ವಿಚ್ಛೇದನದ ನಂತರ ದುಬೈ ರಾಜಕುಮಾರಿ ಶೇಖಾ ಮಹ್ರಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ರ‍್ಯಾಪರ್ ಫ್ರೆಂಚ್ ಮೊಂಟಾನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ದುಬಾರಿ ಉಂಗುರದ ಫೋಟೋ ವೈರಲ್ ಆಗಿದೆ.
ಡಿವೋರ್ಸ್ ನಂತರ ಮತ್ತೆ ಪ್ರೀತಿಯಲ್ಲಿ ಬಿದ್ದ ದುಬೈ ರಾಜಕುಮಾರಿ ಶೇಖಾ ಮಹ್ರಾ ಅವರು ಈಗ ತಮ್ಮ 1.1 ಮಿಲಿಯನ್ ಡಾಲರ್ ಮೌಲ್ಯದ ಎಂಗೇಜ್‌ಮೆಂಟ್ ರಿಂಗ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಭಾರೀ ವೈರಲ್ ಆಗಿದೆ. ತನ್ನ ಪತಿಗೆ ಸಾಮಾಜಿಕ ಜಾಲತಾಣದಲ್ಲೇ ವಿಚ್ಛೇದನ ಘೋಷಣೆ ಮಾಡುವ ಮೂಲಕ ದುಬೈ ರಾಜಕುಮಾರಿ ಶೇಖಾ ಮೆಹ್ರಾ ಕಳೆದ ವರ್ಷ ಸಾಕಷ್ಟು ಸದ್ದು ಮಾಡಿದ್ದರು. ಆದರೆ ಈಗ ಅವರು ಮೊರಾಕೋ-ಅಮೆರಿಕನ್ ಮೂಲದ ರ‍್ಯಾಪರ್ ಫ್ರೆಂಚ್ ಮೊಂಟಾನಾ ಜೊತೆ ಎಂಗೇಜ್ ಆಗಿ ತಮ್ಮ ನಿಶ್ಚಿತಾರ್ಥದ ರಿಂಗ್ ಅನ್ನು ಪ್ರದರ್ಶಿಸಿದ್ದಾರೆ.
ದುಬಾರಿ ಮೌಲ್ಯದ ಎಂಗೇಜ್‌ಮೆಂಟ್ ರಿಂಗ್ ಪ್ರದರ್ಶಿಸಿದ ದುಬೈ ರಾಜಕುಮಾರಿ
ದುಬೈ ರಾಜಕುಮಾರಿ ಮೊರಾಕೋ-ಅಮೆರಿಕನ್ ಮೂಲದ ರ‍್ಯಾಪರ್ ಫ್ರೆಂಚ್ ಮೊಂಟಾನಾ ಜೊತೆ ಅಧಿಕೃತವಾಗಿ ಎಂಗೇಜ್ ಆಗಿದ್ದು, ಆಗಸ್ಟ್ 29ರಂದು ಇಬ್ಬರು ಜೊತೆಯಾಗಿ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದರು. ಫೋಟೋಗಳಲ್ಲಿ ರಾಜಕುಮಾರಿ ಶೇಖಾ ಮಹ್ರಾ ರ‍್ಯಾಪರ್ ಫ್ರೆಂಚ್ ಮೊಂಟಾನಾ ಅವರ ಕೈ ಹಿಡಿದುಕೊಂಡಿರುವುದನ್ನು ಕಾಣಬಹುದು. ಇವರ ಈ ಫೋಟೋದಲ್ಲಿ ಡೈಮಂಡ್ ರಿಂಗ್ ಆಕರ್ಷಣೆಯ ಕೇಂದ್ರಬಿಂದು ಆಗಿತ್ತು. ದೊಡ್ಡದಾದ ಎಮರಾಲ್ಡ್ ಕಟ್ ಡೈಮಂಡ್‌ಗೆ ಸಣ್ಣ ಸಣ್ಣ ಡೈಮಂಡ್‌ಗಳನ್ನು ಸುತ್ತಲೂ ಜೋಡಿಸಲಾಗಿದೆ.

