ಕರ್ನಾಟಕ ಬಜೆಟ್ 2020: ಉತ್ತರ ಕರ್ನಾಟಕದ ರೈತನ ಬೆನ್ನಿಗೆ ನಿಂತ ಯಡಿಯೂರಪ್ಪ

By Kannadaprabha NewsFirst Published Mar 6, 2020, 7:39 AM IST
Highlights

ಪ್ರಮುಖ ನೀರಾವರಿ ಯೋಜನೆಗಳಿಗೆ ಅಪಾರ ಹಣ | ತೋಟಗಾರಿಕೆಗೆ ಉತ್ತೇಜನ, ಸವಳು-ಜವಳು ನಿರ್ಮೂಲನೆಗೆ ಒತ್ತು| ಅಂತರ್ಜಲ ಪಾತಾಳಕ್ಕಿಳಿದಿರುವ ರಾಜ್ಯದ 76 ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಚಟುವಟಿಕೆಗಳಿಗಾಗಿ 4.75 ಲಕ್ಷ ಹೆಕ್ಟೇರುಗಳಿಗೆ 100 ಜಲಾನಯನ ನಿರ್ವಹಣಾ ಯೋಜನೆಗಳನ್ನು ಮಂಜೂರು ಮಾಡಿದೆ|

ಹುಬ್ಬಳ್ಳಿ[ಮಾ.06]: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯ ಮೇಲ್ನೊಟಕ್ಕೆ ‘ಜನಪ್ರಿಯ’ ಅನಿಸದಿದ್ದರೂ ಅನ್ನದಾತರಾದ ಕೃಷಿಕರು ಮತ್ತು ಕೃಷಿ ಕೂಲಿಕಾರರ ಬದುಕನ್ನು ತಳಮಟ್ಟದಿಂದ ಮೇಲೆತ್ತುವ ಪ್ರಯತ್ನಗಳನ್ನು ಹೊಂದಿದ್ದು, ಈ ಪ್ರಯತ್ನಗಳು ಮೇಲಿಂದ ಮೇಲೆ ಅತಿ ವೃಷ್ಟಿ-ಅನಾವೃಷ್ಟಿ ಎದುರಿಸುವ ಕರ್ನಾಟಕದ ಉತ್ತರ ಭಾಗಕ್ಕೆ ಹೆಚ್ಚು ಪ್ರಯೋಜನಕಾರಿ ಆಗಲಿವೆ. 

