ಜೆನ್ ಜಿ ತಲೆಮಾರು ಹೊಸ ಹೊಸ ಟ್ರೆಂಡ್‌ಗಳನ್ನು ನಮಗೆಲ್ಲ ಪರಿಚಯಿಸುತ್ತಿದೆ. ನಿದ್ರೆ, ಆರೋಗ್ಯ, ಸಾಂಗತ್ಯ, ರೊಮ್ಯಾನ್ಸ್ ಎಲ್ಲದರ ಮೇಲೂ ಪರಿಣಾಮ ಬೀರುವ ಟ್ರೆಂಡ್ ಇದು- ಬೆಡ್‌ಟೈಮ್ ಬ್ರೇಕಪ್.
ಎಲ್ಲರೂ ಎಲ್ಲ ಹೊತ್ತಿಗೂ ದುಡಿಯುತ್ತಾ ದುಡಿಯುತ್ತಾ ನಿದ್ರೆ ಒಂದು ಐಷಾರಾಮಿ ವಿಷಯವಾಗಿ ಮಾರ್ಪಟ್ಟಿದೆ. ಇಡೀ ಜಗತ್ತೇ ಹೀಗಾಗಿದೆ. ಆದ್ದರಿಂದ ಈಗಿನ ಹೆಚ್ಚಿನ ದಂಪತಿಗಳು ಮಲಗುವ ಸಮಯದಲ್ಲಿ ಬ್ರೇಕಪ್ ಮಾಡಿಕೊಳ್ಳೋದನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಬೆಡ್‌ಟೈಮ್ ಬ್ರೇಕ್‌ಅಪ್ (Bedtime Break-up) ಅಂತ್ಲೂ 'ಸ್ಲೀಪ್ ಡೈವೋರ್ಸ್ʼ ಅಂತಲೂ ಕರೆಯುತ್ತಾರೆ. ಹಾಗಂದರೆ ಇನ್ನೇನಲ್ಲ- ದಂಪತಿಯ ಬೆಡ್‌ರೂಮ್ ಅಥವಾ ಹಾಸಿಗೆ ಬೇರೆಬೇರೆಯಾಗಿರೋದು. ಮಲಗುವ ಹೊತ್ತಿನಲ್ಲಿ ರೊಮ್ಯಾನ್ಸ್‌ಗಾಗಿ ಸಮಯ ಹಾಳು ಮಾಡದೇ ಇರುವುದು. ಈ ಹೊಸ ಟ್ರೆಂಡ್ ಹೊಸ ಮನೆಗಳ ಬೆಡ್‌ರೂಮ್‌ಗಳನ್ನು ಬದಲಾಯಿಸುತ್ತಿದೆ, ಟ್ರಾವೆಲ್, ಹಾಸ್ಪಿಟಾಲಿಟಿ ಅಂದರೆ ಲಾಡ್ಜಿಂಗ್ ಉದ್ಯಮಗಳನ್ನು ಸಹ ಬದಲಾಯಿಸುತ್ತಿದೆ.
ಶೇಕಡಾ 63ರಷ್ಟು ಪ್ರಯಾಣಿಕರು ತಾವು ಒಂಟಿಯಾಗಿ ಉತ್ತಮವಾಗಿ ನಿದ್ರಿಸುವ ಬಗ್ಗೆ ಹೇಳುತ್ತಾರೆ. ಶೇಕಡಾ 37ರಷ್ಟು ಜನರು ಮನೆಯಿಂದ ದೂರದಲ್ಲಿರುವಾಗ ಪ್ರತ್ಯೇಕ ಹಾಸಿಗೆಗಳನ್ನು ಬಯಸುತ್ತಾರೆ. ಮಹಿಳೆಯರಿಗಿಂತ ಪುರುಷರು ಏಕಾಂಗಿ ನಿದ್ರೆಯನ್ನು ಆರಿಸಿಕೊಳ್ಳುವ ಸಾಧ್ಯತೆ ಹೆಚ್ಚಂತೆ. ಶೇಕಡಾ 25ರಷ್ಟು ಮಹಿಳೆಯರು ಹಾಗೂ ಶೇಕಡಾ 45ರಷ್ಟು ಪುರುಷರು ಸಾಂದರ್ಭಿಕವಾಗಿ ಅಥವಾ ನಿಯಮಿತವಾಗಿ ಪ್ರತ್ಯೇಕವಾಗಿ ಮಲಗುತ್ತಾರಂತೆ. ಹೋಟೆಲ್‌ಗಳು ಗಮನಿಸುತ್ತಿವೆ. ತುಂಬಾ ಮಂದಿ ದಂಪತಿಗಳು, ಸಪರೇಟ್ ಹಾಸಿಗೆಗಳನ್ನು ವಿನಂತಿಸುತ್ತಿದ್ದಾರಂತೆ. ಇದು ದಂಪತಿಗಳು ಒಳ್ಳೆಯ ವಿಶ್ರಾಂತಿಯನ್ನು ಹೊಂದಲೂ, ಹಾಗೇ ಹತ್ತಿರದಲ್ಲಿರಲೂ ಅವಕಾಶ ಮಾಡಿಕೊಡುತ್ತದೆ. ಇದು ಹಿಲ್ಟನ್ ವರದಿಯ ಸಾರಾಂಶ.
