ಬಿಹಾರದಲ್ಲಿ ನೂತನವಾಗಿ ನಿರ್ಮಿಸಲಾದ ಡಾಮರ್ ರಸ್ತೆಯನ್ನು ಗ್ರಾಮಸ್ಥರು ಕಿತ್ತು ಮನೆಗೆ ಹೊತ್ತೊಯ್ದ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಒಂದು ಮಳೆ ಸುರಿದರೆ ಸಾಕು ಸರ್ಕಾರ ಮಾಡಿದ ರಸ್ತೆಗಳೆಲ್ಲಾ ಗುಂಡಿ ಬಿದ್ದು ಹೋಗುತ್ತದೆ. ರಸ್ತೆಯನ್ನು ಸರಿಪಡಿಸುವಂತೆ ಜನ ಮನವಿ ಮಾಡಿದರೆ ಆಡಳಿತ ಅದಕ್ಕೆ ಅಲ್ಲಲ್ಲಿ ಡಾಮರ್ ಪ್ಯಾಚ್ ಅಥವಾ ಮಣ್ಣಿನ ಪ್ಯಾಚ್ ಹಾಕಿ ತಿಪ್ಪೆ ಸವರಿ ಬಿಡುತ್ತದೆ. ಒಂದು ಹಳ್ಳಿಗೆ ಡಾಮರ್ ರಸ್ತೆ ಆಗಬೇಕಾದರೆ ಆ ಊರಿನ ಜನ, ಜನಪ್ರತಿನಿಧಿಗಳು ನೂರಾರು ಮನವಿ ಮಾಡಿರುತ್ತಾರೆ. ಮನವಿ ಮಾಡಿ ಹಲವು ವರ್ಷಗಳ ನಂತರ ಡಾಮರ್ ರಸ್ತೆ ಆಗುತ್ತದೆ. ಆದರೆ ಹೀಗೆ ಬಹಳ ಮನವಿಯ ನಂತರ ಆದ ಡಾಮರ್ ರಸ್ತೆಯಿಂದಲೇ ಡಾಮರ್ ಕಿತ್ತು ಜನ ಮನೆಗೊಯ್ದಿದ್ದಾರೆ. ಇಂತಹ ವಿಚಿತ್ರ ಹಾಗೂ ನಾಚಿಕೇಡಿನ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದಲ್ಲಿ ರಸ್ತೆಯನ್ನೇ ಕದ್ದ ಜನ:
ಭಾರತದಲ್ಲಿ ಸಾರ್ವಜನಿಕ ಆಸ್ತಿಗೆ ಪೋಷಕರು ಇಲ್ಲದಂತಾಗಿದೆ. ಯಾವುದೇ ಸಾರ್ವಜನಿಕ ವಸ್ತುಗಳನ್ನು ಜನ ಬೇಕಾಬಿಟ್ಟಿ ಬಳಕೆ ಮಾಡಿ ಹಾಳು ಮಾಡಿ ಬಿಡುತ್ತಾರೆ. ಇದೇ ಕಾರಣಕ್ಕೆ ಎಷ್ಟೇ ಅತ್ಯಾಧುನಿಕ ಸವಲತ್ತುಗಳನ್ನು ನೀಡಿದರೂ, ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿದಂತೆ ಸರ್ಕಾರಿ ಸಮುಚ್ಛಯಗಳು ಶೋಚನೀಯ ಸ್ಥಿತಿ ತಲುಪಿರುತ್ತದೆ. ಇವುಗಳೆಲ್ಲವೂ ನಮ್ಮ ತೆರಿಗೆ ಹಣದಿಂದ ಬಂದಂತಹ ಸವಲತ್ತುಗಳು ಅವುಗಳನ್ನು ನಮ್ಮ ಆಸ್ತಿ ಎಂಬಂತೆ ಜೋಪಾನ ಮಾಡಬೇಕು ಎಂಬುದನ್ನು ಯಾವೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಇರುವುದನ್ನು ಹಾಳು ಮಾಡಿ ಅದರಲ್ಲಿ ತಮ್ಮ ಸ್ವಂತಕ್ಕೇನಾದರೂ ಲಾಭ ಆಗುತ್ತಾ ಎಂಬುದನ್ನೇ ಬಹುತೇಕರು ನೋಡುತ್ತಾರೆ. ಇದರ ಪರಿಣಾಮವೇ ಈಗ ಬಿಹಾರದಲ್ಲಿ ನಡೆದ ಘಟನೆ.
