ಟ್ರಂಪ್‌ ಭೇಟಿಯಿಂದ ದೇಶಕ್ಕಾದ ಲಾಭವೇನು?

By Kannadaprabha NewsFirst Published Feb 28, 2020, 4:59 PM IST
Highlights

ಭಾರತಕ್ಕೆ ಭೇಟಿ ನೀಡಿದ 7ನೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಹಾಗೆಯೇ ಪ್ರಸಕ್ತ ವರ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ವಿದೇಶ ಭೇಟಿ ಇದು. ಖಂಡಿತವಾಗಿಯೂ ಈ ಭೇಟಿಯಿಂದ ಭಾರತ- ಅಮೆರಿಕ ಸ್ನೇಹ ಸಂಬಂಧ ಮತ್ತಷ್ಟುಗಟ್ಟಿಯಾಗಿದೆ, ಪ್ರಬುದ್ಧವಾಗಿದೆ. 

ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡಿ ಭಾರತ-ಅಮೆರಿಕ ಸ್ನೇಹ ಸಂಬಂಧದಲ್ಲಿ ಹೊಸ ಹುರುಪು ಮೂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್‌, ಟ್ರಂಪ್‌ ಭೇಟಿಯಿಂದ ಭಾರತಕ್ಕಾಗುವ ಲಾಭ ಏನು ಎಂಬ ಬಗ್ಗೆ ಇಂಡಿಯಾ ಟುಡೇನೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಟ್ರಂಪ್‌ ಭೇಟಿಯಿಂದ ದೇಶಕ್ಕಾದ ಲಾಭವೇನು?

ಅಮೆರಿಕದ ಜೊತೆಗಿನ ಭಾರತದ ಸ್ನೇಹವು ತಂತ್ರಜ್ಞಾನ, ಆರ್ಥಿಕ ಸಹಕಾರ, ವ್ಯಾಪಾರ, ಇಂಧನ ಕ್ಷೇತ್ರ ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಭಾರತೀಯರು ಅಮೆರಿಕದ ವೀಸಾ ನಿಯಮಗಳ ಬಗ್ಗೆ ಟ್ರಂಪ್‌ ಪ್ರತಿಕ್ರಿಯೆಗೆ ಕಾತುರರಾಗಿದ್ದರು. ಅದಕ್ಕೂ ಕೂಡ ಟ್ರಂಪ್‌ ಆಶಾದಾಯಕ ಉತ್ತರ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡಿ ವಾಪಸ್ಸಾಗಿದ್ದಾರೆ. ಟ್ರಂಪ್‌ ಈ ಭೇಟಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದರೆ ಟ್ರಂಪ್‌ ಭೇಟಿಯಿಂದ ಭಾರತಕ್ಕೆ ಆದ ಲಾಭ ಏನು?

ಭಾರತಕ್ಕೆ ಭೇಟಿ ನೀಡಿದ 7ನೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌. ಹಾಗೆಯೇ ಪ್ರಸಕ್ತ ವರ್ಷ ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ವಿದೇಶ ಭೇಟಿ ಇದು. ಖಂಡಿತವಾಗಿಯೂ ಈ ಭೇಟಿಯಿಂದ ಭಾರತ- ಅಮೆರಿಕ ಸ್ನೇಹ ಸಂಬಂಧ ಮತ್ತಷ್ಟುಗಟ್ಟಿಯಾಗಿದೆ, ಪ್ರಬುದ್ಧವಾಗಿದೆ. ಹಲವಾರು ಕ್ಷೇತ್ರಗಳಲ್ಲಿನ ಒಡಂಬಡಿಕೆಗೆ ಸಹಕಾರಿಯಾಗಿದೆ.

