ಪಾಕಿಸ್ತಾನದ ನಟ ಡ್ಯಾನಿಶ್ ತೈಮೂರ್ ಪತ್ನಿ ಎದುರು ನಾಲ್ಕನೇ ಮದುವೆಯ ಬಗ್ಗೆ ಹೇಳಿಕೆ ನೀಡಿ ಟ್ರೋಲ್‌ಗೆ ಒಳಗಾದರು. ಧಾರ್ಮಿಕ ಕಾರಣ ನೀಡಿ ಹೇಳಿಕೆ ನೀಡಿದ್ದು ಟೀಕೆಗೆ ಕಾರಣವಾಯಿತು. ತಕ್ಷಣವೇ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆ ಕೋರಿದರು. ಆಡಿದ ಮಾತು ತಪ್ಪಾಗಿದೆ, ನಾಲ್ಕನೇ ಮದುವೆಯ ಉದ್ದೇಶವಿಲ್ಲ, ಪತ್ನಿಯೊಂದಿಗೆ ಸಂತೋಷವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಮುಗಿಸುವಂತೆ ವಿನಂತಿಸಿದ್ದಾರೆ.
ಪಾಕಿಸ್ತಾನದ ಖ್ಯಾತ ನಟ ಡ್ಯಾನಿಶ್ ತೈಮೂರ್ ಅವರು, ಟಾಕ್ ಶೋ ಒಂದರಲ್ಲಿ ತಮ್ಮ ಪತ್ನಿ ಆಯೇಜಾ ಖಾನ್ ಅವರ ಮುಂದೆಯೇ ನಾಲ್ಕನೆಯ ಮದುವೆಯ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ತಾವು ಒಬ್ಬ ಸಂಭಾವಿತ ಎಂದು ತೋರಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ನನಗೆ ನಾಲ್ಕು ಬಾರಿ ಮದುವೆಯಾಗಲು ಅವಕಾಶವಿದೆ. ಮನಸ್ಸು ಮಾಡಿದ್ದರೆ ನಾನು ನಾಲ್ಕನೆಯ ಮದುವೆಯಾಗಬಹುದಿತ್ತು. ಅಲ್ಹಾನ ದಯೆಯಿಂದ ನನಗೆ ಈ ಪರ್ಮಿಷನ್ ಸಿಕ್ಕಿದೆ. ಆದರೆ ನಾನು ಹೀಗೆ ಮಾಡುವುದಿಲ್ಲ. ಏಕೆಂದರೆ, ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ. ಮೊದಲ ಇಬ್ಬರು ಪತ್ನಿಯರ ಕಥೆ ಏನು ಎಂದು ಹೇಳದೇ, ಪಕ್ಕದಲ್ಲಿಯೇ ಇದ್ದ ಮೂರನೆಯ ಪತ್ನಿಯ ಎದುರೇ ನಾಲ್ಕನೆಯ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತ್ನಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮನ್ನು ತಾವು ಹೊಗಳಿಕೊಳ್ಳಲು ಹೋಗಿದ್ದಾರೆ.
ಆದರೆ, ಆಮೇಲೆ ಆಗಿದ್ದೇ ಬೇರೆ. ನಾಲ್ಕನೆಯ ಮದುವೆಯ ಬಗ್ಗೆ ಮಾತನಾಡಿದ್ದಕ್ಕೆ ನಟ ಇನ್ನಿಲ್ಲದಂತೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಅದೂ ಪತ್ನಿಯ ಎದುರಿನಲ್ಲಿಯೇ ಅಲ್ಹಾನ ಹೆಸರು ಹೇಳಿಕೊಂಡು ಹೀಗೆ ಹೇಳಿದ್ದು, ಹಲವರನ್ನು ಇನ್ನಿಲ್ಲದಂತೆ ಕೆರಳಿಸಿದೆ. ಇದೇ ಕಾರಣಕ್ಕೆ ನಟನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾದ ಬೆನ್ನಲ್ಲೇ ಈಗ ಅವರು ಕ್ಷಮೆ ಕೋರಿದ್ದಾರೆ. ನಾಲಿಗೆ ಜಾರಿ ಹಾಗೆ ಹೇಳಿಬಿಟ್ಟೆ. ದಯವಿಟ್ಟು ಕ್ಷಮಿಸಿ ಎಂದರು. ನನ್ನ ಮಾತಿನ ಅರ್ಥ ಅ ದಲ್ಲವಾಗಿತ್ತು. ಶಬ್ದಗಳನ್ನು ಆರಿಸಿಕೊಳ್ಳುವಲ್ಲಿ ತಪ್ಪು ಮಾಡಿಬಿಟ್ಟೆ. ನನ್ನ ಉದ್ದೇಶ ನಾಲ್ಕನೆಯ ಮದುವೆ ಮಾಡಿಕೊಳ್ಳುವುದು ಅಲ್ಲವಾಗಿತ್ತು. ದಯವಿಟ್ಟು ಅಪಾರ್ಥ ಮಾಡಿಕೊಳ್ಳಬೇಡಿ, ಕ್ಷಮಿಸಿ ಎಂದಿದ್ದಾರೆ.
