ಮುಟ್ಟಿನ ಕುರಿತಾದ ಸಾಮಾನ್ಯ ಸಮಸ್ಯೆಗಳಿಗೆ ಸ್ತ್ರೀರೋಗ ತಜ್ಞೆ ಡಾ. ಶಿಲ್ಪಾ ಅವರು ಪರಿಹಾರ ಸೂಚಿಸಿದ್ದಾರೆ. ಮುಟ್ಟಿನ ಅವಧಿ, ರಕ್ತಸ್ರಾವದ ದಿನಗಳು, ಅಧಿಕ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೊಟ್ಟೆನೋವಿನಂತಹ ಐದು ಪ್ರಮುಖ ವಿಷಯಗಳ ಬಗ್ಗೆ ಅವರು ಸಲಹೆ ನೀಡಿದ್ದಾರೆ.

ಮುಟ್ಟು ಅಥವಾ ಋತುಸ್ರಾವ ಎಂದಾಕ್ಷಣ ಛೇ, ಶೀ, ಥೂ ಎಂದೆಲ್ಲಾ ಹೇಳುವುದು ಸಾಮಾನ್ಯವಾಗಿಬಿಟ್ಟಿದೆ. ಇದರ ಬಗ್ಗೆ ಮುಕ್ತವಾಗಿ ಮಾತನಾಡುವ ಮನಸ್ಥಿತಿ ಇಂದಿಗೂ ನಮ್ಮ ಸಮಾಜದಲ್ಲಿ ಇಲ್ಲ ಎನ್ನುವುದು ಅತಿ ದೊಡ್ಡ ದುರಂತ. ಎಷ್ಟೇ ಎಜುಕೇಟೆಡ್​ ಸೊಸೈಟಿ ಎಂದು ಎನ್ನಿಸಿಕೊಂಡರೂ ಮುಟ್ಟಿನ ವಿಷಯದ ಬಗ್ಗೆ ಬಂದಾಗ ಅದರ ಬಗ್ಗೆ ಮಾತನಾಡಲು ಏನೋ ಒಂದು ರೀತಿಯ ಸಂಕೋಚ. ಯಾರು ಏನು ಅಂದುಕೊಳ್ಳುತ್ತಾರೆಯೋ ಎನ್ನುವ ಭಯ. ಮುಟ್ಟು ಎನ್ನುವುದು ಹೆಣ್ಣೊಬ್ಬಳು ತಾಯಿಯಾಗಲು ಸಿದ್ಧವಾಗಿರುವ ನೈಸರ್ಗಿಕ ಪ್ರಕ್ರಿಯೆ ಎನ್ನುವುದು ನಿಜವಾದರೂ, ಇದರ ಬಗ್ಗೆ ಮಾತನಾಡುವುದು ಮಾತ್ರ ಹಲವರಿಗೆ ಸಹ್ಯ ಎನ್ನಿಸಲಾರದು. ಇದೇ ಕಾರಣಕ್ಕೆ ಎಷ್ಟೋ ಮಂದಿ ಈ ಬಗ್ಗೆ ವೈದ್ಯರ ಬಳಿಯೂ ಮುಕ್ತವಾಗಿ ಮಾತನಾಡಲು ಸಂಕೋಚ ಪಡುವುದು ಇದೆ.

ಆದರೆ ಮುಟ್ಟಿನ ಬಗ್ಗೆ ಹಲವಾರು ಸಮಸ್ಯೆಗಳು, ಪ್ರಶ್ನೆಗಳು ಸಾಮಾನ್ಯವಾಗಿ ಪ್ರತಿ ಹೆಣ್ಣಿನಲ್ಲಿಯೂ ಇದ್ದೇ ಇರುತ್ತದೆ. ಈ ಪೈಕಿ ಐದು ಪ್ರಮುಖ ಸಲಹೆಗಳನ್ನು ಹಾಗೂ ಸಾಮಾನ್ಯವಾಗಿ ಕಾಡುವ ಪ್ರಶ್ನೆಗಳಿಗೆ ಸ್ತ್ರೀರೋಗ ತಜ್ಞರಾಗಿರುವ ಡಾ. ಶಿಲ್ಪಾ ಅವರು ಇಲ್ಲಿ ಹೇಳಿದ್ದಾರೆ.