ಫ್ಲೋರಿಡಾ ಮೂಲದ ಮಾನಸಿಕ ಆರೋಗ್ಯ ಸಲಹೆಗಾರ್ತಿ ಸ್ಟೇಸಿ ಥಿರಿ ಹೇಳುವ ಪ್ರಕಾರ, ಪ್ರತ್ಯೇಕವಾಗಿ ನಿದ್ರಿಸುವ ಮುಖ್ಯ ಪ್ರಯೋಜನವೆಂದರೆ ಉತ್ತಮ ಗುಣಮಟ್ಟದ ವಿಶ್ರಾಂತಿ. ಇದು ಪ್ರತಿಯೊಬ್ಬನೂ ನಿದ್ರೆಗೊಂದು ಐಡಿಯಲ್ ವಾತಾವರಣ ಸೃಷ್ಟಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ- ಅದು ತಂಪಾದ ಕೋಣೆಯಾಗಿರಲಿ, ಗೊರಕೆಯ ಕಾಟವಿಲ್ಲದಿರಲಿ, ಅಥವಾ ಪ್ರಶಾಂತತೆಯಿರಲಿ. ಇದು ನಿದ್ರೆಯ ಅಡಚಣೆಗಳಿಂದ ಉಂಟಾಗುವ ಸಣ್ಣ ಸಣ್ಣ ಜಗಳಗಳನ್ನು ಸಹ ಕಡಿಮೆ ಮಾಡುತ್ತದಂತೆ. ಆದರೂ, ಹೆಚ್ಚಿನ ದೈಹಿಕ ಅಂತರದಿಂದ ಕೆಲವೊಮ್ಮೆ ಭಾವನಾತ್ಮಕ ಸಂಪರ್ಕ ಕಡಿತ, ಕಿರಿಕಿರಿ ಕೂಡ ಉಂಟಾಗಬಹುದಂತೆ.
ದಂಪತಿಗಳು ಈ ಮೂಲಕ ಹೆಚ್ಚು ಮಲಗುವ ಸಮಯವನ್ನು ಪಡೆಯಲು ಬಯಸುತ್ತಿದ್ದಾರೆ. ಉತ್ತಮ ವಿಶ್ರಾಂತಿಯೂ ಸಂಬಂಧಗಳಿಗೆ ಮುಖ್ಯ. ಕಳಪೆ ನಿದ್ರೆ ಕಿರಿಕಿರಿ ಮತ್ತು ಸಂಘರ್ಷವನ್ನು ಹೆಚ್ಚಿಸುತ್ತದೆ. ಪ್ರತ್ಯೇಕ ನಿದ್ರೆ ಎಂದರೆ ಪ್ರೀತಿಯ ಕೊರತೆ ಎಂದಲ್ಲ. ಇಬ್ಬರೂ ಸಂಗಾತಿಗಳು ಸಾಕಷ್ಟು ವಿಶ್ರಾಂತಿ ಮತ್ತು ಭಾವನಾತ್ಮಕವಾಗಿ ಸಂಪರ್ಕ ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಬಗೆ.
