ಕೇರಳ ವಿಧಾನಸಭೆಯಲ್ಲಿ ಓಣಂ ಆಚರಣೆ ವೇಳೆ ನೌಕರರೊಬ್ಬರು ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 45 ವರ್ಷದ ಜುನೈಸ್ ಎಂಬ ಲೈಬ್ರೇರಿಯನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಿರುವನಂತಪುರಂ: ಕೇರಳದಲ್ಲಿ ಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ಮನೆ ಮನೆಗಳಲ್ಲಿ ಮಾತ್ರವಲ್ಲದೇ ಶಾಲಾ ಕಾಲೇಜುಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲೂ ಓಣಂ ಆಚರಣೆ ಬಹಳ ಸಂಭ್ರಮದಿಂದ ನಡೆಯುತ್ತದೆ. ಎಲ್ಲಾ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಹಲವು ಮನೋರಂಜನೆ ನೀಡುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಿಯೂ ಹಬ್ಬದ ಸಂಭ್ರಮ ಜೋರಾಗಿರುತ್ತದೆ. ಅದೇ ರೀತಿ ಕೇರಳದ ವಿಧಾನಸಭೆಯಲ್ಲೂ ಸಿಬ್ಬಂದಿಗಳಿಗಾಗಿ ಓಣಂ ಹಬ್ಬದ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಆದರೆ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡ್ತಿದ್ದ ವಿಧಾನಸಭೆಯ ನೌಕರರೊಬ್ಬರು ಡಾನ್ಸ್ ಮಾಡ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ಕೇರಳದ ವಿಧಾನಸಭೆಯಲ್ಲಿ ನಡೆದಿದೆ.
ಡಾನ್ಸ್ ಮಾಡುತ್ತಲೇ ಕುಸಿದು ಬಿದ್ದು ವಿಧಾನಸಭೆ ನೌಕರ ಸಾವು:
ಕೇರಳದ ವಿಧಾನಸಭೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ 45 ವರ್ಷದ ಜುನೈಸ್ ಸಾವನ್ನಪ್ಪಿದ ಉದ್ಯೋಗಿ. ಇವರು ಕೇರಳ ವಿಧಾನಸಭೆಯಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡುತ್ತಿದ್ದರು, ಈ ಹಿಂದೆ ಶಾಸಕ ಪಿವಿ ಅನ್ವರ್ ಅವರ ವೈಯಕ್ತಿಕ ಸಹಾಯಕನಾಗಿಯೂ ಕೆಲಸ ಮಾಡ್ತಿದ್ದರು. ಆದರೆ ಓಣಂ ಸಂಭ್ರಮದಲ್ಲಿ ಹಾಡೊಂದಕ್ಕೆ ಡಾನ್ಸ್ ಮಾಡ್ತಿದ್ದ ಜುನೈಸ್ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಜುನೈದ್ ಅವರ ಹಠಾತ್ ನಿಧನಕ್ಕೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.
ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಗೆದ್ದಿದ್ದ ಜುನೈಸ್ ಟೀಮ್:
ಸ್ಟೇಜ್ ಮೇಲೆ ತಮ್ಮ ಸಹೋದ್ಯೋಗಿಗಳ ಜೊತೆ ಬಹಳ ಎನರ್ಜಿಟಿಕ್ ಆಗಿ ಡಾನ್ಸ್ ಮಾಡ್ತಿದ್ದ ಜುನೈಸ್ ಅವರು ಒಮ್ಮೆಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ವೈದ್ಯರು ಅವರು ಆಸ್ಪತ್ರೆಗೆ ಬರುತ್ತಿರುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ವಯನಾಡ್ ನಿವಾಸಿಯಾಗಿದ್ದ ಜುನೈಸ್ ಅವರು ವಿಧಾನಸಭೆಯಲ್ಲಿ ನಡೆದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇಡೀ ದಿನ ಉತ್ಸಾಹದಿಂದಲೇ ಭಾಗವಹಿಸಿದ್ದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಇವರು ಭಾಗವಹಿಸಿದ್ದ ತಂಡ ವಿಜಯಶಾಲಿಯಾಗಿತ್ತು. ಆದರೆ ಅವರ ಹಠಾತ್ ಸಾವು ಸಹೋದ್ಯೋಗಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ.
ತಿಂಗಳ ಹಿಂದೆ ಎದೆನೋವಿಗೆ ಚಿಕಿತ್ಸೆ ಪಡೆದಿದ್ದ ಜುನೈಸ್:
ಜುನೈಸ್ ಅವರ ಸಾವಿನಿಂದಾಗಿ ನಂತರದ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಯ್ತು, ಜುನೈಸ್ ಅವರ ಸಾವಿಗೆ ಕೇರಳ ರಾಜ್ಯದಾದ್ಯಂತ ಜನರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಜುನೈಸ್, ಜಾಗಿಂಗ್ ಮತ್ತು ಬೆಳಗ್ಗೆ ವ್ಯಾಯಾಮಕ್ಕಾಗಿ ದಿನವೂ ಚಂದ್ರಶೇಖರನ್ ನಾಯರ್ ಕ್ರೀಡಾಂಗಣಕ್ಕೆ ಬರುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ಎದೆನೋವಿಗೆ ಅವರು ಚಿಕಿತ್ಸೆ ಪಡೆದಿದ್ದರು ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.
ಜುನೈಸ್ 2011 ರಲ್ಲಿ ಕ್ಯಾಟಲಾಗ್ ಸಹಾಯಕರಾಗಿ ಕೇರಳ ವಿಧಾನಸಭೆಗೆ ಉದ್ಯೋಗಕ್ಕೆ ಸೇರಿದರು. ಅದಕ್ಕೂ ಮೊದಲು, ಅವರು ಐಎಚ್‌ಆರ್‌ಡಿಯಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಿದ್ದರು ಮತ್ತು ಶಾಸಕ ಪಿವಿ ಅನ್ವರ್ ಅವರ ಆಪ್ತ ಸಹಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ನಂದನ್‌ಕೋಡಿನ ಹರಿಹರ ನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಜುನೈಸ್ ಶಿಕ್ಷಕಿಯಾಗಿರುವ ಪತ್ನಿ ರಸೀನಾ, ಇಬ್ಬರು ಮಕ್ಕಳಾದ ನಜಾದ್ ಅಬ್ದುಲ್ಲಾ, ನಿಹಾದ್ ಅಬ್ದುಲ್ಲಾ ಅವರನ್ನು ಅಗಲಿದ್ದಾರೆ.
ಇದನ್ನೂ ಓದಿ: ಕೈಗೆ ಕೋಳ ಮೈಮೇಲೆ ಬಟ್ಟೆ ಇಲ್ಲದ ಸ್ಥಿತಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಯ ಪಯಣ ಯಾರಿತಾ?
ಇದನ್ನೂ ಓದಿ: ಭಾರತೀಯ ಯುವತಿ ಮದ್ವೆಗೆ ಪಾಪ್ ತಾರೆಯ ಸರ್‌ಫ್ರೈಸ್ ವಿಸಿಟ್: ಮದ್ವೆ ಆಗೋಕೆ ಮನಸ್ಸಾಗ್ತಿಲ್ಲ ಎಂದ ಲೇಡಿ ಫ್ಯಾನ್ಸ್
