ಇಂದು ಎಲ್ಲಾ ಹಣ್ಣು, ಸೊಪ್ಪು- ತರಕಾರಿಗಳಿಗೂ ರಾಸಾಯನಿಕ ಸಿಂಪಡಣೆ ಮಾಡಿ ಅವುಗಳನ್ನು ವಿಷಯುಕ್ತ ಮಾಡುವುದು ಸಾಮಾನ್ಯವಾಗಿದೆ. ಆದರೆ ಎರಡೇ ಎರಡು ಹಣ್ಣಿಗೆ ಕೆಮಿಕಲ್​ ಹಾಕಲು ಸಾಧ್ಯವಿಲ್ಲ. ಅವು ಯಾವುವು ಗೊತ್ತಾ? 

ಈಗಂತೂ ಬಹುತೇಕ ಎಲ್ಲಾ ಪದಾರ್ಥಗಳಲ್ಲಿಯೂ ವಿಷವೇ ತುಂಬಿಬಿಟ್ಟಿದೆ. ವೈದ್ಯರ ಬಳಿ ಹೋದರೆ, ಇಲ್ಲವೇ ವಿಡಿಯೋಗಳನ್ನು ನೋಡಿದರೆ, ರೋಗಮುಕ್ತರಾಗಿ ಇರಲಿ ಹಣ್ಣು, ತರಕಾರಿ ತಿನ್ನಿ ಎಂದೇ ಹೇಳುತ್ತಾರೆ. ಯಾವುದೇ ರೋಗದ ಬಗ್ಗೆ ಸಲಹೆ ಕೇಳಿದ್ರೂ ಮೊದಲಿಗೆ ಬರುವ ಮಾತೇ ಹಸಿರು ಸೊಪ್ಪು ತಿನ್ನಿ, ಹಸಿರು ತರಕಾರಿ ತಿನ್ನಿ, ಹಣ್ಣು-ಹಂಪಲು ತಿನ್ನಿ ಎಂದು. ಇದು ನಿಜವೇ ಸರಿ. ಆದರೆ, ಇಂದು ವೈದ್ಯರ ಮಾತನ್ನು ಪಾಲಿಸಿ ಇವುಗಳನ್ನು ತಿಂದು ಆರೋಗ್ಯವಂತರಾಗಿ ಇರಬೇಕು ಎಂದರೆ ನಮ್ಮ ಮನೆಯಲ್ಲಿಯೇ ಬೆಳೆದುಕೊಳ್ಳಬೇಕು ಅಷ್ಟೇ. ಏಕೆಂದರೆ, ಈಗ ಯಾವುದೇ ಪದಾರ್ಥ, ಹಣ್ಣು, ತರಕಾರಿ, ಸೊಪ್ಪು ತೆಗೆದುಕೊಂಡರೂ ಅದರಲ್ಲಿ ಬರೀ ವಿಷವೇ ತುಂಬಿದೆ.

ಸೊಪ್ಪು, ತರಕಾರಿಗಳು ಹಸಿರು ಹಸಿರಾಗಿ ಇರಲು, ತಾಜಾ ತಾಜಾ ಎನ್ನಿಸಿದರಷ್ಟೇ ಗ್ರಾಹಕರು ಅದನ್ನು ಕೊಳ್ಳುತ್ತಾರೆ ಎಂದುಕೊಂಡೇ ಅದಕ್ಕೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ಅದೇ ಸೊಪ್ಪನ್ನು ನೀವು ಮನೆಯಲ್ಲಿ ಬೆಳೆದು ನೀರಿನಲ್ಲಿ ತಂದು ತೊಳೆಯಿರಿ, ಅದೇ ಸೊಪ್ಪನ್ನು ಮಾರುಕಟ್ಟೆಯಿಂದ ಖರೀದಿ ಮಾಡಿ ತಂದು ನೋಡಿ. ಹಸಿರು ಬಣ್ಣ ಬಿಟ್ಟುಕೊಳ್ಳುತ್ತದೆ, ಪ್ಯಾಕೆಟ್​ನಲ್ಲಿ ಇಟ್ಟಿರೋ ಬಟಾಣಿ ಕಾಳು ಇಂಥವುಗಳನ್ನು ತಂದರೂ ಹಸಿರು ಬಣ್ಣ ಬಿಡುವುದನ್ನು ನೋಡಬಹುದು. ಇವೆಲ್ಲವೂ ವಿಷವೇ, ಕೃತಕ ಬಣ್ಣವನ್ನು ಸಿಂಪಡಿಸಿ ತಾಜಾ ತಾಜಾ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಒಂದು ವೇಳೆ ಹಾಗೆ ಮಾಡದೇ ಜನರಿಗೆ ಒಳ್ಳೆಯದನ್ನು ಕೊಡಲು ಯಾರಾದರೂ ಮುಂದೆ ಬಂದರೆ ಖಂಡಿತವಾಗಿಯೂ ಜನರು ಅದನ್ನು ಖರೀದಿ ಮಾಡುವುದಿಲ್ಲ. ಇದಕ್ಕೆ ಕಾರಣ, ಅದರಲ್ಲಿ ಹುಳು ಆಗಿರುತ್ತದೆ, ಇಲ್ಲವೇ ನೋಡಲು ಚೆನ್ನಾಗಿ ಇರುವುದಿಲ್ಲ. ಏಕೆಂದರೆ ಅದರಲ್ಲಿ ಹಸಿರು ನಕಲಿ ಬಣ್ಣ ಸ್ಪ್ರೇ ಆಗಿರುವುದಿಲ್ಲವಲ್ಲ, ಹೀಗೆ ಒಳ್ಳೆಯದ್ದನ್ನು ಮಾಡಲು ಹೋಗಿ ಮಾರಾಟಗಾರರು ಬರಿಗೈಲಿ ವಾಪಸಾಗುವ ಬದಲು, ವಿಷವನ್ನೇ ಕೊಟ್ಟು ಕೈತುಂಬಾ ದುಡ್ಡು ಸಂಪಾದಿಸದೇ ಅವರಿಗೂ ದಾರಿಯಿಲ್ಲ!

