ದುಬೈನಿಂದ ಹಾಂಗ್‌ಕಾಂಗ್‌ಗೆ ತೆರಳುತ್ತಿದ್ದ ಬೋಯಿಂಗ್ 747 ಸರಕು ಸಾಗಣೆ ವಿಮಾನವು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ಸಮುದ್ರಕ್ಕೆ ಬಿದ್ದಿದೆ. ಈ ಘಟನೆಯಲ್ಲಿ ವಿಮಾನದ ಸಿಬ್ಬಂದಿ ಸುರಕ್ಷಿತರಾಗಿದ್ದು, ನೆಲದಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ.

ರನ್‌ವೇಯಿಂದ ಸ್ಕಿಡ್ ಆಗಿ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ

ದುಬೈನಿಂದ ಚೀನಾದ ಹಾಂಗ್‌ಕಾಂಗ್‌ಗೆ ಹೋಗುತ್ತಿದ್ದ ಸರಕು ಸಾಗಣೆ ವಿಮಾನವೊಂದು ಲ್ಯಾಂಡಿಗ್ ವೇಳೆ ಸ್ಕಿಡ್ ಆಗಿ ಪತನಗೊಂಡು ಸಮುದ್ರಕ್ಕೆ ಬಿದ್ದಿದ್ದು, ಈ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಸಮುದ್ರಕ್ಕೆ ಜಾರಿ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಯ ನಂತರ ತೆಗೆದ ವೀಡಿಯೋ ಫೋಟೋಗಳಲ್ಲಿ ಸರಕು ಸಾಗಣೆ ವಿಮಾನ ಬೋಯಿಂಗ್ 747 ವಿಮಾನವೂ ಏರ್‌ಪೋರ್ಟ್‌ನ ಸಮೀಪವಿರುವ ಸಮುದ್ರದಲ್ಲಿ ಭಾಗಶಃ ಮುಳುಗಿರುವುದನ್ನು ಕಾಣಬಹುದು. ಇದರಲ್ಲಿ ವಿಮಾನದ ಮೂಗು ಹಾಗೂ ಬಾಲ ಪ್ರತ್ಯೇಕಗೊಂಡಿರುವುದನ್ನು ಕಾಣಬಹುದಾಗಿದೆ.

ಹಾಂಗ್‌ಕಾಂಗ್ ಏರ್‌ಪೋರ್ಟ್‌ನಲ್ಲಿ ಘಟನೆ

ಈ ವಿಮಾನದಲ್ಲಿದ್ದ ಇನ್ನೂ 4 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹಾಂಗ್‌ಕಾಂಗ್ ಏರ್ಪೋರ್ಟ್‌ ಹೇಳಿಕೆ ಬಿಡುಗಡೆ ಮಾಡಿದ್ದು, ಅದರ ಪ್ರಕಾರ ಘಟನೆಯಲ್ಲಿ ಮೃತರಾದವರು ವಿಮಾನದಲ್ಲಿ ಇದ್ದವರು ಅಲ್ಲ, ವಿಮಾನ ಡಿಕ್ಕಿ ಹೊಡೆದ ಜಾಗದಲ್ಲಿ ರನ್‌ವೇ ಬಳಿಯ ನೆಲದ ವಾಹನದೊಳಗೆ ಇದ್ದ ಇಬ್ಬರು ವಿಮಾನ ಬಿದ್ದಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಘಟನೆಯ ನಂತರ ವಿಶ್ವದ ಅತ್ಯಂತ ಜನನಿಬಿಡ ಸರಕು ವಿಮಾನ ನಿಲ್ದಾಣವೆನಿಸಿದ ಹಾಂಗ್‌ಕಾಂಗ್ ವಿಮಾನ ನಿಲ್ದಾಣದ ಉತ್ತರದ ರನ್‌ವೇಯನ್ನು ಮುಚ್ಚಲಾಗಿದೆ. ಆದರೆ ಇಲ್ಲಿನ ದಕ್ಷಿಣ ಮತ್ತು ಮಧ್ಯ ರನ್‌ವೇಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ಹಾಂಗ್ ಕಾಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಹಾಂಗ್‌ಕಾಂಗ್ ಕಾಲಮಾನದ ಪ್ರಕಾರ ಸೋಮವಾರ ಬೆಳಗಿನ ಜಾವ 3:50 ರ ಸುಮಾರಿಗೆ (ಭಾನುವಾರ 19.50 GMT)ಈ ಅಪಘಾತ ಸಂಭವಿಸಿದೆ. ವಿಮಾನವೂ ಲ್ಯಾಂಡ್ ಆದ ನಂತರ ಉತ್ತರ ರನ್‌ವೇಯಿಂದ ಹೊರಕ್ಕೆ ಕುಸಿದು ಸಮುದ್ರಕ್ಕೆ ಬಿದ್ದಿದೆ ಎಂದು ಹಾಂಗ್ ಕಾಂಗ್ ನಾಗರಿಕ ವಿಮಾನಯಾನ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ. ಈ ಘಟನೆಯಿಂದಾಗಿ ನೆಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿ ಪ್ರಾಣ ಬಿಟ್ಟಿದ್ದಾರೆ ಎಂದು ವಿಮಾನಯಾನ ಇಲಾಖೆ ಹೇಳಿದೆ.