ರೈತರ ನಿರಂತರ ಪರಿಶ್ರಮದ ಫಲವಾಗಿ ನಮಗೆ ಆಹಾರ ಸಿಗುತ್ತಿದೆ. ನಮ್ಮ ಸರ್ಕಾರವು ರೈತರ ಕಲ್ಯಾಣ ಹಾಗೂ ಅವರ ಆದಾಯ ದ್ವಿಗುಣಗೊಳಿಸಲು ಬದ್ಧವಾಗಿದೆ. ಕೃಷಿ ವಲಯಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹೊಸ ಆಯಾಮ ನೀಡುವ ಮೂಲಕ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರ ಘೋಷಿಸಿದ ಹೊಸ ಯೋಜನೆಗಳ ಜೊತೆಗೆ, ತಜ್ಞರು ಹಾಗೂ ರೈತ ಮುಖಂಡರು ನೀಡಿರುವ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡಿದ್ದೇನೆ’ ಎಂದು ಹೇಳುವ ಮೂಲಕ ಸಿಎಂ ಯಡಿಯೂರಪ್ಪ ರೈತರ ಬಗೆಗಿನ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳಸಾ-ಬಂಡೂರಿ, ಕೃಷ್ಣಾ ಮೇಲ್ದಂಡೆ, ತುಂಗಾಭದ್ರಾ ಜಲಾಶಯ, ಏತ ನೀರಾವರಿ ಇತ್ಯಾದಿ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಶಪತ ಮಾಡಿದ್ದಾರೆ. ಅಂತರ್ಜಲ ಹೆಚ್ಚಳ, ಹನಿ ನೀರಾವರಿ ಮೂಲಕ ನೀರಿನ ಸದ್ಬಳಕೆ, ನೀರಿನ ಆಯವ್ಯಯ, ನೀರಿನ ಆಡಿಟ್, ನೀರಿನ ಕೊರತೆ ನೀಗಿಸುವ ಕಾರ್ಯತಂತ್ರದ ಅಡಿಯಲ್ಲಿ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಜಲಗ್ರಾಮ ಕ್ಯಾಲೆಂಡರ್, ಸವಳು-ಜವಳು ನಿರ್ಮೂಲನೆಗೂ ಒತ್ತು ನೀಡಿರುವುದು ಈ ವಲಯದ ರೈತರಲ್ಲಿ ಹೊಸ ಭರವಸೆ ಮೂಡಿದೆ. ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ ಪ್ರೋತ್ಸಾಹಿಸಲು ಸೂಕ್ಷ್ಮ ನೀರಾವರಿಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳು ಈ ಅಂಶಗಳನ್ನು ರೂಢಿಸಿಕೊಂಡು ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟಿವೆ. ಬಹು ವರ್ಷಗಳಿಂದ ಇಲ್ಲಿನ ರೈತರೂ ಇವುಗಳನ್ನು ಎದುರು ನೋಡುತ್ತಿದ್ದರು. ಸಾಮಾನ್ಯ ಕೃಷಿಕನಿಗೆ ತಟ್ಟನೇ ಇದು ಅರ್ಥವಾಗದೇ ಹೋದರೂ ಕೃಷಿಯ ಅಂತಸತ್ವವೇ ಇದಾಗಿದೆ. ಇದಕ್ಕೀಗ ಸರ್ಕಾರ ಹಸಿರು ನಿಶಾನೆ ತೋರಿರುವುದು ನಾಡಿನ ಕೃಷಿ ವಲಯ ಹೊಸ ದಿಕ್ಕಿನೆಡೆಗೆ ಸಾಗುವ ಎಲ್ಲ ಲಕ್ಷಣಗಳಿವೆ. 

ತೋಟಗಾರಿಕೆಯೂ ಉದ್ದಿಮೆ: 

ಕೃಷಿಯೂ ಒಂದು ಉದ್ಯಮ ಎಂದು ಪರಿಗಣನೆಯಾಗಬೇಕು ಎನ್ನುವುದು ಅತ್ಯಂತ ಹಳೆಯ ಕೂಗು. ವಿವಿಧ ಉತ್ಪನ್ನಗಳಿಗೆ ಆಯಾ ಉತ್ಪಾದಕರೇ ಬೆಲೆ ನಿಗದಿ ಮಾಡುವಂತೆ ಕೃಷಿ ಉತ್ಪನ್ನಗಳಿಗೆ ರೈತರೆ ಬೆಲೆ ನಿಗದಿ ಮಾಡುವಂತಾಗಬೇಕು. ಈ ಪ್ರಕ್ರಿಯೆಯಲ್ಲಿ ಭೂಮಿಯನ್ನು ಹೂಡು ಬಂಡವಾಳವಾಗಿ ಪರಿಗಣಿಸಬೇಕು ಎನ್ನುವ ಬೇಡಿಕೆಯನ್ನು ರೈತರು ಸರ್ಕಾರಗಳ ಮುಂದೆ ಇಡುತ್ತಲೇ ಬಂದಿದ್ದರು. ಅದನ್ನೀಗ ಯಡಿಯೂರಪ್ಪ ತಮ್ಮ ಬಜೆಟ್‌ನಲ್ಲಿ ಅಧಿಕೃತಗೊಳಿಸುವ ದಿಸೆಯಲ್ಲಿ ‘ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಯ ಪ್ರೋತ್ಸಾಹ, ಕೃಷಿ ಹಾಗೂ ತೋಟಗಾರಿಕೆಯನ್ನೂ ಉದ್ದಿಮೆಯಾಗಿ ಪರಿಗಣಿಸಲು ನಮ್ಮ ಸರ್ಕಾರವು ಹೊಸ ಕೃಷಿ ನೀತಿ ಜಾರಿಗೆ ತರಲಿದೆ’ ಎನ್ನುವ ಭರವಸೆ ನೀಡಿದ್ದಾರೆ. ಆಹಾರ ಸಂಸ್ಕರಣಾ ವಲಯದ ಬಲವರ್ಧನೆ ಮತ್ತು ಕೃಷಿ ಉತ್ಪನ್ನ ಆಧಾರಿತ ರಫ್ತುಗಳನ್ನು ಹೆಚ್ಚಿಸಲು ಕೃಷಿ ಮಹಾಮಂಡಳ, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆಗಳು ಮತ್ತು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ವಿಶ್ವೃಬ್ಯಾಂಕ್ ಪ್ರಾಯೋಜಿತ ಸುಜಲಾ ಯೋಜನೆಗಳನ್ನು 12 ಜಿಲ್ಲೆಗಳಲ್ಲಿನ ಮಳೆ ಆಶ್ರಿತ ಜಲಾನಯನ ಪ್ರದೇಶಗಳ 14 ಲಕ್ಷ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಈ ಬಜೆಟ್‌ನಲ್ಲಿದೆ. 