ಇನ್ನು ಬಹುತೇಕ ಎಲ್ಲಾ ಹಣ್ಣುಗಳನ್ನು ಬೆಳೆಯುವ ಸಂದರ್ಭದಲ್ಲಿ ರಾಸಾಯನಿಕ ಸಿಂಪಡಣೆ ಇದ್ದೇ ಇರುತ್ತದೆ. ಸಾವಯವ ಪದ್ಧತಿಯಲ್ಲಿ ಬೆಳೆಯುವ ಕೆಲವೇ ಬೆಳೆಗಾರರು ಇದ್ದು, ಮಿಕ್ಕಿದ್ದೆಲ್ಲವೂ ಚೆಂದ ಚೆಂದ ಸುಂದರವಾಗಿ ಕಾಣುವ ವಿಷಯುಕ್ತ ಹಣ್ಣುಗಳೇ, ದ್ರಾಕ್ಷಿಯಂಥ ಹಣ್ಣುಗಳಿಗೆ ನೇರವಾಗಿ ಕ್ರಿಮಿನಾಶಕ ಸಿಂಪಡಣೆ ಮಾಡಿ ಅವು ನೇರವಾಗಿ ನಮ್ಮ ಹೊಟ್ಟೆಯೊಳಕ್ಕೆ ಹೋದರೆ, ಮಿಕ್ಕ ಹಣ್ಣುಗಳ ಸಿಪ್ಪೆಗಳಲ್ಲಿ ವಿಷ ಸೇರಿ ಪರೋಕ್ಷವಾಗಿ ನಮ್ಮ ಹೊಟ್ಟೆ ಸೇರುತ್ತಿವೆ. ಇದೇ ಕಾರಣಕ್ಕೆ ತಾನೆ, ಇಂದು ಕ್ಯಾನ್ಸರ್ ಎನ್ನುವುದು ಅದೆಷ್ಟು ಕಾಮನ್​ ಆಗಿಬಿಟ್ಟಿರೋದು?

ಹಾಗಿದ್ದರೆ ವಿಷವೇ ಇಲ್ಲದ ಹಣ್ಣುಗಳು, ದೇಹಕ್ಕೂ ತಂಪು, ಆರೋಗ್ಯಕ್ಕೂ ತಂಪು ಇಲ್ಲವೇ ಎಂದು ಕೇಳಬಹುದು. ಪ್ರಪಂಚಾದ್ಯಂತ ಇರುವ ಹಣ್ಣುಗಳ ಪೈಕಿ ಭಾರತದ ಮಟ್ಟಿಗೆ ಹೇಳುವುದಾದರೆ ಎರಡೇ ಎರಡು ಹಣ್ಣುಗಳು ವಿಷಮುಕ್ತವಾಗಿವೆ. ಏಕೆಂದರೆ ಇವುಗಳಿಗೆ ರಾಸಾಯನಿಕ ಸಿಂಪಡಿಸಿದರೆ ಅವು ಹಾಳಾಗುತ್ತವೆ. ಅವು ಎಂದರೆ ಬಾಳೆಹಣ್ಣು ಮತ್ತು ಪೇರಲೆ ಹಣ್ಣು. ಬಾಳೆ ಹಣ್ಣು ಎಲ್ಲಾ ಕಡೆ ಇದೇ ಹೆಸರಿನಿಂದ ಕರೆಯುತ್ತಾರೆ, ಆದರೆ ಪೇರಲೆ ಹಣ್ಣಿಗೆ, ಚೇಪೆಕಾಯಿ, ಸೀಬೇ ಹಣ್ಣು ಎಂದೆಲ್ಲಾ ಕರೆಯುತ್ತಾರೆ. ಇದನ್ನು ಬಡವರ ಸೇಬು ಎಂದೂ ಕರೆಯುತ್ತಾರೆ. ಆದರೆ ಸೇಬು ಬೆಳೆಯುವಾಗ ಕೂಡ ಸಿಕ್ಕಾಪಟ್ಟೆ ರಾಸಾಯನಿಕ ಸಿಂಪಡಣೆ ಮಾಡಿರುತ್ತಾರೆ ಎನ್ನುವುದು ನೆನಪಿರಲಿ. ಇದೇ ಕಾರಣಕ್ಕೆ ಸಿಪ್ಪೆ ಎಸೆದು ತಿನ್ನಿ ಎಂದೂ ಕೆಲವು ವೈದ್ಯರು ಹೇಳುತ್ತಾರೆ. ಆದ್ದರಿಂದ ಬಾಳೆ ಮತ್ತು ಸೀಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ.