ಅನ್ನ ಕಸಿಯಲಿದೆಯೇ ಕೃತಕ ಬುದ್ದಿಮತ್ತೆ: ಯಾವ್ಯಾವ ಕ್ಷೇತ್ರಗಳಲ್ಲಿ ಇಂಪ್ಯಾಕ್ಟ್?

First Published Jun 16, 2018, 4:01 PM IST
Highlights

ಮಾನವನ ಅದ್ಭುತ ಸೃಷ್ಟಿ ಕೃತಕ ಬುದ್ದಿಮತ್ತೆ

ಸಮಾಜದ ದಿಕ್ಕನ್ನೇ ಬದಲಿಸಿದೆ ಆಧುನಿಕ ತಂತ್ರಜ್ಞಾನ

ಮಾನವ ಜೀವನದ ಎಲ್ಲ ರಂಗದಲ್ಲೂ ಪ್ರವೇಶ

ಉದ್ಯೋಗ ಕಸಿಯಲಿದೆಯೇ ಕೃತಕ ಬುದ್ದಿಮತ್ತೆ?

ಯಾವ್ಯಾವ ಕ್ಷೇತ್ರಗಳನ್ನಾಳಲಿದೆ ಕೃತಕ ಬುದ್ದಿಮತ್ತೆ?

ಬೆಂಗಳೂರು(ಜೂ.16): ಜಗತ್ತು ತುಂಬ ವೇಗವಾಗಿ ಬೆಳೇಯುತ್ತಿದೆ. ತಂತ್ರಜ್ಞಾನ ಇಂದು ಮಾನವನ ಜೀವನದ ಎಲ್ಲ ರಂಗವನ್ನೂ ಪ್ರವೇಶಿಸಿಯಾಗಿದೆ. ಆಧುನಿಕತೆಯನ್ನೇ ಉಸಿರಾಡುತ್ತಿರುವ ಮನುಷ್ಯ ತಂತ್ರಜ್ಞಾನ ಸಹಾಯವಿಲ್ಲದೇ ಜೀವನ ನಡೆಸಲಾರ ಎಂಬಷ್ಟರ ಮಟ್ಟಿಗೆ ವಿಜ್ಞಾನ ಸಮಾಜವನ್ನು ಆವರಿಸಿದೆ.

ಈ ತಂತ್ರಜ್ಞಾನದಿಂದ ಮನುಷ್ಯನ ಬದುಕು ಉತ್ತಮವಾಗುತ್ತಿರುವುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನ ಮಾನವ ಸಮಾಜವನ್ನು ಸಾಕಷ್ಟು ಸುಧಾರಿಸಿದೆ. ಸಮಾಜವನ್ನು ಉನ್ನತಿಯಡೆಗೆ ಕರೆದೊಯ್ದಿದೆ ಎಂಬುದೂ ನಿಜ. ಆದರೆ ಇದೇ ತಂತ್ರಜ್ಞಾನ ಮಾನವನ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬುದನ್ನೂ ನಾವೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು. ಮನುಷ್ಯ ಈ ಸಮಾಜದಲ್ಲಿ ಬದುಕಲು ಕೆಲಸ ಮಾಡುವುದು ಕೂಡ ಅನಿವಾರ್ಯ. ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಕಾಯಕವೇ ಕೈಲಾಸ ಎಂದು ಸಾರಿದ್ದು?. ಆದರೆ ಆಧುನಿಕ ತಂತ್ರಜ್ಞಾನ ದುಡಿಮೆದಾರರ ದುಡಿಮೆ ಮೇಲೆ ವಕ್ರದೃಷ್ಟಿ ಬೀರುತ್ತಿರುವುದು ಸುಳ್ಳಲ್ಲ.

ಈಗಾಗಲೇ ಕೈಗಾರಿಕಾ ರಂಗ ಪ್ರವೇಶಿಸುವ ಮೂಲಕ ತಂತ್ರಜ್ಞಾನ ಅನೇಕ ಕಾರ್ಮಿಕರ ಅನ್ನ ಕಸಿದಿದೆ. ಅದರಲ್ಲೂ ೨೧ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆಗಳಲ್ಲಿ ಒಂದಾದ ಕೃತಕ ಬುದ್ದಿಮತ್ತೆ ಕೈಗಾರಿಕಾ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ. ಇದೇ ವೇಳೆ ಮನುಷ್ಯನಿಗೆ ಕೆಲಸವಿಲ್ಲದಂತೆ, ನಿರುದ್ಯೋಗಿಯನ್ನಾಗಿಯೂ ಪರಿವರ್ತಿಸುತ್ತಿದೆ.

ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನದಿಂದಾಗಿ ಮುಂದಿನ ೨೦ ವರ್ಷಗಳಲ್ಲಿ ಪ್ರಮುಖ ೧೫ ಕ್ಷೇತ್ರಗಳಲ್ಲಿ ಕೆಲಸವೇ ಇಲ್ಲದಂತಾಗಲಿದೆ. ಅಥವಾ ಈ ಕ್ಷೇತ್ರಗಳೇ ಮಾಯವಾಗಲಿವೆ ಎಂಬುದು ಕೆಲವರ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಯಾವ ಕ್ಷೇತ್ರಗಳನ್ನು ಮುಂದಿನ ದಿನಗಳಲ್ಲಿ ಕೃತಕ ಬುದ್ದಿಮತ್ತೆ ಆಳಲಿದೆ ಎಂಬುದನ್ನು ನೋಡುವುದಾದರೆ...

1. ಚಾಲಕ ವೃತ್ತಿ: ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಟೋಮೊಬೈಲ್ ಕ್ಷೇತ್ರದಲ್ಲಿ ಬೀರುತ್ತಿರುವಷ್ಟು ಪರಿಣಾಮ ಇನ್ಯಾವ ಕ್ಷೇತ್ರದ ಮೇಲೂ ಬೀರುತ್ತಿಲ್ಲ. ಆಧುನಿಕ ತಂತ್ರಜ್ಞಾನವನ್ನು ನೀ ಮುಂದು ನಾ ಮುಂದು ಎಂಬಂತೆ ಅಳವಡಿಸಿಕೊಳ್ಳುತ್ತಿರುವ ಜಗತ್ತಿನ ಪ್ರಮುಖ ಆಟೋಮೊಬೈಲ್ ಕಂಪನಿಗಳು ಚಾಲಕ ರಹಿತ ವಾಹನಗಳನ್ನು ಈಗಾಗಲೇ ಉತ್ಪಾದಿಸುತ್ತಿವೆ. ಒಂದು ಮೂಲದ ಪ್ರಕಾರ ಅಮೆರಿಕ ಒಂದರಲ್ಲೇ ಸುಮಾರು ೧೫.೫ ಟ್ರಕ್ ಗಳಿದ್ದು, ೧೪ ಮಿಲಿಯನ್ ಜನರಿಗೆ ಈ ಕ್ಷೇತ್ರ ಉದ್ಯೋಗ ಒದಗಿಸಿದೆ. ಆದರೆ ಚಾಲಕ ರಹಿತ ವಾಹನಗಳು ಶೀಘ್ರದಲ್ಲೇ ಮಾರುಕಟ್ಟಗೆ ಲಗ್ಗೆ ಇಡಲಿರುವುದರಿಂದ ಈ ೧೪ ಮಿಲಿಯನ್ ಜನರ ಭವಿಷ್ಯ ಮಾತ್ರ ಮಂಕಾಗಿದೆ.

2. ಕೃಷಿ ಕ್ಷೇತ್ರ: ಮಾನವ ನಾಗರಿಕತೆಯ ಇತಿಹಾಸದಲ್ಲಿ ಕೃಷಿ ಕ್ಷೇತ್ರ ಪಡೆದುಕೊಂಡಿರುವಷ್ಟು ಮಹತ್ವ ಇನ್ಯಾವ ಕ್ಷೇತ್ರವೂ ಪಡೆದುಕೊಂಡಿಲ್ಲ. ಮಾನವನ ಮೊದಲ ಸಂಶೋಧನೆಯಾದ ಕೃಷಿ ಕ್ಷೇತ್ರ, ಇಡೀ ಜಗತ್ತಿಗೆ ಅನ್ನ ಕೊಡುವುದರ ಜೊತೆಗೆ ಉದ್ಯೋಗವನ್ನೂ ಸೃಷ್ಟಿಸಿದೆ. ಆದರೆ ಕೃಷಿ ಕ್ಷೇತ್ರದಲ್ಲೂ ಕೃತಕ ಬುದ್ದಿಮತ್ತೆ ಕಾಲಿಟ್ಟಿದ್ದು, ಜಮೀನು ಹದ ಮಾಡುವುದರಿಂದ ಹಿಡಿದು, ರೈತ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರುವವರೆಗೂ ಎಲ್ಲವನ್ನೂ ಕೃತಕ ಬುದ್ದಿಮತ್ತೆ ಮ್ಯಾನೇಜ್ ಮಾಡುತ್ತಿದೆ. ಅಷ್ಟೇ ಅಲ್ಲ ಜಗತ್ತಿನ ೧೦ ಪ್ರಮುಖ ಕಂಪನಿಗಳು ಆಹಾರ ಕ್ಷೇತ್ರವನ್ನು ಆಳುತ್ತಿವೆ. ಅಂದರೆ ಕೃತಕ ಬುದ್ದಿಮತ್ತೆಯಿಂದಾಗಿ ಕೃಷಿ ಕ್ಷೇತ್ರದ ಕಾರ್ಮಿಕ ಕೆಲಸ ಕಳೆದುಕೊಳ್ಳುವುದು ಶತಸಿದ್ದ.