ಒಟ್ಟಾರೆಯಾಗಿ ಭಾರತ-ಅಮೆರಿಕ ಸ್ನೇಹ ಸರಾಗವಾಗಿ ಮುಂದುರೆಯುತ್ತಿದೆ. ಈಗ ಅದು ಬಹು ಆಯಾಮದ ಸ್ನೇಹವಾಗಿ ಮಾರ್ಪಟ್ಟಿದೆ. ಇವತ್ತು ರಾಜಕೀಯವಾಗಿ, ರಾಜತಾಂತ್ರಿಕವಾಗಿ, ರಕ್ಷಣಾತ್ಮಕವಾಗಿ ಮಾರ್ಪಟ್ಟಿರುವ ಈ ಸ್ನೇಹ ಮುಂದಿನ ದಿನಗಳಲ್ಲಿ ತಂತ್ರಜ್ಞಾನ, ಆರ್ಥಿಕ ಸಹಕಾರ, ವ್ಯಾಪಾರ, ಇಂಧನ ಕ್ಷೇತ್ರ ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಭಾರತೀಯರು ಅಮೆರಿಕದ ವೀಸಾ ನಿಯಮಗಳ ಬಗ್ಗೆ ಟ್ರಂಪ್‌ ಮಾತನಾಡುತ್ತಾರೆಂದು ಹೆಚ್ಚು ಕಾತುರರಾಗಿದ್ದರು. ಅದಕ್ಕೂ ಕೂಡ ಟ್ರಂಪ್‌ ಆಶಾದಾಯಕ ಉತ್ತರವನ್ನೇ ನೀಡಿದ್ದಾರೆ.

ಟ್ರಂಪ್‌ ಭೇಟಿ ವೇಳೆ ಯಾವ ಯಾವ ಒಪ್ಪಂದಗಳ ಬಗ್ಗೆ ಮಾತುಕತೆಯಾಗಿದೆ?

ಮಾರ್ಕೆಟ್‌ ಆ್ಯಕ್ಸೆಸ್‌, ಆಮದು ಸುಂಕದ ಬಗ್ಗೆ ಟ್ರಂಪ್‌ ನಿಯೋಗದೊಂದಿಗೆ ಮಾತುಕತೆ ನಡೆಸಿದ್ದೇವೆ. ಸಮಗ್ರ ವ್ಯಾಪಾರ ಒಪ್ಪಂದದತ್ತ ಮಹತ್ವದ ಚರ್ಚೆ ನಡೆದಿದೆ. ಭಾರತಕ್ಕೆ ಅಮೆರಿಕದ ರಫ್ತು ಶೇ.60ರಷ್ಟುಏರಿದೆ. ಅಮೆರಿಕದಿಂದ ಇಂಧನ ರಫ್ತು ಶೇ.500ರಷ್ಟುಏರಿದೆ. ಇಂಥ ಹಲವಾರು ಮಾತುಕತೆಗಳ ನಡುವೆ ಈಗಾಗಲೇ ಆಗಿರುವ ಒಪ್ಪಂದಗಳನ್ನು ಮುಂದುವರೆಸಲು ಫೇಸ್‌ ಒನ್‌ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ನಡೆದಿದೆ.

ಅಮೆರಿಕ-ಭಾರತದ ನಡುವೆ ಸಾಕಷ್ಟುಸಮಯದಿಂದ ಉಚಿತ ವ್ಯಾಪಾರ ಒಪ್ಪಂದದ ಮಾತುಕತೆಯಾಗುತ್ತಿದೆ. ಬಿಗ್‌ ಡೀಲ್‌ ಎಂದರೆ ಇದೇನಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಹಮದಾಬಾದಿನಲ್ಲಿ ಬಿಗ್‌ ಡೀಲ್‌ ಬಗ್ಗೆ ಮಾತನಾಡಿದ್ದರು, ಪ್ರಧಾನಿ ಮೋದಿ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು. ಹಾಗಾಗಿ ಅಂತಿಮ ಮಾತುಕತೆಗೆ ಇನ್ನೂ ಸಾಕಷ್ಟುಸಮಯ ಬೇಕು. ನಾವು 5 ಪ್ರಮುಖ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದೇವೆ. ಅಮೆರಿಕ, ಚೀನಾ, ಆಸಿಯಾನ್‌, ಯುರೋಪಿಯನ್‌ ಒಕ್ಕೂಟ ಮತ್ತು ಗಲ್ಫ್‌ ಇವುಗಳೊಂದಿಗೆ 100 ಬಿಲಿಯನ್‌ ಡಾಲರ್‌ಗೂ ಹೆಚ್ಚು ಮೌಲ್ಯದ ವ್ಯಾಪಾರ ಮಾಡುತ್ತಿದ್ದೇವೆ. ಜಪಾನಿನೊಂದಿಗೆ ಕೂಡ ವ್ಯಾಪಾರ ಸಂಬಂಧ ಇದೆ. ಆದರೆ ಅದು ಈ ಮಟ್ಟಿಗೆ ಇಲ್ಲ.

