Thanjavur untouchability incident: ತಮಿಳುನಾಡಿನ ತಂಜಾವೂರಿನಲ್ಲಿ, ದಲಿತ ಸಮುದಾಯದ ಶಾಲಾ ಮಕ್ಕಳು ಸಾರ್ವಜನಿಕ ದಾರಿಯಲ್ಲಿ ಹೋಗುವುದನ್ನು ವೃದ್ಧೆಯೊಬ್ಬರು ತಡೆದಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಪೊಲೀಸರು ಮಹಿಳೆ ಮತ್ತು ಆಕೆಯ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ತಮಿಳುನಾಡಿನಲ್ಲಿ ಮಾನವೀಯ ಸಮಾಜ ತಲೆ ತಗ್ಗಿಸುವ ಘಟನೆ
ತಂಜಾವೂರ್: ಕಾಲ ಬದಲಾಗಿದೆ ಆದರೆ ಜನರ ಮನಸ್ಥಿತಿ ಮಾತ್ರ ಇನ್ನೂ ಬದಲಾಗಿಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ದೇಶಕ್ಕೆ ಸ್ವಾತಂತ್ರ ಬಂದು 79 ವರ್ಷಗಳೇ ಕಳೆದಿವೆ. ವಿಜ್ಞಾನ ತಂತ್ರಜ್ಞಾನ ಸೇರಿದಂತೆ ದೇಶ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರೆದಿದೆ. ಆದರೆ ಅಸ್ಪೃಶ್ಯತೆ ಎಂಬ ಪಿಡುಗು ಮಾತ್ರ ನಮ್ಮ ದೇಶವನ್ನು ಇನ್ನೂ ಬಿಟ್ಟು ಹೋಗಿಲ್ಲ. ಕೆಲ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಮುದಾಯದ ಜನ ಇನ್ನೂ ಈ ಅಸ್ಪೃಶ್ಯತೆ ಎಂಬ ಪಿಡುಗಿನಿಂದ ಬಳಲುತ್ತಿದ್ದಾರೆ. ತಲೆಮಾರುಗಳೇ ಬದಲಾಗಿದ್ದರೂ, ಹಿಂದುಳಿದ ಸಮುದಾಯವನ್ನು ಮೇಲ್ದರ್ಜೆಗೆ ಏರಿಸುವ ಹಲವು ಪ್ರಯತ್ನಗಳನ್ನು ಸರ್ಕಾರ ಮಾಡಿದ್ದರು. ಅವರನ್ನು ಸಮಾಜದ ಇತರ ಸಮುದಾಯದವರು ಸಮಾನವಾಗಿ ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ಹಲವು ಕಾನೂನುಗಳನ್ನು ತಂದರೂ ಕೂಡ ಜನರ ಮನಸ್ಥಿತಿ ಬದಲಾಗದೇ ಇರುವುದು ಬೇಸರದ ವಿಚಾರ ಇದಕ್ಕೊಂದು ಉತ್ತಮ ಉದಾಹರಣೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿರುವ ಈ ಘಟನೆ.
ದಲಿತ ಸಮುದಾಯದ ಮಕ್ಕಳಿಗೆ ದಾರಿ ನಿರಾಕರಿಸಿದ ಮಹಿಳೆ
ಹೌದು ಮಹಿಳೆಯೊಬ್ಬರು ದಲಿತ ಸಮುದಾಯದ ಮಕ್ಕಳಿಗೆ ದಾರಿ ನಿರಾಕರಿಸಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಎಲ್ಲ ಜನ ನಡೆದುಕೊಂಡು ಹೋಗುತ್ತಿದ್ದ ದಾರಿಯಲ್ಲಿ ದಲಿತ ಸಮುದಾಯದ ಮಕ್ಕಳು ಹೋಗುವುದಕ್ಕೆ ಈ ವೃದ್ಧ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ವೃದ್ಧ ಮಹಿಳೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೋ ವೈರಲ್ ಆಗ್ತಿದ್ದಂತೆ ಎಫ್‌ಐಆರ್ ದಾಖಲು
ತಂಜಾವೂರು ತಾಲೂಕಿನ ಕೊಲ್ಲಂಗರೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋದಲ್ಲಿ ಕಾಣುವಂತೆ ಶಾಲಾ ಸಮವಸ್ತ್ರ ಧರಿಸಿರುವ ಮಕ್ಕಳು ಬೆನ್ನ ಮೇಲೆ ಬ್ಯಾಗ್ ಹಾಕಿಕೊಂಡು ಶಾಲೆಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಆದರೆ ಈ ವೇಳೆ ವೃದ್ಧ ಮಹಿಳೆಯೊಬ್ಬರು ಕೈಯಲ್ಲೊಂದು ಕೋಲು ಹಿಡಿದುಕೊಂಡು ಆ ಮಕ್ಕಳಿಗೆ ಬೈಯುತ್ತಾ ಈ ದಾರಿಯನ್ನು ಬಳಸದಂತೆ ಮಕ್ಕಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಆ ವೃದ್ಧ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಂಜಾವೂರ್ ತಾಲೂಕಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ, ಆದರೆ ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಭಾನುವಾರ ಪೊಲೀಸರು ಹೇಳಿದ್ದಾರೆ. ಅಲ್ಲದೇ ಈ ಕುಟುಂಬದವರು ತಮಗೆ ಸಾರ್ವಜನಿಕ ದಾರಿಯಲ್ಲಿ ಸಾಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಈ ವೃದ್ಧ ಮಹಿಳೆ ಹಾಗೂ ಆಕೆಯ ಕುಟುಂಬದವರ ವಿರುದ್ಧ ಈಗಾಗಲೇ ದೂರಿದ್ದಾರೆ.
ಅಲ್ಲದೇ ಇದಕ್ಕೂ ಮೊದಲು ಈ ಕುಟುಂದವರ ಕಿರುಕುಳದಿಂದಾಗಿ ಒಂದೂವರೆ ಕಿಲೋ ಮೀಟರ್ ಹೆಚ್ಚು ದೂರದ ರಸ್ತೆಯ ಮೂಲಕ ಸುತ್ತು ಬಳಸಿ ಸಾಗಿ ಹೋಗಬೇಕಿತ್ತು ಎಂದು ಊರಿನವರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗರಿ: ಯಾರೀಕೆ ಸೀರೆಯುಟ್ಟು ಮಿಂಚಿದ 6 ವರ್ಷದ ಪೋರಿ
ಇದನ್ನೂ ಓದಿ: ಆಕ್ಸಿಜನ್ ಸಿಲಿಂಡರ್ ಸಹಾಯವಿಲ್ಲದೇ ಮೌಂಟ್ ಎವರೆಸ್ಟ್ ಏರಿದ ಯುವಕ: ಈ ಸಾಧನೆ ಇದೇ ಮೊದಲು
