ಶಾಸಕ ಬಿ.ಕೆ. ಸಂಗಮೇಶ್ ಅವರ 'ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವೆ' ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಮುಸ್ಲಿಂ ಮುಖಂಡರು ಮತಾಂತರದ ಸವಾಲು ಹಾಕಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು (ಸೆ.10): ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ 'ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿಯೇ ಹುಟ್ಟಬೇಕು' ಎಂಬ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ ಸಂಗಮೇಶ್, 'ನನ್ನನ್ನು ಜನರು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ನಾನು ಎಂದಿಗೂ ನಿಮ್ಮ ಮನೆಮಗನಾಗಿರುತ್ತೇನೆ. ಮುಂದಿನ ಜನ್ಮವಿದ್ದರೆ ಮುಸ್ಲಿಂ ಆಗಿಯೇ ಹುಟ್ಟಬೇಕು' ಎಂದು ಭಾವುಕವಾಗಿ ಹೇಳಿದ್ದರು. ಆದರೆ, ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಸ್ಲಿಂ ಮುಖಂಡರೊಬ್ಬರು ಸಂಗಮೇಶ್‌ಗೆ ಮತಾಂತರದ ಸವಾಲು ಹಾಕಿದ್ದಾರೆ.
ಬಿಜೆಪಿಯಿಂದ ತಿರುಗೇಟು, ಈಶ್ವರಪ್ಪನಿಂದ ಚಾಲೆಂಜ್
ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರು ಸಂಗಮೇಶ್‌ರ ಹೇಳಿಕೆಗೆ ಕಿಡಿಕಾರಿದ್ದಾರೆ. 'ಸಂಗಮೇಶ್‌ಗೆ ಮುಸ್ಲಿಂ ಆಗಬೇಕೆಂದಿದ್ದರೆ ಮುಂದಿನ ಜನ್ಮದವರೆಗೆ ಕಾಯುವ ಅಗತ್ಯವಿಲ್ಲ. ಈಗಲೇ ಮತಾಂತರಗೊಂಡು, ಹೆಸರನ್ನು ‘ಸಂಗಮುಲ್ಲಾಖಾನ್’ ಎಂದು ಬದಲಾಯಿಸಿಕೊಂಡು ಚುನಾವಣೆಗೆ ಸ್ಪರ್ಧಿಸಲಿ. ಜನರು ನಿಮ್ಮನ್ನು ಹಿಂದೂ ಎಂಬ ಕಾರಣಕ್ಕೆ ಮತ ಹಾಕಿದ್ದಾರೆ. ಮುಂದಿನ ಜನ್ಮ ಅಲ್ಲ, ಮುಂದಿನ ಬಾರಿ ಮತಾಂತರಗೊಂಡು ಸ್ಪರ್ಧಿಸಿ ಎಂದು ತೀಕ್ಷ್ಣವಾಗಿ ಚಾಲೆಂಜ್ ಮಾಡಿದ್ದಾರೆ.
ಈಗ್ಲೇ ಮತಾಂತರ ಮಾಡ್ತೇನೆ ಬನ್ನಿ: ಮುಸ್ಲಿಂ ಮುಖಂಡನಿಂದ ಸವಾಲು:
ಇದೇ ವೇಳೆ, ಮುಸ್ಲಿಂ ಮುಖಂಡ ಸಾದಿಕ್ ಪಾಶಾ ಅವರು ಸಂಗಮೇಶ್‌ಗೆ ತಿರುಗೇಟು ನೀಡಿದ್ದಾರೆ. ಮುಸ್ಲಿಮರು ಪುನರ್ಜನ್ಮದಲ್ಲಿ ನಂಬಿಕೆ ಇಡುವುದಿಲ್ಲ. ಶಾಸಕ ಸಂಗಮೇಶ್‌ಗೆ ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ, ಮುಂದಿನ ಜನ್ಮದವರೆಗೆ ಕಾಯದೇ ಈಗಲೇ ಕಲ್ಮಾ ಓದಿ ಇಸ್ಲಾಂಗೆ ಮತಾಂತರಗೊಳ್ಳಲಿ. ಮತಗಳನ್ನು ಸೆಳೆಯಲು ಇಂತಹ ನಾಟಕದ ಅಗತ್ಯವಿಲ್ಲ. ಅವರಿಗೆ ಮುಸ್ಲಿಂ ಆಗುವ ಆಸೆ ಇದ್ದರೆ, ನನ್ನ ಬಳಿಗೆ ಬರಲಿ, ನಾನೇ ಅವರನ್ನು ಮುಸ್ಲಿಮರನ್ನಾಗಿ ಕನ್ವರ್ಟ್ ಮಾಡುತ್ತೇನೆ' ಎಂದು ಸವಾಲು ಹಾಕಿದ್ದಾರೆ. ಸಾದಿಕ್ ಪಾಶಾ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಸಂಗಮೇಶ್‌ರ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನ ಕೆಲವು ನಾಯಕರು ಸಂಗಮೇಶ್‌ರ ಹೇಳಿಕೆಯನ್ನು ಭಾವನಾತ್ಮಕವಾಗಿ ನೋಡಬೇಕೇ ಹೊರತು, ರಾಜಕೀಯವಾಗಿ ತಪ್ಪಾಗಿ ಅರ್ಥೈಸಬಾರದು ಎಂದಿದ್ದಾರೆ. ಆದರೆ, ಬಿಜೆಪಿ ಮತ್ತು ಕೆಲವು ಮುಸ್ಲಿಂ ಸಂಘಟನೆಗಳು ಇದನ್ನು ಚುನಾವಣೆಗೆ ಮತ ಪಡೆಯುವ ತಂತ್ರವಾಗಿ ಕಾಣುತ್ತಿವೆ. ಈ ವಿವಾದದಿಂದ ಶಿವಮೊಗ್ಗದ ರಾಜಕೀಯ ವಾತಾವರಣ ತೀವ್ರ ಉದ್ವಿಗ್ನವಾಗಿ ಪರ ವಿರೋಧಗಳು ಕೇಳಿಬರುತ್ತಿವೆ.
