ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಉತಾಹ್‌ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತನ ಹತ್ಯೆ:

ಕನ್ಸರ್ವೇಟಿವ್‌ ಕಾರ್ಯಕರ್ತ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕಾದ ಉತಾಹ್‌ ವ್ಯಾಲಿಯ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದುಷ್ಕರ್ಮಿ ಹಾರಿಸಿದ ಒಂದೇ ಒಂದು ಗುಂಡಿನಿಂದ ಚಾರ್ಲಿ ಕಿರ್ಕ್ ಕೊನೆಯುಸಿರೆಳೆದಿದ್ದಾರೆ. ಅವರು ಭಾಷಣ ಮಾಡುತ್ತಿದ್ದ ವಿವಿ ಕ್ಯಾಂಪಸ್‌ನ್ನೂ ಈ ಗುಂಡಿನ ದಾಳಿಯ ನಂತರ ಫೂರ್ತಿ ಸೀಲ್ ಮಾಡಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಭಾಷಣ ಮಾಡುತ್ತಿದ್ದಾಗಲೇ ಚಾರ್ಲಿ ಕಿರ್ಕ್ ಹತ್ಯೆ

ಟರ್ನಿಂಗ್ ಪಾಯಿಂಟ್ ಯುಎಸ್‌ಎ ಎಂಬ ಸಂಸ್ಥೆಯ ಸಿಇಒ ಕೂಡ ಆಗಿರುವ 31 ವರ್ಷದ ಚಾರ್ಲಿ ಕಿರ್ಕ್, 'ದಿ ಅಮೆರಿಕನ್ ಕಾಮ್‌ಬ್ಯಾಕ್' ಪ್ರೂವ್ ಮೀ ರಾಂಗ್ ಎಂಬ ಘೋಷಣೆಗಳಿಂದ ಅಲಂಕರಿಸಲ್ಪಟ್ಟಿದ್ದ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾರ್ಲಿ ಕಿರ್‌ಕ್ ಅವರ ಸಾವಿಗೆ ಸಂತಾಪ ಸೂಚಿಸಿ ಅಮೆರಿಕಾ ರಾಷ್ಟ್ರಧ್ವಜವನ್ನು ಭಾನುವಾರದವರೆಗೆ ಅಂದರೆ 4 ದಿನಗಳ ಕಾಲ ಅರ್ಧಕ್ಕೆ ಇಳಿಸಿ ಹಾರಿಸುವಂತೆ ಸೂಚಿಸಿದ್ದಾರೆ.

ಘಟನೆಯ ಬಳಿಕ ಕಿರ್ಕ್ ಅವರು ತಮ್ಮ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅವರ ಗಂಟಲಿನಿಂದ ರಕ್ತ ಸುರಿಯುತ್ತಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿವೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಲ್ಲಿದ್ದ ವಿದ್ಯಾರ್ಥಿಗಳು ಕಿರುಚುತ್ತಾ ಅಲ್ಲಿಂದ ಓಡಿ ಹೋಗಿದ್ದಾರೆ. ಘಟನೆಯ ಬಳಿಕ ಆರೋಪಿಯೋರ್ವನನ್ನು ಬಂಧಿಸಲಾಗಿದೆ ಎಂದು ಅಮೆರಿಕಾದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಟ್ವಿಟ್ ಮಾಡಿದ್ದರು. ಆದರೆ ವಿಚಾರಣೆಯ ನಂತರ ಆತ ಅಲ್ಲ ಎಂಬುದು ತಿಳಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಟ್ರಂಪ್ ತೀವ್ರ ಬೇಸರ:

ಚಾರ್ಲಿ ಕಿರ್ಕ್ ಅವರನ್ನು ತನ್ನ ಪ್ರಮುಖ ರಾಜಕೀಯ ಮಿತ್ರ ಎಂದು ಪರಿಗಣಿಸಿದ್ದ ಅಧ್ಯಕ್ಷ ಟ್ರಂಪ್ ಅವರ ಸಾವಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ, ಟ್ರೂತ್ ಸೋಶಿಯಲ್‌ನಲ್ಲಿ ಮತ್ತು ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಯುವಕರ ಹೃದಯವನ್ನು ಚಾರ್ಲಿಗಿಂತ ಚೆನ್ನಾಗಿ ಯಾರೂ ಅರ್ಥಮಾಡಿಕೊಂಡಿಲ್ಲ ಅವರನ್ನು ಎಲ್ಲರೂ, ವಿಶೇಷವಾಗಿ ನಾನು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚುತ್ತಿದ್ದೆ. ಯಾವ ಅಮೆರಿಕನ್ ಮೌಲ್ಯಗಳಿಗೆ ಚಾರ್ಲಿ ಬದುಕಿದ್ದರೋ ಹಾಗೂ ಸಾವು ಕಂಡರೋ ಅಂತಹ ಮೌಲ್ಯಗಳಿಗೆ ಅಮೆರಿಕನ್ ಯುವ ಸಮುದಾಯ ಬದ್ಧರಾಗಿರಬೇಕು ಎಂದು ನಾನು ಮನವಿ ಮಾಡುತ್ತೇನೆ. ವಾಕ್ ಸ್ವಾತಂತ್ರ್ಯ, ಪೌರತ್ವ, ಕಾನೂನಿನ ನಿಯಮ ಮತ್ತು ದೇಶಭಕ್ತಿಯ ಭಕ್ತಿ ಮತ್ತು ದೇವರ ಮೇಲಿನ ಪ್ರೀತಿ ಇವುಗಳಿಗಾಗಿಯೇ ಚಾರ್ಲಿ ಬದುಕಿದ್ದರು ಎಂದು ಟ್ರಂಪ್ ಹೇಳಿದ್ದಾರೆ.

Scroll to load tweet…