5 ದಶಕದಿಂದಲೂ ನವರಾತ್ರಿ ಸಮಯದಂದು ಉಪವಾಸ ಮಾಡ್ತಾರೆ ಪ್ರಧಾನಿ ಮೋದಿ
Narendra Modi fasting: ಮೋದಿಯವರು ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಾರೆ. ಆದ್ದರಿಂದ ನೀವು ಸಹ ಅವರ ದಿನಚರಿಯಿಂದ ಸ್ಫೂರ್ತಿ ಪಡೆಯಬಹುದು.

ಶಿಸ್ತುಬದ್ಧ ಜೀವನಶೈಲಿ
ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ದೇಶದ ಪ್ರಧಾನಿಯಾಗಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ಅವರ ವೇಳಾಪಟ್ಟಿ ಹೇಗಿರುತ್ತದೆ ಎಂಬುದನ್ನು ಒಮ್ಮೆ ನೀವೇ ಊಹಿಸಿ. ಅವರ ಜೀವನಶೈಲಿ ಬಹಳ ಬ್ಯಾಲೆನ್ಸ್ ಆಗಿದೆ. ಮೋದಿ ಯುವಜನರು ಸದೃಢವಾಗಿರಲು ಪ್ರೇರೇಪಿಸುವುದಲ್ಲದೆ, ಫಿಟ್ ಇಂಡಿಯಾ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಇದು ಜನರು ದೈಹಿಕವಾಗಿ ಸಕ್ರಿಯರಾಗಿರಲು ಮತ್ತು ದೈನಂದಿನ ದಿನಚರಿಯಲ್ಲಿ ಅವರ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.
ಮೋದಿ ದಿನಚರಿ ಯುವಜನರಿಗೆ ಸ್ಫೂರ್ತಿ
ಇತ್ತೀಚಿನ ದಿನಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಕಳಪೆ ದಿನಚರಿ. ಹೆಚ್ಚಿನ ಜನರು ತುಂಬಾ ಬ್ಯುಸಿಯಾಗಿರುವುದೇ ದೈಹಿಕ ಚಟುವಟಿಕೆ ಮತ್ತು ಆಹಾರ ಪದ್ಧತಿಯನ್ನ ಅಡ್ಡಿಪಡಿಸುತ್ತದೆ ಎಂದು ಹೇಳುತ್ತಾರೆ. ಆದರೆ ಮೋದಿಯವರು ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಾರೆ. ಆದ್ದರಿಂದ ನೀವು ಸಹ ಅವರ ದಿನಚರಿಯಿಂದ ಸ್ಫೂರ್ತಿ ಪಡೆಯಬಹುದು.
ಪ್ರಧಾನಿಯವರ ಬೆಳಗಿನ ದಿನಚರಿ
ಪಾರ್ಟಿ, ಮೀಟಿಂಗ್ ಎಂಬ ಕಾರಣದಿಂದಾಗಿ ಮೋದಿ ಆಗಾಗ್ಗೆ ಮಧ್ಯರಾತ್ರಿಯವರೆಗೆ ಎಚ್ಚರವಾಗಿರಬೇಕಾಗುತ್ತದೆ. ಆದರೆ ಆಗಲೂ ಅವರು ತಮ್ಮ ಮರುದಿನದ ದಿನಚರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲ್ಲ. ವರದಿಗಳ ಪ್ರಕಾರ, ನರೇಂದ್ರ ಮೋದಿ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳುತ್ತಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗಿನಿಂದ ಇದೇ ದಿನಚರಿಯಂತೆ. ಹೀಗಾಗಿ ಸುಮಾರು ಮೂರೂವರೆಯಿಂದ ನಾಲ್ಕು ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಎದ್ದ ನಂತರ ಸಣ್ಣ ವಾಕ್ ಮಾಡ್ತಾರೆ. ಇದರ ಜೊತೆಗೆ ಯೋಗ, ಸೂರ್ಯ ನಮಸ್ಕಾರ ಮತ್ತು ಧ್ಯಾನವು ಅವರ ದೈನಂದಿನ ದಿನಚರಿಯ ಭಾಗವಾಗಿದೆ. ಇದು ಅವರನ್ನು ಶಕ್ತಿಯುತವಾಗಿಡಲು ಸಹಾಯ ಮಾಡುತ್ತದೆ.
