ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್;'ಎಕ್ಸ್' ಪೋಸ್ಟ್ ನಲ್ಲಿ ಕಾರಣ ಬಹಿರಂಗಪಡಿಸಿದ ಟೆಸ್ಲಾ ಸಿಇಒ

By Suvarna NewsFirst Published Apr 20, 2024, 5:48 PM IST
Highlights

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾರತ ಭೇಟಿಯನ್ನು ಮುಂದೂಡಿದ್ದಾರೆ.ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಮಾಹಿತಿ ನೀಡಿರುವ ಮಸ್ಕ್, ಟೆಸ್ಲಾಕ್ಕೆ ಸಂಬಂಧಿಸಿದ ದೊಡ್ಡ ಬದ್ಧತೆಯೊಂದರ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರೋದಾಗಿ ತಿಳಿಸಿದ್ದಾರೆ. 
 

ನವದೆಹಲಿ (ಏ.20): ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾರತ ಭೇಟಿಯನ್ನು ಮುಂದೂಡಿದ್ದಾರೆ. ಈ ಬಗ್ಗೆ ಇಂದು (ಏ.20) ಬೆಳಗ್ಗೆ ಅಂದರೆ ನಿರೀಕ್ಷಿತ ಭೇಟಿ ಪ್ರಾರಂಭಕ್ಕೆ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಮಸ್ಕ್ 'ಟೆಸ್ಲಾಕ್ಕೆ ಸಂಬಂಧಿಸಿದ ಅತ್ಯಂತ ದೊಡ್ಡ ಬದ್ಧತೆಯೊಂದರ' ಕಾರಣಕ್ಕೆ ಭಾರತದ ಯೋಜಿತ ಭೇಟಿಯನ್ನು ಮುಂದೂಡಿರೋದಾಗಿ ತಿಳಿಸಿದ್ದಾರೆ. ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಮಾಲೀಕರಾಗಿರುವ ಮಸ್ಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಎರಡು ದಿನಗಳ ಪ್ರವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸುವ ಯೋಜನೆ ಸಿದ್ಧವಾಗಿತ್ತು. ಈ ಸಂದರ್ಭದಲ್ಲಿ ತಮ್ಮ ಉದ್ಯಮದ ಹೂಡಿಕೆ ಯೋಜನೆಗಳನ್ನು ಕೂಡ ಘೋಷಿಸೋದಾಗಿ ಅವರು ತಿಳಿಸಿದ್ದರು. ಭಾರತದ ಭೇಟಿಯಲ್ಲಿ ವಿಳಂಬವಾಗಿರಬಹುದು, ಆದರೆ ಈ ವರ್ಷದ ಮುಂದಿನ ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಲು ನಾನು ಉತ್ಸುಕನಾಗಿದ್ದೇನೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಮಸ್ಕ್ ತಿಳಿಸಿದ್ದಾರೆ.

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗೋದಾಗಿ ಕಳೆದ ವಾರವಷ್ಟೇ ಎಲಾನ್ ಮಸ್ಕ್ ದೃಢಪಡಿಸಿದ್ದರು. 'ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿರುವೆ' ಎಂದು ಮಸ್ಕ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಭಾರತ ಭೇಟಿ ಸಂದರ್ಭದಲ್ಲಿ ಇಲ್ಲಿ ಕಾರ್ಖಾನೆ ಸ್ಥಾಪಿಸಲು ಮಸ್ಕ್, 2-3 ಬಿಲಿಯನ್ ಡಾಲರ್ ಹೂಡಿಕೆ ಮಾಡೋದಾಗಿ ಘೋಷಿಸುವ ನಿರೀಕ್ಷೆಯಿದೆ ಎಂದು ಹೇಳಲಾಗಿತ್ತು.  ಅಲ್ಲದೆ, ಮಸ್ಕ್ ಭೇಟಿಯ ವೇಳೆ ಭಾರತದ ಇತರ ವಾಹನ ಕಂಪನಿಗಳ ಕಾರ್ಯನಿರ್ವಾಹಕರು ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿತ್ತು.  ಈ ಭೇಟಿಯ ನಂತರ ಭಾರತದಲ್ಲಿ ಟೆಸ್ಲಾ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಪ್ರತ್ಯೇಕ ಸಾರ್ವಜನಿಕ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.

