ಮಗುವಿಗೆ 6 ತಿಂಗಳು ಎದೆಹಾಲು ಅಗತ್ಯವಾಗಿದ್ದು, ಒಂದು ವರ್ಷ ಮುಂದುವರಿಸುವುದು ಮಿದುಳಿನ ಬೆಳವಣಿಗೆಗೆ ಸಹಕಾರಿ. ಒಂದೂವರೆ ವರ್ಷದ ನಂತರ ಕ್ರಮೇಣವಾಗಿ ಎದೆಹಾಲು ನೀಡುವುದನ್ನು ಕಡಿಮೆ ಮಾಡಿ ನಿಲ್ಲಿಸುವುದು ತಾಯಿ ಮತ್ತು ಮಗುವಿಗೆ ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅವರು ಹೇಳಿದ ಟಿಪ್ಸ್ ಇಲ್ಲಿದೆ…
ಅಮ್ಮನ ಎದೆಹಾಲು ಮಗುವಿಗೆ ಅಮೃತ ಸಮಾನ. ಎದೆಹಾಲಿನಲ್ಲಿ ಇರುವ ಪೌಷ್ಟಿಕತೆ ಕಂದಮ್ಮಗಳಿಗೆ ಇನ್ನೆಲ್ಲಿಯೂ ಸಿಗಲು ಸಾಧ್ಯವೇ ಇಲ್ಲ. ಇದು ಸೃಷ್ಟಿಯ ಸೋಜಿಗವೂ ಹೌದು. ಮಗು ಹುಟ್ಟಿದಾಗಲೇ ಬೇರೇನೂ ತಿಳಿಯದಿದ್ದರೂ ಅಮ್ಮನ ಎದೆಹಾಲು ಹೇಗೆ ಹೀರಬೇಕು ಎನ್ನುವುದು ಹುಟ್ಟುತ್ತಲೇ ಬರುತ್ತದೆ. ಆ ಹಾಲು ಎಲ್ಲಿ ಸಿಗುತ್ತದೆ ಎನ್ನುವ ಬಗ್ಗೆಯೂ ಕಂದಮ್ಮನಿಗೆ ತಿಳಿದಿರುತ್ತದೆ. ಇದು ನಿಜಕ್ಕೂ ವಿಚಿತ್ರ ಎಂದೇ ಎನ್ನಿಸುವುದು ಉಂಟು. ಅಮ್ಮ ಮತ್ತು ಮಗುವಿನ ಸಂಬಂಧ ಇನ್ನಷ್ಟು ಗಾಢವಾಗಲು ಈ ಅಮೃತ ಎನ್ನಿಸಿಕೊಂಡಿರುವ ಎದೆಹಾಲೇ ಮಾಧ್ಯಮವಾಗಿ ಕಾರ್ಯನಿರ್ವಹಿಸುವುದು ಇದೆ. ಆದರೆ ಎಷ್ಟೋ ತಾಯಂದಿರಿಗೆ ಎದೆಹಾಲನ್ನು ಯಾವಾಗ ನಿಲ್ಲಿಸಬೇಕು ಎನ್ನುವ ಕನ್ಫ್ಯೂಷನ್ ಇದ್ದೇ ಇರುತ್ತದೆ. ಅದಕ್ಕಾಗಿಯೇ ಕಾರಣ ಸಹಿತವಾಗಿ ಖ್ಯಾತ ವೈದ್ಯೆ, ಸ್ತ್ರೀರೋಗ ತಜ್ಞರೂ ಆಗಿರುವ ಡಾ.ದೀಪ್ತಿ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಆರು ತಿಂಗಳು ಎದೆಹಾಲು ಮುಖ್ಯ
ಮಗುವಿಗೆ ಮೊದಲ ಆರು ತಿಂಗಳು ಎದೆಹಾಲನ್ನು ಪದೇ ಪದೇ ಕೊಡಬೇಕು. ಇದನ್ನು ಬಿಟ್ಟು ಯಾವ ಹಾಲು ಅಥವಾ ಯಾವ ಪದಾರ್ಥವನ್ನೂ ಮಗುವಿಗೆ ಕೊಡಬಾರದು. ಮಗುವಿಗೆ ಒಂದು ವರ್ಷ ಆದಾಗ ಸಾಲಿಡ್ ಫುಡ್ ಶುರುಮಾಡಬೇಕು. ಆಗ ಮಗುವಿಗೆ ದಿನಕ್ಕೆ 6 ರಿಂದ 7 ಬಾರಿ ಎದೆ ಹಾಲು ಕೊಟ್ಟರೆ ಮಗುವಿನ ಮಿದುಳು ಚುರುಕಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದಿದ್ದಾರೆ ವೈದ್ಯೆ.
