ಒಂದು ತಿಂಗಳು ರಾತ್ರಿ ಊಟ ಬಿಟ್ಟರೆ ದೇಹದ ಮೇಲೆ ಆಗುವ ಪರಿಣಾಮಗಳೇನು, ಯಾರು ಊಟ ಬಿಡಬಾರದು ? ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ಒಂದು ತಿಂಗಳು ಪೂರ್ತಿ ನೀವು ರಾತ್ರಿ ಊಟ ಮಾಡೋದನ್ನ ನಿಲ್ಲಿಸಿದರೆ ಅದು ಆಹಾರಕ್ರಮದಲ್ಲಿ ನೀವು ಮಾಡಿಕೊಳ್ಳುತ್ತಿರುವ ತೀವ್ರ ಬದಲಾವಣೆಯೇ ಸರಿ. ಏಕೆಂದರೆ ಅದು ನಿಮ್ಮ ದೇಹ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಮಧ್ಯಂತರ ಉಪವಾಸ (intermittent fasting) ಎಂದು ಕರೆಯಲ್ಪಡುವ ಈ ಅಭ್ಯಾಸವು ಇತ್ತೀಚಿನ ವರ್ಷಗಳಲ್ಲಿ ಸಂಭಾವ್ಯ ತೂಕ ನಷ್ಟ ಮತ್ತು ಚಯಾಪಚಯ ಪ್ರಯೋಜನಗಳಿಂದಾಗಿ ಗಮನ ಸೆಳೆದಿದೆ. ಆದರೆ ನಿಮ್ಮ ದೈನಂದಿನ ದಿನಚರಿಯಿಂದ ರಾತ್ರಿ ಸಂಪೂರ್ಣ ಊಟವನ್ನೇ ತೆಗೆದುಹಾಕುವುದರಿಂದ ನಿಮ್ಮ ದೇಹದ ಕಾರ್ಯಚಟುವಟಿಕೆಯಲ್ಲಿ ಅನಿರೀಕ್ಷಿತ ಬದಲಾವಣೆಗಳಿಗೆ ಕಾರಣವಾಗಬಹುದು. ಅಷ್ಟೇ ಏಕೆ, ಇದು ಎಲ್ಲರಿಗೂ ಸೂಕ್ತವಲ್ಲ.
ತಕ್ಷಣ ಸಂಭವಿಸುವ ದೈಹಿಕ ಬದಲಾವಣೆಗಳು
ಬೆಂಗಳೂರಿನ ಅಪೋಲೋ ಸ್ಪೆಕ್ಟ್ರಾ ಆಸ್ಪತ್ರೆಯ ಕ್ಲಿನಿಕಲ್ ಡಯಟೀಷಿಯನ್ ಮತ್ತು ಪೌಷ್ಟಿಕತಜ್ಞರಾದ ಡಾ. ಟ್ವಿನ್ಸಿ ಆನ್ ಸುನಿಲ್ ಪ್ರಕಾರ, "ನೀವು ರಾತ್ರಿ ಸಮಯದಲ್ಲಿ ಊಟ ಮಾಡುವುದನ್ನು ನಿಲ್ಲಿಸಿದಾಗ ದೇಹವು ತಕ್ಷಣವೇ ಹಲವಾರು ಬದಲಾವಣೆಗಳನ್ನು ಅನುಭವಿಸುತ್ತದೆ. ಭೋಜನವನ್ನು ಬಿಟ್ಟುಬಿಡುವುದರಿಂದ, ನೀವು ನಿಮ್ಮ ದೈನಂದಿನ ಆಹಾರ ಸೇವನೆಯನ್ನು ಮತ್ತಷ್ಟು ಕಡಿಮೆ ಮಾಡಿದಂತಾಗುತ್ತದೆ. ಇದರಿಂದಾಗಿ ಕ್ಯಾಲೋರಿ ಕೊರತೆ ಮತ್ತು ತೂಕ ನಷ್ಟದ ಸಾಧ್ಯತೆಯಿದೆ.