ದಂಪತಿಗಳನ್ನು ಬೆಡ್‌ಟೈಮ್ ಬ್ರೇಕಪ್‌ಗೆ ತಳ್ಳುವ ಅಂಶಗಳು ಹೀಗಿವೆ:
- ಸಂಗಾತಿಯ ಗೊರಕೆ, ಜೋರಾದ ಉಸಿರಾಟ ಅಥವಾ ಚಡಪಡಿಕೆ (ಶೇಕಡಾ 32)
- ಹೊಂದಿಕೆಯಾಗದ ನಿದ್ರೆಯ ವೇಳಾಪಟ್ಟಿಗಳು (ಶೇಕಡಾ 10)
- ವಿಭಿನ್ನ ತಾಪಮಾನ ಅಥವಾ ಬೆಳಕಿನ ಆದ್ಯತೆಗಳು
- ಮಲಗುವ ಮುನ್ನ ಮೊಬೈಲ್ ಬಳಕೆ
- ಒತ್ತಡ ಮತ್ತು ಆತಂಕವು ವಿಶ್ರಾಂತಿಗೆ ಅಡ್ಡಿಪಡಿಸುತ್ತದೆ
ಕುತೂಹಲಕಾರಿ ಸಂಗತಿ ಎಂದರೆ, ಈ ಪ್ರವೃತ್ತಿ ಏಷ್ಯಾದಲ್ಲಿ ಹೆಚ್ಚು ಇದೆಯಂತೆ. ಅದರಲ್ಲೂ ಭಾರತದಲ್ಲಿ. ರೆಸ್‌ಮೆಡ್ 2025ರ ಜಾಗತಿಕ ನಿದ್ರಾ ಸಮೀಕ್ಷೆಯ ಪ್ರಕಾರ, ಶೇಕಡಾ 78 ರಷ್ಟು ಭಾರತೀಯ ದಂಪತಿಗಳು ಯಾವುದಾದರೂ ಒಂದು ರೀತಿಯ ಬೆಡ್‌ಟೈಮ್ ಬ್ರೇಕಪ್ ಅಳವಡಿಸಿಕೊಂಡಿದ್ದಾರೆ. ಇದು ಜಾಗತಿಕವಾಗಿ ಅತ್ಯಧಿಕ. ಚೀನಾ (ಶೇಕಡಾ 67) ಮತ್ತು ದಕ್ಷಿಣ ಕೊರಿಯಾ (ಶೇಕಡಾ 65) ನಂತರದ ಸ್ಥಾನದಲ್ಲಿವೆ.
ಹಾಲಿವುಡ್ ತಾರೆ ಫ್ರಾನ್ ಡ್ರೆಷರ್ ಕೂಡ ಇತ್ತೀಚೆಗೆ ಈ ಕಲ್ಪನೆಯ ಬಗ್ಗೆ ಮಾತಾಡಿದ್ದಾರೆ. "ನಂಗೆ ಬೆಡ್‌ಟೈಮ್ ಬ್ರೇಕಪ್ ಇಷ್ಟ. ಹಾಗಂತ ಸಂಗಾತಿಯ ಜೊತೆ ನಾನು ಅನ್ಯೋನ್ಯತೆಯನ್ನು ಆನಂದಿಸುವುದಿಲ್ಲ ಎಂದಲ್ಲ. ಆದರೆ ನನ್ನ ಹಾಸಿಗೆ ನನ್ನ ಪವಿತ್ರ ಸ್ಥಳ. ನನಗೆ ಪ್ರಶಾಂತತೆ ಬೇಕು" ಎಂದಿದ್ದಾರೆ. 2025ರ ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (AASM) ಸಮೀಕ್ಷೆಯ ಪ್ರಕಾರ, ಮೂರನೇ ಒಂದು ಭಾಗದಷ್ಟು ಅಮೆರಿಕನ್ನರು ಮತ್ತು ಸುಮಾರು ಶೇಕಡಾ 40ರಷ್ಟು ಮಿಲೇನಿಯಲ್‌ಗಳು ತಮ್ಮ ಸಂಗಾತಿಗಳಿಂದ ಪ್ರತ್ಯೇಕವಾಗಿ ಮಲಗುತ್ತಾರಂತೆ.
ಕೆಲವು ಸಂಶೋಧಕರು ಈ ಬ್ರೇಕಪ್‌ನಿಂದ ಹೆಚ್ಚಿದ ಆಕ್ಸಿಟೋಸಿನ್ ಮಟ್ಟ, ಉತ್ತಮ ಮನಸ್ಥಿತಿ ನಿಯಂತ್ರಣ ಮೊದಲಾದ ಭಾವನಾತ್ಮಕ ಪ್ರಯೋಜನಗಳನ್ನೂ ಎತ್ತಿ ತೋರಿಸಿದ್ದಾರೆ. ಮಾನಸಿಕ ಆರೋಗ್ಯ, ಉತ್ಪಾದಕತೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಗುಣಮಟ್ಟದ ನಿದ್ರೆ ಅತ್ಯಗತ್ಯ ಎಂದು ಎಲ್ಲರೂ ಒಪ್ಪುತ್ತಾರೆ. ಹೀಗಾಗಿ ಬೆಡ್‌ಟೈಮ್ ಬ್ರೇಕಪ್ ಎಂಬುದು ಒಂದು ಕೊರತೆ ಎಂದು ಯಾರೂ ಇಂದು ಭಾವಿಸುತ್ತಿಲ್ಲ. ಆಧುನಿಕ ಪ್ರೇಮಕಥೆಯಲ್ಲೂ ಪ್ರತ್ಯೇಕ ಬೆಡ್‌ರೂಂ, ಪ್ರತ್ಯೇಕ ಹಾಸಿಗೆ ಇರಬಹುದು!