ಡ್ಯಾನಿಶ್ ತೈಮೂರ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆಯಾಚಿಸಿದ್ದಾರೆ. ವೀಡಿಯೊದಲ್ಲಿ, ಅವರು- 'ನೀವು ನನ್ನ ಮೇಲೆ ಸ್ವಲ್ಪ ಕೋಪಗೊಂಡಿದ್ದೀರಿ ಎಂದು ನನಗೆ ತಿಳಿದಿದೆ. ಆ ದಿನ ಏನೇ ನಡೆದರೂ, ಬಹುಶಃ ನಾನು ನನ್ನ ಹೆಂಡತಿಯನ್ನು ಅವಮಾನಿಸಿದ್ದೇನೆ ಎಂದು ಜನರು ಭಾವಿಸುತ್ತಿದ್ದಾರೆ. ಆದರೆ ಅದು ಹಾಗಲ್ಲ. ನನಗೆ ಅಂತಹ ಉದ್ದೇಶವಿರಲಿಲ್ಲ, ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಪದಗಳ ಆಯ್ಕೆ ಸರಿಯಾಗಿಲ್ಲದಿರಬಹುದು. ನಾಲಿಗೆ ಜಾರಿ ತಪ್ಪು ಹೇಳಿದೆ. ನಾಲ್ಕನೆಯ ಮದುವೆಯಾಗುವ ಉದ್ದೇಶವಿಲ್ಲ ಎಂದಿದ್ದಾರೆ. ಕಳೆದ 18 ವರ್ಷಗಳಿಂದ ಒಂದೇ ಒಂದು ವಿವಾದ ಇಲ್ಲದೇ ಬದುಕಿದ್ದೇನೆ. ಕ್ಷಮಿಸಿಬಿಡಿ. ಅಪಾರ್ಥ ಮಾಡಿಕೊಳ್ಳಬೇಡಿ ಎಂದಿದ್ದಾರೆ.
'ಈ ವಿಷಯವನ್ನು ಇಲ್ಲಿಗೆ ಮುಗಿಸಬೇಕೆಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ. ನನ್ನ ಹೃದಯದಲ್ಲಿ ಮತ್ತೊಂದು ಮದುವೆಗೆ ಅವಕಾಶವಿಲ್ಲ. ಆದ್ದರಿಂದ ಈ ವಿಷಯವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಆದರೂ, ನನ್ನ ಮಾತುಗಳು ಜನರಿಗೆ ನೋವುಂಟು ಮಾಡಿವೆ ಎಂದು ಭಾವಿಸಿದರೆ ಅಥವಾ ನಾನು ಟಿವಿಯಲ್ಲಿ ಏನಾದರೂ ಹೇಳಿ ಅವರಿಗೆ ಆಕ್ಷೇಪಾರ್ಹವೆನಿಸಬಹುದು ಎಂದು ಭಾವಿಸಿದರೆ, ಹೃದಯದ ಒಳಗಿನಿಂದ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ನಂಬಿ, ನೀವು ನನ್ನ ಮೇಲೆ ಕೋಪಗೊಳ್ಳುವುದನ್ನು ನಾನು ಬಯಸುವುದಿಲ್ಲ ಎಂದಿದ್ದಾರೆ. ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಈ ಮನೆಯಲ್ಲಿ ಸಂತೋಷವಾಗಿರುವಂತೆ ನೀವು ಸಹ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ. ನನ್ನನ್ನು ನಂಬಿ, ಆಯಿಜಾ ಮತ್ತು ನಾನು ಒಟ್ಟಿಗೆ ತುಂಬಾ ಸಂತೋಷವಾಗಿದ್ದೇವೆ. ನಮ್ಮಿಬ್ಬರ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಪತಿಗೇ ನಾಮ ಹಾಕಿದ್ಲು: ಸಿಕ್ಕಿಬೀಳ್ತೇನೆಂದು ವರದಕ್ಷಿಣೆ ಕೇಸ್ ಜಡಿದಳು- ಏನಾಯ್ತು ನೋಡಿ