ದೇಹಕ್ಕೆ ಆಹಾರ ಲಭ್ಯವಿಲ್ಲದಿದ್ದಾಗ ಮತ್ತು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾದಾಗ ಗ್ಲೂಕೋಸ್ ಕೂಡ ಕಡಿಮೆಯಾಗುತ್ತದೆ. ಇದು ತಲೆತಿರುಗುವಿಕೆ, ಕಿರಿಕಿರಿ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಹಸಿವಿನ ಸಂಕೇತವನ್ನು ಪ್ರಚೋದಿಸುವ ಗ್ರೆಲಿನ್ ಹೆಚ್ಚಾಗುತ್ತದೆ ಮತ್ತು ಹಸಿವಿನ ಪ್ರಚೋದನೆಗಳನ್ನು ದೀರ್ಘಕಾಲದವರೆಗೆ ತಡೆಯುವುದರಿಂದ ನಿಮ್ಮ ನೈಸರ್ಗಿಕ ಆಹಾರ ಕಾರ್ಯವಿಧಾನವು ಅಪಾಯಕ್ಕೆ ಸಿಲುಕಬಹುದು. ಅಲ್ಲದೆ, ದೇಹವು ತನ್ನ ಅಗತ್ಯಗಳನ್ನು ಪೂರೈಸಲು ಕಡಿಮೆ ಕ್ಯಾಲೊರಿಗಳನ್ನು ಸೇವಿಸಲು ಹೊಂದಿಕೊಂಡಾಗ ಚಯಾಪಚಯ ಕ್ರಿಯೆಯು ಕಡಿಮೆಯಾಗುವುದನ್ನು ನೀವು ಅನುಭವಿಸಬಹುದು.
ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?
ಭೋಜನವನ್ನು ಬಿಡುವುದರಿಂದ ತೂಕ ಇಳಿಕೆಯಂತಹ ಅಲ್ಪಾವಧಿಯ ಪ್ರಯೋಜನಗಳು ದೊರೆಯಬಹುದಾದರೂ ಇದು ಹಲವಾರು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಡಾ. ಸುನಿಲ್ ಹೇಳುತ್ತಾರೆ.
ಪೌಷ್ಟಿಕಾಂಶದ ಕೊರತೆ: ಊಟ ಬಿಡುವುದರಿಂದ ದೇಹಕ್ಕೆ ಅಗತ್ಯವಿರುವ ಹಲವಾರು ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದು ರೋಗನಿರೋಧಕ ಶಕ್ತಿ ಮತ್ತು ದೇಹದ ಒಟ್ಟು ಶಕ್ತಿಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಸ್ನಾಯುಗಳ ನಷ್ಟ: ಶಿಫಾರಸು ಮಾಡಲಾದ ದೈನಂದಿನ ಪ್ರೋಟೀನ್ ಸೇವನೆಯನ್ನು ತೆಗೆದುಕೊಳ್ಳದಿದ್ದರೆ, ದೇಹವು ಶಕ್ತಿಯನ್ನು ಉತ್ಪಾದಿಸಲು ಸ್ನಾಯುಗಳನ್ನು ಬರ್ನ್ ಮಾಡಲು ಪ್ರಾರಂಭಿಸುತ್ತದೆ, ಇದರ ಪರಿಣಾಮವಾಗಿ ದೀರ್ಘಾವಧಿಯಲ್ಲಿ ಸ್ನಾಯುಗಳ ನಷ್ಟವಾಗುತ್ತದೆ.
ಚಯಾಪಚಯ ನಿಧಾನಗತಿ: ದೈನಂದಿನ ಆಹಾರಕ್ರಮದಿಂದ ಹೊರಗುಳಿದಾಗ ತೂಕ ಇಳಿಸಿಕೊಳ್ಳುವುದು ಕಷ್ಟವಾಗುತ್ತದೆ.
