ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಆರ್‌ಜೆಡಿ ನಾಯಕ ರಾಜ್‌ಕುಮಾರ್ ರೈ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರ ಚಾಲಕ ಜೊತೆಗಿರುವಾಗಲೇ ಮಧ್ಯರಾತ್ರಿ ಘಟನೆ ನಡೆದಿದೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಭೀಕರ ಕೊಲೆ
ಬಿಹಾರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಆರ್‌ಜೆಡಿ ನಾಯಕನೋರ್ವನನ್ನು ಮನೆ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಾಟ್ನಾದ ರಾಜೇಂದ್ರ ನಗರ ಟರ್ಮಿನಲ್ ಬಳಿ ಆರ್‌ಜೆಡಿ ಕಾರ್ಯಕರ್ತ ಹಾಗೂ ಉದ್ಯಮಿಯೂ ಆಗಿರುವ ರಾಜ್‌ಕುಮಾರ್ ರೈ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬುಧವಾರ ತಡರಾತ್ರಿ ಘಟನೆ ನಡೆದಿದ್ದು, ಕೂಡಲೇ ಅವರನ್ನು ಸಮೀಪದ ಪಿಎಂಸಿಹೆಚ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಜೀವ ಬಿಟ್ಟಿದ್ದಾರೆ.
ಆರ್‌ಜೆಡಿ ಕಾರ್ಯಕರ್ತ ರಾಜ್‌ಕುಮಾರ್ ರೈಗೆ ಗುಂಡಿಕ್ಕಿ ಹತ್ಯೆ:
ಮೃತ ಆರ್‌ಜೆಡಿ ಕಾರ್ಯಕರ್ತ ರಾಜ್‌ಕುಮಾರ್ ರೈ ಅಲಿಯಾಸ್ ಅಲಾ ರೈ ಅವರು ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದ ನಿವಾಸಿಯಾಗಿದ್ದು, ಇಲ್ಲಿನ ಕಾಮರ್ಸ್ ಕಾಲೇಜಿನ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡ್ತಿದ್ರು. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಶಂಕಿತ ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ. ಮೃತ ರಾಜ್‌ಕುಮಾರ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಬಂದು ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದ್ದಾರೆ.
ನಗರ ಪೂರ್ವ ವಿಭಾಗದ ಎಸ್‌ಪಿ ಪರಿಚಯ್ ಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ರಾಜೇಂದ್ರ ನಗರ ಟರ್ಮಿನಲ್ ಎದುರಿನ ಲೇನ್ ಸಂಖ್ಯೆ 17 ರಲ್ಲಿ ರಾಜ್‌ಕುಮಾರ್ ರೈ ಎಂಬ ವ್ಯಕ್ತಿಗೆ ಗುಂಡು ಹಾರಿಸಲಾಗಿದೆ. ಘಟನಾ ಸ್ಥಳದಲ್ಲಿ 4 ಖಾಲಿ ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. ಘಟನೆ ನಡೆದ ವೇಳೆ ರಾಜ್‌ಕುಮಾರ್ ರೈ ಅವರ ಕಾರು ಚಾಲಕ ಅವರ ಜೊತೆಗಿದ್ದ. ನಾವು ಆತನನ್ನು ವಿಚಾರಣೆ ನಡೆಸುತ್ತಿದ್ದೇವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಘಟನೆ ನಡೆದ ಸುತ್ತಮುತ್ತಲಿನ ಎಲ್ಲಾ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಬ್ಬರು ಅಪರಿಚಿತ ದುಷ್ಕರ್ಮಿಗಳು ರಾಜ್‌ಕುಮಾರ್ ರೈ ಮೇಲೆ ಹೊಂಚು ಹಾಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ರಾಜ್‌ಕುಮಾರ್ ರೈ ಜೀವ ಉಳಿಸಿಕೊಳ್ಳಲು ಓಡಿದ್ದು, ಈ ವೇಳೆ ಬೆನ್ನಟ್ಟಿದ ದುಷ್ಕರ್ಮಿಗಳು ಅವರ ಮೇಲೆ ಆರು ಸುತ್ತು ಗುಂಡುಗಳನ್ನು ಹಾರಿಸಿದ್ದಾರೆ. ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಬೆಂಬಲಿಗರು ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಲ್ಯಾಂಡ್ ಡೀಲಿಂಗ್ ಮಾಡ್ತಿದ್ದ ರಾಜ್‌ಕುಮಾರ್ ರೈ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು.
ರೈ ಅವರು 2021ರಲ್ಲಿ ರಾಘೋಪುರ್ ಜಿಲ್ಲಾ ಕೌನ್ಸಿಲ್ ಪ್ರದೇಶದಿಂದ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದ ಅವರು ಈ ಪ್ರದೇಶದಲ್ಲಿ ರಾಜಕೀಯವಾಗಿ ಸಕ್ರಿಯರಾಗಿದ್ದರು. ಕೆಲ ಮಾಹಿತಿಯ ಪ್ರಕಾರ, ರಾಜ್‌ಕುಮಾರ್ ರೈ ಅವರು ಈ ಬಾರಿ ತೇಜಸ್ವಿ ಯಾದವ್ ಅವರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದರು ಎಂಬ ಮಾಹಿತಿ ಇದೆ. 243 ಸದಸ್ಯ ಬಲವನ್ನು ಹೊಂದಿರುವ ಬಿಹಾರ ವಿಧಾನಸಭೆಗೆ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಸತತವಾಗಿ ಏರುತ್ತಲೇ ಇದೆ ಬಂಗಾರ ದರ: ಕೇವಲ 1 ಗ್ರಾಂಗೆ 11,052 ರೂ.
ಇದನ್ನೂ ಓದಿ: 6 ಪೊಲೀಸರು, ಎಎಪಿ ಶಾಸಕ ಲಾಲ್ಪುರಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೋಷಿ :ಕೋರ್ಟ್
ಇದನ್ನೂ ಓದಿ: ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹತ್ಯೆ
ಇದನ್ನೂ ಓದಿ: ಪ್ರಸವಾನಂತರದ ಮನೋರೋಗ: ನಿದ್ದೆ ಮಾಡದೇ ಅಳುತ್ತಿದ್ದ ನವಜಾತ ಶಿಶುವನ್ನು ಪ್ರಿಡ್ಜ್ ಒಳಗೆ ಇಟ್ಟ ತಾಯಿ
