ಮದ್ದೂರಿನ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಬಗ್ಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಂಧಿತರು ನಿಜವಾದ ಅಪರಾಧಿಗಳಲ್ಲ, ಬಿಜೆಪಿ ಒತ್ತಡಕ್ಕೆ ಮಣಿದು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಮೈಸೂರು (ಸೆ.10) ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ 24 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕ್ರಮವನ್ನು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತೀವ್ರವಾಗಿ ಖಂಡಿಸಿದ್ದಾರೆ.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ಆರೋಪ ಸಂಬಂಧ ಮಾತನಾಡಿದ ಎಂ ಲಕ್ಷ್ಮಣ್, ಬಂಧಿತ 24 ಜನರು ನಿಜವಾಗಿಯೂ ಕಲ್ಲು ತೂರಿದವರೇ? ಅಮಾಯಕರನ್ನು ಬಂಧಿಸಿದರೆ ಹೇಗೆ? ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಈ ಬಗ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಮೆರವಣಿಗೆ ವೇಳೆ ಒಬ್ಬ ಮಹಿಳೆ ಮುಸ್ಲಿಮರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಇದೇ ಮಹಿಳೆ ಹಿಂದೂಗಳ ವಿರುದ್ಧ ಬೈದಿದ್ದರೆ ಸುಮ್ಮನಿರುತ್ತಿದ್ದಾರೆ? ಈ ಮಹಿಳೆಗೆ ಮುಂದೆ ಬಿಜೆಪಿಯಿಂದ ಮದ್ದೂರು ಟಿಕೆಟ್ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.

ಮಂಡ್ಯ ಜಿಲ್ಲೆಗೆ ಬಿಜೆಪಿ ಪ್ರವೇಶಕ್ಕೆ ಜೆಡಿಎಸ್ ಕಾರಣ:

ಮಂಡ್ಯದಲ್ಲಿ ಬಿಜೆಪಿಯ ಪ್ರವೇಶಕ್ಕೆ ಜೆಡಿಎಸ್ ಕಾರಣರಾಗಿದ್ದಾರೆ. ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ಜನ ಶಾಪ ಹಾಕುತ್ತಾರೆ. ಮಂಡ್ಯವನ್ನು ಕೇಸರೀಕರಣಗೊಳಿಸಲು ಜೆಡಿಎಸ್ ಬಿಜೆಪಿಗೆ ದಾರಿ ಮಾಡಿಕೊಟ್ಟಿದೆ. ಕುಮಾರಸ್ವಾಮಿ ಮಂತ್ರಿ ಸ್ಥಾನಕ್ಕಾಗಿ ಪಕ್ಷವನ್ನೇ ಅಡವಿಟ್ಟಿದ್ದಾರೆ. ಬಿಜೆಪಿ ಜೆಡಿಎಸ್‌ನನ್ನು ನುಂಗಿಹಾಕಲಿದೆ ಎಂದರು.

ನಿನ್ನೆ ಮೈಸೂರಿನಲ್ಲಿ ನಡೆದ ಚಾಮುಂಡಿಬೆಟ್ಟ ಚಲೋ ಕಾರ್ಯಕ್ರಮದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿದ ಎಂ ಲಕ್ಶ್ಮಣ್, ಹಿಂದೂ ಜಾಗರಣ ವೇದಿಕೆ ಹೆಸರಿನಲ್ಲಿ 5 ಸಾವಿರ ಗೂಂಡಾಗಳು ಹೊರಗಡೆಯಿಂದ ಬಂದಿದ್ದರು. ಮದ್ದೂರಿನಂತೆ ಮೈಸೂರಿನಲ್ಲೂ ಗಲಭೆ ಸೃಷ್ಟಿಸಲು, ಬಸ್‌ಗಳಿಗೆ ಬೆಂಕಿ ಹಚ್ಚಲು ಬಿಜೆಪಿಯಿಂದ ಯೋಜನೆ ರೂಪಿಸಲಾಗಿತ್ತು. ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದಂತೆ ನಡೆದ ಕೋಮು ಗಲಭೆ ಸೃಷ್ಟಿಯ ಯತ್ನವಾಗಿದೆ. ಇದರ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ ಎಂದು ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ

ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಎಂ ಲಕ್ಷ್ಮಣ್, ಪ್ರತಾಪ್ ಸಿಂಹ ಕಜ್ಜಿ ನಾಯಿಯಂತೆ ಎಲ್ಲರನ್ನೂ ಕಚ್ಚುತ್ತಿದ್ದಾನೆ. ಸಿದ್ದರಾಮಯ್ಯನವರನ್ನೂ ಕಚ್ಚಲು ಬರುತ್ತಾನೆ. ಆತನಿಗೆ ಗೌರವ, ಘನತೆ ಇಲ್ಲ. ಕ್ಯಾಮೆರಾ ಮುಂದೆ ಬಂದರೆ ದೆವ್ವ ಬಂದಂತೆ ಆಡುತ್ತಾನೆ. ಇಂತಹ ಮೂರ್ಖ, ಅವಿವೇಕಿ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಒದ್ದು ಒಳಗೆ ಹಾಕಬೇಕು. ಈ ರೀತಿ ಮುಂದುವರಿದರೆ ಮೈಸೂರು ಜನತೆ ಅವನನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾರೆ. ಆತನ ಜೊತೆಗಿರುವವರೆಲ್ಲ ಗೂಂಡಾಗಳು. ಈ ಮೂಲಕ ಜನರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಎನ್‌ಐಎ ತನಿಖೆಗೆ ಒತ್ತಾಯ

ಮದ್ದೂರು ಕಲ್ಲು ತೂರಾಟ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕೆಂದು ಲಕ್ಷ್ಮಣ್ ಒತ್ತಾಯಿಸಿದ್ದಾರೆ. ಗಲಾಟೆಗೆ ಬಿಜೆಪಿಯಿಂದ ಮಹಿಳೆಯರಿಗೆ ಮತ್ತು ಪುರುಷರಿಗೆ ತರಬೇತಿ ನೀಡಲಾಗಿದೆ. ಈ ಘಟನೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಇದನ್ನು ಎನ್‌ಐಎ ತನಿಖೆಗೆ ಒಪ್ಪಿಸಿ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಎಂದು ಅವರು ಒತ್ತಾಯಿಸಿದರು.

ಮಂಡ್ಯದಲ್ಲಿ ಬಿಜೆಪಿಯ ಕೇಸರೀಕರಣಕ್ಕೆ ಜೆಡಿಎಸ್ ಕಾರಣವಾಗಿದೆ. ಬಿಜೆಪಿಯ ಶಾಸಕ ನಾಯಕರಿಗೆ ಕಾಮನ್ ಸೆನ್ಸ್ ಇದೆಯೇ? ಇಂತಹ ಕೃತ್ಯಗಳಿಗೆ ಬೂಕರ್ ಪ್ರಶಸ್ತಿಯಂತಹ ಸಮಾನವಾದ ಪ್ರಶಸ್ತಿಯನ್ನೇ ಕೊಡಬಹುದು ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು. ಈ ಘಟನೆಯಿಂದ ಮಂಡ್ಯ ಮತ್ತು ಮೈಸೂರಿನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.