ಕರ್ನಾಟಕವು ತೋಟಗಾರಿಕಾ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಭಾರತದ ತೋಟಗಾರಿಕಾ ರಾಜ್ಯ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ತೋಟಗಾರಿಕೆ ಬೆಳೆಗಳ ಅಸಮರ್ಪಕ ಕೊಯ್ಲೋತ್ತರ ನಿರ್ವಹಣೆ ಹಾಗೂ ಶೀತಲ ಗೃಹಗಳ ಕೊರತೆಯಿಂದ ಆಗುತ್ತಿರುವ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಲು ಬೇಡಿಕೆ ಇರುವ ಜಿಲ್ಲೆಗಳ ಕೃ ಉತ್ಪನ್ನ ಮಾರುಕಟ್ಟೆಗಳಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ 10 ಶೀತಲ ಗೃಹಗಳನ್ನು 75 ಕೋಟಿ ವೆಚ್ಚದಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಶೇ.75 ರಷ್ಟು ಸಣ್ಣ ಹಾಗೂ ಅತೀ ಸಣ್ಣ ರೈತರಿದ್ದಾರೆ. ರಾಜ್ಯದ ಕೃಷಿ ಪದ್ಧತಿ ಬಹುತೇಕ ಮಳೆಯಾಧಾರಿತ ಆಗಿರುವುದರಿಂದ ತೋಟಗಾರಿಕಾ ಬೆಳೆಗಳ ಪ್ರದೇಶವನ್ನು ವಿಸ್ತರಿಸುವ ಸಾಧ್ಯತೆಗಳಿವೆ. 

ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳಲು ಸಣ್ಣ ಮತ್ತು ಅತೀ ಸಣ್ಣ ರೈತರು ಇಚ್ಛಿಸಿದಲ್ಲಿ ಅವರಿಗೆ ಬೀಜ, ರಸಗೊಬ್ಬರ ಖರೀದಿ, ಕೃಷಿ ಕಾರ್ಮಿಕರ ವೆಚ್ಚ ಭರಿಸಲು ಅನುಕೂಲವಾಗುವಂತೆ ಒಂದು ಸಮಗ್ರ ಯೋಜನೆಯನ್ನು ರೂಪಿಸಲಾಗುವುದು. ಈ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರು ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಂಡಲ್ಲಿ ಪ್ರತಿ ಹೆಕ್ಟೇರಿಗೆ 5000 ಗಳಂತೆ ಗರಿಷ್ಟ 10000 ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಕೊಳೆತು ಹೋಗಬಹುದಾದ ಹೂವು, ಹಣ್ಣು, ಟೊಮಾಟೋ, ಆಲೂಗಡ್ಡೆ, ಈರುಳ್ಳಿ, ಹೂಕೋಸು, ದಾಳಿಂಬೆ ಇತ್ಯಾದಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬೈ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯ ಉಪಯೋಗಿಸಲಿದೆ. 