ಡಾಮರ್ ರಸ್ತೆಗೆ ಕನ್ನ ಹಾಕಿದ ಗ್ರಾಮದ ಜನ:
ಬಿಹಾರದ ಗಲ್ಲಿಯೊಂದರ ರಸ್ತೆಗೆ ಡಾಮರ್ ಹಾಕಲಾಗಿದ್ದು, ಅಲ್ಲಿನ ಸುತ್ತಮುತ್ತಲ ಮನೆಗಳ ಜನ ಕುಟುಂಬ ಸಮೇತರಾಗಿ ಅಲ್ಲಿಗೆ ಬಂದು ರಸ್ತೆಗೆ ಹಾಕಿದ ಡಾಮರ್‌ನ್ನು ಹಾರೆ ಪಿಕಾಸಿಗಳಿಂದ ಕೆರೆದು ಬಕೆಟ್ ಬುಟ್ಟಿಗಳಿಗೆ ತುಂಬಿಸಿ ಹೊತ್ತೊಯ್ದಿದ್ದಾರೆ. @thatindicmonk ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ಈ ವೀಡಿಯೋವನ್ನು ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ. ಭಾರತದ ಹಲವು ದುರ್ಗಮ ಸ್ಥಳಗಳಲ್ಲಿ ಸರಿಯಾದ ರಸ್ತೆಗಳೇ ಇಲ್ಲ, ಅನೇಕರು ಶಾಲೆ, ಆಸ್ಪತ್ರೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆಯುವುದಕ್ಕೆ ಹಲವು ಕೀಲೋ ಮೀಟರ್‌ಗಟ್ಟಲೇ ಹಳ್ಳಿಗಾಡಿನ ದುರ್ಗಮವಾದ ಕಾಲುದಾರಿಯಲ್ಲಿ ನಡೆದು ಬರುವಂತಹ ಸ್ಥಿತಿ ಇದೆ. ಹೀಗಿರುವಾ ಇವರು ಮಾಡಿದ ರಸ್ತೆಯನ್ನೇ ಕೀಳುತ್ತಿರುವುದು ನೋಡಿದರೆ ಇವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಬಿಹಾರದ ಜೇನಾಬಾದ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇಲ್ಲಿ ಗ್ರಾಮಸ್ಥರು ಹೊಸದಾಗಿ ನಿರ್ಮಿಸಲಾದ ಟಾರ್ ರಸ್ತೆಯಿನ್ನು ಪಿಕಾಸಿ ಹಾರೆಗಳಿಂದ ಕಡಿದು ಅಲ್ಲಿರುವ ಡಾಮರ್ ಹಾಗೂ ಜಲ್ಲಿಯನ್ನು ಬಕೆಟ್‌ನಲ್ಲಿ ತುಂಬಿಸಿ ಮನೆಗೆ ಹೊತ್ತೊಯ್ಯುವುದನ್ನು ಕಾಣಬಹುದು. ಜೂನ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು ಇದರ ವೀಡಿಯೋ ಈಗ ವೈರಲ್ ಆಗ್ತಿದೆ. ಜೂನ್ 2025 ರ ವರದಿಗಳ ಪ್ರಕಾರ, ಬಂಕಾ ಜಿಲ್ಲೆಯ ಖರೌನಿ ಗ್ರಾಮದಲ್ಲಿ 2 ಕಿ.ಮೀ. ರಸ್ತೆಯನ್ನು ಹೀಗೆ ಕದ್ದು ಅಲ್ಲಿ ಗೋಧಿ ಬೆಳೆಯನ್ನು ಹಾಕಲಾಯ್ತು ಎಂಬ ಆರೋಪವಿದೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: 1 ಲೀಟರ್ ಮೂತ್ರದಿಂದ 6 ಗಂಟೆಗೆ ಬೇಕಾಗುವಷ್ಟು ಕರೆಂಟ್ ಉತ್ಪಾದನೆ: ಆಫ್ರಿಕನ್ ಮಕ್ಕಳ ಅದ್ಭುತ ಅವಿಷ್ಕಾರ
ಇದನ್ನೂ ಓದಿ: 8 ಕೋಟಿಗೂ ಅಧಿಕ ಮೌಲ್ಯದ ಎಂಗೇಜ್‌ಮೆಂಟ್ ರಿಂಗ್ ಪ್ರದರ್ಶಿಸಿದ ದುಬೈ ರಾಜಕುಮಾರಿ
