ಗರ್ಭಪಾತ ಮಾಡಿಸಿಕೊಳ್ಳಲು ಹಲವು ಕಾರಣಗಳು ಇರಬಹುದು. ಗರ್ಭಪಾತದ ಮಾತ್ರೆಗಳ ಬಗ್ಗೆಯೂ ನಿಮಗೆ ತಿಳಿದಿರಬಹುದು. ಆದರೆ ಗರ್ಭದ ಸ್ಥಳ ಅರಿಯದೇ ಮಾತ್ರೆ ತೆಗೆದುಕೊಂಡರೆ ಪ್ರಾಣಕ್ಕೆ ಕುತ್ತು, ಇಲ್ಲಿದೆ ವೈದ್ಯರ ಮಾತು...
ಗರ್ಭಪಾತ (abortion) ಮಾಡಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಮಾಮೂಲು ಆಗಿಬಿಟ್ಟಿದೆ. ಅದರಲ್ಲಿಯೂ ಹೆಚ್ಚಾಗಿ ವಿವಾಹ ಪೂರ್ವ ದೈಹಿಕ ಸಂಬಂಧ ಹೊಂದಿ ಗರ್ಭಧಾರಣೆ ಆದರೆ ಆ ಸಂದರ್ಭದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವವರು ಹೆಚ್ಚುತ್ತಿದ್ದಾರೆ. ದೈಹಿಕ ಆಕರ್ಷಣೆಗೆ ಒಳಗಾಗಿಯೋ, ಗಂಡು ಮಕ್ಕಳು ತೋರಿಸಿದ ಯಾವುದೋ ಆಮಿಷಕ್ಕೆ ಒಳಗಾಗಿಯೋ ಇಲ್ಲವೇ ದೈಹಿಕ ಸಂಬಂಧ ಬೆಳೆಸೋಣ ಆಮೇಲೆ ಮದುವೆಯಾಗೋಣ ಎಂದುಕೊಂಡು ಹೇಳುವ ಕಾರಣಕ್ಕೋ ಒಟ್ಟಿನಲ್ಲಿ ಏನೇ ಆದರೂ ಅದರ ಕೆಟ್ಟ ಪರಿಣಾಮ ಅನುಭವಿಸುವವಳು ಮಾತ್ರ ಹೆಣ್ಣೇ. ಆಗ ಆಕೆ ಗರ್ಭಪಾತದ ಮಾತ್ರೆಗಳ ಮೊರೆ ಹೋಗುತ್ತಿದ್ದಾಳೆ. ಮನೆಯಲ್ಲಿ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಮೆಡಿಕಲ್ ಷಾಪ್ಗೆ ಹೋಗಿ ಕೊಂಡು ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗುವವರೂ ಹೆಚ್ಚಾಗುತ್ತಿದ್ದಾರೆ.
ಗರ್ಭದ ಸ್ಥಳ ಅರಿಯಬೇಕು
ಇನ್ನು ಕೆಲವು ಸಂದರ್ಭಗಳಲ್ಲಿ ದಂಪತಿ ನಡುವೆ ದೈಹಿಕ ಸಂಪರ್ಕ ಏರ್ಪಟ್ಟು ಗರ್ಭ ಧರಿಸುವ ಹೆದರಿಕೆಯಿಂದಲೂ ಮೆಡಿಕಲ್ ಷಾಪ್ಗೆ ಹೋಗಿ ಗರ್ಭಪಾತದ ಮಾತ್ರೆ (abortion pills) ತೆಗೆದುಕೊಳ್ಳುವವರೂ ಇದ್ದಾರೆ. ಆದರೆ, ಕಾರಣ ಏನೇ ಇರಲಿ. ಇಂಥ ಸಂದರ್ಭಗಳಲ್ಲಿ ಹಲವು ಹೆಣ್ಣುಮಕ್ಕಳು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಖ್ಯಾತ ವೈದ್ಯರು. ಟಾಕಿಂಗ್ ಪ್ಯಾರೆಟ್ಸ್ನಲ್ಲಿ ನೀಡಿರುವ ಸಂದರ್ಶನದಲ್ಲಿ ವೈದ್ಯೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲೆಲ್ಲಾ ಗರ್ಭಪಾತವನ್ನು ಜ್ಞಾನ ತಪ್ಪಿಸಿ ಮಾಡಲಾಗುತ್ತಿತ್ತು. ಆದರೆ ಇದೀಗ ಮಾತ್ರೆಗಳು ಬಂದುಬಿಟ್ಟಿವೆ. ಮೆಡಿಕಲ್ ಶಾಪ್ಗೆ ಹೋಗಿ ತೆಗೆದುಕೊಳ್ಳುತ್ತಾರೆ. ಅಷ್ಟಕ್ಕೂ ಮೆಡಿಕಲ್ ಷಾಪ್ನಲ್ಲಿ ಮಾರಾಟ ಮಾಡುವಂತಿಲ್ಲ. ಆದರೂ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಇದನ್ನು ತಿಳಿದುಕೊಳ್ಳುವ ಹೆಣ್ಣುಮಕ್ಕಳು ಅದನ್ನು ಖರೀದಿ ಮಾಡಿ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ಇದು ಬಹಳ ಡೇಂಜರ್ ಎನ್ನುತ್ತಾರೆ ಅವರು.