3. ಪತ್ರಿಕೋದ್ಯಮ: ಹೌದು, ಕೃತಕ ಬುದ್ದಿಮತ್ತೆ ಅಥವಾ ಆಧುನಿಕ ತಂತ್ರಜ್ಞಾನದಿಂದಾಗಿ ಸಾಂಪ್ರದಾಯಿಕ ಪತ್ರಿಕೋದ್ಯಮವೂ ಆತಂಕ ಎದುರಿಸುರತ್ತಿದೆ. ಮೊಬೈಲ್ ಕ್ರಾಂತಿಯಿಂದಾಗಿ ಕೈ ಬೆರಳಿನಲ್ಲೇ ಇಡೀ ಜಗತ್ತಿನ ಆಗುಹೋಗುಗಳ ಕುರಿತು ಇಂದಿನ ಪೀಳಿಗೆ ಮಾಹಿತಿ ಪಡೆಯುತ್ತಿದೆ. ಆದರೆ ಡಿಜಿಟಲ್ ಮಿಡಿಯಾದಿಂದಾಗಿ ದಿನಪತ್ರಿಕೆ, ಮಾಸ ಪತ್ರಿಕೆ ಮತ್ತು ಮ್ಯಾಗಜೀನ್ ಗಳ ಯುಗ ಮುಗಿಯುತ್ತಾ ಬಂದಿದೆ ಎಂಬ ಅನುಮಾನ ಕಾಡುತ್ತಿದೆ.

4. ರಕ್ಷಣಾ ಕ್ಷೇತ್ರ: ರಕ್ಷಣೆ ಎಂಬುದು ಜಗತ್ತಿನ ಎಲ್ಲ ದೇಶಗಳಿಗೂ ಅತೀ ಮಹತ್ವವಾದ ವಿಷಯವಾಗಿರುತ್ತದೆ. ದೇಶದ ಗಡಿಗಳನ್ನು ಸುರಕ್ಷಿತವಾಗಿಡುವುದು ಪ್ರತಿಯೊಂದು ಸರ್ಕಾರದ ಜವಾಬ್ದಾರಿ ಕೂಡ ಹೌದು. ಆದರೆ ರಕ್ಷಣಾ ಕ್ಷೇತ್ರದಲ್ಲೂ ಆಧುನಿಕ ತಂತ್ರಜ್ಞಾನ ಕಾಲೂರಿದ್ದು, ಮುಂದಿನ ದಿನಗಳಲ್ಲಿ ಗಡಿಗಳನ್ನು ಸೈನಿಕರಲ್ಲ ಬದಲಿಗೆ ಮನುಷ್ಯ ನಿರ್ಮಿತ ರೊಬೋಟ್ ಗಳು ಕಾಯಲಿವೆ. ಈಗಾಗಲೇ ಚೀನಾ ಸೇರಿದಂತೆ ವಿಶ್ವದ ಪ್ರಬಲ ರಾಷ್ಟ್ರಗಳು ತಮ್ಮ ಗಡಿ ರಕ್ಷಣೆಗೆ ರೊಬೋಟ್ ಗಳ ನಿರ್ಮಾಣಕ್ಕೆ ಮುಂದಾಗಿರುವುದು ಗುಟ್ಟಿನ ವಿಷಯವೇನಲ್ಲ.

ಇವಿಷ್ಟೇ ಕ್ಷೇತ್ರಗಳಲ್ಲದೇ ಕೃತಕ ಬುದ್ದಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನದಿಂದಾಗಿ ಇನ್ನೂ ಹಲವು ದೊಡ್ಡ ಮತ್ತು ಸಣ್ಣ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಸಂಪೂರ್ಣವಾಗಿ ನಿಲ್ಲಲಿದೆ. ಪ್ರಮುಖವಾಗಿ ಕ್ಯಾಶಿಯರ್ ಉದ್ಯೋಗ, ಬ್ಯಾಂಕಿಂಗ್ ಕ್ಷೇತ್ರ, ಟ್ರಾವೆಲ್ ಏಜೆಂಟ್ಸ್, ಉತ್ಪಾದನಾ ಕ್ಷೇತ್ರದ ಕಾರ್ಮಿಕರು ಹೀಗೆ ಎಲ್ಲ ರಂಗಗಳಲ್ಲಿಯೂ ಕಾರ್ಮಿಕರಿಗೆ ಬಾಗಿಲುಗಳು ಮುಚ್ಚಿಕೊಳ್ಳಲಿವೆ. ಈ ಎಲ್ಲ ಕ್ಷೇತ್ರಗಳನ್ನು ಇದೇ ಮಾನವ ನಿರ್ಮಿತ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಆಳಲಿದೆ.

click me!