ಘಟನೆಗೆ ಸಂಬಂಧಿಸಿದಂತೆ ಎಮಿರೇಟ್ಸ್ ಹೇಳಿಕೆ ಬಿಡುಗಡೆ ಮಾಡಿದ್ದು, ಸೋಮವಾರ ಹಾಂಗ್ ಕಾಂಗ್‌ನಲ್ಲಿ ಇಳಿಯುವಾಗ EK9788 ವಿಮಾನಕ್ಕೆ ಹಾನಿಯಾಗಿದೆ ಮತ್ತು ಅದು ACT ಏರ್‌ಲೈನ್ಸ್‌ನಿಂದ ಗುತ್ತಿಗೆಗೆ ಪಡೆದು ನಿರ್ವಹಿಸಲ್ಪಡುವ ಬೋಯಿಂಗ್ 747 ಸರಕು ವಿಮಾನವಾಗಿತ್ತು. ವಿಮಾನದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆ ವಿಮಾನದಲ್ಲಿ ಯಾವುದೇ ಸರಕು ಇರಲಿಲ್ಲ ಎಂದು ಎಮಿರೇಟ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಏಕ್ಟ್‌ ಏರ್‌ಲೈನ್ಸ್ ಟರ್ಕಿಶ್ ವಾಹಕವಾಗಿದ್ದು, ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಹೆಚ್ಚುವರಿ ಸರಕು ಸಾಮರ್ಥ್ಯವನ್ನು ಒದಗಿಸುತ್ತದೆ. ಅಪಘಾತಕ್ಕೀಡಾದ ವಿಮಾನವು 32 ವರ್ಷ ಹಳೆಯದಾಗಿದ್ದು, ಸರಕು ಸಾಗಣೆ ವಿಮಾನವಾಗಿ ಪರಿವರ್ತಿಸುವ ಮೊದಲು ಪ್ರಯಾಣಿಕ ವಿಮಾನವಾಗಿ ಕಾರ್ಯನಿರ್ವಹಿಸಿತ್ತು ಎಂದು ವಿಮಾನ ಟ್ರ್ಯಾಕಿಂಗ್ ಸೇವೆ ಫ್ಲೈಟ್‌ರಾಡರ್ 24 ತಿಳಿಸಿದೆ. ಹಾಂಗ್ ಕಾಂಗ್‌ನ ನಾಗರಿಕ ವಿಮಾನಯಾನ ಇಲಾಖೆಯು ಈ ಘಟನೆಯನ್ನು ನಗರದ ವಾಯು ಅಪಘಾತ ತನಿಖಾ ಪ್ರಾಧಿಕಾರಕ್ಕೆ ವರದಿ ಮಾಡಿದ್ದು, ತನಿಖೆಗೆ ಬೆಂಬಲ ನೀಡುವುದಾಗಿ ಹೇಳಿದೆ.

ಇದನ್ನೂ ಓದಿ: 36000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗಲೇ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು: ಪೈಲಟ್‌ಗೆ ಗಾಯ ವಿಮಾನ ತುರ್ತು ಭೂಸ್ಪರ್ಶ
ಇದನ್ನೂ ಓದಿ: ಬಾವಿಗೆ ಬಿದ್ದ ತನ್ನ ಮೇಲೆತ್ತಿ ಬದುಕಿಸಿದ ಯುವಕನಿಗೆ ಮುತ್ತಿನ ಮಳೆಗೆರೆದ ಶ್ವಾನ