ದಾವಣಗೆರೆಯಲ್ಲಿ ಖಾಸಗಿ ಬ್ಯಾಂಕ್ ಮತ್ತು ಮೈಕ್ರೋ ಫೈನಾನ್ಸ್ ಸಾಲದ ಕಿರುಕುಳ ತಾಳಲಾರದೆ ರೈತರೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಬ್ಯಾಂಕ್ ಮತ್ತು ಫೈನಾನ್ಸ್ ಸಿಬ್ಬಂದಿ ಹೆಸರು ಉಲ್ಲೇಖಿಸಿದ್ದಾರೆ.

ದಾವಣಗೆರೆ (ಸೆ.6): ಖಾಸಗಿ ಬ್ಯಾಂಕ್, ಮೈಕ್ರೋ ಫೈನಾನ್ಸ್‌ನಿಂದ ಪಡೆದಿದ್ದ ಸಾಲದ 2 ತಿಂಗಳ ಕಂತು ಕಟ್ಟಲಿಲ್ಲವೆಂಬ ಕಾರಣಕ್ಕೆ ಬ್ಯಾಂಕ್‌, ಫೈನಾನ್ಸ್‌ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ, ಕಿರುಕುಳ ನೀಡಿದ್ದರಿಂದ ನೊಂದ ವ್ಯಕ್ತಿಯೊಬ್ಬ ಡೆತ್‌ನೋಟ್‌ ಬರೆದಿಟ್ಟು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಇದನ್ನೂ ಓದಿ: ಧರ್ಮಸ್ಥಳ ಷಡ್ಯಂತ್ರದಲ್ಲಿ ಶಶಿಕಾಂತ್ ಸೆಂಥಿಲ್ ಕೈವಾಡ ಆರೋಪ; ಜನಾರ್ದನ ರೆಡ್ಡಿ ಇಂದು ಮಾನನಷ್ಟ ಮೊಕದ್ದಮೆ?

ಶಿರಮಗೊಂಡನಹಳ್ಳಿಯ ಚಿತ್ರಲಿಂಗ (31) ಮೃತ. ಈತ ಖಾಸಗಿ ಫೈನಾನ್ಸ್‌ನಲ್ಲಿ ಸಾಲ ಮಾಡಿಕೊಂಡಿದ್ದು, 2 ತಿಂಗಳ ಸಾಲದ ಕಂತು ಕಟ್ಟುವಂತೆ ಸಾಲ ವಸೂಲಾತಿ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿದ್ದರು. ಇದರಿಂದ ಮಾನಸಿಕವಾಗಿ ನೊಂದ ಚಿತ್ರಲಿಂಗ ಡೆತ್ ನೋಟ್ ಬರೆದಿಟ್ಟಿದ್ದು, ಖಾಸಗಿ ಬ್ಯಾಂಕ್, ಫೈನಾನ್ಸ್‌ಗಳ ಹೆಸರು ಹಾಗೂ ಅದರ ಸಿಬ್ಬಂದಿ ಮೊಬೈಲ್ ನಂಬರ್‌ಗಳನ್ನೂ ಉಲ್ಲೇಖಿಸಿದ್ದಾರೆ. ಚಿತ್ರಲಿಂಗ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕುಟುಂಬದವರು ಒತ್ತಾಯಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ, ಮಗನ ಜೊತೆಗೆ ಶಿರಮಗೊಂಡನಹಳ್ಳಿಯಲ್ಲಿ ಚಿತ್ರಲಿಂಗ ವಾಸಿಸುತ್ತಿದ್ದರು.