ಉಳಿದ ಅನ್ನ ತಿಂತೀರಾ? ಅನುಕೂಲದಷ್ಟೇ ಅನಾನುಕೂಲವೂ ಇದೆ
Leftover Rice Health Benefits: ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದರೆ ಮಾತ್ರ ಪ್ರಯೋಜನಕಾರಿಯಾಗಬಹುದು. ಹಾಗೆ ಮಾಡದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಉಳಿದ ಅನ್ನವನ್ನು ತಿನ್ನುವುದು ಸುರಕ್ಷಿತವೇ?
ಕೆಲವೊಮ್ಮೆ ಮನೆಯಲ್ಲಿ ಅನ್ನ ಹೆಚ್ಚು ಉಳಿದು ಬಿಡುತ್ತದೆ. ಬಹುತೇಕರು ಈ ಅನ್ನವನ್ನ ಎಸೆಯಲ್ಲ. ಮರುದಿನ ತಿನ್ನುತ್ತೇವೆ. ಆದರೆ ಇಲ್ಲೊಂದು ಪ್ರಶ್ನೆಯಿದೆ. ಉಳಿದ ಅನ್ನವನ್ನು ತಿನ್ನುವುದು ಸುರಕ್ಷಿತವೇ?. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ ಎರಡೂ. ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದರೆ ಮಾತ್ರ ಪ್ರಯೋಜನಕಾರಿಯಾಗಬಹುದು. ಹಾಗೆ ಮಾಡದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.
ಉಳಿದ ಅನ್ನ ತಿನ್ನುವುದು ಪ್ರಯೋಜನಕಾರಿಯೇ?
ಪೋಷಕಾಂಶಗಳ ಲಭ್ಯತೆ: ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದಾಗ ಅದರಲ್ಲಿರುವ ಕಾರ್ಬೋಹೈಡ್ರೇಟ್ಸ್, ಬಿ ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಇದು ಶಕ್ತಿಯ ಉತ್ತಮ ಮೂಲವಾಗಿದೆ.
ನಿರೋಧಕ ಪಿಷ್ಟ: ಉಳಿದ ಅನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಒಂದೆರೆಡಲ್ಲ, ಅನೇಕ ಪ್ರಯೋಜನಗಳಿವೆ. ಆಗಷ್ಟೇ ಬೇಯಿಸಿದ ಅನ್ನವನ್ನು ತಣ್ಣಗಾಗಲು ಬಿಟ್ಟಾಗ, ಅದು "ನಿರೋಧಕ ಪಿಷ್ಟ" ಎಂಬ ವಿಶೇಷ ರೀತಿಯ ಪಿಷ್ಟವನ್ನು ರೂಪಿಸುತ್ತದೆ. ಈ ಪಿಷ್ಟವು ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ. ಆದರೆ ಕರುಳಿನಲ್ಲಿ ನಾರಿನಂತೆ ಕಾರ್ಯನಿರ್ವಹಿಸುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ: ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಒದಗಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ
ರಕ್ತದಲ್ಲಿನ ಸಕ್ಕರೆ ನಿಯಂತ್ರಣ: ಉಳಿದ ಅನ್ನದಲ್ಲಿರುವ ನಿರೋಧಕ ಪಿಷ್ಟವು ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತನೆ ಏರುವುದನ್ನು ತಡೆಯುತ್ತದೆ. ಇದು ಟೈಪ್ 2 ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ತೂಕ ನಿರ್ವಹಣೆ: ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಉಳಿದ ಅನ್ನ ತಿನ್ನುವುದರಿಂದಾಗುವ ಅನಾನುಕೂಲಗಳು
ಫುಡ್ ಪಾಯಿಸನ್
ಉಳಿದ ಅನ್ನದಿಂದ ಉಂಟಾಗುವ ದೊಡ್ಡ ಅಪಾಯವೆಂದರೆ ಫುಡ್ ಪಾಯಿಸನ್. ಈ ಅಪಾಯವು ಅನ್ನವನ್ನು ಸರಿಯಾಗಿ ಸಂಗ್ರಹಿಸದ ಕಾರಣ ಉಂಟಾಗುತ್ತದೆ.
ಬ್ಯಾಕ್ಟೀರಿಯಾದ ಸೋಂಕುಗಳು
ಬೇಯಿಸದ ಅಕ್ಕಿಯಲ್ಲಿ ಹೆಚ್ಚಾಗಿ ಬ್ಯಾಸಿಲಸ್ ಸೀರಿಯಸ್ ಬ್ಯಾಕ್ಟೀರಿಯಾದ ಬೀಜಕಗಳು ಇರುತ್ತವೆ. ಅಡುಗೆ ಮಾಡುವುದರಿಂದ ಈ ಬೀಜಕಗಳು ನಾಶವಾಗುವುದಿಲ್ಲ. ಬೇಯಿಸಿದ ನಂತರ ಕೋಣೆಯ ಉಷ್ಣಾಂಶದಲ್ಲಿ ಅನ್ನವನ್ನ ತಣ್ಣಗಾಗಲು ಬಿಟ್ಟಾಗ, ಬ್ಯಾಕ್ಟೀರಿಯಾಗಳು ಡಬ್ಬಲ್ ಆಗಿ ಟಾಕ್ಸಿನ್ ಉತ್ಪಾದಿಸುತ್ತವೆ. ನೆನಪಿಡಿ, ಈ ಟಾಕ್ಸಿನ್ ಮತ್ತೆ ಬಿಸಿ ಮಾಡುವುದರಿಂದ ನಾಶವಾಗುವುದಿಲ್ಲ.
ಮತ್ತೆ ಬಿಸಿ ಮಾಡ್ತೀರಾ?
ಹೊಟ್ಟೆ ಸೆಳೆತ
ಈ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡ ಅನ್ನವನ್ನು ತಿನ್ನುವುದರಿಂದ ಅತಿಸಾರ, ವಾಂತಿ ಮತ್ತು ಹೊಟ್ಟೆ ಸೆಳೆತ ಸೇರಿದಂತೆ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಈ ಲಕ್ಷಣಗಳು ಸಾಮಾನ್ಯವಾಗಿ 1 ರಿಂದ 5 ಗಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಪೋಷಕಾಂಶಗಳ ನಷ್ಟ
ಉಳಿದ ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ನೀರಿನಲ್ಲಿ ಕರಗುವ ಕೆಲವು ಜೀವಸತ್ವಗಳ ಪ್ರಮಾಣ ಕಡಿಮೆಯಾಗಬಹುದು.