ಅಸ್ತವ್ಯಸ್ತವಾದ ಆಹಾರ ಪದ್ಧತಿ: ನಿಯಮಿತವಾಗಿ ಊಟ ತಪ್ಪಿಸುವುದರಿಂದ ಅತಿಯಾಗಿ ತಿನ್ನುವುದು ಅಥವಾ ತಿನ್ನುವ ಅಸ್ವಸ್ಥತೆಗಳು ಸೇರಿವೆ.
ತೂಕ ಹೆಚ್ಚಾಗಲು ಕಾರಣ
ಡಾ. ಸುನಿಲ್ ಅವರ ಪ್ರಕಾರ, ರಾತ್ರಿ ಭೋಜನವನ್ನು ಬಿಟ್ಟುಬಿಡುವುದರಿಂದ ದಿನದ ಉಳಿದ ಸಮಯದಲ್ಲಿ ಚಯಾಪಚಯ ದರ, ಶಕ್ತಿಯ ಮಟ್ಟ ಮತ್ತು ಉತ್ಪಾದಕತೆ ಕಡಿಮೆಯಾಗುತ್ತದೆ. ಇದು ಚಯಾಪಚಯ ಕ್ರಿಯೆ ನಿಧಾನವಾಗಲು ಮತ್ತು ನಿಮ್ಮ ದೇಹವು ಹೆಚ್ಚು ಕೊಬ್ಬನ್ನು ಸಂಗ್ರಹಿಸಲು ಕಾರಣವಾಗಬಹುದು. ಸಾಮಾನ್ಯ ಆಹಾರ ಪದ್ಧತಿಯನ್ನು ಪುನರಾರಂಭಿಸಿದಾಗ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಏಕೆಂದರೆ ಆಹಾರದ ಲಭ್ಯತೆ ಕಡಿಮೆಯಾಗಿದೆ ಎಂದು ಗ್ರಹಿಸಿದಾಗ ನಿಮ್ಮ ದೇಹವು ಕೊಬ್ಬನ್ನು ಸಂಗ್ರಹಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಅಷ್ಟೇ ಅಲ್ಲ, ನೀವು ರಾತ್ರಿ ಊಟ ಬಿಟ್ಟುಬಿಟ್ಟರೆ ದಿನವಿಡೀ ದಣಿವು ಮತ್ತು ಆಲಸ್ಯ ಅನುಭವಿಸಬಹುದು. ಇತರ ಕೆಲಸ ಕಾರ್ಯ ಮಾಡಲು ಅಥವಾ ಇತರ ರೀತಿಯ ವ್ಯಾಯಾಮಗಳಲ್ಲಿ ಭಾಗವಹಿಸಲು ಸಾಧ್ಯವಾಗದಿರಬಹುದು. ಹಾಗೆಯೇ ರಾತ್ರಿ ಊಟ ಬಿಟ್ಟುಬಿಡುವುದು ಮೆದುಳಿನ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು, ಗಮನಹರಿಸುವುದು, ಮಾಹಿತಿಯನ್ನು ನೆನಪಿಟ್ಟುಕೊಳ್ಳುವುದು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೆಚ್ಚು ಕಷ್ಟಕರವಾಗುತ್ತದೆ" ಎಂದು ತಿಳಿಸಿದ್ದಾರೆ.
ಯಾರು ಊಟ ಬಿಡಬಾರದು?
ಮಕ್ಕಳು, ವೃದ್ಧರು, ಮಧುಮೇಹ ಮತ್ತು ಹೈಪೊಗ್ಲಿಸಿಮಿಯಾ ರೋಗಿಗಳು ಹಾಗೂ ಕ್ರೀಡಾಪಟುಗಳು ರಾತ್ರಿ ಊಟ ತಪ್ಪಿಸಬಾರದು ಎಂದು ಡಾ. ಸುನಿಲ್ ಎಚ್ಚರಿಸುತ್ತಾರೆ.