ಕಳೆ ಎಂದು ಕಿತ್ತೆಸೆಯೋ 'ಮುಟ್ಟಿದರೆ ಮುನಿ' ಕಿತ್ತು ತನ್ನಿ... ಹಲವು ಮಾತ್ರೆಗಳಿಗೆ ಹೇಳಿ ಬೈಬೈ
ನಾಚಿಕೆ ಮುಳ್ಳು ಕೇವಲ ಕಳೆಯಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳಿವೆ. ಎಲುಬು ಮುರಿತ, ಮೂತ್ರದ ಸಮಸ್ಯೆ, ಮುಟ್ಟಿನ ನೋವು ನಿವಾರಣೆಗೆ ಇದು ರಾಮಬಾಣ. ಪ್ರಾಣಿಗಳ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ….

ಮುಟ್ಟಿದರೆ ಮುನಿಯ ಪ್ರಯೋಜನಗಳು
ನಾಚಿಕೆ ಮುಳ್ಳಿಗೆ ಮುಟ್ಟಿದರೆ ಮುನಿ ಎಂದೂ ಹೆಸರು. ಆಡುಭಾಷೆಯಲ್ಲಿ ನಾಚಿಕೆಗಿಡ, ಮುಡುಗುದಾವರೆ, ಮುಟ್ಟಲ ಮುರುಕ, ಗಂಡಕಾಲೆ, ನಮಸ್ಕಾರಿ, ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಲಜ್ಜಾವತಿ ಎಂದೂ ವಿವಿಧ ಭಾಷೆಗಳಲ್ಲಿ ಕರೆಯುತ್ತಾರೆ. ಇನ್ನು ಇಂಗ್ಲಿಷ್ನಲ್ಲಿ ಹೇಳುವುದಾದರೆ Touch Me not ಎಂದು. ಮನೆಯ ಅಂಗಳದಲ್ಲಿ, ತೋಟ, ಗದ್ದೆಗಳಲ್ಲಿ ಕಳೆಯಂತೆ ಬೆಳೆಯುವ ಸಸ್ಯ ಇದು. ಮುಟ್ಟಿದ ಕೂಡಲೇ ಮುದುಡಿಕೊಳ್ಳುವುದರಿಂದ ಈ ಹೆಸರು ಇದಕ್ಕೆ. ಆದರೆ, ಈ ಸಸ್ಯದಲ್ಲಿ ಇರುವ ಗುಣಗಳು ಅಷ್ಟಿಷ್ಟಲ್ಲ. ಹೂವು, ಬೇರು, ಕಾಂಡ, ಎಲೆ, ಎಲ್ಲವೂ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಬಳಕೆಯಾಗುತ್ತದೆ. ಹಾಗಾಗಿಯೇ ಆಯುರ್ವೇದದಲ್ಲಿ ಈ ಸಸ್ಯಕ್ಕೆ ವಿಶೇಷ ಮಹತ್ವವಿದೆ.
ಎಲುಬು ಮುರಿದಿದ್ದರೆ
ಎಲುಬು ಮುರಿದಿದ್ದರೆ ಅಥವಾ ಉಳುಕಿದ್ದರೆ, ನಾಚಿಕೆ ಮುಳ್ಳಿನ ಬೇರುಗಳನ್ನು ನಿಂಬೆರಸದಲ್ಲಿ ರುಬ್ಬಿ ಬಿಸಿ ಮಾಡಿ ಲೇಪಿಸಿದರೆ ನೋವು ಕಡಿಮೆಯಾಗಿ ಎಲುಬುಗಳು ಬೇಗನೆ ಸೇರುತ್ತವೆ. ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ, ಅದರ ರಸ ತೆಗೆದು 2 ರಿಂದ 3 ಚಮಚ ರಸವನ್ನು, 1 ಲೋಟ ನೀರಿಗೆ ಹಾಕಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ.
