- Home
- Karnataka Districts
- Bengaluru Urban
- ಬೆಂಗಳೂರಿನಲ್ಲಿ ಪುತ್ತೂರು ಯುವಕನ ಸಾವಿನ ಪ್ರಕರಣಕ್ಕೆ ಸ್ಪೋಟಕ ತಿರುವು; ಪೋಸ್ಟ್ ಮಾರ್ಟ್ಂ ವರದಿಯಲ್ಲೇನಿದೆ?
ಬೆಂಗಳೂರಿನಲ್ಲಿ ಪುತ್ತೂರು ಯುವಕನ ಸಾವಿನ ಪ್ರಕರಣಕ್ಕೆ ಸ್ಪೋಟಕ ತಿರುವು; ಪೋಸ್ಟ್ ಮಾರ್ಟ್ಂ ವರದಿಯಲ್ಲೇನಿದೆ?
ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರು ಮೂಲದ ತಕ್ಷಿತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಮಡಿವಾಳ ಠಾಣೆಯ ಪೊಲೀಸರ ಕೈ ಸೇರಿದೆ.

ತಕ್ಷಿತ್ ಮರಣೋತ್ತರ ಶವ ಪರೀಕ್ಷೆಯ ವರದಿ
ಪುತ್ತೂರು ಮೂಲದ ತಕ್ಷಿತ್ ಸಾವಿನ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ. ಬೆಂಗಳೂರು ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತನಾಗಿದ್ದ ತಕ್ಷಿತ್ ಮರಣೋತ್ತರ ಶವ ಪರೀಕ್ಷೆಯ ವರದಿ ಪೊಲೀಸರ ಕೈಗೆ ಸೇರಿದೆ. ವರದಿಯ ಕೆಲವೊಂದು ಅಂಶಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಪ್ರಕರಣಕ್ಕೆ ಹೊಸ ಆಯಾಮ!
ತಕ್ಷಿತ್ ಮತ್ತು ಯುವತಿ ಸುಮಾರು 20 ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಪದೇ ಪದೇ ಲಾಡ್ಜ್ ಬದಲಾಯಿಸಿದ್ದರು. 8 ದಿನಗಳ ಹಿಂದೆ ಗ್ರ್ಯಾಂಡ್ ಚಾಯ್ಸ್ ಹೋಟೆಲ್‌ಗೆ ಬಂದಿದ್ದ ಇಬ್ಬರು ಎರಡು ಪ್ರತ್ಯೇಕ ಕೋಣೆಗಳನ್ನು ಪಡೆದುಕೊಂಡಿದ್ದರು. ಇದೀಗ ಮರಣೋತ್ತರ ಶವ ಪರೀಕ್ಷೆಯ ವರದಿ ಪ್ರಕರಣಕ್ಕೆ ಹೊಸ ಆಯಾಮ ನೀಡುತ್ತಾ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿವೆ.
ಮಾತ್ರೆ ತೆಗೆದುಕೊಂಡಿದ್ರು?
ಲಾಡ್ಜ್‌ನಲ್ಲಿಯೇ ಉಳಿದುಕೊಂಡಿದ್ದ ತಕ್ಷಿತ್ ಮತ್ತು ಅಕ್ಟೋಬರ್ 17ರಂದು ಆನ್‌ಲೈನ್ ಮೂಲಕ ಫುಡ್ ತರಿಸಿಕೊಂಡಿದ್ದರು. ಈ ಆಹಾರ ಸೇವನೆ ಬಳಿಕ ಇಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಂಡಿದ್ದರು. ನಂತರ ಯುವತಿ ರೂಮ್ ಚೆಕ್‌ಔಟ್ ಮಾಡಿ ಬೆಂಗಳೂರಿನಿಂದ ಊರಿಗೆ ತೆರಳಿದ್ದಳು. ಇತ್ತ ತಕ್ಷಿತ್ ಸಹ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದನು.
ಇದನ್ನೂ ಓದಿ: ಪುರುಷರೇ ಎಚ್ಚರ! ವಯಾಗ್ರ ಮಾತ್ರೆ ಸೇವನೆಯಿಂದ ಸಾವು ಆಗುತ್ತಾ? ತಜ್ಞರು ಏನು ಹೇಳುತ್ತಾರೆ?
