸಲಾಗುವ ಬಡ್ಡಿ ದರ) ಶೇ.4ರಲ್ಲೇ ಮುಂದುವರೆಯಲಿದೆ. ಹೀಗಾಗಿ ಸದ್ಯಕ್ಕೆ ಸಾಲ ಮತ್ತು ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.
undefined
ಸಣ್ಣ ಹೂಡಿಕೆದಾರರೂ ಸರಕಾರಿ ಸಾಲ ಬಾಂಡ್ ಪಡೀಬಹುದು: RBI
ಇದೇ ವೇಳೆ, 2021ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯಾಗಲಿರುವ ದರವನ್ನು ಆರ್‌ಬಿಐ ಶೇ.10.5 ಎಂದು ಅಂದಾಜಿಸಿದೆ. ಇದು ಇತ್ತೀಚೆಗೆ ಕೇಂದ್ರ ಸರ್ಕಾರ ತನ್ನ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿರುವುದಕ್ಕಿಂತ ಶೇ.0.5ರಷ್ಟುಕಡಿಮೆ. ಹಾಗೆಯೇ, ಪ್ರಸಕ್ತ ಹಣಕಾಸು ವರ್ಷದ ಅಂತ್ಯದವರೆಗೆ ಚಿಲ್ಲರೆ ಹಣದುಬ್ಬರ ಶೇ.5.2ರಷ್ಟಿರಲಿದೆ ಎಂದೂ ಆರ್‌ಬಿಐ ಹೇಳಿದೆ.
ಕೊರೋನಾದ ನಂತರ ಭಾರತದ ಆರ್ಥಿಕತೆಯಲ್ಲಿ ಹಸಿರು ಚಿಗುರು ಕಾಣಿಸುತ್ತಿದೆ. ಇನ್ನುಮುಂದೆ ನಮ್ಮ ದೇಶದ ಆರ್ಥಿಕತೆ ಕೇವಲ ಮೇಲ್ಮುಖದಲ್ಲಿ ಮಾತ್ರ ಮುನ್ನಡೆಯುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕೂಡ ಇದಕ್ಕೆ ಪೂರಕವಾಗಿದೆ. 2021-22ನೇ ಸಾಲಿನಲ್ಲಿ ಭಾರತದ ಆರ್ಥಿಕತೆ ಶೇ.10.5ರಷ್ಟುಬೆಳವಣಿಗೆ ಕಾಣಲಿದೆ ಎಂದಿದ್ದಾರೆ.
ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ : ಎಲ್ಲಾ ಮಾದರಿಯ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು (ಬಿಟ್ ಕಾಯಿನ್ ಇತ್ಯಾದಿ) ನಿಷೇಧಿಸಿರುವ ಭಾರತ ಅಧಿಕೃತವಾಗಿ ತನ್ನದೇ ಆದ ಕ್ರಿಪ್ಟೋಕರೆನ್ಸಿಯನ್ನು ಹೊಂದುವ ದಿನಗಳು ಸನ್ನಿಹಿತವಾಗಿದೆ. ಈ ಕುರಿತು ಆರ್‌ಬಿಐನ ಆಂತರಿಕ ಸಮಿತಿ ಅತ್ಯಂತ ಶೀಘ್ರದಲ್ಲೇ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಆರ್‌ಬಿಐ ಉಪ ಗವರ್ನರ್ ಬಿ.ಪಿ.ಕನುಂಗೋ ತಿಳಿಸಿದ್ದಾರೆ.
ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಖಾಸಗಿ ಡಿಜಿಟಲ್ ಕರೆನ್ಸಿಗಳು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟುಜನಪ್ರಿಯತೆ ಗಳಿಸಿವೆ. ಆದರೆ, ಇವುಗಳ ಮೇಲೆ ಯಾರಿಗೂ ನಿಯಂತ್ರಣವಿಲ್ಲ. ಹೀಗಾಗಿ ಇಂತಹ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸುವ ಜನರು ಸಾಕಷ್ಟುರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಇವುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆಯಾಗುತ್ತಿದೆ. ಹೀಗಾಗಿ ಆರ್‌ಬಿಐನ ಮೇಲ್ವಿಚಾರಣೆಯಲ್ಲಿಯೇ ಡಿಜಿಟಲ್ ಕರೆನ್ಸಿಯೊಂದನ್ನು ಜಾರಿಗೊಳಿಸಲು ಭಾರತ ಮುಂದಾಗಿದೆ. ಈ ಕರೆನ್ಸಿಯು ಈಗಿರುವ ಸಾಮಾನ್ಯ ಕರೆನ್ಸಿಯ ಡಿಜಿಟಲ್ ರೂಪ ಆಗಿರಬೇಕೋ ಅಥವಾ ಸಂಪೂರ್ಣ ಬೇರೆಯದೇ ರೀತಿಯ ಕ್ರಿಪ್ಟೋಕರೆನ್ಸಿ ಆಗಿರಬೇಕೋ ಎಂಬುದನ್ನು ಆರ್‌ಬಿಐ ನಿರ್ಧರಿಸಬೇಕಿದೆ.