ಈ ಲೇಖನದಲ್ಲಿ ಡಾ. ಬಿನಯ್ ಕುಮಾರ್ ಪಾಂಡೆ ತಿಳಿಸಿರುವ ಹೃದಯಾಘಾತದ ಮುಂಚೆ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳ ಬಗ್ಗೆ ನೋಡೋಣ. ಅದರ ಸಹಾಯದಿಂದ ನೀವು ಹೃದಯದ ಕಾಯಿಲೆಯಿಂದ ದೂರವಿರಬಹುದು. 

ಇತ್ತೀಚಿನ ದಿನಗಳಲ್ಲಿ ಜನರ ಲೈಫ್‌ಸ್ಟೈಲ್ ಯದ್ವಾತದ್ವಾ ಚೇಂಜ್ ಆಗಿದೆ. ಆಫೀಸ್ ಒತ್ತಡವಿರಬಹುದು, ಮನೆ ಮತ್ತು ಕುಟುಂಬದ ಜವಾಬ್ದಾರಿ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥರನ್ನಾಗಿ ಮಾಡಿದೆ. ಇದಲ್ಲದೆ ತಪ್ಪು ಆಹಾರ ಪದ್ಧತಿಗಳು ಸಹ ಜನರನ್ನು ರೋಗಿಗಳನ್ನಾಗಿ ಮಾಡಿವೆ, ಮಾಡುತ್ತಿವೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆಗಳು ಸಾಕಷ್ಟು ಸಾಮಾನ್ಯವಾಗಿದ್ದು, ವೃದ್ಧರು ಮಾತ್ರವಲ್ಲ ಯುವಕರು ಸಹ ಈ ಕಾಯಿಲೆಗೆ ಗುರಿಯಾಗಲು ಪ್ರಾರಂಭಿಸಿದ್ದಾರೆ.

ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಸಮಯಕ್ಕೆ ಸರಿಯಾಗಿ ತಿಳಿದುಕೊಳ್ಳುವುದರ ಜೊತೆ ಅದನ್ನು ಆರೋಗ್ಯಕರವಾಗಿಡಲು ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೃದಯಾಘಾತವು ಸಾಮಾನ್ಯ ಹೃದಯ ಸಮಸ್ಯೆಯಾಗಿದ್ದು, ಜನರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಆದ್ದರಿಂದ ಅದು ಪತ್ತೆಯಾಗುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ. ಆದ್ದರಿಂದ ಇಂದು ಈ ಲೇಖನದಲ್ಲಿ ಡಾ. ಬಿನಯ್ ಕುಮಾರ್ ಪಾಂಡೆ ತಿಳಿಸಿರುವ ಹೃದಯಾಘಾತದ ಮುಂಚೆ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳ ಬಗ್ಗೆ ನೋಡೋಣ. ಅದರ ಸಹಾಯದಿಂದ ನೀವು ಹೃದಯದ ಕಾಯಿಲೆಯಿಂದ ದೂರವಿರಬಹುದು. 

ಆಯಾಸ
ಸಂಪೂರ್ಣ ವಿಶ್ರಾಂತಿ ಪಡೆದ ನಂತರವೂ ನಿಮಗೆ ಆಗಾಗ್ಗೆ ದಣಿವು ಅನಿಸುತ್ತಿದ್ದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ಯಾವುದೇ ಕಾರಣವಿಲ್ಲದೆ ದಣಿವು ಅಥವಾ ದುರ್ಬಲತೆ ಅನಿಸುವುದು ನಿಮ್ಮ ಹೃದಯವು ಕಿರಿದಾದ ಅಥವಾ ನಿರ್ಬಂಧಿಸಲಾದ ಅಪಧಮನಿಗಳ ಮೂಲಕ ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸುತ್ತಿದೆ ಎಂಬುದರ ಸಂಕೇತವಾಗಿರಬಹುದು.

ತಲೆತಿರುಗುವಿಕೆ
ಆಗಾಗ್ಗೆ ನಿರ್ಬಂಧಿಸಲಾದ ಅಪಧಮನಿಗಳು (Blocked arteries)ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದು ತಲೆತಿರುಗುವಿಕೆ, ಲಘು ತಲೆನೋವು ಅಥವಾ ಮೂರ್ಛೆ ಹೋಗುವಿಕೆಗೆ ಕಾರಣವಾಗಬಹುದು. ನೀವು ಇದ್ದಕ್ಕಿದ್ದಂತೆ ತಲೆತಿರುಗುವಿಕೆಯನ್ನು ಅನುಭವಿಸುತ್ತಿದ್ದರೆ, ಅದು ಕಳಪೆ ರಕ್ತ ಪರಿಚಲನೆ (Poor blood circulation)ಯ ಸಂಕೇತವಾಗಿರಬಹುದು. ಆದ್ದರಿಂದ ತಕ್ಷಣ ಅದನ್ನು ಪರೀಕ್ಷಿಸಿ.

