Rajasthan Cup Syrup Tragedy: ರಾಜಸ್ಥಾನದಲ್ಲಿ ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 11 ಮಕ್ಕಳು ಅಸ್ವಸ್ಥರಾಗಿದ್ದಾರೆ. ಈ ಸಿರಪ್ ಸುರಕ್ಷಿತವೆಂದು ಸಾಬೀತುಪಡಿಸಲು ಅದನ್ನು ಸೇವಿಸಿದ ವೈದ್ಯರೊಬ್ಬರು ಸಹ ಗಂಟೆಗಳ ಕಾಲ ಪ್ರಜ್ಞೆ ತಪ್ಪಿ ಬಿದ್ದ ಆಘಾತಕಾರಿ ಘಟನೆ ನಡೆದಿದೆ.
ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವು:
ಜೈಪುರ: ಕಪ್ ಸಿರಪ್ ಸೇವಿಸಿ ಎರಡು ಮಕ್ಕಳು ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇನ್ನೂ ಆಘಾತಕಾರಿ ವಿಚಾರ ಎಂದರೆ ಈ ಸಿರಪ್ ಹಾನಿಕಾರವಲ್ಲ ಎಂದು ಸಾಬೀತು ಮಾಡುವುದಕ್ಕಾಗಿ ಈ ಕಪ್ ಸಿರಪನ್ನೇ ಕುಡಿದ ವೈದ್ಯನು ಪ್ರಜ್ಞೆ ತಪ್ಪಿ ಬಿದ್ದಂತಹ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿತರಣೆಗಾಗಿ ರಾಜಸ್ಥಾನ ಸರ್ಕಾರಕ್ಕೆ ಔಷಧ ಕಂಪನಿಯೊಂದು ತಯಾರಿಸಿದ ಜೆನೆರಿಕ್ ಕೆಮ್ಮಿನ ಇದಾಗಿತ್ತು. ಆದರೆ ಇದನ್ನು ಸೇವಿಸಿದ ಇಬ್ಬರು ಮಕ್ಕಳು ಸಾವನ್ನಪ್ಪಿ 11 ಮಕ್ಕಳು ಅಸ್ವಸ್ಥರಾಗಿದ್ದಾರೆ. ಮೃತರಾದ ಮಕ್ಕಳು 2 ವರ್ಷ ಹಾಗೂ 5 ವರ್ಷದ ಪ್ರಾಯದವರಾಗಿದ್ದರು ಎಂದು ತಿಳಿದು ಬಂದಿದೆ. ಮತ್ತೂ ವಿಚಿತ್ರ ಎಂದರೆ ಈ ಸಿರಪ್ ಸುರಕ್ಷಿತವಾಗಿದೆ ಎಂದು ತೋರಿಸುವುದಕ್ಕಾಗಿ ಒಂದು ಡೋಸ್ ಸೇವಿಸಿದ ವೈದ್ಯನು ಎರಡು ಗಂಡೆಗಳ ನಂತರ ತನ್ನ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಕೇಸನ್ ಫಾರ್ಮಾ ಎಂಬ ಔಷಧಿ ಸಂಸ್ಥೆ ತಯಾರಿಸಿದ ಸಿರಪ್
ಕೇಸನ್ ಫಾರ್ಮಾ ಎಂಬ ಔಷಧಿ ಸಂಸ್ಥೆ ಈ ಕಪ್ ಸಿರಪ್ ಅನ್ನು ತಯಾರಿಸಿದೆ. ಸೋಮವಾರ ಐದು ವರ್ಷದ ಬಾಲಕನೊಬ್ಬ ಔಷಧಿ ನೀಡಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ನಂತರ ಈ ಡೆಕ್ಸ್ಟ್ರೋಮೆಥೋರ್ಫಾನ್ ಹೈಡ್ರೋಬ್ರೋಮೈಡ್ ಹೆಸರಿನ ಈ ಕೆಮ್ಮಿನ ಸಿರಪ್ ವಿಷಕಾರಿಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ 5 ವರ್ಷದ ನಿತೀಶ್ ಎಂಬ ಮಗು ಈ ದುರಂತದಿಂದ ಸಾವನ್ನಪ್ಪಿದ ಮೊದಲ ಬಾಲಕ. ಈ ಮಗುವಿಗೆ ಕೆಮ್ಮು ಮತ್ತು ಶೀತ ಕಾಣಿಸಿಕೊಂಡ ನಂತರ ಭಾನುವಾರ ಈತನ ಪೋಷಕರು ಚಿರಾನಾದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಮಗುವನ್ನು ಕರೆದೊಯ್ದರು. ಈ ವೇಳೆ ಅಲ್ಲಿನ ವೈದ್ಯರು ಕೇಂದ್ರದಿಂದ ನೀಡಲಾದ ಕೆಮ್ಮಿನ ಸಿರಪ್ ಅನ್ನು ಮಗುವಿಗೆ ನೀಡುವುದಕ್ಕೆ ಸೂಚಿಸಿದರು ಮತ್ತು ನಿತೀಶ್‌ನ ತಾಯಿ ಅಂದು ರಾತ್ರಿ 11.30 ರ ಸುಮಾರಿಗೆ ಅದನ್ನು ಮಗು ನಿತೀಶ್‌ಗೆ ನೀಡಿದ್ದರು. ಇದಾದ ನಂತರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಿತೀಶ್ ಒಮ್ಮೆ ಎಚ್ಚರಗೊಂಡು ಬಿಕ್ಕಳಿಸಿದ್ದಾನೆ. ಈ ವೇಳೆ ನಿತೀಶ್‌ನ ತಾಯಿ ಅವನಿಗೆ ಸ್ವಲ್ಪ ನೀರು ಕೊಟ್ಟಿದ್ದಾಳೆ. ಇದಾದ ನಂತರ ಮಲಗಿದ ಆ ಮಗು ಮತ್ತೆ ಮೇಲೆದ್ದಿಲ್ಲ.
ಸೋಮವಾರ ಬೆಳಗ್ಗೆ ಭಯಭೀತರಾದ ಪೋಷಕರು ತಮ್ಮ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವನು ಮೃತಪಟ್ಟಿದ್ದಾನೆ ಎಂದು ಅಲ್ಲಿ ಘೋಷಿಸಲಾಯಿತು. ಇತ್ತ ಘಟನೆ ನಡೆದ ದಿನ ಮಗು ನಿತೀಶ್ ಆರೋಗ್ಯವಾಗಿದ್ದ, ಸಂಜೆ ನವರಾತ್ರಿ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ, ರಾತ್ರಿ ಆತ ಕೆಮ್ಮಲು ಶುರು ಮಾಡಿದಾಗ, ಆತನ ತಾಯಿ ಚಿರಾನಾ ಸಿಎಚ್‌ಸಿಯಿಂದ ನಾವು ಪಡೆದ ಔಷಧಿಯನ್ನು ಅವರಿಗೆ ನೀಡಿದೆವು. ಇದಾದ ನಂತರ ದುರಂತ ನಡೆದಿದೆ ಎಂದು ಹುಡುಗನ ಚಿಕ್ಕಪ್ಪ ಪ್ರಿಯಕಾಂತ್ ಶರ್ಮಾ ಹೇಳಿದರು.
ನಿತೀಶ್ ಪ್ರಕರಣದ ನಂತರ ಇದಕ್ಕೂ ಮೊದಲು ನಡೆದಿದ್ದ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 22 ರಂದು ಕೆಮ್ಮಿನ ಸಿರಪ್ ಸೇವಿಸಿದ ನಂತರ ಮೃತಪಟ್ಟ ತಮ್ಮ2 ವರ್ಷದ ಮಗುವಿನ ಸಾವಿಗೂ ಈ ಸಿರಪೇ ಕಾರಣ ಎಂಬುದು ಪೋಷಕರಿಗೆ ಅರಿವಾಗಿದೆ. ಸೆಪ್ಟೆಂಬರ್ 22 ರಂದು ಭರತ್‌ಪುರದ ಹೊರವಲಯದಲ್ಲಿರುವ ಮಲ್ಹಾ ಗ್ರಾಮದಲ್ಲಿ 2 ವರ್ಷದ ಮಗು ಸಾಮ್ರಾಟ್ ಜಾತವ್ ಮೃತಪಟ್ಟಿದ್ದ ಕೆಮ್ಮು ಬಂದ ಕಾರಣ ಸಾಮ್ರಾಟ್, ಆತನ ಸೋದರಿ ಸಾಕ್ಷಿ ಮತ್ತು ಸೋದರ ಸಂಬಂಧಿ ವಿರಾಟ್ ಎಲ್ಲರಿಗೂ ಈ ತಿಂಗಳ ಆರಂಭದಲ್ಲಿ ಕೆಮ್ಮು ಮತ್ತು ಶೀತ ಶುರುವಾಗಿತ್ತು. ಹೀಗಾಗಿ ಸಮ್ರಾಟ್ ತಾಯಿ ಜ್ಯೋತಿ ಸೆಪ್ಟೆಂಬರ್ 22 ರಂದು ಸ್ಥಳೀಯ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದಾಗ ಇದೇತ್ತು ಕೇಸನ್ ಫಾರ್ಮಾ ತಯಾರಿಸಿದ ಸಿರಪ್ ಅನ್ನು ಅವರಿಗೆ ನೀಡಲಾಗಿತ್ತು.