Unfortunately, very heavy Tesla obligations require that the visit to India be delayed, but I do very much look forward to visiting later this year.

— Elon Musk (@elonmusk)

ಈ ಹಿಂದೆ ಜೂನ್ 2023 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಭೇಟಿಯ ವೇಳೆ ಎಲಾನ್ ಮಸ್ಕ್ ಅವರು ಪ್ರಧಾನಿಯವರನ್ನು ಅಮೆರಿಕಾದಲ್ಲಿ ಭೇಟಿಯಾಗಿದ್ದರು. ಇದೇ ವೇಳೆ ತಮ್ಮ ಟೆಸ್ಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ  2024 ರಲ್ಲಿ ಭಾರತಕ್ಕೆ ಭೇಟಿ ನೀಡಲು ಬಯಸಿರುವುದಾಗಿ ಹೇಳಿದ್ದರು.  ಭಾರತ ಸರ್ಕಾರವೂ ಹೊಸ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿದ ವಾರಗಳ ನಂತರ ಎಲಾನ್ ಮಸ್ಕ್ ಭಾರತ ಭೇಟಿ ಘೋಷಣೆಯಾಗಿದ್ದು, ಈ ಭೇಟಿಯ ಮಹತ್ವವನ್ನು ಹೆಚ್ಚಿಸಿದೆ.  ಹೊಸ ಎಲೆಕ್ಟ್ರಿಕ್ ವಾಹನ ನೀತಿಯ ಪ್ರಕಾರ ಭಾರತದಲ್ಲಿ ಕನಿಷ್ಠ 500 ಮಿಲಿಯನ್ ಡಾಲರ್ ಹೂಡಿಕೆಯೊಂದಿಗೆ  ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಆಮದು ಸುಂಕದ ರಿಯಾಯಿತಿಗಳನ್ನು ನೀಡಲಾಗುತ್ತದೆ.

ಬ್ಲೂಮ್ ಬರ್ಗ್ ವರದಿ ಪ್ರಕಾರ ಮಸ್ಕ್ ಭಾರತ ಭೇಟಿ ಸಂದರ್ಭದಲ್ಲಿ ಸ್ಟಾರ್ ಲಿಂಕ್ ಸೇರಿದಂತೆ ಇತರ ಯೋಜನೆಗಳ ಬಗ್ಗೆ ಕೂಡ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಈ ವರ್ಷದ ಮೂರೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಸ್ಟಾರ್ ಲಿಂಕ್ಸ್ ತನ್ನ ಕಾರ್ಯನಿರ್ವಹಣೆ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಸ್ಟಾರ್ ಲಿಂಕ್ ಕಾರ್ಯನಿರ್ವಹಣೆ ಪ್ರಾರಂಭಿಸೋದ್ರಿಂದ ಭಾರತದ ಹಾಗೂ ಅಮೆರಿಕದ ನಡುವಿನ ಭದ್ರತಾ ಸಹಭಾಗಿತ್ವ ಹೆಚ್ಚಲಿದೆ ಎಂದು ತಜ್ಞರು ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಭೇಟಿಗೆ ಕಾತುರದಿಂದ ಕಾಯ್ತಿರುವೆ: ಎಲಾನ್ ಮಸ್ಕ್‌

ಫೆಬ್ರವರಿಯಲ್ಲಿ ಭಾರತ ಬಾಹ್ಯಾಕಾಶ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಗಳನ್ನು ಸರಳೀಕರಿಸಿದ್ದು, ಉಪಗ್ರಹಗಳು ಹಾಗೂ ರಾಕೆಟ್ ಗಳ ಉತ್ಪಾದನೆಯಲ್ಲಿ ಕಂಪನಿಗಳಿಗೆ ಹೂಡಿಕೆ ಮಾಡಲು ಅನುವು ಮಾಡಿಕೊಟ್ಟಿದೆ. ಹೀಗಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಸಂಬಂಧ ಕೂಡ ಮಸ್ಕ್ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. 


 

click me!