LinkedIn profile viral: ನೋಯ್ಡಾ ಮೂಲದ ವ್ಯಕ್ತಿಯೊಬ್ಬರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ತಮ್ಮ ಹುದ್ದೆಯನ್ನು 'ಹೆಂಡ್ತಿಯ ಸಹಾಯಕ' ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.
ವ್ಯಕ್ತಿಯ ಲಿಂಕ್ಡಿನ್ ಪ್ರೊಫೈಲ್ ಭಾರಿ ವೈರಲ್:
ನೋಯ್ಡಾ: ಲಿಂಕ್ಡಿನ್ ಎಂಬುದು ಇತರ ಸಾಮಾಜಿಕ ಜಾಲತಾಣಗಳಿಗಿಂತ ವಿಭಿನ್ನವಾದ, ಉದ್ಯೋಗ ಹುಡುಕುವವರಿಗೆ ಹಾಗೂ ಉದ್ಯೋಗಿಗಳ ಅರಸುವವರಿಗೆ ವೇದಿಕೆಯಾಗಿರುವ ಒಂದು ತಾಣ. ಇದರಲ್ಲಿ ಅನೇಕ ಸಂಸ್ಥೆಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಹೆಚ್ ಆರ್‌ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಉದ್ಯೋಗಿಗಳು ತಮ್ಮ ಪ್ರೊಫೈಲ್ ಸೃಷ್ಟಿ ಮಾಡಿ ತಮ್ಮ ಬಗ್ಗೆ ಬರೆದುಕೊಂಡಿರುತ್ತಾರೆ. ತಮ್ಮ ಹುದ್ದೆ ಏನು? ತಮ್ಮ ವೃತ್ತಿಯ ಅನುಭವ, ತಾವು ನಿರ್ವಹಿಸುತ್ತಿರುವ ಹುದ್ದೆ, ಮುಂತಾದ ವಿಚಾರಗಳನ್ನು ಇಲ್ಲಿ ಬರೆದುಕೊಂಡಿರುತ್ತಾರೆ. ಇಲ್ಲಿ ಉದ್ಯೋಗ ಅರಸುವವರು ಕೂಡ ಸಾಕಷ್ಟು ಜನರು ತಮ್ಮ ಸಿವಿ ರೆಸ್ಯೂಮ್‌ಗಳ ವಿವರವನ್ನು ಹಾಕುತ್ತಾರೆ. ಜೊತೆಗೆ ಇಲ್ಲಿ ತಮ್ಮ ಸಂಸ್ಥೆಗಳಲ್ಲಿ ಇರುವ ಉದ್ಯೋಗವಕಾಶಗಳ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಹೆಸರಿನ ಜೊತೆ ನೀಡಿದ ವಿವರ ನೋಡಿದವರು ಬಿದ್ದು ಬಿದ್ದು ನಗುತ್ತಿದ್ದಾರೆ. ಅವರ ಹಾಸ್ಯೆ ಪ್ರಜ್ಞೆಯನ್ನು ಜನರು ಮೆಚ್ಚಿದ್ದಾರೆ. ಹಾಗಿದ್ದರೆ ಅವರು ತಮ್ಮ ಲಿಂಕ್ಡಿನ್ ಪ್ರೊಫೈಲ್‌ನಲ್ಲಿ ಬರೆದಿದ್ದೇನು?
ಲಿಂಕ್ಡಿನ್ ಪ್ರೊಫೈಲ್‌ನಲ್ಲಿ ನೋಯ್ಡಾ ವ್ಯಕ್ತಿ ಬರೆದಿದ್ದೇನು?