ಇದನ್ನೂ ಓದಿ: ಅಮ್ಮನ ಹೊಟ್ಟೆಯಲ್ಲೇ ಮಗು ಪ್ರೆಗ್ನೆಂಟ್! ವೈದ್ಯಲೋಕಕ್ಕೇ ಸವಾಲು- ಏನಿದು ಕೇಸ್?
ಮಾತ್ರೆ ತೆಗೆದುಕೊಳ್ಳುವಾಗ ನಿಯಮ
ಮಾತ್ರೆ ತೆಗೆದುಕೊಳ್ಳುವಾಗ ನಿಯಮ ಇರುತ್ತದೆ. ದೈಹಿಕ ಸಂಪರ್ಕ ಬೆಳೆಸಿ, ಗರ್ಭಧಾರಣೆ ಮಾಡಿದ ಇಷ್ಟು ವಾರದ ಒಳಗೆ ಮಾತ್ರೆ ತೆಗೆದುಕೊಳ್ಳಬೇಕು ಎಂದು ಇರುತ್ತದೆ. ಅದಕ್ಕಿಂತ ಮುಖ್ಯವಾಗಿ ಗರ್ಭಕೋಶದ ಒಳಗೆ ಪ್ರೆಗ್ನೆನ್ಸಿ ಇರಬೇಕು. ಗರ್ಭಕೋಶದ ಆಚೆ ಅಂದರೆ ಗರ್ಭಕೋಶದ ನಾಳದಲ್ಲಿ ಪ್ರೆಗ್ನೆನ್ಸಿ ಇದ್ದರೆ ಆ ಹೆಣ್ಣಿನ ಜೀವಕ್ಕೆ ಮಾತ್ರ ಕುತ್ತು ತರುತ್ತದೆ. ಇಂಥ ಸಂದರ್ಭದಲ್ಲಿ ಗರ್ಭನಾಳ ಒಡೆದು ಹೋಗಿ ರಕ್ತಸ್ರಾವ ಆಗುವ ಕಾರಣ ಹೆಣ್ಣು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡೇ ಗರ್ಭಪಾತ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ವೈದ್ಯೆ.
ಮುಟ್ಟು ಮುಂದೆ ಹೋಗಿದ್ರೆ ವೈದ್ಯರ ಬಳಿ ನಿಜ ಹೇಳಬೇಕು. ಆಗ ಹೆಣ್ಣಿನ ತಪಾಸಣೆ ಮಾಡಿದ ವೈದ್ಯರು ಆಕೆಗೆ ಮಾತ್ರೆ ಕೊಡಬೇಕೋ ಬೇಡವೋ ಎನ್ನುವುದನ್ನು ನಿರ್ಧಾರ ಮಾಡುತ್ತಾರೆ. ಗರ್ಭಧಾರಣೆ ಯಾವ ಸ್ಥಿತಿಯಲ್ಲಿ ಇದೆ ಎನ್ನುವುದನ್ನು ತಪಾಸಣೆ ಮಾಡಿದ ಬಳಿಕ ಈ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಆದರೆ, ಖುದ್ದು ಮೆಡಿಕಲ್ ಷಾಪ್ಗೆ ಹೋಗಿ ತೆಗೆದುಕೊಂಡರೆ ಪ್ರಾಣಕ್ಕೆ ಕುತ್ತು ಇಲ್ಲವೇ ಗರ್ಭಕ್ಕೆ ಸಂಬಂಧಿಸಿದಂತೆ ಸಮಸ್ಯೆ ತಲೆದೋರಿ ಜೀವನ ಪರ್ಯಂತ ನರಕ ಅನುಭವಿಸಬೇಕಾಗುವುದು ಎನ್ನುವುದು ಅವರ ಮಾತು.
Delivery ಬಳಿಕ ಹೊಲಿಗೆ ಹಾಕಲು ಹೋದ್ರೆ ಹೊಟ್ಟೆಯಲ್ಲಿತ್ತು 3ನೇ ಮಗು! ಇದು 'ಅಮೃತಧಾರೆ' ಕಥೆ ಅಲ್ಲಾರೀ....