ಹೀಗಿರುವಾಗ ಆರ್ಥಿಕ ಸಹಕಾರ ನೀಡುವುದರಿಂದ ಅಭಿವೃದ್ಧಿಗೆ ಅವಕಾಶವಿದೆಯೇ, ಏನಾದರೂ ತೊಂದರೆ ಇದೆಯೇ, ಇತರ ರಾಷ್ಟ್ರಗಳ ಹಿತಾಸಕ್ತಿಗೆ ಧಕ್ಕೆಯಾಗಲಿದೆಯೇ ಇತ್ಯಾದಿಗಳನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ.

ಅಮೆರಿಕ ಅಭಿವೃದ್ಧಿ ಹೊಂದಿದ ದೇಶ, ವಿಶ್ವವೇ ಬೆರಗಾಗುವಂತೆ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ನಾವು ಅಮೆರಿಕದ ಸ್ನೇಹ ಬಯಸುವುದು ಸಹಜ. ಆದರೆ ಇತರ ಆಯಾಮಗಳೆಡೆಗೂ ನಾವು ಗಮನಹರಿಸಬೇಕಾಗುತ್ತದೆ.

ಅಮೆರಿಕ-ಭಾರತದ ನಡುವಿನ ರಕ್ಷಣಾ ಸಹಕಾರವು ಮತ್ತೊಂದು ಮಜಲನ್ನು ತಲುಪುತ್ತಿದೆ. ಈ ಭೇಟಿ ವೇಳೆ 3 ಶತಕೋಟಿ ಡಾಲರ್‌ ಮೌಲ್ಯದ ಅತ್ಯಾಧುನಿಕ ಹೆಲಿಕಾಪ್ಟರ್‌ ಖರೀದಿಯ ಒಪ್ಪಂದವಾಗಿದೆ. ಇನ್ನೂ ಹಲವು ರಕ್ಷಣಾ ಒಪ್ಪಂದ ಬಗ್ಗೆ ಟ್ರಂಪ್‌ ಸುಳಿವು ನೀಡಿದ್ದಾರೆ. ಹೀಗೆ ಅಮೆರಿಕದಿಂದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಭಾರತ ಮುಂದಾದಾಗ ರಷ್ಯಾ-ಭಾರತ ಸ್ನೇಹ ಸಂಬಂಧಕ್ಕೆ ತೊಂದರೆಯಾಗುವುದಿಲ್ಲವೇ?

ಹಾಗೇನಿಲ್ಲ. ನಮ್ಮ ದೇಶಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ಪ್ರತಿಯೊಂದು ದೇಶದೊಂದಿಗೂ ರಾಜತಾಂತ್ರಿಕ ಸಂಬಂಧ ಹೊಂದಿದ್ದೇವೆ. ಅಮೆರಿಕದಿಂದ ಹೆಚ್ಚಿನ ರಕ್ಷಣಾ ಸಲಕರಣೆಗಳನ್ನು ಕೊಂಡುಕೊಂಡಿದ್ದೇವೆ. ಮಿಲಿಟರಿ ಶಕ್ತಿಯನ್ನು ಬಲಪಡಿಸಲು ವಿವಿಧ ಕಡೆಗಳಿಂದ ರಕ್ಷಣಾ ಸಲಕರಣೆಗಳನ್ನು ಕೊಂಡುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೇವಲ ಅಮೆರಿಕದೊಂದಿಗೆ ಮಾತ್ರವಲ್ಲ ಅನೇಕ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ.

ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಭೇಟಿ ನೀಡಿದ್ದಾಗ ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದ್ದರು. ಟ್ರಂಪ್‌ ಕೂಡ ಇದೇ ಮಾತುಗಳನ್ನಾಗಿದ್ದಾರೆ. ಕಳೆದ 10 ವರ್ಷಗಳಿಂದ ಇವೇ ಮಾತುಗಳು ಕೇಳಿಬರುತ್ತಿವೆ. ಇದು ಬರೀ ಆಶ್ವಾಸನೆಗೆ ಸೀಮಿತವೇ?

ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವಾಗಿಸಲು ಅಮೆರಿಕ ಬೆಂಬಲ ನೀಡುತ್ತಲೇ ಬರುತ್ತಿದೆ. ಅಮೆರಿಕದ ಬೆಂಬಲ ನಿಜಕ್ಕೂ ಪ್ರಭಾವಶಾಲಿಯೇ. ಆದರೆ ಈ ಪ್ರಕ್ರಿಯೆಗೆ ಇನ್ನಷ್ಟುರಾಷ್ಟ್ರಗಳ ಬೆಂಬಲ ಬೇಕು ಎಂದು ವಿಶ್ವಸಂಸ್ಥೆ ಬಯಸುತ್ತಿದೆ. ಅಲ್ಲಿ ಭಾರತಕ್ಕೆ ಹಿನ್ನಡೆಯಾಗುತ್ತಿದೆ. 1945ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಯಾಗಿದೆ.

ಈ 75 ವರ್ಷದಲ್ಲಿ ಜಗತ್ತಲ್ಲಿ ಸಾಕಷ್ಟುಬದಲಾಗಿದೆ. ಭಾರತವನ್ನು ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವನ್ನಾಗಿಸುವಲ್ಲಿ ಹಲವಾರು ದೇಶಗಳು ಬೆಂಬಲ ನೀಡುತ್ತಿವೆ. ಆದರೆ ಇಲ್ಲಿ ಪ್ರಮುಖ ಸ್ಥಾನ ಹೊಂದಿರುವ ದೇಶಗಳ ಸಮ್ಮತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಪ್ರಯತ್ನಿಸುತ್ತಿದೆ.

ಎಚ್‌1ಬಿ ವೀಸಾ ಬಗ್ಗೆ ಟ್ರಂಪ್‌ ಭಾರತೀಯರಿಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?

ಸೇವಾ ವಲಯದಲ್ಲಿ ಭಾರತ ಜಗತ್ತಿನಲ್ಲೇ ಅತ್ಯಂತ ಸ್ಪರ್ಧಾತ್ಮಕ ರಾಷ್ಟ್ರವಾಗಿ ಬದಲಾಗಿದೆ. ಭಾರತದ ಐಟಿ ಪರಿಣತರು ಜಗತ್ತಿನಾದ್ಯಾಂತ ಕೆಲಸ ಮಾಡುತ್ತಿದ್ದಾರೆ. ಭಾರತ ಮತ್ತು ಅಮೆರಿಕ ಎರಡೂ ಪ್ರಜಾಸತ್ತಾತ್ಮಕ ರಾಷ್ಟ್ರಗಳಾದ ಕಾರಣ ಹೆಚ್ಚು ನಂಬಿಗಸ್ಥ ರಾಷ್ಟ್ರಗಳಿವು. ಅಮೆರಿಕ ಇವತ್ತಿಗೂ ಆವಿಷ್ಕಾರಗಳಿಗೆ ಪ್ರಮುಖ ನಾಯಕ ರಾಷ್ಟ್ರವಾಗಿಯೇ ಉಳಿದಿದೆ. ಹಾಗಾಗಿ ಕೌಶಲ್ಯ ಹೊಂದಿದವರಿಗೆ, ಪರಿಣತರಿಗೆ ಅಮೆರಿಕ ಯಾವಾಗಲೂ ಬಾಗಿಲು ತೆರೆದಿರುತ್ತದೆ. ಟ್ರಂಪ್‌ ಕೂಡ ಇದನ್ನೇ ಹೇಳಿದ್ದಾರೆ.