ಕಾರಣವಿಲ್ಲದೆ ಬೆವರುವುದು
ಹಠಾತ್, ವಿವರಿಸಲಾಗದ ಬೆವರು, ವಿಶೇಷವಾಗಿ ಶೀತ ಬೆವರು (Cold sweat) ಹೃದ್ರೋಗದ ಎಚ್ಚರಿಕೆಯ ಸಂಕೇತವಾಗಿರಬಹುದು. ಯಾವುದೇ ದೈಹಿಕ ವ್ಯಾಯಾಮವಿಲ್ಲದೆ ನೀವು ಅತಿಯಾಗಿ ಬೆವರುತ್ತಿದ್ದರೆ ಅದು ಅಪಾಯಕಾರಿ ಸೂಚನೆಯಾಗಿದ್ದು ಅದನ್ನು ಗಂಭೀರವಾಗಿ ಪರಿಗಣಿಸಬೇಕು.

ಎದೆ ನೋವು (ಆಂಜಿನಾ)
ನಿಮ್ಮ ಹೃದಯದಲ್ಲಿ ಅಡಚಣೆ ಇದ್ದರೆ ಎದೆ ನೋವು ಸಾಮಾನ್ಯ ಲಕ್ಷಣವಾಗಿರಬಹುದು. ಎದೆ ನೋವು ಅಪಧಮನಿಗಳ ಅಡಚಣೆ (Arterial blockage)ಯ ಸಾಮಾನ್ಯ ಲಕ್ಷಣವಾಗಿದೆ. ಇದನ್ನು ಆಂಜಿನಾ ಎಂದೂ ಕರೆಯುತ್ತಾರೆ. ಈ ಅಸ್ವಸ್ಥತೆಯು ಹೆಚ್ಚಾಗಿ ಎದೆಯಲ್ಲಿ ಬಿಗಿತ, ಒತ್ತಡ ಅಥವಾ ಸಂಕೋಚನದಂತೆ ಭಾಸವಾಗುತ್ತದೆ. ಕೆಲವೊಮ್ಮೆ ಎದೆಯ ಮೇಲೆ ಕಲ್ಲು ಇರಿಸಿದಂತೆ ಭಾಸವಾಗುತ್ತದೆ. ನೀವು ಸಹ ಇದೇ ರೀತಿಯ ನೋವನ್ನು ಪದೇ ಪದೇ ಅನುಭವಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

ಉಸಿರಾಟದ ತೊಂದರೆ
ಲಘು ಚಟುವಟಿಕೆ ಮಾಡಿದ ನಂತರವೂ ನಿಮಗೆ ಉಸಿರಾಟದ ತೊಂದರೆ ಅನಿಸಿದರೆ ಅದು ನಿಮ್ಮ ಅಪಧಮನಿಗಳು ಮುಚ್ಚಿಹೋಗುತ್ತಿವೆ ಮತ್ತು ನಿಮ್ಮ ಹೃದಯಕ್ಕೆ ಸಾಕಷ್ಟು ಆಮ್ಲಜನಕ ಸಿಗುತ್ತಿಲ್ಲ ಎಂಬುದರ ಸಂಕೇತವಾಗಿರಬಹುದು. ಉಸಿರಾಟದ ತೊಂದರೆ ಹೆಚ್ಚಾಗಿ ಹೃದಯ ಸಮಸ್ಯೆಗಳ ಆರಂಭಿಕ ಲಕ್ಷಣವಾಗಿದೆ ಮತ್ತು ತಕ್ಷಣವೇ ತಪಾಸಣೆ ಮಾಡಬೇಕು.

ವಾಕರಿಕೆ ಅಥವಾ ಅಜೀರ್ಣ
ವಾಕರಿಕೆ ಅಥವಾ ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳು ಸಹ ಹೃದಯದ ಅಡಚಣೆಯನ್ನು ಸೂಚಿಸುತ್ತವೆ. ಸಾಮಾನ್ಯವಾಗಿ ಜನರು ಇದನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಆದರೆ ನಿಮಗೆ ಎದೆ ನೋವಿನ ಜೊತೆಗೆ ಅಂತಹ ಸಮಸ್ಯೆಗಳಿದ್ದರೆ, ಅದು ಕೆಲವೊಮ್ಮೆ ಹೃದ್ರೋಗದ ಸಂಕೇತವಾಗಿರಬಹುದು.

ಕಣಕಾಲುಗಳು ಅಥವಾ ಪಾದಗಳಲ್ಲಿ ಊತ
ಮುಚ್ಚಿಹೋಗಿರುವ ರಕ್ತನಾಳಗಳು ದೇಹದ ಕೆಳಗಿನ ಭಾಗಗಳಲ್ಲಿ ದ್ರವವನ್ನು ಸಂಗ್ರಹಿಸಲು ಕಾರಣವಾಗಬಹುದು. ಇದು ಕಣಕಾಲುಗಳು ಅಥವಾ ಕಾಲುಗಳಲ್ಲಿ ಊತವನ್ನು ಉಂಟುಮಾಡುತ್ತದೆ. ಈ ಪ್ರದೇಶಗಳಲ್ಲಿ ನಿಮಗೆ ನಿರಂತರವಾಗಿ ಊತವಿದ್ದರೆ ಅದು ಮುಚ್ಚಿಹೋಗಿರುವ ಅಪಧಮನಿಗಳಿಂದಾಗಿ ರಕ್ತ ಪರಿಚಲನೆ ಕಳಪೆಯಾಗಿದೆ ಎಂಬುದರ ಸಂಕೇತವಾಗಿರಬಹುದು.