ಹೌದು ನೋಯ್ಡಾದ ವ್ಯಕ್ತಿಯೊಬ್ಬರು ತಮ್ಮ ಲಿಂಕ್ಡಿನ್ ಪ್ರೊಫೈಲ್‌ನಲ್ಲಿ ತಾವು ಕಾರ್ನಿರ್ವಹಿಸುತ್ತಿರುವ ಹುದ್ದೆಯ ಜಾಗದಲ್ಲಿ ನನ್ನ ಹೆಂಡ್ತಿಯ ಸಹಾಯಕ( Assistant to my wife) ಎಂದು ಬರೆದಿದ್ದಾರೆ. ಈ ರೀತಿಯೂ ಒಂದು ಹುದ್ದೆ ಇರುತ್ತದೆಯೇ ಎಂದು ಜನ ನಕ್ಕಿದ್ದಾರೆ. ಅಂದಹಾಗೆ ತಮ್ಮ ಲಿಂಕ್ಡಿನ್ ಖಾತೆಯಲ್ಲಿ ಹೀಗೆ ಬರೆದವರು ಅನಿಲ್ ಬವೇಜಾ ಎಂಬ ನೋಯ್ಡಾ ಮೂಲದ ವ್ಯಕ್ತಿ ಇದರ ಸ್ಕ್ರೀನ್‌ಶಾಟ್ ಈಗ ಇತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇವರು ಸಾಮಾನ್ಯರಲ್ಲ, ಹಲವು ಆಟೋ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಹಿರಿಯ ಅಧಿಕಾರಿ:
ಹಾಗಂತ ಅನಿಲ್ ಬವೇಜಾ ಅವರು ಏನು ಹೆಂಡ್ತಿಗೆ ಸಹಾಯ ಮಾಡ್ತ ಕುಳಿತಿರುವ ಸಾಮಾನ್ಯ ವ್ಯಕ್ತಿ ಅಲ್ಲ, ಅವರು ಹೋಂಡಾ ಕಾರ್ಸ್ ಇಂಡಿಯಾ ಸೇರಿದಂತೆ ಪ್ರಮುಖ ಆಟೋಮೊಬೈಲ್ ಕಂಪನಿಗಳಲ್ಲಿ ಈ ಹಿಂದೆ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೂ ಬವೇಜಾ, ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಅನ್ನು ಅಸಾಂಪ್ರದಾಯಿಕ ಶೀರ್ಷಿಕೆಯೊಂದಿಗೆ ಅಪ್‌ಡೇಟ್ ಮಾಡಿದ್ದಾರೆ. ತಾವೊಂದು ಸಂಸ್ಥೆಯ ಸಲಹೆಗಾರ ಮುಂತಾದ ಪ್ರಮಾಣಿತ ಪದನಾಮಗಳನ್ನು ಆಯ್ಕೆ ಮಾಡುವ ಬದಲು ಅವರು ತಮಾಷೆಯಾಗಿ ನನ್ನ ಹೆಂಡ್ತಿಯ ಸಹಾಯಕ ಎಂದು ಪ್ರೊಫೈಲ್‌ನಲ್ಲಿ ಬರೆದಿದ್ದು, ಅನೇಕರು ಇವರ ಪ್ರಮಾಣಿಕತೆಯನ್ನು ಮೆಚ್ಚಿದ್ದಾರೆ.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಬವೇಜಾ ಹೋಂಡಾ ಕಾರ್ಸ್ ಇಂಡಿಯಾದಲ್ಲಿ 16 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ. ಅಲ್ಲಿ ಅವರು ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿ ಆಪರೇಟಿಂಗ್ ಹೆಡ್ ಹುದ್ದೆಗೆ ಏರಿದ್ದರು ನಂತರ ಅವರು ಕಾರು ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಆಗಸ್ಟ್ 2023 ರಲ್ಲಿ ಅವರು ನನ್ನ ಹೆಂಡತಿಗೆ ಸಹಾಯಕ ಎಂದು ತಮ್ಮ ಪ್ರೊಫೈಲ್‌ಗೆ ಹಾಸ್ಯದ ಲುಕ್ ನೀಡಿದ್ದಾರೆ. ಬಹುಶಃ ಅವರು ನಿವೃತ್ತಿಯಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಹುದ್ದೆಗೆ ಈ ರೀತಿ ಹಾಸ್ಯದ ಟಚ್ ನೀಡಿರುವ ಸಾಧ್ಯತೆ ಇದೆ.