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಎಂಗೇಜ್ ಆದ ಜೋಡಿ:
ಜೂನ್ 2025ರಲ್ಲಿ ನಡೆದ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿಯೇ ಇವರಿಬ್ಬರು ಜೊತೆಯಾಗಿ ಹೆಜ್ಜೆ ಹಾಕಿದ್ದರು. ಆಗಲೇ ಇವರ ನಿಶ್ಚಿತಾರ್ಥ ನಡೆದಿತ್ತು ಎಂದು ವರದಿಯಾಗಿದೆ, ಅಲ್ಲಿ ಫ್ರೆಂಚ್ ಮಾಂಟಾನಾ ಕೂಡ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು.ಸೆಲೆಬ್ರಿಟಿ ಆಭರಣ ವ್ಯಾಪಾರಿ ಎರಿಕ್ ದಿ ಜ್ಯುವೆಲರ್ ಆಫ್ ಮಾವಾನಿ & ಕೋ ದುಬೈ ರಾಜಕುಮಾರಿಯ ನಿಶ್ಚಿತಾರ್ಥದ ರಿಂಗ್ ಅನ್ನು ವಿನ್ಯಾಸಗೊಳಿಸಿದ್ದರು. ಈ ಉಂಗುರವು ವಜ್ರ ಲೇಪಿತ ಬ್ಯಾಂಡ್‌ನಲ್ಲಿ 11.53-ಕ್ಯಾರೆಟ್ ಎಮರಾಲ್ಡ್-ಕಟ್ ವಜ್ರವನ್ನು ಹೊಂದಿದೆ, ಇದರ ಮೌಲ್ಯ ಸುಮಾರು 1.1 ಮಿಲಿಯನ್ ಡಾಲರ್ ಎಂದು ಆಂಗ್ಲ ಮಾಧ್ಯಮವೊಂದು ವರದಿಯಾಗಿದೆ.
ಅವರ ಮದುವೆಯ ಬಗ್ಗೆ ಈ ಜೋಡಿ ಪ್ಲಾನ್ ಮಾಡುತ್ತಿದ್ದಾರೆ ಹಾಗೂ ಜೊತೆಯಾಗಿ ಉಳಿದ ಜೀವನವನ್ನು ಕಳೆಯುವುದಕ್ಕೆ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಶೇಖಾ ಮಹ್ರಾ 2ದುಬೈ ಆಡಳಿತಗಾರ ಮತ್ತು ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿಯಾಗಿದ್ದಾರೆ. 2024 ರಿಂದಲೂ ಇವರಿಬ್ಬರೂ ಪರಿಚಿತರಾಗಿದ್ದು ದುಬೈ ಮತ್ತು ಮೊರಾಕೊ ಎರಡೂ ಡೆ ಮಸೀದಿಗಳಿಂದ ಹಿಡಿದು ರೆಸ್ಟೋರೆಂಟ್‌ಗಳವರೆಗೆ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು, ಮರುಭೂಮಿಯಲ್ಲಿ ಒಂಟೆ ಸವಾರಿಗಳನ್ನು ಆನಂದಿಸುತ್ತಿದ್ದರು. ಈ ನಿಶ್ಚಿತಾರ್ಥದ ಮೂಲಕ ಶೇಖಾ ಮಹ್ರಾ ಮತ್ತು ಫ್ರೆಂಚ್ ಮೊಂಟಾನಾ ಇಬ್ಬರೂ ದಾಂಪತ್ಯದ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶೇಖಾ ಮಹ್ರಾ ಅವರು ಈ ಹಿಂದೆ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ ಅವರನ್ನು ಮದುವೆಯಾಗಿದ್ದರು. ಈ ದಾಂಪತ್ಯದ್ಲಿ ಒಂದು ಮಗುವೂ ಇದ್ದು, ಮಗುವಿಗೆ 15 ತಿಂಗಳು ತುಂಬಿದೆ. ಫ್ರೆಂಚ್ ಮೊಂಟಾನಾ ಅಲಿಯಾಸ್ ಕರೀಮ್ ಖಾರ್ಬೌಚ್‌ಗೂ ಇದು 2ನೇ ಮದ್ವೆ 2007 ರಲ್ಲಿ ಇವರು ಉದ್ಯಮಿ ಮತ್ತು ವಿನ್ಯಾಸಕಿ ನದೀನ್ ಖಾರ್ಬೌಚ್ ಅವರನ್ನು ಮದುವೆಯಾಗಿದ್ದರು. ಇವರಿಗೆ 16 ವರ್ಷದ ಮಗನಿದ್ದಾನೆ.
