ಮದ್ದೂರು ಕಲ್ಲು ತೂರಾಟ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸದೆ ಮನೆಯಲ್ಲಿದ್ದರೆ ಸರ್ಕಾರಕ್ಕೆ ಘಟನೆ ನಿಭಾಯಿಸಲು ಸುಲಭವಾಗುತ್ತದೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಬೆಂಗಳೂರು (ಸೆ.10): ಬಿಜೆಪಿಯವರು ಮದ್ದೂರು ಕಲ್ಲು ತೂರಾಟ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳದೆ ಮನೆಯಲ್ಲಿದ್ದರೆ ಎಲ್ಲವೂ ಸರಿಹೋಗುತ್ತದೆ. ಸರ್ಕಾರವೂ ಘಟನೆಯನ್ನು ಸಮರ್ಪಕವಾಗಿ ನಿಭಾಯಿಸುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಣೇಶೋತ್ಸವದ ವೇಳೆ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಘಟನೆಯನ್ನು ಖಂಡಿಸಿ ಮಹದೇವಪ್ಪ, ಯಾರೇ ಈ ಕೃತ್ಯದಲ್ಲಿ ಭಾಗಿಯಾಗಿರಲಿ, ಅದು ಖಂಡನೀಯ. ಧಾರ್ಮಿಕ ಅಥವಾ ಮತೀಯ ಶಕ್ತಿಗಳು ಯಾವುದೇ ಧರ್ಮಕ್ಕೆ ಸೇರಿರಲಿ, ಅಂತಹ ಕೃತ್ಯಗಳನ್ನು ಖಂಡಿಸಬೇಕು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗಣೇಶ ಚತುರ್ಥಿಯನ್ನು ಬಾಲಗಂಗಾಧರ ತಿಲಕರು ಹಿಂದೂ ಸಂಘಟನೆಗಾಗಿ ಆರಂಭಿಸಿದರು. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಇದನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಹದೇವಪ್ಪ ಕಿಡಿಕಾರಿದರು.
ಬಿಜೆಪಿಯವರು ಮದ್ದೂರಿಗೆ ಭೇಟಿ ನೀಡದೆ, ಈ ವಿಷಯವನ್ನು ರಾಜಕೀಯಗೊಳಿಸದೆ ಮನೆಯಲ್ಲಿದ್ದರೆ, ಸರ್ಕಾರಕ್ಕೆ ಈ ಘಟನೆಯನ್ನು ಶಾಂತಿಯುತವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಮಹದೇವಪ್ಪನವರ ಹೇಳಿಕೆಯಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಚಕಮಕಿ ಮತ್ತಷ್ಟು ತೀವ್ರವಾಗುವ ಸಾಧ್ಯತೆಯಿದೆ.
