Music Director Arjuna Janya: ಇಂದು ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಒಮ್ಮೆ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ತಾನು ಕುಡಿದು ಹೋದೆ ಎನ್ನೋದು ಅರಿವಾಗಿ ಪಶ್ಚಾತ್ತಾಪಪಟ್ಟಿದ್ದಾರೆ.
ಕನ್ನಡದಲ್ಲಿ ಅನೇಕ ಹಿಟ್‌ಗಳನ್ನು ನೀಡಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ( Arjun Janya ) ಈ ಹಿಂದೆ ಕುಡಿತದ ದಾಸರಾಗಿದ್ದರು. ಒಮ್ಮೆ ದೇವಸ್ಥಾನಕ್ಕೆ ಹೋದ ಹಿಂದಿನ ದಿನವೂ ಅವರು ಕುಡಿದಿದ್ದರಂತೆ. ಆ ಬಳಿಕ ಅವರು ಇಷ್ಟು ಯಶಸ್ಸು ಕಾಣಲು ಕಾರಣ ಏನು ಎಂದು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ಆ ರೀತಿ ಮಾಡಬಾರದು!
“ನಮ್ಮ ತಂದೆ ಹೋದಾಗ ಯಾರು ನಮ್ಮ ಜೊತೆಯಲ್ಲಿ ನಿಲ್ಲದೆ ಇದ್ದಾಗ, ನಮಗೆ ಏನೇನು ನೋವು ಆಯ್ತಲ್ವಾ, ಆ ಕಷ್ಟ ಬಂತು ಅದೆಲ್ಲ ನನಗೆ ಒಂದು ಪಾಠ. ಈಗ ನನಗೆ ಅದರ ಪರಿಸ್ಥಿತಿ ಹೇಗಿರುತ್ತದೆ ಅಂತ ಗೊತ್ತಿದೆ. ಆದ್ದರಿಂದ ಆ ನೋವು ಯಾರಿಗೂ ಆಗದೆ ಇರಲಿ ಅನ್ನೋದು ನನ್ನ ಆಶಯ. ನಾನು ಅನುಭವಿಸಿದ್ದು ಯಾರಿಗೂ ಬಾರದಿರಲಿ. ನನಗೂ ಎಲ್ಲ ಗೊತ್ತಿದ್ದು ನಾನು ಅದೇ ರೀತಿ ಮಾಡಿದರೆ ಮನುಷ್ಯತ್ವಕ್ಕೆ ಬೆಲೆಯೇ ಇರೋದಿಲ್ಲ. ದೇವರು ನನಗೆ ಒಂದು ಪಾಠ ಕಲಿಸಿದ್ದಾನೆ, ಆ ಪಾಠ ಕಲಿತುಕೊಂಡು ನಾನು ಈಗ ಜವಾಬ್ದಾರಿಯಿಂದ ಇರಬೇಕು” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಆ ತಾಯಿ ದರ್ಶನ ಆಯ್ತು!
“ಅಮ್ಮ ಆದಿಪರಾಶಕ್ತಿ ಬಂಗಾರು ಅಡಿಗಳವರು ( ತಮಿಳುನಾಡು ) ಅಂದರೆ ಇಷ್ಟ. ಹೀಗಾಗಿ ನಾನು ಓಂ ಶಕ್ತಿ ಆರಾಧಿಸುವೆ. ಜೀವನದಲ್ಲಿ ನನಗೆ ಏನಾದರೂ ಮಾಡಬೇಕು ಎಂಬ ಆಸೆ ಇದೆ. ದಿಕ್ಕು ದೆಸೆ ಏನು ಇಲ್ಲದೆ ಇದ್ದಾಗ ಬರಿ ಕನಸುಗಳೇ ಇತ್ತು. ಆಗ ಒಂದು ದಿನ ನನಗೆ ಅಮ್ಮ ಆದಿಪರಾಶಕ್ತಿ ದೇವಸ್ಥಾನಕ್ಕೆ ಹೋಗುವಂತ ಒಂದು ಅವಕಾಶ ಸಿಕ್ಕಿತ್ತು. ನಾನು ಯಾವಾಗ ದೇವಸ್ಥಾನಕ್ಕೆ ಫಸ್ಟ್ ಟೈಮ್ ಅಲ್ಲಿಂದ ಎಲ್ಲ ಬದಲಾವಣೆ ಆಯ್ತು. ಅಲ್ಲಿ ಅಮ್ಮ ಬಂಗಾರ ಅಡಿವರು ಕಂಡರು. ಎಷ್ಟೋ ಜನರು ಅವರನ್ನು ನೋಡಲು ಕ್ಯೂನಲ್ಲಿ ನಿಲ್ಲುತ್ತಾರೆ ಅಥವಾ ತುಂಬಾ ದೂರದಿಂದ ಕೈ ಮುಗಿದುಕೊಂಡು ನಿಂತಿರ್ತಾರೆ. ನಾನು ಸುಮ್ಮನೆ ಅಲ್ಲೆಲ್ಲೋ ನೋಡುತ್ತಿದ್ದೆ, ಆ ತಾಯಿ ನಡೆದುಕೊಂಡು ಹೋಗುತ್ತಿದ್ದರು. ಅವರು ಯಾರು ಅಂತ ಆಗ ಗೊತ್ತಿರಲಿಲ್ಲ. ಆ ಬಳಿಕ ಅವರು ಹೋದ ಜಾಗದಲ್ಲಿರುವ ಮಣ್ಣನ್ನು ಜನರು ತಲೆ ಮೇಲೆ ಹಾಕಿಕೊಂಡರು” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಕುಡಿದು ಹೋಗಿದ್ದೆ
“ನಾನು ಯಾವಾಗ ಆ ತಾಯಿಯ ದರ್ಶನ ಮಾಡಿದೆ, ಆ ದರ್ಶನ ಮಾಡಿದ ಕ್ಷಣದಿಂದ ನನ್ನ ದೇಹದಲ್ಲಿ ಇರುವಂತ ಪ್ರತಿಯೊಂದು ಏನು ಸೆಲ್ಸ್ ಇದೆ ಅವೆಲ್ಲವೂ ಅಳಲು ಆರಂಭಿಸಿದವು. ನಾನು ಆಗ ತುಂಬ ಕುಡಿಯುತ್ತಿದ್ದೆ. ಅಂದು ನಾನು ದೇವಸ್ಥಾನಕ್ಕೆ ಹೋಗುವ ಹಿಂದಿನ ದಿನವೂ ಕುಡಿದಿದ್ದೀನಿ. ಅಮ್ಮನವರ ಮುಂದೆ ನಿಂತ ದಿನ ಕುಡಿದುಕೊಂಡು ಬಂದಿದ್ಯಾ ಅಂತ ಪ್ರಶ್ನೆ ಮಾಡಿದ ಹಾಗೆ ಆಯ್ತು. ಆಗ ನನಗೆ ಪಶ್ಚಾತ್ತಾಪ ಶುರುವಾಯ್ತು. ಆ ಕ್ಷಣ ಇನ್ಮುಂದೆ ಕುಡಿಯೋದಿಲ್ಲ ಅಂತ ನಾನು ಅಂದುಕೊಂಡೆ, ಅಲ್ಲಿಂದ ಹತ್ತು ವರ್ಷಗಳ ಕಾಲ ಕುಡಿದಿಲ್ಲ. ಆಮೇಲೆ ಸಂಗೀತ ಸಂಯೋಜನೆ ಮಾಡಲು ಮೊದಲ ಸಿನಿಮಾ ಸಿಗ್ತು, ಮದುವೆ ಫಿಕ್ಸ್ ಆಯ್ತು. ನನ್ನ ಜೀವನದ ಪ್ರತಿ ಕ್ಷಣ ನನ್ನ ಉಸಿರಾಟ ಎಲ್ಲವೂ ನನ್ನ ಅಮ್ಮನವರೇ. ನಾನು ಕಣ್ಣು ಬಿಟ್ಟ ತಕ್ಷಣ ಅಮ್ಮ ನೆನಪಾಗ್ತಾರೆ, ಮಲಗುವಾಗಲೂ ಅಮ್ಮ ನೆನಪಾಗ್ತಾರೆ. ಏನೇ ಕಷ್ಟ ಬಂದರೂ, ಯಶಸ್ಸು ಬಂದರೂ ಅದನ್ನು ನಾನು ಅಮ್ಮನವರ ಪಾದಕ್ಕೆ ಹಾಕಿ ಸುಮ್ಮನಾಗ್ತೀನಿ” ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
ಸದ್ಯ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರು ‘45’ ಎನ್ನುವ ಸಿನಿಮಾ ನಿರ್ದೇಶನ ಮಾಡಿದ್ದು, ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ.
