ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ನಡುಗಡ್ಡೆಯಲ್ಲಿ ಸಿಲುಕಿದ್ದ ಎರಡು ಹಸುಗಳನ್ನು ಕ್ರೇನ್ ಮೂಲಕ ರಕ್ಷಿಸಲಾಯಿತು. ಶಿವಮೊಗ್ಗದಲ್ಲಿ ಒಳಚರಂಡಿಗೆ ಬಿದ್ದ ಕರುವನ್ನೂ ರಕ್ಷಿಸಲಾಗಿದೆ.
ಮಂಡ್ಯ: ಹೇಮಾವತಿ ನದಿಯ ಹೊರ ಹರಿವು ಹಠಾತ್ ಹೆಚ್ಚಳ ಆಗಿದ್ದರಿಂದ ಮೇಯಲು ಹೋಗಿ ನಡುಗಡ್ಡೆಯಲ್ಲಿ ಸಿಲುಕಿದ ಎರಡು ಹಸುಗಳನ್ನು ಕ್ರೇನ್ ಮೂಲಕ ರಕ್ಷಣೆ ಮಾಡಿದ ಘಟನೆ ನಡೆದಿದೆ. ಕೊಡಗು ಹಾಗೂ ಹಾಸನ ಭಾಗದಲ್ಲಿ ಕೆಲ ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಹಾಸನ ಜಿಲ್ಲೆಯ ಗೋರೂರು ಬಳಿ ಇರುವ ಹೇಮಾವತಿ ಜಲಾಶಯ ತುಂಬಿದೆ. ಜಲಾಶಯದಲ್ಲಿನ ನೀರಿನ ಮಟ್ಟ ಏರಿಕೆ ಆಗಿದ್ದರಿಂದ ಜಲಾಶಯದ ಹೊರ ಹರಿವು ಹೆಚ್ಚಳ ಆಗಿದೆ. ಹೀಗಾಗಿ ಹಠಾತ್ ನೀರು ಬಿಟ್ಟಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಒಮ್ಮಿಂದೊಮ್ಮೆಲೇ ಏರಿಕೆ ಆಗಿದೆ.
ಹಸುಗಳ ಸೊಂಟಕ್ಕೆ ಬೆಲ್ಟ್ ಕಟ್ಟಿ ಏರ್‌ಲಿಫ್ಟ್
ಇದಕ್ಕೂ ಮೊದಲು ಈ ನದಿಯಲ್ಲಿ ಹೆಚ್ಚಿನ ನೀರಿಲ್ಲದ ಕಾರಣ ಮೇಯಲು ಬಿಟ್ಟ ಹಸುಗಳು ಮೇಯುತ್ತಾ ಮೇಯುತ್ತಾ ನದಿಯ ಮಧ್ಯಭಾಗವನ್ನು ತಲುಪಿದ್ದವು. ಇತ್ತ ನದಿಯಲ್ಲಿ ನೀರು ಹಠಾತ್ ಏರಿಕೆ ಆಗಿದೆ. ಹೀಗಾಗಿ ಹಸುಗಳು ನಡುಗಡ್ಡೆಯಲ್ಲಿಯೇ ಬಾಕಿ ಆಗಿದ್ದವು. ಹೀಗಾಗಿ ಸೇತುವೆ ಮೇಲೆ ಕ್ರೇನ್ ನಿಲ್ಲಿಸಿ ಕ್ರೇನ್ ಮೂಲಕ ಇಳಿದ ಹಸುವಿನ ಮಾಲೀಕ ಹಸುಗಳಿಗೆ ಅಗ್ನಿ ಶಾಮಕ ಸಿಬ್ಬಂದಿಯ ನೆರವಿನಿಂದ ಬೆಲ್ಟ್ ಕಟ್ಟಿದ್ದು ನಂತರ ಕ್ರೇನ್ ಮೂಲಕ ಮೇಲಕ್ಕೆ ಎತ್ತಿ ಅವುಗಳನ್ನು ಸೇತುವೆ ಮೇಲೆ ಇಳಿಸಿ ರಕ್ಷಣೆ ಮಾಡಲಾಯ್ತು. ಎರಡು ಹಸುಗಳನ್ನು ಈ ಸಂದರ್ಭದಲ್ಲಿ ರಕ್ಷಣೆ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಒಳಚರಂಡಿಗೆ ಬಿದ್ದ ಕರುವಿನ ರಕ್ಷಣೆ
ಹಾಗೆಯೇ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಕಾಲೇಜ್ ಹತ್ತಿರ ಒಳ ಚರಂಡಿಯಲ್ಲಿ ಬಿದ್ದ ಕರುವೊಂದನ್ನು ರಕ್ಷಣೆ ಮಾಡಲಾಗಿದೆ. ಸಾಗರ ಗ್ರಾಮಂತರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಹಾಯದೊಂದಿಗೆ ಒಳಚರಂಡಿಯಲ್ಲಿ ಬಿದ್ದಿದ್ದ ಹಸುವನ್ನು ರಕ್ಷಣೆ ಮಾಡಿ ಹೊರಗಡೆ ಬಿಡಲಾಯಿತು. ಒಳಚರಂಡಿಯಲ್ಲಿ ಕರುವೊಂದು ಬಿದ್ದಿರುವ ಬಗ್ಗೆ ಸ್ಥಳೀಯರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಶಿವಾನಂದ್, ಸುರೇಂದ್ರ ಕುಮಾರ್ ಸ್ಥಳಕ್ಕೆ ಹೋಗಿ ಕರುವನ್ನು ರಕ್ಷಿಸಿದ್ದು ಇವರ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸಿಸಿದ್ದಾರೆ.
ಇದನ್ನೂ ಓದಿ: ಮಹದೇವನ ಕೊರಳಿಗೆ ಸುತ್ತಿ ಹೆಡೆಎತ್ತಿ ನಿಂತ ನಾಗರ ಹಾವು
ಇದನ್ನೂ ಓದಿ: ಆಟವಾಡುತ್ತಾ ಅಕ್ಕ ತಮ್ಮ ನುಂಗಿದ್ದೇನು? ಹೊಟ್ಟೆ ನೋವು ಅಂತಿದ್ದವರ ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಶಾಕ್