ಮೋದಿ ಕಾಲಾವಧಿಯಲ್ಲಿ ಪಾಕಿಸ್ತಾನದೊಂದಿಗಿನ ಸ್ನೇಹ ಹೇಗೆ ಬದಲಾಗಿದೆ?

ಅಜೆಂಡಾ, ಸ್ನೇಹ ಎಲ್ಲವೂ ಬದಲಾಗಿದೆ. ನೆರೆ ರಾಷ್ಟ್ರಗಳ ಸ್ನೇಹ ಸಂಬಂಧ ಎಷ್ಟುಮುಖ್ಯ ಎಂಬುದು ಎರಡೂ ದೇಶಗಳಿಗೆ ಗೊತ್ತಿದೆ. ಆದರೆ ಭಾರತಕ್ಕೆ ತಡೆಯೊಡ್ಡುತ್ತಿರುವುದು ಭಯೋತ್ಪಾದನೆ. ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಸ್ವೀಕಾರಾರ್ಹವೇ ಅಲ್ಲ. ಗಡಿ ಭಯೋತ್ಪಾದನೆಯನ್ನು ಜಗತ್ತಿನ ಯಾವುದೇ ರಾಷ್ಟ್ರವೂ ಒಪ್ಪುವುದಿಲ್ಲ. ನಮ್ಮ ಮೇಲೆ ಭಯೋತ್ಪಾದನಾ ದಾಳಿಯಾದಾಗ ನಾವೇ ಅದರ ವಿರುದ್ಧ ಎದ್ದು ನಿಲ್ಲದಿದ್ದರೆ, ಇಡೀ ಜಗತ್ತು ನಮ್ಮಿಂದ ಏನು ಬಯಸಲು ಸಾಧ್ಯ?

ಬಾಲಾಕೋಟ್‌ ದಾಳಿ ಮತ್ತು ಉರಿ ದಾಳಿ ಭಾರತದ ಬಗೆಗಿನ ಕಲ್ಪನೆಯನ್ನು ಹೇಗೆ ಬದಲಾಯಿಸಿದವು?

ಜನರಿಗೆ ಈ ಸರ್ಕಾರ ಬಲಿಷ್ಠವಾಗಿದೆ. ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧವಾಗಿದೆ ಎಂಬ ಅರಿವಾಗಿದೆ.

ಡೊನಾಲ್ಡ್‌ ಟ್ರಂಪ್‌ ತಮ್ಮ ಪತ್ರಿಕಾಗೋಷ್ಠಿ ವೇಳೆ ಭಾರತ, ಪಾಕಿಸ್ತಾನ ಬಯಸಿದರೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?

ಇದು ಭಾರತ-ಪಾಕ್‌ ನಡುವಿನ ವಿಚಾರ. ಅದನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ.

ಸಿಎಎ, ಎನ್‌ಆರ್‌ಸಿ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನಮ್ಮ ದೇಶದಲ್ಲಿ ಸಾಕಷ್ಟುಜನರು ಪೌರತ್ವ ಇಲ್ಲದೇ ವಾಸಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ. ಸಿಎಎಯಿಂದ ಪೌರತ್ವ ಪಡೆಯದೇ ಜೀವಿಸುತ್ತಿರುವವರ ಸಂಖ್ಯೆ ಕಡಿಮೆಯಾಗಲಿದೆ.

-  ಎಸ್‌. ಜೈಶಂಕರ್‌, ವಿದೇಶಾಂಗ ಸಚಿವ

click me!