21-35ರ ವರೆಗೆ

1. ಮುಟ್ಟಿನ ಅವಧಿ 21 ರಿಂದ 35 ದಿನಗಳಿಗೆ ಒಮ್ಮೆ ಎಂದರೆ ಅದು ಮಾಮೂಲು. ಅಂದರೆ ಒಂದು ತಿಂಗಳು ಋತುಸ್ರಾವವಾದ ಬಳಿಕ ಮುಂದಿನ 21 ದಿನಗಳ ಬಳಿಕ ಹಾಗೂ 35 ದಿನಗಳ ಒಳಗೆ ಋತುಸ್ರಾವವಾದರೆ ಅದು ನಾರ್ಮಲ್​. 21 ದಿನಕ್ಕಿಂತ ಮುಂಚೆ ಮತ್ತು 35 ದಿನಗಳ ಬಳಿಕ ಪದೇಪದೇ ಆಗುತ್ತಿದ್ದರೆ ವೈದ್ಯರ ಬಳಿ ಒಮ್ಮೆ ಟೆಸ್ಟ್​ ಮಾಡಿಸಿಕೊಳ್ಳುವುದು ಒಳಿತು.

2-7 ದಿನ ಬ್ಲೀಡಿಂಗ್​

2. ಒಮ್ಮೆ ಬ್ಲೀಡಿಂಗ್​ ಶುರುವಾದರೆ 2 ರಿಂದ 7 ದಿನ ಬ್ಲೀಡಿಂಗ್​ ಆಗುವುದು ಮಾಮೂಲು. ಆದರೆ 2ಕ್ಕಿಂತ ಕಡಿಮೆ ಮತ್ತು 7ಕ್ಕಿಂತ ಹೆಚ್ಚು ದಿನ ಬ್ಲೀಡಿಂಗ್​ ಆಗುತ್ತಿದ್ದರೆ, ಸಮಸ್ಯೆ ಇದೆ ಎಂದು ಅರ್ಥ.

ಅಧಿಕ ಬ್ಲೀಡಿಂಗ್​

3. ಒಂದು ಗಂಟೆಗೆ 2 ಪ್ಯಾಡ್​ ಬದಲಾಯಿಸುವಷ್ಟು ರಕ್ತಸ್ರಾವ ಆಗುತ್ತಿದ್ದರೆ, ಆಗ ವೈದ್ಯರನ್ನು ಕಾಣುವುದು ಒಳ್ಳೆಯದು ಎಂದಿದ್ದಾರೆ ವೈದ್ಯೆ.

ಕ್ಲಾಟಿಂಗ್​

4. ರಕ್ತದಲ್ಲಿ ಕ್ಲಾಟ್​ ಅಂದ್ರೆ ಗಡ್ಡೆ ಬರುವುದು ಸಾಮಾನ್ಯ. ಆದರೆ, ಅದು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಆರೋಗ್ಯ ಸಮಸ್ಯೆ ಇದೆ ಎಂದು ಅರ್ಥ

ಹೊಟ್ಟೆ ನೋವು

5. ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು ಬರುವುದು ಸರ್ವೇ ಸಾಮಾನ್ಯ. ಆದರೆ ಅದು ಲೈಫ್​ಸ್ಟೈಲ್​ಗೆ ತೊಂದರೆ ಕೊಡುತ್ತಿದ್ದರೆ, ಅಂದರೆ ಸಹಿಸಿಕೊಳ್ಳಲಾರದಷ್ಟು ನೋವು ಬರುವುದು, ಶಾಲಾ, ಕಾಲೇಜು, ಕಚೇರಿಗೆ ಹೋಗಲು ಆಗದಷ್ಟು ನೋವು ಇದ್ದರೆ ಒಮ್ಮೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ವೈದ್ಯೆ ಹೇಳಿರುವ ವಿಡಿಯೋ ಇಲ್ಲಿದೆ ನೋಡಿ

View post on Instagram