ನೆಟ್ಟಿಗರಿಂದ ಭಾರಿ ಮೆಚ್ಚುಗೆ:
ಆದರೆ ಇವರ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ. ಅನೇಕರು ಹಾಸ್ಯಮಯವಾಗಿ ಹಲವು ಕಾಮೆಂಟ್ ಮಾಡಿದ್ದಾರೆ. ಇದು ಹುಚ್ಚಲ್ಲ, ಇವರೊಬ್ಬ ಲೆಜೆಂಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾವು ಪ್ರಮಾಣಿಕ ವ್ಯಕ್ತಿಯನ್ನು ಇಷ್ಟಪಡುತ್ತೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಸೈಟ್‌ನಲ್ಲಿ ನಾನು ನೋಡಿದ ಅತ್ಯಂತ ಬುದ್ಧಿವಂತ ವ್ಯಕ್ತಿ ಇವರು ಮತ್ತೊಂಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ನನ್ನ ಗಂಡನ ಕೆಲಸವೂ ಇದೇ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಕಾರ್ಯಕ್ಷಮತೆಯ ವಿವರ ಮುಜುಗರಕ್ಕಿಡು ಮಾಡಬಹುದು ಎಂದು ಮತ್ತೊಬ್ಬರು ಹಾಸ್ಯ ಮಾಡಿದ್ದಾರೆ.
ಹಾಗೆಯೇ ಒಬ್ಬ ಬಳಕೆದಾರರು ಅವರ ಆಯ್ಕೆಯನ್ನು ಮಹತ್ವಾಕಾಂಕ್ಷೆಯ ಆಯ್ಕೆ ಎಂದಿದ್ದಾರೆ. ಈ ವ್ಯಕ್ತಿ ನನ್ನ ಕನಸಿನ ಕೆಲಸವನ್ನೇ ಬದುಕುತ್ತಿದ್ದಾನೆ. ಅವನು ಹುಚ್ಚನಾಗಿದ್ದರೆ, ನಾನು ಕೂಡ ಹುಚ್ಚನಾಗಿರಬೇಕು. ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ಕೆಲಸ ಹುಡುಕುತ್ತಿದ್ದರೆ, ಅವರ ಟೈಮ್‌ಲೈನ್‌ನಲ್ಲಿ ಖಾಲಿ ಸ್ಥಾನವನ್ನು ಪ್ರಶ್ನಿಸುವ ಬದಲು ಅವರ ಈ ರೀತಿ ಬರಹ ಯಾರನ್ನಾದರೂ ನಗಿಸುತ್ತದೆ. ನಾನು ತಿಂಗಳಿಗೊಮ್ಮೆಯಾದರೂ ನನ್ನ ಹೆಂಡತಿಗೆ ನಾನು ಕೆಲಸವನ್ನು ತ್ಯಜಿಸಿ ಮನೆಯಲ್ಲಿಯೇ ಇರುವ ಗಂಡ ಮತ್ತು ತಂದೆಯಾಗುತ್ತೇನೆ ಎಂದು ಹೇಳುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅದೇನೆ ಇರಲಿ ಹೆಂಡ್ತಿಗೆ ತಲೆಬಾಗಿದವರು ಎಲ್ಲಿ ಬೇಕಾದರೂ ಗೆಲ್ಲಬಹುದಂತೆ, ಹೆಂಡ್ತಿಯ ಮುಂದೆ ದುರಂಕಾರ ತೋರಿಸುವ ಬದಲು ಪ್ರೀತಿ ತೋರಿಸಿ ಅಹಂಕಾರ ಬಿಟ್ಟು ಸೋತು ಗೆಲ್ಲಬೇಕಂತೆ ಇದೇ ಸುಖ ಸಂಸಾರದ ಗುಟ್ಟು ಎನ್ನುತ್ತಾರೆ ಅನೇಕ ವಿವಾಹಿತ ಪುರುಷರು. ಹೀಗಾಗಿ ಇವರು ಕೂಡ ಈ ಗುಟ್ಟನ್ನು ಅರಿತಂತಿದೆ. ಈ ಬಗ್ಗೆ ನೀವೇನಂತಿರಿ..
