Indian Woman Dies in Nepal:ನೇಪಾಳದಲ್ಲಿ ನಡೆದ ಜೆನ್ ಝಿ ಪ್ರತಿಭಟನೆಯಲ್ಲಿ ಭಾರತೀಯ ಮಹಿಳೆಯೊಬ್ಬರು ಹೊಟೇಲ್‌ನಿಂದ ಹಾರಿ ಸಾವನ್ನಪ್ಪಿದ್ದಾರೆ. ಪ್ರತಿಭಟನಾಕಾರರು ಹೊಟೇಲ್‌ಗೆ ಬೆಂಕಿ ಹಚ್ಚಿದ್ದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಈ ದುರ್ಘಟನೆ ಸಂಭವಿಸಿದೆ. 

ನವದೆಹಲಿ: ನೇಪಾಳದಲ್ಲಿ ಭ್ರಷ್ಟಾಚಾರ ಹಾಗೂ ಸೋಶಿಯಲ್ ಮೀಡಿಯಾ ನಿಷೇಧ ಖಂಡಿಸಿ ಬೀದಿಗಿಳಿದ ಜೆನ್ ಝಿ ಸಮುದಾಯದ ಪ್ರತಿಭಟನೆಯ ಕಿಚ್ಚಿಗೆ ಭಾರತೀಯ ಮಹಿಳೆಯೊಬ್ಬರು ಪ್ರಾಣ ಬಿಟ್ಟಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ 57 ವರ್ಷದ ರಾಜೇಶ್ ಗೋಲಾ ಸಾವನ್ನಪ್ಪಿದ ಮಹಿಳೆ. ಅವರು ತಮ್ಮ ಪತಿ ರಾಮ್‌ವೀರ್ ಸಿಂಗ್ ಗೋಲಾ ಜೊತೆ ಕಳೆದ ವಾರ ನೇಪಾಳ ಪ್ರವಾಸ ಕೈಗೊಂಡಿದ್ದರು. ಇದೇ ವೇಳೆ ಅಲ್ಲಿ ಸರ್ಕಾರದ ವಿರುದ್ಧ ಜೇನ್ ಝಿ ಸಮುದಾಯದ ಪ್ರತಿಭಟನೆ ತೀವ್ರಗೊಂಡಿತ್ತು. ದೇಶದ ಸಂಸತ್ತು ಸೇರಿದಂತೆ ರಾಜಕಾರಣಿಗಳ ಮನೆ ಆಸ್ತಿಗಳನ್ನು ಧ್ವಂಸ ಮಾಡಿದ ಈ ಜೇನ್ ಝಿ ಸಮುದಾಯ ಕೈಗೆ ಸಿಕ್ಕ ರಾಜಕಾರಣಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು, ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿದ್ದರು. ಈ ದುರಂತದಲ್ಲಿ ನೇಪಾಳದ ಮಾಜಿ ಪ್ರಧಾನಿಯೊಬ್ಬರ ಪತ್ನಿ ಸಜೀವ ದಹನಗೊಂಡ ಘಟನೆಯೂ ನಡೆದಿತ್ತು. ಇಂತಹ ಸಂದರ್ಭದಲ್ಲಿ ಅಲ್ಲಿ ಸಿಲುಕಿದ್ದ ಭಾರತೀಯ ಮಹಿಳೆ ರಾಜೇಶ್ ಗೋಲಾ ಸಾವನ್ನಪ್ಪಿದ್ದಾರೆ.

ಭಾರತೀಯ ಮಹಿಳೆ ನೆಲೆಸಿದ್ದ ಹೊಟೇಲ್‌ಗೆ ಬೆಂಕಿ ಹಚ್ಚಿದ ಜೇನ್ ಝೀ ಪ್ರತಿಭಟನಾಕಾರರು

ಪ್ರವಾಸ ಹೋಗಿದ್ದ ರಾಜೇಶ್ ಗೋಲಾ ಅವರು ಕಠ್ಮಂಡುವಿನ ಹೊಟೇಲ್‌ನಲ್ಲಿ ತಂಗಿದ್ದರು. ಈ ವೇಳೆ ಪ್ರತಿಭಟನಾನಿರತ ಜೇನ್‌ ಝಿಗಳು ಈ ಹೊಟೇಲ್‌ಗೂ ಬೆಂಕಿ ಹಚ್ಚಿದ್ದರು. ಪರಿಣಾಮ ಅಲ್ಲಿಂದ ತಪ್ಪಿಸಿಕೊಂಡು ಹೊರಬರಲಾಗದೇ ರಾಜೇಶ್ ಗೋಲಾ ಅವರು ಸಾವನ್ನಪ್ಪಿದ್ದಾರೆ. ರಾಜೇಶ್ ಗೋಲಾ ಹಾಗೂ ಅವರ ಪತಿ ರಾಮ್‌ವೀರ್ ಸಿಂಗ್ ಗೋಲಾ ಅವರು ಸೆಪ್ಟೆಂಬರ್‌ 7 ರಂದು ಕಠ್ಮಂಡುವಿಗೆ ತೆರಳಿದ್ದು, ಅಲ್ಲಿನ ಹಯಾತ್ ರಿಜೆನ್ಸಿ ಎಂಬ ಹೊಟೇಲ್‌ನಲ್ಲಿ ತಂಗಿದ್ದರು.