ಸರಳ, ಪೌಷ್ಟಿಕ ಸಮೃದ್ಧ ಆಹಾರ
ಪ್ರಧಾನಿ ಮೋದಿ ಒಮ್ಮೆ ಸಂದರ್ಶನವೊಂದರಲ್ಲಿ ತಾವು ದೊಡ್ಡ ಆಹಾರಪ್ರಿಯರೇನಲ್ಲ. ಆದ್ದರಿಂದ ಎಲ್ಲಿಗೆ ಹೋದರೂ ಸರಳವಾದ ಆಹಾರವನ್ನು ಬಯಸುತ್ತೇನೆ ಎಂದು ಹೇಳಿದ್ದರು. ಮೋದಿಯವರ ಆಹಾರ ಸರಳವಾದರೂ ಪೌಷ್ಟಿಕವಾಗಿದೆ. ಅವರು ಬೆಳಗ್ಗೆ ಶುಂಠಿ ಚಹಾ ಕುಡಿಯುತ್ತಾರೆ. ಉಪಾಹಾರದಲ್ಲಿ ಬೇಯಿಸಿದ ಅಥವಾ ಹುರಿದ ಪದಾರ್ಥಗಳು ಕೂಡ ಇರುತ್ತವೆ. ಅಂದರೆ ಅವರು ತುಂಬಾ ಕಡಿಮೆ ಎಣ್ಣೆಯನ್ನು ಸೇವಿಸುತ್ತಾರೆ. ಖಿಚಡಿ, ಉಪ್ಮಾ ಮತ್ತು ಕಧಿಯಂತಹ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಮೊರಿಂಗಾ (ಡ್ರಮ್ ಸ್ಟಿಕ್) ಪರಾಠವನ್ನು ಸೇವಿಸುವುದಾಗಿ ಅನೇಕ ಕಡೆ ಉಲ್ಲೇಖಿಸಿದ್ದಾರೆ. ಗುಜರಾತಿಯಾಗಿರುವ ಅವರು ಥೆಪ್ಲಾ ಮತ್ತು ಧೋಕ್ಲಾದಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸಹ ಆನಂದಿಸುತ್ತಾರೆ
5 ದಶಕಗಳಿಂದ ನವರಾತ್ರಿ ಉಪವಾಸ ಆಚರಣೆ
ಮೋದಿ ಕನಿಷ್ಠ ಐದು ದಶಕಗಳಿಂದ ಅಥವಾ 50 ವರ್ಷಗಳಿಗೂ ಹೆಚ್ಚು ಕಾಲ ನವರಾತ್ರಿ ಉಪವಾಸ ಆಚರಿಸುತ್ತಿದ್ದಾರೆ. ಅವರೇ ಇದನ್ನು ಸಂದರ್ಶನವೊಂದರಲ್ಲಿ ಉಲ್ಲೇಖಿಸಿದ್ದರು. ಉಪವಾಸದ ಸಮಯದಲ್ಲಿ ಅವರು ದಿನಕ್ಕೆ ಒಮ್ಮೆ ಮಾತ್ರ ಹಣ್ಣು ತಿನ್ನುತ್ತಾರೆ. ಮುಖ್ಯವಾಗಿ, ಅವರು ಒಂಬತ್ತು ದಿನಗಳಲ್ಲಿ ವಿವಿಧ ಹಣ್ಣುಗಳನ್ನು ಸೇವಿಸುವುದಿಲ್ಲ. ಬದಲಿಗೆ, ಅವರು ಮೊದಲ ದಿನ ಪಪ್ಪಾಯಿ ತಿಂದರೆ ಪ್ರತಿದಿನ ಪಪ್ಪಾಯಿ ತಿನ್ನುತ್ತಾರೆ.
ಸಂಜೆ 6 ಗಂಟೆ ನಂತರ ಊಟ ಮಾಡಲ್ಲ
ಮೋದಿಯವರು ಬೇಗನೆ ಊಟ ಮಾಡ್ತಾರೆ. ಸಂಜೆ 6 ಗಂಟೆಯ ನಂತರ ಏನನ್ನೂ ಸೇವಿಸಲ್ಲ. ಸೂರ್ಯಾಸ್ತದ ನಂತರ ಊಟ ಮಾಡುವುದನ್ನು ತಪ್ಪಿಸಲು ಆಯುರ್ವೇದವು ಶಿಫಾರಸು ಮಾಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಆಹಾರದ ಸಂಪೂರ್ಣ ಪ್ರಯೋಜನಗಳನ್ನು ನೀಡುತ್ತದೆ. ಈ ರೀತಿಯಾಗಿ ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವ ಮೂಲಕ ದೈನಂದಿನ ದಿನಚರಿಯಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ಸಹ ಆರೋಗ್ಯವಾಗಿರಬಹುದು.