ಕಿಡ್ನಿ ಸ್ಟೋನ್ಗೆ
ಕಿಡ್ನಿ ಸ್ಟೋನ್ ನೋವು ಕಾಣಿಸಿಕೊಂಡರೆ ನಾಚಿಕೆ ಸೊಪ್ಪಿನ ಕಷಾಯವನ್ನು ಮಾಡಿ ಕುಡಿದರೆ ಶೀಘ್ರದಲ್ಲಿ ನೋವು ಕಡಿಮೆಯಾಗುತ್ತದೆ. ಸುಲಭವಾಗಿ ಈ ಸೊಪ್ಪು ನೋವು ನಿವಾರಕವಾಗಿ ಕೆಲಸಮಾಡುತ್ತದೆ.
ಮೂತ್ರದ ಸಮಸ್ಯೆಗಳಿಗೆ
ನಾಚಿಕೆ ಮುಳ್ಳಿನ ರಸಕ್ಕೆ ಜೀರಿಗೆ ಪುಡಿ ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಮತ್ತು ಮೂತ್ರಬಂಧ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮುಟ್ಟಿನ ಸಮಸ್ಯೆಗಳಿಗೆ
ನಾಚಿಕೆ ಮುಳ್ಳಿನ ಕಷಾಯ ಮಹಿಳೆಯರ ಮುಟ್ಟಿನ ದಿನಗಳ ನೋವನ್ನು ಕಡಿಮೆ ಮಾಡಲು ರಾಮಬಾಣದಂತೆ ಕೆಲಸ ಮಾಡುತ್ತದೆ. ಹೊಟ್ಟೆ, ಸೊಂಟ, ಕೈಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವನ್ನು ಹೋಗಲಾಡಿಸುತ್ತದೆ. ಋತುಚಕ್ರ ಅನಿಯಮಿತವಾಗಿದ್ದರೆ ಬೇರು ಸಹಿತ ಈ ಗಿಡವನ್ನು ಕಿತ್ತು ತಂದು ಸ್ವಚ್ಛಗೊಳಿಸಿ ನೀರಿಗೆ ಹಾಕಿ ಕುದಿಸಿ ಕುಡಿದರೆ ಉತ್ತಮ ಪರಿಣಾಮ ಕಾಣಬಹುದು.
ರಕ್ತಸ್ರಾವ ನಿಯಂತ್ರಣ:
ನಾಚಿಕೆ ಮುಳ್ಳಿನ ರಸವು ರಕ್ತವನ್ನು ಶೋಧಿಸುತ್ತದೆ ಮತ್ತು ಸಣ್ಣ ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಮೂಗಿನ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ರಾಣಿಗಳಿಗೂ ಪ್ರಯೋಜನಕಾರಿ
ಇದರ ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ. ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದೆ. ಎಲೆಗಳು ಮುದುಡಿದಾಗ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ. ಜಾನುವಾರುಗಳಲ್ಲಿ ಅಕಾಲದಲ್ಲಿ ಗರ್ಭ ಹೊರಗೆ ಬರುವ ಸಮಸ್ಯೆಯಿದ್ದರೆ, ನಾಚಿಕೆ ಮುಳ್ಳಿನ ಸಣ್ಣ ಕತ್ತರಿಸಿದ ತುಂಡುಗಳನ್ನು ತೌಡು ಅಥವಾ ಅಕ್ಕಿಯೊಂದಿಗೆ ಬೇಯಿಸಿ ನೀಡಿದರೆ ಸಹಾಯವಾಗುತ್ತದೆ.
ಇನ್ನೂ ಇವೆ ಪ್ರಯೋಜನಗಳು
ಅತಿಸಾರ, ಮೂಲವ್ಯಾಧಿ, ಸ್ತ್ರೀ ರೋಗಗಳು, ಮಧುಮೇಹ ಮತ್ತು ಪುರುಷರ ಶಕ್ತಿಹೀನತೆಯ ಚಿಕಿತ್ಸೆಯಲ್ಲಿಯೂ ಇದು ಸಹಕಾರಿ ಎಂದು ಹೇಳಲಾಗುತ್ತದೆ.