ನಿಧಾನಕ್ಕೆ ಕಡಿಮೆ ಮಾಡಿ
ಮಗುವಿಗೆ ಒಂದೂವರೆ ಆಗುವಷ್ಟರಲ್ಲಿ ಫೀಡಿಂಗ್ ಮಾಡುವುದನ್ನು ನಿಧಾನಕ್ಕೆ ಕಡಿಮೆ ಮಾಡುತ್ತಾ ಬರಬೇಕು. ನಾಲ್ಕು ಸಲ ಕೊಡುತ್ತಿದ್ದರೆ 2 ಸಲ ಕೊಡಿ. ಕೊನೆಗೆ ದಿನಕ್ಕೆ ಒಂದು ಸಲ ಕೊಟ್ಟು ಅದನ್ನು ಸ್ಲೋ ಆಗಿ ಸ್ಟಾಪ್ ಮಾಡಬೇಕು ಎಂದಿದ್ದಾರೆ. ಒಂದೂವರೆ ವರ್ಷ ಆದ ನಂತರ ಮಗುವಿನ ಬ್ರೇನ್ ಡೆವಲಪ್ಮೆಂಟ್ ಸಂಪೂರ್ಣ ಆಗಿರುತ್ತದೆ. ಆದ ಕಾರಣಕ್ಕೆ ಸ್ಲೋ ಆಗಿ ಸ್ಟಾಪ್ ಮಾಡಿಬಿಡಿ. ಕೆಲವು ಮಕ್ಕಳು ಎರಡು ವರ್ಷ ಆದರೂ ಹಾಲು ಕುಡಿಯುತ್ತಾರೆ. ಇದು ತಪ್ಪು ಎಂದಿರುವ ವೈದ್ಯೆ, ಹೀಗೆ ಮಾಡಿದರೆ, ಮಕ್ಕಳು ಪದೇ ಪದೇ ಹಾಲು ಬೇಕೆಂದು ಒತ್ತಾಯ ಮಾಡುತ್ತಾರೆ. ಆದ್ದರಿಂದು ಒಂದೂವರೆ ವರ್ಷಕ್ಕೆ ನಿಲ್ಲಿಸಿದರೆ ಉತ್ತಮ ಎಂದಿದ್ದಾರೆ.
ಎದೆ ಕಟ್ಟುವುದಿಲ್ಲ
ಹೀಗೆ ಪಾಲಿಸಿದರೆ ಹೆಣ್ಣುಮಕ್ಕಳಿಗೂ ಎದೆ ಕಟ್ಟುವುದಿಲ್ಲ, ಜೊತೆಗೆ ಎದೆ ಹಾಲು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಯಾವುದೇ ಕಾರಣಕ್ಕೂ ಏಕಾಏಕಿಯಾಗಿ ನಿಲ್ಲಿಸುವುದು ಒಳ್ಳೆಯದಲ್ಲ. ಇದರಿಂದ ಎದೆಯ ಹಾಲು ಕಟ್ಟುವ ಸಾಧ್ಯತೆ ಇರುತ್ತದೆ. ಮಗು ಕೂಡ ಒಂದೇ ಸಲಕ್ಕೆ ಹಾಲನ್ನು ಬಿಟ್ಟು ಇರುವುದು ಕಷ್ಟವಾಗುತ್ತದೆ. ಆದ್ದರಿಂದ ಕ್ರಮೇಣ ಕಡಿಮೆ ಮಾಡುತ್ತಾ ಮಾಡುತ್ತಾ ಎದೆಹಾಲನ್ನು ನೀಡುವುದನ್ನು ಬಿಡಬೇಕು ಎನ್ನುವುದು ವೈದ್ಯೆ ಡಾ.ದೀಪ್ತಿ ಮಾತು. ಇಲ್ಲಿದೆ ನೋಡಿ ಅವರ ವಿಡಿಯೋ:
ಇದನ್ನೂ ಓದಿ: ಯಪ್ಪಾ, ಈ ಸುಂದ್ರಿ ನಾನೇನ್ರೀ? ಮೇಲಿರೋ ಗಂಡಂಗೆ ಮಾತ್ರ ತೋರಿಸ್ಬೇಡ್ರಪ್ಪೋ- Bigg Boss ಮಲ್ಲಮ್ಮ ಮಾತು ಕೇಳಿ