ಕಾಲ್ ರಿಸೀವ್ ಮಾಡಿಲ್ಲ
ಕೊನೆ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿದ್ದ ತಕ್ಷಿತ್, ರಾತ್ರಿ ಯುವತಿಗೆ ಕರೆ ಮಾಡಿ ಲಾಡ್ಜ್‌ನಲ್ಲಿಯೇ ಉಳಿದುಕೊಳ್ಳೋದಾಗಿ ಹೇಳಿದ್ದನು. ಮರುದಿನ ಬೆಳಗ್ಗೆ ಯುವತಿ ಕರೆ ಮಾಡಿದಾಗ ತಕ್ಷಿತ್ ಕಾಲ್ ರಿಸೀವ್ ಮಾಡಿಲ್ಲ. ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೋಣೆಯ ಬಾಗಿಲು ತೆಗೆದಾಗ ಬೆಡ್ ಮೇಲೆ ತಕ್ಷಿತ್ ಮೃತದೇಹ ಪತ್ತೆಯಾಗಿತ್ತು. ಸಿಬ್ಬಂದಿ ತಕ್ಷಣವೇ ಮಡಿವಾಳ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.
ಪೋಸ್ಟ್ ಮಾರ್ಟ್ಂ ವರದಿಯಲ್ಲೇನಿದೆ?
ಪೋಸ್ಟ್ ಮಾರ್ಟ್ಂ ವರದಿಯಲ್ಲಿ ತಕ್ಷಿತ್ ಸಾವಿಗೆ ಕಿಡ್ನಿ ವೈಫಲ್ಯ ಎಂಬ ಮಾಹಿತಿ ಇದೆ ಎಂದು ತಿಳಿದು ಬಂದಿದೆ. ಲಿವರ್ ಸಮಸ್ಯೆ ಹಾಗೂ ಅಸ್ತಮಾ ಕಾಯಿಲೆಯಿಂದ ತಕ್ಷಿತ್ ಬಳಲುತ್ತಿದ್ದ ಎಂಬುದರ ಬಗ್ಗೆಯೂ ತಿಳಿದು ಬಂದಿದೆ. ದಿಢೀರ್ ಕಿಡ್ನಿ ವೈಫಲ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪೊಲೀಸರು ಎರಡು ದಿನಗಳಿಂದ ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಒಂದಿಷ್ಟು ಅನುಮಾನ, ಉತ್ತರ ಸಿಗದ ಪ್ರಶ್ನೆಗಳು
ಫುಡ್ ಪಾಯಿಸನ್ ಅಗಿರುವ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಆನ್‌ಲೈನ್‌ನಿಂದ ಯಾವ ಫುಡ್ ಎಲ್ಲಿಂದ ಆರ್ಡರ್ ಮಾಡಿದ್ದರು? ನಂತರ ಇಬ್ಬರು ಸೇವಿಸಿದ ಮಾತ್ರೆಗಳೇನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ತಕ್ಷಿತ್ ಅನಾರೋಗ್ಯದ ಬಗ್ಗೆ ಆತನ ಪೋಷಕರಿಗೆ ಮೊದಲೇ ಗೊತ್ತಿತ್ತಾ ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದರು.
ಇದನ್ನೂ ಓದಿ: ಕುಕೀ ಜಾರಿಂಗ್ ಎಂಬ ಡೇಂಜರಸ್ ರಿಲೇಶನ್‌ಶಿಪ್; ನೀವು ಇದ್ರಲ್ಲಿ ಸಿಲುಕಿದ್ದೀರಾ? ಎಚ್ಚರ, ಎಚ್ಚರ!
ಎಲ್ಲಾ ಆಯಾಮದಲ್ಲಿ ಪೊಲೀಸರ ತನಿಖೆ
20 ದಿನಗಳಿಂದ ತಕ್ಷಿತ್ ಜೊತೆಯಲ್ಲಿದ್ದ ಯುವತಿ, ಆತನನ್ನು ಬಿಟ್ಟು ಊರಿಗೆ ಮರಳಿದ್ದೇಕೆ? ಇಬ್ಬರು ಬೆಂಗಳೂರಿಗೆ ಬಂದಿದ್ಯಾಕೆ? ಈ ವಿಷಯ ಇಬ್ಬರ ಪೋಷಕರಿಗೆ ತಿಳಿದಿತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ತಿಳಿದು ಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಠಾಣೆಯ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Gen Z New Trend: ಮಲಗುವ ಕೋಣೆಯ ರಹಸ್ಯ: ಜೆನ್ ಝಿ ಹೊಸ ಟ್ರೆಂಡ್!