ಜ್ಯೋತಿ ಮಧ್ಯಾಹ್ನ 1.30 ಕ್ಕೆ ಸಾಮ್ರಾಟ್, ಸಾಕ್ಷಿ ಮತ್ತು ವಿರಾಟ್ ಮೂವರಿಗೂ ಸಿರಪ್ ನೀಡಿದರು. ಇದಾಗಿ ಐದು ಗಂಟೆ ಕಳೆದರೂ ಮೂವರು ಮಕ್ಕಳಲ್ಲಿ ಯಾರೂ ಎಚ್ಚರಗೊಳ್ಳದಿದ್ದಾಗ ಕುಟುಂಬದವರು ಚಿಂತಿತರಾಗಿ ಮಲಗಿದ ಮಕ್ಕಳನ್ನು ಅಲಗಾಡಿಸಿ ಎಬ್ಬಿಸಲು ಯತ್ನಿಸಿದ್ದಾರೆ. ಈ ವೇಳೆ ಸಾಕ್ಷಿ ಹಾಗೂ ವಿರಾಟ್ ಅವರನ್ನು ಎಳಿಸುವಲ್ಲಿ ಪೋಷಕರು ಯಶಸ್ವಿಯಾದರು ಹಾಗೂ ಆ ಮಕ್ಕಳು ಕೂಡಲೇವಾಂತಿ ಮಾಡಿದರು, ಆದರೆ ಸಾಮ್ರಾಟ್‌ಗೆ ಮಾತ್ರ ಪ್ರಜ್ಞೆ ಬಂದಿರಲಿಲ್ಲ.
ನಂತರ ಎರಡು ವರ್ಷದ ಮಗುವನ್ನು ಭರತ್‌ಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಮಗು ಸೆಪ್ಟೆಂಬರ್ 22 ರಂದು ಸಾವನ್ನಪ್ಪಿದ್ದಾನೆ. ನನ್ನ ಮೂವರು ಮೊಮ್ಮಕ್ಕಳು ಸಿರಪ್ ತೆಗೆದುಕೊಂಡರು ಮತ್ತು ಅದು ಮಾರಕವಾಗಬಹುದು ಎಂದು ನಮಗೆ ತಿಳಿದಿರಲಿಲ್ಲ. ಅವರಲ್ಲಿ ಇಬ್ಬರು ಗಂಟೆಗಳ ನಂತರ ಅಂತಿಮವಾಗಿ ಎಚ್ಚರಗೊಂಡರು. ಆದರೆ ನಾನು 2 ವರ್ಷದ ಸಾಮ್ರಾಟ್ ಅನ್ನು ಕಳೆದುಕೊಂಡೆ ಎಂಬ ವಿಚಾರ, ಸಿಕಾರ್ ಜಿಲ್ಲೆಯ ಹುಡುಗ ಮತ್ತು ಇತರರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ಕೇಳುವವರೆಗೂ ನಮಗೆ ತಿಳಿದಿರಲಿಲ್ಲ ಎಂದು ಸಾಮ್ರಾಟ್ ಅವರ ಅಜ್ಜಿ ನೆಹ್ನಿ ಜಾತವ್ ಹೇಳಿದ್ದಾರೆ.