ಆದರೆ ಇದೇ ವೇಳೆ ಜೆನ್ ಝೀ ಸಮುದಾಯದ ಪ್ರತಿಭಟನೆ ತೀವ್ರಗೊಂಡಿದ್ದು, ಉದ್ರಿಕ್ತಗೊಂಡ ಪ್ರತಿಭಟನಾಕಾರರು ಸಿಕ್ಕಸಿಕ್ಕ ಸ್ಥಳಗಳಲ್ಲಿ ಬೆಂಕಿ ಹಚ್ಚಿದ್ದರು. ಬೆಂಕಿಯಿಂದಾಗಿ ಹೊಟೇಲ್‌ನಿಂದ ಹೊರ ಹೋಗುವ ದಾರಿ ಬಂದ್ ಆಗಿತ್ತು. ಈ ವೇಳೆ ರಾಜೇಶ್ ಗೋಲಾ ಅವರು ಹೊಟೇಲ್‌ನ ಕಿಟಕಿ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ರಕ್ಷಣಾ ತಂಡದ ಸಿಬ್ಬಂದಿ ನೆಲದ ಮೇಲೆ ಹಾಸಿಗೆ ಹಾಸಿ ಮೇಲಿನಿಂದ ಕೆಳಗೆ ಹಾರುವಂತೆ ಮನವಿ ಮಾಡಿದ್ದರು.

ಹೊಟೇಲ್‌ನ 4ನೇ ಮಹಡಿಯಿಂದ ಕೆಳೆಗೆ ಹಾರಿದ್ದ ದಂಪತಿ

ಹೀಗಾಗಿ ರಾಜೇಶ್ ಗೋಲಾ ಹಾಗೂ ಅವರ ಪತಿ ರಾಮವೀರ್ ಸಿಂಗ್ ಗೋಲಾ ಅವರು ಹೊಟೇಲ್‌ನ 4ನೇ ಮಹಡಿಯಿಂದ ಕೆಳಗೆ ಹಾರಿದ್ದರು. ಇವರು ಹಾಸಿಗೆ ಮೇಲೆಯೇ ಬಿದ್ದರೂ ಇಬ್ಬರಿಗೂ ಗಾಯಗಳಾಗಿದ್ದವು. ಪತಿ ರಾಮವೀರ್ ಸಿಂಗ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಇತ್ತ ಪತ್ನಿ ರಾಜೇಶ್ ಗೋಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರ ಪುತ್ರ ವಿಶಾಲ್ ಬೆಂಕಿಯಿಂದಾಗಿ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಆಕೆ ತಮ್ಮ ಪತಿಯಿಂದ ಪ್ರತ್ಯೇಕಗೊಂಡಿದ್ದರು. ಅವರು ನಮ್ಮ ತಂದೆಯ ಜೊತೆಗೆ ಇದ್ದಿದ್ದರೆ ಅವರು ಸುರಕ್ಷಿತವಾಗಿ ಇರುತ್ತಿದ್ದರು ಎಂದು ಹೇಳಿದ್ದಾರೆ.

ನೇಪಾಳದಲ್ಲಿ ಜೇನ್ ಜೀ ಸಮುದಾಯ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಒಟ್ಟು 51 ಜನ ಸಾವನ್ನಪ್ಪಿದ್ದಾರೆ. 1,300 ಜನ ಗಾಯಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾದಾಗ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ತೀವ್ರ ಆಕ್ರೋಶಗೊಂಡ ಜೇನ್ ಝೀ ಸಮುದಾಯದವರು ದೇಶದ ಸಂಸತ್ ಭವನಕ್ಕೆ ಬೆಂಕಿ ಹಚ್ಚಿದ್ದರು, ಕೈಗೆ ಸಿಕ್ಕ ಸಚಿವರು ರಾಜಕಾರಣಿಗಳನ್ನು ಮುಖ ಮೂತಿ ನೋಡದೇ ಥಳಿಸಿದ್ದರು. ಜೇನ್‌ ಜೀ ಸಮುದಾಯದ ಈ ಆಕ್ರೋಶವನ್ನು ತಡೆದುಕೊಳ್ಳಲಾಗದೇ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಮಂಗಳವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ಗುಂಡೇಟಿಗೆ ಬಲಿಯಾದ ಅಮೆರಿಕಾದ ಬಲಪಂಥೀಯ ನಾಯಕ ಚಾರ್ಲಿ ಕಿರ್ಕ್ ಏನಂದಿದ್ದರು?

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಮಕ್ಕಳ ಆಟಿಕೆ ಜೀಪನ್ನು ರಸ್ತೆಯಲ್ಲಿ ಓಡಿಸಿದವನನ್ನು ಬಂಧಿಸಿದ ಪೊಲೀಸರು