ಇನ್ಸ್ಟಾದಲ್ಲಿ ಗಂಡನಿಗೆ ಡಿವೋರ್ಸ್ ಕೊಟ್ಟು ಸುದ್ದಿಯಾಗಿದ ರಾಜಕುಮಾರಿ:
ಇನ್ಸ್ಟಾದಲ್ಲಿ ಗಂಡನಿಗೆ ವಿಚ್ಚೇದನ ನೀಡುವ ಮೂಲಕ ಶೇಖಾ ಮೆಹ್ರಾ ಸುದ್ದಿಯಾಗಿದ್ದರು. ಪ್ರಿಯ ಪತಿ ನೀವು ಇತರರ ಸಾಂಗತ್ಯದಲ್ಲಿ ಮುಳುಗಿರುವುದರಿಂದ ನಾನು ನಮ್ಮ ವಿಚ್ಛೇದನವನ್ನು ಇಲ್ಲಿ ಘೋಷಿಸುತ್ತೇನೆ ಎಂದು ಆಕೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು .ನಾನು ನಿಮಗೆ ವಿಚ್ಚೇದನ ನೀಡುತ್ತೇನೆ ಎಂದು ಆಕೆ ಮೂರು ಬಾರಿ ಬರೆಯುವ ಮೂಲಕ ಆಕೆ ಪತಿಗೆ ತಲಾಖ್ ನೀಡಿದ್ದರು. ತಮ್ಮ ವಿಚ್ಛೇದನದ ನಂತರ ಡಿವೋರ್ಸ್ ಹೆಸರಿನ ಸುಗಂಧ ದ್ರವ್ಯದ ಉದ್ಯಮವನ್ನು ಸ್ಥಾಪಿಸುವ ಮೂಲಕವೂ ಅವರು ಸುದ್ದಿಯಾಗಿದ್ದರು. ತಮ್ಮ ಬ್ರ್ಯಾಂಡ್ ಮಹ್ರಾ M1 ಅಡಿಯಲ್ಲಿ ಡಿವೋರ್ಸ್ ಹೆಸರಿನ ಸುಗಂಧ ದ್ರವ್ಯದ ಉದ್ಯಮವನ್ನು ಅವರು ಆರಂಭಿಸಿದರು. ಶೇಖಾ ಮೆಹ್ರಾ ಅವರು ಮೊಹಮ್ಮದ್ ಬಿನ್ ರಶೀದ್ ಸರ್ಕಾರಿ ಆಡಳಿತದ ಅರ್ಹತೆಯೊಂದಿಗೆ ಯುಕೆ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪದವಿ ಪಡೆದಿದ್ದಾರೆ.
ಇದನ್ನೂ ಓದಿ: ಅಯ್ಯೋ ಕಂದಾ.. ಪೋಷಕರು ತೊರೆದ ಮಗುವಿಗೆ ಆಸ್ಪತ್ರೆಯಲ್ಲಿ ಇಲ್ಲಿ ಕಚ್ಚಿ ಸಾವು
ಇದನ್ನೂ ಓದಿ: ತಿಂಗಳ ವೆಚ್ಚ 5,90,000 ರೂ. ಎಂದ ದಂಪತಿ: ಬೆಂಗಳೂರಿನಲ್ಲಿ ಜೀವನ ಇಷ್ಟೊಂದು ದುಬಾರಿನಾ?