ರೈತ, ಭೂಮಿ ಆರೈಕೆ: 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೇಂದ್ರ ಸರ್ಕಾರದ 6000 ಜೊತೆಗೆ ರಾಜ್ಯ ಸರ್ಕಾರವು 4000 ಹೆಚ್ಚುವರಿ ನೆರವನ್ನು ಘೋಷಿಸಿ, ಈವರೆಗೆ ಸುಮಾರು 41 ಲಕ್ಷ ಬ್ಯಾಂಕ್ ಖಾತೆಗಳಿಗೆ 825 ಕೋಟಿ ವರ್ಗಾಯಿಸಿದೆ. ಈ ಯೋಜನೆ ಮುಂದುವರೆಸಲು 2020-21 ನೇ ಸಾಲಿನಲ್ಲಿ 2600 ಕೋಟಿ ಅನುದಾನವನ್ನು ಈ ಬಜೆಟ್‌ನಲ್ಲಿ ಒದಗಿಸಲಾಗಿದೆ. ಎಲ್ಲ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿಕೆ. ಉತ್ತಮ ಪ್ರಯತ್ನಗಳ ಹೊರತಾಗಿಯೂ, ರೈತರು ಪ್ರೃತಿಕೂಲ ಹವಾಮಾನದಿಂದಾಗಿ ಬೆಳೆ ನಷ ಅನುಭಸುತ್ತಿದ್ದಾರೆ. 

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಇದನ್ನು ಪರಿಹರಿಸಲಾಗುತ್ತಿದೆ. ರಾಜ್ಯ ಸರ್ಕಾರವು ರೈತರ ತಾಸಕ್ತಿಗಳನ್ನು ಸಂರಕ್ಷಿಸಲು ತನ್ನ ಪಾಲಿನ ವಿಮಾ ಮೊತ್ತವಾಗಿ 900 ಕೋಟಿ ಒದಗಿಸಿದೆ. ರಾಜ್ಯದಲ್ಲಿ ಬರ ನಿರೋಧಕ ಬೆಳೆಗಳನ್ನು ಪ್ರೋತ್ಸಾಸಲು ‘ರೈತ ಸಿರಿ’ ಯೋಜನೆಯನ್ನು ಈಗಾಗಲೇ ಘೋಷಿಸಲಾಗಿದೆ. ಈ ಯೋಜನೆಯಡಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯಲು ಪ್ರತಿ ಹೆಕ್ಟೆರ್‌ಗೆ 10000, ಗರಿಷ್ಟ 20000 ಪ್ರೋತ್ಸಾಹ ಧನ ಘೋಷಿಸಲಾಗಿದೆ.

ಅಂತರ್ಜಲ ಪಾತಾಳಕ್ಕಿಳಿದಿರುವ ರಾಜ್ಯದ 76 ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲು ಚಟುವಟಿಕೆಗಳಿಗಾಗಿ 4.75 ಲಕ್ಷ ಹೆಕ್ಟೇರುಗಳಿಗೆ 100 ಜಲಾನಯನ ನಿರ್ವಹಣಾ ಯೋಜನೆಗಳನ್ನು ಮಂಜೂರು ಮಾಡಿದೆ. ರೈತರಿಗೆ ಕೈಗೆಟಕುವ ದರದಲ್ಲಿ ಹನಿ ಮತ್ತು ತುಂತುರು ನೀರಾವರಿ ಅಳವಡಿಸಲು ಅನುಕೂಲವಾಗುವಂತೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಯೋಜನೆಗೆಳ ಅಡಿಯಲ್ಲಿ ಶೇ.90 ರಷ್ಟು ಸಹಾಯಧನ ಒದಗಿಸಲಿದ್ದು, ಇದಕ್ಕಾಗಿ 2020-21 ನೇ ಸಾಲಿನಲ್ಲಿ 627 ಕೋಟಿ ಒದಗಿಸಲಾಗಿದೆ. ಈ ಎಲ್ಲ ಪ್ರಯತ್ನಗಳ ಹಿಂದೆ ಬರ ನೀಗಿಸಿ, ಸವಳು-ಜವಳು ತಗ್ಗಿಸಿ, ಗುಳೇ ತಪ್ಪಿಸುವ ಚಿಂತನೆಗಳು ಎದ್ದು ಕಾಣುತ್ತಿದೆ.
 

click me!