ಹಾಗೆಯೇ ನೆರೆಯ ಬಯಾನಾದಲ್ಲಿ, ಸೆಪ್ಟೆಂಬರ್ 24 ರಂದು ಕೆಮ್ಮಿನ ಸಿರಪ್ ನೀಡಿದ ನಂತರ 3 ವರ್ಷದ ಗಗನ್ ಕುಮಾರ್ ಅಸ್ವಸ್ಥನಾಗಿದ್ದ, ಮತ್ತು ಅವನ ತಾಯಿ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ವಹಿಸಿದ್ದ ಡಾ. ತಾರಾಚಂದ್ ಯೋಗಿ ಬಳಿ ಈ ಬಗ್ಗೆ ದೂರು ನೀಡಲು ಹೋದರು. ಆದರೆ ಈ ಔಷಧಿ ಬಗ್ಗೆ ಪೂರ್ಣ ವಿಶ್ವಾಸ ಹೊಂದಿದ್ದ ಯೋಗಿ ಅದು ಸುರಕ್ಷಿತವಾಗಿದೆ ಎಂದು ಸಾಬೀತುಪಡಿಸಲು ಅದನ್ನು ತಾವು ಕುಡಿದು ಆಂಬ್ಯುಲೆನ್ಸ್ ಚಾಲಕ ರಾಜೇಂದ್ರ ಅವರಿಗೂ ನೀಡಿದರು. ಆದರೆ ಅವರು ತಮ್ಮ ಕಾರಿನಲ್ಲಿ ಭರತ್‌ಪುರಕ್ಕೆ ತೆರಳಿದಾಗ ನಿದ್ರೆಯ ಅನುಭವವಾಗಿ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಿ ಪ್ರಜ್ಞೆ ತಪ್ಪಿದರು. ಇತ್ತ ಕುಟುಂಬದವರು ಬಹಳ ಸಮಯದವರೆಗೆ ಅವರ ಕರೆ ಬರದ ನಂತರ, ಅವರ ಕುಟುಂಬವು ಅವರ ಮೊಬೈಲ್ ಸ್ಥಳವನ್ನು ಪತ್ತೆಹಚ್ಚಿದಾಗ ಎಂಟು ಗಂಟೆಗಳ ನಂತರ ಅವರು ಕಾರಿನಲ್ಲಿ ಬಿದ್ದಿರುವುದು ಕಂಡುಬಂದಿತು. ಸಿರಪ್ ಸೇವಿಸಿದ ನಂತರ ಮೂರು ಗಂಟೆಗಳ ನಂತರ ಆಂಬ್ಯುಲೆನ್ಸ್ ಚಾಲಕನಿಗೂ ಇದೇ ರೀತಿಯ ಲಕ್ಷಣಗಳು ಕಂಡುಬಂದಿದ್ದು, ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದಾರೆ.
ಬರೀ ಇಷ್ಟೇ ಅಲ್ಲ ಕಳೆದ ವಾರದಲ್ಲಿ, ದಕ್ಷಿಣ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಒಂದು ಮತ್ತು ಐದು ವರ್ಷದೊಳಗಿನ ಎಂಟು ಮಕ್ಕಳು ಈ ಔಷಧಿ ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ. ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇತರರು ಅಸ್ವಸ್ಥರಾಗಿದ್ದಾರೆ ಎಂಬ ವರದಿಗಳು ಹೊರಬಿದ್ದ ನಂತರ, ರಾಜಸ್ಥಾನ ಸರ್ಕಾರವು 22 ಬ್ಯಾಚ್‌ಗಳ ಸಿರಪ್ ಅನ್ನು ನಿಷೇಧಿಸಿ ಅವುಗಳ ವಿತರಣೆಯನ್ನು ಸ್ಥಗಿತಗೊಳಿಸಿದೆ. ಈ ವರ್ಷದ ಜುಲೈನಿಂದ ರಾಜಸ್ಥಾನದಲ್ಲಿ 1.33 ಲಕ್ಷ ಬಾಟಲಿಗಳ ಸಿರಪ್ ಅನ್ನು ರೋಗಿಗಳಿಗೆ ನೀಡಲಾಗಿದೆ ಎಂದು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆತ ಊರಲ್ಲಿದ್ದವರ ಜೊತೆಗೆಲ್ಲಾ ಮಲಗುತ್ತಿದ್ದ ಅದ್ಕೆ ಬ್ರೇಕಪ್ ಆಯ್ತು..!
ಇದನ್ನೂ ಓದಿ: ಇವ್ರು ಮೇಷ್ಟ್ರು ಹೆಂಗಾದ್ರೋ: ಬಿಸಿಯೂಟದವರಿಗೆ ನೀಡಿದ್ದ ಚೆಕ್‌ನಲ್ಲಿ ಹಲವು ಮಿಸ್ಟೆಕ್: ಬ್ಯಾಂಕ್‌ನಿಂದ ಚೆಕ್ ರಿಜೆಕ್ಟ್
